ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ

ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ.

ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು?

ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ.

*ಬಾಧಕಗಳು *:
೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.
೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?
೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.
೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.
೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.
೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.
೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.
೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.
೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.
೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.
೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.
೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.
೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.
೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ.

ಇನ್ನು ಅನುಕೂಲಗಳನ್ನು ನೋಡಿದರೆ,
೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.
೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.
೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.
೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.
೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ.

ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ?

**************

One thought on “ಶಿಕ್ಷಣ ಆನ್ ಲೈನ್!

  1. A very nice analysis about online education and its application. COVID 19 Is spreading ,all are scared of it , lockdown declared and day today activities came to a grinding halt.All started worrying about closer of educational institutions. Children’s future is affected. What to do was a big question infront of everyone. Under the circumstances “online education” was thought.
    Our respected madam Vinuta ji in her above narration has given a beautiful thought provoking analysis about the scope and usefulness of “online education”. It is worth reading .

Leave a Reply

Back To Top