ಕರೋನ ಮುಕ್ತ ಶಾಲೆ

ಸರಿತಾಮಧು

ಎಂದಿಗೆ ಬರಲಿದೆಯೋ ಶಾಲೆಗೆ ಹೋಗಿ ನಲಿಯುವ ದಿನಗಳು ಎಂದು ಕಾತರಿಸುವ ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊರಟಾಗ ಮನೆಯಲ್ಲಿ ತಾವಷ್ಟೇ ಇರಬೇಕಾ ಎನ್ನುವ ಭಯ. ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರಿಗೂ ಇದೇ ಚಿಂತೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಶಾಲೆಗಳು ತೆರೆಯುವ ಸೂಚನೆ ಸದ್ಯಕ್ಕೆ ಇಲ್ಲವೇನೋ? ಹೀಗಿರುವಾಗ ಮಕ್ಕಳ ಕಲಿಕೆ ಹೇಗೆ ಎಂದು ಚಿಂತಿಸಿ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಒಳಿತೋ ಕೆಡುಕೋ ಎಂಬ ಜಿಜ್ಞಾಸೆ ಎಲ್ಲರ ಮನದಲ್ಲೂ ಮೂಡಿದೆ.ಪ್ರಾಥಮಿಕ ಹಂತದಿಂದಲೇ ಈ ರೀತಿಯ ಪಾಠಬೋಧನೆ ಮಕ್ಕಳ ಮನಮುಟ್ಟುವುದೇ ಎನ್ನುವ ಗೊಂದಲವೂ , ಚರ್ಚೆಯೂನಡೆಯುತ್ತಲೇ ಸಾಗಿರುವ ಬೆನ್ನಲ್ಲೇ ಕೆಲವು ಖಾಸಗಿ ಶಾಲೆಗಳು ಆನ್ಲೈನ್ ತರಗತಿ ಗೆ ನಾಂದಿ ಹಾಡಿವೆ.ಹೀಗಿರುವಾಗ ಮಕ್ಕಳ ಕೈಗೆ ಮೊಬೈಲ್ ನೀಡಿ ನೆಮ್ಮದಿಯಾಗಿ ಇರುವುದಾದರೂ ಹೇಗೆ ಎಂಬ ಗೊಂದಲ ಮನೆಯಲ್ಲಿ ಇರದ ,ದುಡಿಯಲು ಹೊರಗೆ ಹೋಗುವ ಪೋಷಕ ವರ್ಗದ್ದು.


ಇನ್ನು ಕೃಷಿಯಾಧಾರಿತ ಕುಟುಂಬಗಳಲ್ಲಿನ ಮಕ್ಕಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು , ಪ್ರಸ್ತುತ ತಮ್ಮ ಹಿರಿಯರಿಗೆ ಹೊಲಗದ್ದೆಗಳಲ್ಲಿ ನೆರವಾಗುತ್ತಾ ಸಮಯ ಕಳೆಯುತ್ತಿದ್ದಾರೆ. ದನಕರುಗಳನ್ನು ಮೇಯಿಸುತ್ತಾ, ಇಲ್ಲವೇ ಬೀದಿಯಲ್ಲಿ ಅಡ್ಡಾಡುತ್ತಾ ಇರುವ ಮಕ್ಕಳನ್ನೂ ನೋಡುತ್ತಿದ್ದೇವೆ. ಇವರ ಮಟ್ಡಿಗೆ ಆನ್ಲೈನ್ ಶಿಕ್ಷಣ ಕೈಗೆಟುಕದ ತಾರೆಯಂತೆ.ಹಾಗಂತ ಗ್ರಾಮೀಣ ಪ್ರದೇಶದವರು ಮೊಬೈಲ್ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ.ಆದರೂ ಹಲ್ಲು ಇದ್ದವರಿಗೆ ಕಡಲೆ ಇಲ್ಲವಂತೆ ಅನ್ನುವ ಹಾಗೆ ಮೊಬೈಲ್ ಇದ್ದರೂ ನೆಟ್ವರ್ಕ್ ಸಿಗದ ಅದೆಷ್ಟೋ ಹಳ್ಳಿಗಳಿವೆ.ನಗರವಾಸಿಗಳಿಗೆ ಈ ರೀತಿಯ ಶಿಕ್ಷಣ ಸ್ವಲ್ಪ ಮಟ್ಟಿಗೆ ಅನುಕೂಲವೇ ಹೊರತು ಗ್ರಾಮಾಂತರದ ಮಕ್ಕಳಿಗಲ್ಲ.


ಹಣದ ಅನುಕೂಲತೆ ಇದ್ದು ಮನೆಯಲ್ಲೇ ಇರುವ ಪೋಷಕರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಗಳನ್ನು ಕೊಡಿಸಿ, ಜೊತೆಯಲ್ಲಿ ಕುಳಿತು ತಾವೂ ಮಕ್ಕಳಿಗೆ ನೆರವಾಗಬಹುದು.
ಇಷ್ಟೆಲ್ಲಾ ಆಗು – ಹೋಗುಗಳ ನಡುವೆ ಆನ್ಲೈನ್ ಶಿಕ್ಷಣ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವ ಬಹು ದೊಡ್ಡ ಪ್ರಶ್ನೆ ನಮ್ಮ ಮುಂದೆ ಇದೆ.

ಮುಖಾಮುಖಿ ಮಕ್ಕಳೊಂದಿಗೆ ನಡೆಯುವ ಚಟುವಟಿಕೆಯುಕ್ತ ತರಗತಿಗೂ ಮನೆಯೊಳಗೆ ಕಂಪ್ಯೂಟರ್ ಪರದೆಯನ್ನು ಪಿಳಿಪಿಳಿ ನೋಡುತ್ತಾ ಜಡವಾಗಿ ಕುಳಿತು ಕೊಳ್ಳುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ . ಇದರಿಂದ ಚಿಕ್ಕ ವಯಸ್ಸಿಗೆ ಕಣ್ಣುಗಳ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಎಂದಿಗೆ ಮುಗಿಯುವುದೋ ಈ ಯಾತನೆ ಎಂದು ಒಳಗೊಳಗೇ ತಳಮಳಿಸಿ ನೊಂದಿರುವ ಜೀವಗಳೇ ಹೆಚ್ಚು ‌ . ಬಡವ – ಶ್ರೀಮಂತ , ನಗರ – ಹಳ್ಳಿಗಳೆಂಬ ಭೇದ ವಿಲ್ಲದೇ ಕರೋನ ತನ್ನ ಹಿಡಿತ ಸಾಧಿಸಿ ಜನರ ಕಂಗೆಡಿಸಿದೆ.ಹೀಗಿರುವಾಗ ಶಾಲೆ ತೆರೆಯುವುದೋ ಬಿಡುವಿದೋ ಆದರೆ ಒಂದಲ್ಲ ಒಂದು ರೀತಿಯ ಸಮಸ್ಯೆ ಇದೆ. ಕರೋನ ಮುಕ್ತ ಸಾಧ್ಯವಿಲ್ಲವೇನೋ ?
ಬದಲಾಗಿ ಅದರೊಂದಿಗೆ ಹೊಂದಾಣಿಕೆ ಸೂತ್ರ ಮಾತ್ರ ಕಣ್ಮುಂದೆ ಇದೆ.

*********************

One thought on “ಕರೋನ ಮುಕ್ತ ಶಾಲೆ

  1. ಸಕಾಲಿಕ ಬರಹ
    ಅಭಿನಂದನೆಗಳು

Leave a Reply

Back To Top