ಅವ್ವ ಮತ್ತು ಅಬ್ಬಲಿಗೆ

ನನಗೆ  ಅವ್ವ ಮತ್ತು ಅಬ್ಬಲಿಗೆ  ಇಡೀ ಕವನ ಸಂಕಲನದಲ್ಲಿ ಲಂಕೇಶರ ಅವ್ವ

ಆಧುನಿಕ, ನಗರವಾಸಿ ಅವ್ವನಾಗಿ  ಕಾಣುತ್ತಿದ್ದಾಳೆ. 

 ಅಬ್ಬಲಿಗೆಯಲ್ಲಿನ ಆಧುನಿಕ ಅವ್ವ  ನೌಕರಿ ಮಾಡುತ್ತಾ, ಗಂಡನ ಸಂಭಾಳಿಸುತ್ತಾ , ತವರು ಮನೆಯ ನೆನಪ ಮೆಲುಕು ಹಾಕುತ್ತಾ ,  ಆಧುನಿಕ ವೈರುದ್ಧ್ಯಗಳಿಗೆ ಮುಖಾಮುಖಿಯಾಗುತ್ತಾ ನಡೆಯುತ್ತಾಳೆ.

 ಅನ್ಯಾಯಕ್ಕೆ ಕವಿತೆಯ ಮೂಲಕ ಸಣ್ಣ ಧ್ವನಿಯಲ್ಲಿ ಅತ್ಯಂತ ಖಚಿತವಾಗಿ ವ್ಯವಸ್ಥೆಯನ್ನು ಟೀಕಿಸುತ್ತಾಳೆ. ದೇವರು, ದೇವಾಲಯ,ಯುದ್ಧ ಗಳ ನಿರರ್ಥಕತೆಯನ್ನು  ಬಿಡಿಸಿಡುತ್ತಾಳೆ. ಹೆಣ್ಣಿನ ಅಂತರಂಗದ ತಳಮಳಕ್ಕೆ ಭಾಷ್ಯ ಬರೆಯುತ್ತಾಳೆ. ಆಧುನಿಕ ಯಶೋಧರೆಯ ಅಂತರಂಗವನ್ನು ಇವತ್ತಿನ ಅಕ್ಷರಸ್ಥ ಮಹಿಳೆಯಲ್ಲಿ ಕಾಣುತ್ತಲೇ ಪ್ರಶ್ನೆ ಎಸೆಯುತ್ತಾಳೆ. ರಾಮಾಯಣದ ಶಬರಿಯನ್ನು ಎಳೆದು ತಂದು ಇವತ್ತಿನ ಸಮಾಜದೆದರು ನಿಲ್ಲಿಸಿ ತಕರಾರು ತೆಗೆಯುತ್ತಾಳೆ.

ದನಗಳ ತಾಯ್ತನಕ್ಕೆ ಮತ್ತು ಅವಕ್ಕೆ  ವಯಸ್ಸಾದ ಮೇಲೆ ಮಾರುವವರ,ಕೊಳ್ಳುವವರ ಕಟುಕುತನವನ್ನು ಭಂಜಿಸುತ್ತಾಳೆ.ಹಾಗೂ ಬೀದಿ ನಾಯಿಯಲ್ಲಿನ ತಾಯ್ತನಕ್ಕೆ , ಅದು ತನ್ನ ಹೆತ್ತ ಮರಿಗಳನ್ನು ಅನಾಥವಾಗಿಸುವಲ್ಲಿ ತನ್ನ ಒಂಚೂರು ಪಾಲಿದೆ ಎಂದು ಕೊರಗುತ್ತಾಳೆ. ಹಾಗೂ ಬೀದಿ ನಾಯಿ ಪಾಡಿಗೆ ಕಾರಣವಾದ  ನಿರ್ಲಜ್ಜ ,ನಿರ್ಲಕ್ಷ ಗಂಡು ನಾಯಿಯ ಬಗ್ಗೆ ತಣ್ಣನೆಯ ಕೋಪವನ್ನು ದಾಖಲಿಸುತ್ತಾಳೆ ಕವಯಿತ್ರಿ ಶೋಭಾ.

ಇನ್ನು ಅವ್ವ ಅಬ್ವಲಿಗೆಯಲ್ಲಿ ರಾಜಕೀಯ ಪ್ರಜ್ಞೆ ಪ್ರಖರವಾಗಿಯೇ ನಾಲ್ಕಾರು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಗುರ್ ಮೆಹರ್ ಅಂತರಂಗ, ಖುರ್ಚಿಗಾಗಿ ಯುದ್ಧ ಪ್ರಚೋದಕತೆಯ ಪ್ರಶ್ನಿಸಿದರೆ,  “ಸುಮ್ಮನಿರುವೆ  ಏಕೆ ಹೇಳು? ”  ಕವಿತೆ  ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕರೆ ನೀಡುತ್ತದೆ ಹಾಗೂ  ಶ್ರಮಿಕನೋರ್ವ , ಓಟು ಕೇಳಲುಬಂದವನಿಗೆ ಪ್ರಶ್ನಿಸುವುದು (ಓಟು ಬೇಡುವ ಸಮಯ) ಕವಿತೆ ಯಲ್ಲಿದೆ. ‘ಬಡವನಳಲು’  ಕವಿತೆ ಬೆವರಿಗಿಲ್ಲದ ಬೆಲೆಯು ನನ್ನ ಓಟಿಗೇತಕೆ ಒಡೆಯಾ ಎಂದು ಪ್ರಶ್ನಿಸಿದರೆ, ‘ದೇವನಳಲು’  ಕವಿತೆಯಲ್ಲಿ ದೇವರು ಭಕ್ತರಿಗೆ ಪ್ರಶ್ನಿಸುವ ಅಪರೂಪದ ನಡೆಯಿದೆ.

ನಾನೇನು ಬಡವನೇ ನಿಮ್ಮಲ್ಲಿ ಬೇಡುವಷ್ಟು ಎನ್ನುವ ದೇವರು ; ನಾನು ತಿರುಕನಲ್ಲ, ಕಟುಕನಲ್ಲ, ದುರ್ಬಲನಲ್ಲ, ಹೆರುವಶಕ್ತಿಯಿಲ್ಲ,ಬಡವನಲ್ಲ ಎಂದು ದೇವರೇ ಭಕ್ತರಿಗೆ ಸ್ಪಷ್ಟೀಕರಣ ಕೊಡುವ ಬಗೆ ಕನ್ನಡಕ್ಕೆ ಹೊಸತು. ಇದು ಕವಯಿತ್ರಿ ಶೋಭಾ ನಾಯ್ಕರ ಕಾವ್ಯ ಕಟ್ಟುವ ವಿಶಿಷ್ಟ ನಡೆಯಾಗಿದೆ. ದೇವರು ಮತ್ತು ಧರ್ಮದ ಕುರಿತ ಕವಿತೆಗಳನ್ನು ಹೊಸೆದ ಕನ್ನಡ ಕೆಲವೇ ಕೆಲವು ಕವಯಿತ್ರಿಯರಲ್ಲಿ ಶೋಭಾ ಸಹ ಒಬ್ಬರು. ದೇವರು ಧರ್ಮದ ವಿಚಾರ ಬಂದಾಕ್ಷಣ ಮೌನತಾಳುವ ಮತ್ತು ಸಂಪ್ರದಾಯದ ಮುಸುಕು ಹಾಕಿ ಸೇಫರ್ ಝೋನ್ ನಲ್ಲಿ ನಿಲ್ಲುವ  ಸಾಹಿತಿಗಳಿಗಿಂತ ; ಭಿನ್ನವಾಗಿ ನಿಲ್ಲುವ ಶೋಭಾ ಹಿರೇಕೈ ;

ಈ ಕಾರಣದಿಂದ ಅವರು ಕನ್ನಡದಲ್ಲಿ ವಿಶಿಷ್ಟ ಕವಯಿತ್ರಿ ಎನಿಸುತ್ತಾರೆ.

ಕುವೆಂಪು ಮತ್ತು ಲೋಹಿಯಾ ಪ್ರಭಾವ :

ಮುಗ್ದತೆಯಿಂದ ಕವಿತೆಗಳನ್ನು ಶೋಭಾ ಕಟ್ಟಿದರೂ ಅವರ ವೈಚಾರಿಕ ಓದು ಸಹ ಅವರ ಕವಿತೆಗಳನ್ನು ಪ್ರಭಾವಿಸಿದೆ.  ವೈಚಾರಿಕ ಕ್ರಾಂತಿಗೆ ಯುವಕರಿಗೆ ಆಹ್ವಾನ ನೀಡಿದ ಕುವೆಂಪು ಅವರನ್ನು ಓದಿರುವ ಅವರು ದೇವರು ಮತ್ತು ಧರ್ಮದ ವಿಚಾರದಲ್ಲಿ ಸ್ಪಷ್ಟತೆ ಇರುವವರು. ದೇವರು ಸದಾ ಹುಡುಕಾಡುವ, ಧರ್ಮ ಸದಾ ಕಾಡುವ ಸಂಗತಿ ಯೆಂದು ಕವಯಿತ್ರಿ ೨೦೨೦ ಮಾರ್ಚ ೨೬ ರಂದು ಕಡಲವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೋಧರ್ಮವನ್ನು ಗಮನಿಸಿ ಅವರ ಕವಿತೆಗಳನ್ನು ಓದಿದಾಗ ಹೊಸ ಆಯಾಮವೊಂದು ಸಹಜವಾಗಿ ಪ್ರಾಪ್ತವಾಗಿ ಬಿಡುತ್ತದೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಮಹಿಳೆಯಾಗಿಯೂ, ಅವರನ್ನು ವೈಚಾರಿಕ ಓದು ಹೇಗೆ ರೂಪಿಸಿದೆ ಎಂಬುದು ಸಹ ಮುಖ್ಯ.

 ಸಮುದಾಯ ಮತ್ತು ಕುಟುಂಬದ ನಿಯಂತ್ರಣಗಳ ನಡುವೆಯೂ ಮಾನವೀಯ ನಡೆಯೊಂದನ್ನು ಕಾಯ್ದುಕೊಳ್ಳುವ ಪರಿ ಅದ್ಭುತವಾದುದು. ಕವಿ ಹೆಚ್ಚು ಮಾತನಾಡದೆಯೂ , ತಣ್ಣಗೆ ಹೇಗೆ ಕ್ರಾಂತಿಕಾರಿಯಾಗಬಲ್ಲಳು  ಎಂಬುದನ್ನು ಗಮನಿಸಬೇಕು. ಸ್ತ್ರೀವಾದ ಮತ್ತು ಪುರುಷ ಪ್ರಧಾನ ಸಮಾಜದ ಕಟ್ಟಳೆಗಳನ್ನು, ಬಂಧನಗಳನ್ನು ಸದ್ದಿಲ್ಲದೇ  ಮನೆಯ ಹಿತ್ತಲಿನಲ್ಲಿನ ಹಂಡೆಯ ಬಿಸಿನೀರು ಕಾಯಿಸುವ ಒಲೆಗೆ ಒಣಕಟ್ಟಿಗೆಯನ್ನು ಇಟ್ಟು ಬೆಂಕಿ ಹಚ್ಚಿದಂತೆ, ಹಚ್ಚಿಬಿಡುತ್ತಾರೆ.

ಬೆಂಕಿಯನ್ನು ಬೆಳಕಾಗಿಸಿ ಬಿಸಿನೀರು ಕಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದಂತೆ, ಕವಿತೆ ಕಟ್ಟುವ ಬಗೆ. ಇದನ್ನು ಶೋಭಾ ಅವರ ಕವಿತೆ ಗಳಲ್ಲಿ ಕಾಣಬಹುದು.

ಅವ್ವ ಮತ್ತು ಅಬ್ಬಲಿಗೆ ಇಷ್ಟವಾಗಲು ನನಗೆ  ಹದಿನಾಲ್ಕು‌  ಕಾರಣಗಳಿವೆ. ಇವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಶೋಭಾ ಅವರ ಮೊದಲ ಸಂಕನಲದಲ್ಲಿ  ಕಾವ್ಯದ ತುಂಬಾ ತಾಯ್ತನ ತುಂಬಿರುವುದು. ದೇವರನ್ನು ಪ್ರಶ್ನಿಸಿರುವುದು. ಯುದ್ಧ ವಿರೋಧಿ ನಿಲುವುಗಳಿರುವುದು . ಗುರ್ ಮೆಹರ್ ಕವಿತೆಯಲ್ಲಿ ಸೈನಿಕನ ಮಗಳ ತಳಮಳ ಹಿಡಿದಿಟ್ಟು, ಆಕೆಯ ಪರಕಾಯ ಪ್ರವೇಶ ಮಾಡಿ ಕವಿತೆ ಕಟ್ಟಿರುವುದು. ಹೆಣ್ಣಿನ ತಳಮಳ ದಾಖಲಿಸಿರುವುದು. ಹಳ್ಳಿಯನ್ನು ಮರೆಯದಿರುವುದು. ಅಲ್ಲಿಯ ಮಣ್ಣು ತಂದು ನಗರದ  ಕುಂಡದಲ್ಲಿ ಹೂ ಬೆಳಸಿರುವುದು.

ಹೆಣ್ಣಿನ ಮನದ ಸ್ವಾತಂತ್ರ‍್ಯದ ಬಯಕೆಯ ಮುಂದಿನ ತಲೆಮಾರಿಗೆ ದಾಟಿಸಿರುವುದು. ಪ್ರೇಮಧರ್ಮದ ಹುಟ್ಟಲಿ ಎಂಬ ಕನಸ ಕಟ್ಟಿಕೊಡುವುದು.ಜಾತಿ ಧರ್ಮ ಮೀರಿದ ಮನುಷ್ಯತ್ವ ಪ್ರತಿಪಾದಿಸುವುದು. ಪ್ರಕೃತಿಯೊಡನೆ ಮನದ ತಲ್ಲಣ ,ಬಯಕೆ ಹೇಳುತ್ತಾ ಕನಸು ಹೆಣೆಯುವುದು. ಪ್ರೇಮದ ನವಿರು ಭಾವಗಳನ್ನು ಕಟ್ಟಿಕೊಡುವುದು.ಬುದ್ಧನನ್ನು ನೆನೆಯುತ್ತಲೇ ಯಶೋಧರೆಯ ತಳಮಳವನ್ನು ಕಣ್ಣೆದುರಿನ ಮಗನಿಗೆ ನಿವೇದಿಸುವುದು. ತವರಿನ ತಾರಸಿಯಲ್ಲಿ ಅಟ್ಟ ಸೇರಿದ ಕನಸುಗಳ ಮೆಲುಕು ಹಾಕುವುದು. ಶ್ರಮಿಕರನ್ನು, ರೈತರನ್ನು ಕಾವ್ಯದಲ್ಲಿ ಶ್ರದ್ಧೆಯಿಂದ ಸ್ಮರಿಸುವುದು.

ಅಸಮಾನತೆಯ ವಿರುದ್ಧ ಧ್ವನಿ:

ಶೋಭಾ ಅವರ ಕವಿತೆಗಳಲ್ಲಿ ಜಾತಿ ವ್ಯವಸ್ಥೆ ಮತ್ತು ಸ್ಥಗಿತ ವ್ಯವಸ್ಥೆಯ ವಿರುದ್ಧ ತಣ್ಣನೆಯ ಬಂಡಾಯವಿದೆ. ಮಣ್ಣು ಮತ್ತು ಹೆಣ್ಣನ್ನು ಸಾಂಪ್ರದಾಯಿಕ ಪುರುಷ ಪ್ರಧಾನ ವ್ಯವಸ್ಥೆ ಹೇಗೆ ಬಳಸಿಕೊಂಡಿದೆ ಎಂಬುದನ್ನು ಅವರು ಮೆಲುದನಿಯಲ್ಲಿ ದಾಖಲಿಸುತ್ತಾರೆ. ದೇವರು ಮತ್ತು ದೇವಸ್ಥಾನ ವ್ಯವಸ್ಥೆ ವಿಡಂಬಿಸುವ ಕವಿತೆಗಳು, ರಾಜಕೀಯ ಪ್ರಜ್ಞೆಯ ಕವಿತೆಗಳು , ಶ್ರಮಿಕರು ಓಟಿನ ದಿನ ಮಹತ್ವ ಪಡೆಯುವ ವ್ಯಂಗ್ಯವೂ ಅವರ ಸಂಕಲನದ ಕೆಲ ಕವಿತೆಗಳಲ್ಲಿ ಇವೆ. “ಹೆಚ್ಚೆಂದರೇನು ಮಾಡಿಯೇನು”  ಎಂಬ ಕವಿತೆಯಲ್ಲಿ ದೇವರು ತಾಯಿಯ ಮಗ ಎಂದು ಹೇಳುತ್ತಾರೆ. ತಾಯಿಯೇ ಇಲ್ಲಿ ಪ್ರಧಾನ ಕೇಂದ್ರ. ಹೆಣ್ಣು ಮತ್ತು ಮಣ್ಣಿನ ಸುತ್ತ ಹೆಣೆದ ಕವಿತೆಗಳು ಕನ್ನಡದಲ್ಲಿ ಪ್ರಧಾನ ಧಾರೆಯೊಂದನ್ನು ನೆನಪಿಸುತ್ತವೆ. ಆಧುನಿಕ ಕನ್ನಡ ಮಹಿಳಾ ಕಾವ್ಯದ ವಸ್ತುಗಳನ್ನು ನೆನಪಿಸಿಕೊಂಡಾಗ ಶೋಭಾ ದಿಟ್ಟತನದಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. `ಋಣಮುಕ್ತೆ’ಯಲ್ಲಿ ಮಳೆ ಮತ್ತು ಭೂಮಿಯ ಸಂಬಂಧವಿದೆ. `ಒಡಲ ಬಂಧ’ ಕವಿತೆಯಲ್ಲಿ ಮುಟ್ಟು ಮೂಢನಂಬಿಕೆ ಹಾಗೂ ಕನಸು ಕುಡಿಯೊಡೆವ, ಚಿಗುರೊಡೆವ ಹೊತ್ತಿನ , ಕಾಮನಬಿಲ್ಲು ಕಂಗಳಲ್ಲಿ ಅರಳುವ ಚಿತ್ರವಿದೆ. ಹೆಣ್ತನ ಹೂವಾಗಿ ಅರಳುವ ಸಮಯವನ್ನು ಬಣ್ಣಿಸುವ ಕವಯಿತ್ರಿ ಗರ್ಭಗುಡಿಯ ಪೂರ್ಣಕುಂಭದ ಕೆನ್ನೀರಿದು ಎನ್ನುತ್ತಾಳೆ. ಪೂರ್ಣಕುಂಭದ ಕೆನ್ನೀರು ಖಾಲಿಯಾಗಬಾರದು ಎನ್ನುವಾಗ ಭೂಮಿ ಬಂಜೆಯಾಗಬಾರದು ಎಂಬ ಧ್ವನಿಯೂ ಇದೆ. “ಉಯಿಲೊಂದ ಬರೆದಿಡುವೆ”  ಈ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಕವಯಿತ್ರಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಗೆ ಈ ಕವಿತೆ ಸಾಕ್ಷಿ. “ಹೊಟ್ಟೆ ತುಂಬಿದ ಜನಗಳಿಗೆ ಮಾತ್ರ ಒಡೆಯುವುದರ ಕುರಿತೇ ಚಿಂತೆ” ಎಂಬ ಸಾಲುಗಳು ಕವಯಿತ್ರಿ ಯಾವತ್ತೂ ಸತ್ಯದ ಕಡೆಗೆ ಸಾಗುವವಳು ಮತ್ತು ಸಮಾಜದ ಒಳಿತಿಗೆ, ಮಾನವೀಯತೆಯ ಕಡೆಗೆ ನಿಲ್ಲುವವಳು ಎಂಬುದು ಸ್ಪಷ್ಟವಾಗಿದೆ.

`ಕವನ ಹುಟ್ಟುವ ಹೊತ್ತು’ ಕವಿತೆಯಲ್ಲಿ ಅಸ್ತಿತ್ವದ ಹುಡುಕಾಟವೂ,ಸ್ವಾತಂತ್ರ್ಯದ ಹುಡುಕಾಟವೂ ಇದೆ. ಮಗ, ಅತ್ತೆ, ಅವ್ವ ಇವರ ನಡುವೆ ಕವನಗಳು ಕಳೆಯುತ್ತವೆ ರಾತ್ರಿಯಲ್ಲಿ !! ಎಂಬ ನೋವು ಇದೆ.  ಹಾಗೆ `ನನ್ನ ಕವಿತೆ’ಯಲ್ಲಿ ಕವಿತೆ ಅಪ್ಪ, ಅವ್ವ,ಅಣ್ಣ,ನನ್ನಕ್ಕ ತಂಗಿಯರಿಗಾಗಿ, ಮಣ್ಣಲ್ಲಿ ಹೊಸ ಟಿಸಿಲು ನನ್ನ ಕಾವ್ಯ, ಹುಡುಕಿ ಕೊಡುವ ಪತ್ರ ಫಲಕಗಳಿಗೂ ಅಲ್ಲ ಎನ್ನುತ್ತಾರೆ, ಸಾಹಿತ್ಯಲೋಕದ ರಾಜಕಾರಣದ ಬಗ್ಗೆ ಸಹ ಅವರ ನೈತಿಕ ಕೋಪ ಈ ಕವಿತೆಯಲ್ಲಿದೆ. `ನಲವತ್ತರಂಚಿವ ಸ್ವಗತ’ದಲ್ಲಿ ಸಹ ಅದೇ ಅಸ್ತಿತ್ವದ ಹುಡುಕಾಟ. ಕಾಲಕ್ಕೊಂದು ಕೀಲಿ ತೋಡಿಸಿ, ಕಾಲವನ್ನು ಕೂಡಿಹಾಕುವಂತಿದ್ದರೆ ಎಂಬ ಪ್ರಶ್ನೆಯನ್ನು ಮಹಿಳೆಯರ ಪ್ರತಿನಿಧಿಯಾಗಿ ತನಗೆ ತಾನೇ ಹಾಕಿಕೊಳ್ಳುತ್ತಾಳೆ. ಕಾಲದ ಹಕ್ಕಿ ಹಗಲು ಇರಳುಗಳ ರೆಕ್ಕೆಗಳನ್ನು ಹೊತ್ತು ಹಾರುವುದನ್ನು ಬೇಂದ್ರೆ ಹಿಡಿದಿಟ್ಟಂತೆ, ಚಲಿಸುವ ಕಾಲ ಕನ್ನಡ ಕವಿಗಳನ್ನು ಕಾಡಿರುವ ಬಗೆ ಅನನ್ಯವಾದುದು. “ನಲವತ್ತರಂಚಿನ ಸ್ವಗತ” ದ ಜೊತೆ “ಮುಸುಕಾಗುವ ಸಂಕಟ” ಕವಿತೆಯನ್ನು ಸಹ ಗಮನಿಸಿಬೇಕು. ಸೀರೆಯನ್ನು ಅವರ ಬಣ್ಣವನ್ನು ಅದ್ಭುತ ಪ್ರತಿಮೆಯಾಗಿಸಿದ್ದಾರೆ ಶೋಭಾ, ಒಂದೊಂದು ಬಣ್ಣ, ಒಂದೊಂದು ಸಮಯದ ಮಹತ್ವದ ಜೊತೆ ಕುಟುಂಬದಲ್ಲಿ ಒಬ್ಬಬ್ಬೊರಿಗೆ ಇಷ್ಟವಾಗುವ ಬಣ್ಣದ ಸೀರೆಯುಡುವುದು.

“ಹಳದಿ ಮಕ್ಕಳಿಗೆ,

ನೀಲಿ ನನಗೆ

ದೊಡ್ಡ ಬಾರ್ಡರ್ ಸೀರೆ ಗಂಡನಿಗೆ

ತಿಳಿ ಗುಲಾಬಿ ಅವ್ವನಿಗೆ ”

ಹೀಗೆ ಬರೆಯುತ್ತಾ `ಎದೆಗಿಳಿದ ಸೀರೆಗಳು ಸುಕ್ಕಾಗಿರಬಹುದು, ಒಂದೊಂದು ಬಣ್ಣ, ಒಂದೊಂದು ಕನಸು, ಬಣ್ಣ ಮಾಸಿದ ಮೇಲೆ ?? ಹೆಣ್ಣಿನ ತಳಮಳವನ್ನು, ಭಿನ್ನ ಧ್ವನಿಯಲ್ಲಿ, ಸೀರೆ ಹೆಣ್ಣು ಮತ್ತು ಮುಪ್ಪನ್ನು ಧ್ವನಿಸುವ ಕ್ರಮ ಕಾವ್ಯದ ಶಕ್ತಿಯನ್ನು ಹೇಳುತ್ತದೆ.

“ನಾವು ಮತ್ತು ಅವರು” ಎಂಬ ಕವಿತೆಯಲ್ಲಿ ಶ್ರಮಿಕರ ಬಗ್ಗೆ ಇರುವ ಕಾಳಜಿ ಹಾಗೂ ದುಡಿದುಣ್ಣುವ ವರ್ಗದ ಬಗ್ಗೆ ಕವಿಯ ಚಿತ್ತ ಹರಿದಿದೆ. ಈ ಕವಿತೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆ ವರ್ಗಗಳ ಆಲೋಚನ ಕ್ರಮವನ್ನು ಸಹ ವ್ಯಂಗ್ಯವಾಗಿ ಹೇಳಿದ್ದಾಳೆ ಕವಯಿತ್ರಿ.

“ನಾವೋ

ದಿಂಬಿನ ಜೊತೆಗೆ ನಿದ್ದೆಯನ್ನು

ಮಾರುವವರಿಗಾಗಿ

ಬರ ಕಾಯುತ್ತಿದ್ದೇವೆ

ಈ ಮಹಡಿಯ ಮನೆಯಲ್ಲಿ ”

ಹೊಸ ಕಾರಿಗೆ ಗೀರು ಬಿದ್ದಾಗ ಆದ ಸಣ್ಣ ನೋವನ್ನೇ ಇಟ್ಟುಕೊಂಡು ಕವಿತೆಯಾಗಿಸುವ ಕವಯಿತ್ರಿ “ಎದೆಯ ಮೇಲೆ ನೀನೆಳೆದು ಬಿಟ್ಟ, ಆ ಬರೆಗೆಷ್ಟು ನೋವಾಗಿರಬೇಡ? ಹೀಗೆ ಪ್ರಶ್ನಿಸುವ ಎದೆಗಾರಿಕೆ ಸಹ ಇದೆ. ಸೂಕ್ಷ್ಮ ಮನಸ್ಸಿನವರಿಗೆ ಆದ ಅತೀ ಚಿಕ್ಕ, ಮರೆತುಹೋಗಬಹುದಾದ ಘಟನೆಯೂ ಕವಿತೆಯ ವಸ್ತುವಾಗುತ್ತದೆ ಎಂಬುದಕ್ಕೆ ಕಾರು-ಗೀರು ಕವಿತೆ ಸಾಕ್ಷಿ. ಹಳ್ಳಿ, ಹಳ್ಳಿಗೆ ಆಧುನಿಕತೆ ಪ್ರವೇಶಿಸಿದ ನಂತರ ಹಳ್ಳಿಯ ಮುಗ್ಧತೆ ಮತ್ತು ನಗು ಮಾಸಿರುವುದು “ನನ್ನೂರು” ಕವಿತೆಯಲ್ಲಿ ದಾಖಲಾಗಿದೆ. ಹೊಸ ಬದುಕಿನತ್ತ ಕವಿತೆಯಲ್ಲಿ ಬಹುದೊಡ್ಡ ಆಶಯಗಳನ್ನು ಮಹಿಳಾ ಸಮುದಾಯಕ್ಕೆ  ಕವಯಿತ್ರಿ ಬಿತ್ತಿದ್ದಾರೆ. ಕಿಡಿಕಿ, ಜೀತಗಳನ್ನು ಸಂಕೇತವಾಗಿ ಹೇಳುತ್ತಾ ಮಾನಾಪಮಾನ, ಅಡೆತಡೆ,ಎಳೆದ ಬರೆ, ಸ್ವರಸತ್ತ ಕೊರಳು, ನಂಜನಿತ್ತವರ ಮೀರೋಣ ಎನ್ನುತ್ತಾ….ಹೊಸ ಬೆಳಕಿನ ಹುಡುಕಾಟ ಮಾಡೋಣ. ಹೊಸಗೀತೆ, ಹೊಸಬಟ್ಟೆ, ಹೊಸ ಭಾಷ್ಯ ಬರೆಯೋಣ. ಹಸಿರಾಗಿ ಹುಟ್ಟೊಣ,ದನಿಯಾಗಿ ನಿಲ್ಲೋಣ ಎನ್ನುತ್ತಾಳೆ.

“ಋಣದ ಪತ್ರ” ದಲ್ಲಿ ಹರಿದ ಚಂದ ಕೌದಿಯ ಹೊಲಿಯ ಬೇಕಿದೆ ಎಂದು ಸಮಾಜದ ಬಿರುಕುಗಳಿಗೆ, ಸಂಬಂಧಗಳಿಗೆ ಬೆಸುಗೆ ಹಾಕುವ ಕೆಲಸವನ್ನು ಕವಯಿತ್ರಿ ಮಾಡುತ್ತಾರೆ.  ‘ ‘ ‘ನಾನು’ ಎಂಬ ಕವಿತೆಯಲ್ಲಿ ನೋವಲ್ಲೂ ನಗುವ ಆಶಯಕ್ಕೆ, ಎದೆ ಬಾರವ ಹಗುರಾಗಿಸಿ ಉಸಿರಾಗುವ ಹಂಬಲಕ್ಕೆ ಕಸನು ಬಿತ್ತುವುದು ಎನ್ನುತ್ತಾ…ಪ್ರೀತಿಸಿಯೇ ತೀರುತ್ತೆನೆಂದಲ್ಲ, ಜನ್ಮಜನ್ಮಗಳ ಋಣಭಾರವೊಂದರ ಸಂದಾಯಕ್ಕೆ ನಾನು ಇದ್ದೇನೆ ಎಂಬ ಹಂಬಲವ ತೋಡಿಕೊಳ್ಳುತ್ತಾಳೆ ಕವಯಿತ್ರಿ. ” ನೀ ಬರುವುದು ಖಾತ್ರಿಯಾದಾಗಿನಿಂದ ಕನಸುಗಳು ಬಣ್ಣ ಹಚ್ಚಿಕೊಳ್ಳುತ್ತಿವೆ”

ಎಂಬುದು ಬದುಕಿನ ದೊಡ್ಡ ಆಶಾವಾದವಾಗಿದೆ.

***********

ನಾಗರಾಜ ಹರಪನಹಳ್ಳಿ

4 thoughts on “ಅವ್ವ ಮತ್ತು ಅಬ್ಬಲಿಗೆ

  1. Thank u ಸಾಹಿತ್ಯ ಸಂಗಾತಿಗೆ. ಮತ್ತು ಅಬ್ಬಲಿಗೆಯ ಅಂತರಾಳವನ್ನು ತಮ್ಮ ಬರಹದಲ್ಲಿ ತೆರೆದಿಟ್ಟ ಕಾವ್ಯಬಂದು ನಾಗರಾಜ್ ಹರಪನಹಳ್ಳಿಯವರಿಗೂ. ನಾನು ಕಾದಿಡುವ ಬರಹವಿದು. ಧನ್ಯವಾದಗಳು ಮತ್ತೊಮ್ಮೆ

Leave a Reply

Back To Top