ಇತರೆ

ಮರುಕ ಹುಟ್ಟುತ್ತದೆ

India Girl Child Farm High Resolution Stock Photography and Images ...

ವಿದ್ಯಾ ಶ್ರೀ ಎಸ್ ಅಡೂರ್

ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ‍್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಮರುಕ್ಷಣವೇ ಆ ಹುಡುಗಿ ಮನೆಯಿಂದ ಹೊರಗೋಡಿ ಸ್ವಲ್ಪ ಹೊತ್ತಿಗೆ ವಾಪಾಸಾಗಿದ್ದನ್ನು ನಾನು ಕಡೆಗಣ್ಣಿನಲ್ಲಿ ಗಮನಿಸಿದೆ. ಇಡೀದಿನ ಗೆಳತಿಯ ಆದರಾಥಿತ್ಯವನ್ನು ಸ್ವೀಕರಿಸಿ ದಣಿದಿದ್ದ ನಾನು, ಸ್ವಲ್ಪ ಹೊತ್ತು ಆರಾಮಾಗಿ ಕೂತಿರುವಾಗ ಆಕೆಯ ಮಗಳು ನನ್ನ ಜತೆಗೆ ಬಂದು ಕುಳಿತಳು.ನನಗೋ ತಡೆಯದೆ, “ಆಗ ಅಮ್ಮ ನಿನ್ನ ಬಳಿ ಏನು ಹೇಳಿದುದಕ್ಕೆ ನೀನು ಹೊರ ಹೋಗಿಬಂದೆ?” ಎಂದು ಕೇಳಿದೆ. ಮಾತು ತಪ್ಪಿಸಲರಿಯದ ಮುಗ್ಧಮಗು ”ನಮ್ಮ ಮನೆಯ ಫ್ರಿಜ್ಜಿನಲ್ಲಿ ಹಾಲು ಖಾಲಿಯಾಗಿ ಅಮ್ಮನಿಗೆ ತರುವುದು ಮರೆತಿತ್ತು. ಅದಕ್ಕೆ ಪಕ್ಕದ ಮನೆಯ ಆಂಟಿಯ ಫ್ರಿಜ್ಜಿನಿಂದ ಹಾಲು ಇಸಿದುಕೊಂಡು ಬರಲು ಅಮ್ಮ ಕಳಿಸಿದ್ಲು“ ಎಂದು ಹೇಳಿತು. ನಾನು ಪುನಃ ಕುತೂಹಲ ತಡೆಯದೆ ಫ್ರಿಜ್ಜಿಗೆ ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದೆ. ಅದಕ್ಕೆ ಮಗು ”ರಾತ್ರಿ ಮಲಗುವಾಗ ಬಾಗಿಲು ಹತ್ರ ಚೀಟಿ ಹಾಕಿದ್ರೆ, ಬೆಳಿಗ್ಗೆ ಬಾಗಿಲು ತೆಗೆಯುವಷ್ಟರಲ್ಲಿ ಹಾಲು ಬಂದಿರುತ್ತೆ “ಎಂದು ಹೇಳಿತು. ಮನದಲ್ಲಿ ಇನ್ನೂ 2-3 ಪ್ರಶ್ನೆಗಳಿದ್ದರೂ,ಅವುಗಳು ಆ ಮಗುವಿನ ಜ್ಞಾನಕ್ಕೆ ನಿಲುಕದ್ದು ಎಂದು ಸುಮ್ಮನಾದೆ. ಗೆಳತಿಯ ಜತೆ ಬಾಲ್ಯದ ನೆನಪುಗಳನ್ನು ಪುನಃ ಒಮ್ಮೆ ಹಸಿರಾಗಿಸಿ ಸಂಜೆಗೆ ನಮ್ಮೂರಿನ ಬಸ್ಸು ಹತ್ತಿದವಳಿಗೆ “ಫ್ರಿಜ್ಜಿನಹಾಲಿನಮೂಲ” ಮನದಾಳದಲ್ಲಿ ದಾರಿ ಹುಡುಕತೊಡಗಿತ್ತು.


ಸರಿಯಾಗಿ ನೆನಪಿಲ್ಲವಾದರೂ ಅಂದಾಜು ನಾನು 2-3ನೇ ತರಗತಿಯಲ್ಲಿರುವಾಗಲೊಮ್ಮೆ ನಮ್ಮ ತಾತ ನಮ್ಮ ಮನೆಗೆ ಬಂದಿದ್ದಾಗ,ಅವರಿಗೆ ಕಾಫಿ ಮಾಡಲೂ ನಮ್ಮ ಮನೆಯಲ್ಲಿ ಹಾಲಿರಲಿಲ್ಲ. ಬಡತನದ ಅಂದಿನ ದಿನಗಳಲ್ಲಿ ಮೂರು ಮಕ್ಕಳ ತಾಯಿಯಾದ ನಮ್ಮಮ್ಮ, ಕೊಂಡು ತಂದು ನಮಗೆ ಹಾಲು ಕುಡಿಸುವಷ್ಟು ಸಿರಿವಂತೆಯಾಗಿರಲಿಲ್ಲ. ಪರಿಸ್ಥಿತಿಯನ್ನು ಅರ‍್ಥ ಮಾಡಿಕೊಂಡ ನಮ್ಮ ತಾತ ಅಮ್ಮನಿಗೆ “ನೀನು ಮದುವೆಗೂ ಮುಂಚೆ ಹಟ್ಟಿ ತುಂಬಾ ದನಕರುಗಳನ್ನು ಕಟ್ಟಿ, ಸಾಕಿ,ಹಾಲನ್ನುಮಾರಿ,ಮನೆಯಲ್ಲಿ ಹಾಲು, ಮಜ್ಜಿಗೆ, ತುಪ್ಪ ಎಂದು ಸಮೃದ್ಧಿಯನ್ನು ಉಂಟುಮಾಡಿದ್ದವಳು. ಈಗ ನಿನ್ನ ಮಕ್ಕಳಿಗೆ ಹಾಲಿಲ್ಲವೆಂದು ಕೊರಗಬೇಡ. ನಿನ್ನಿಷ್ಟದ ಕರು ಈಗ ಹಸುವಾಗಿ ಯಥೇಚ್ಚ ಹಾಲನ್ನು ನೀಡುತ್ತಿದೆ. ಅದನ್ನು ನಿನ್ನಲ್ಲಿಗೆ ಕಳಿಸಿಕೊಡುತ್ತೇನೆ. ಮಕ್ಕಳು ಹಾಲು, ಮಜ್ಜಿಗೆಯ ಬಣ್ಣ ನೋಡಲಿ ಎಂದಾಗ ಅಮ್ಮ ಮತ್ತು ಅಜ್ಜನ ಕಣ್ಣಾಲಿಗಳು ತುಂಬಿದ್ದವು.


ಮಾತಿಗೆ ತಪ್ಪದೇ ಅಜ್ಜ ಹಸುವನ್ನೂ ಅದರ ಕರುವನ್ನೂ ನಮ್ಮಲ್ಲಿಗೆ ಕಳುಹಿಸಿಯೇಬಿಟ್ಟರು .ಅನೇಕ ವರ‍್ಷಗಳಿಂದ ಅಮ್ಮನನ್ನು ನೋಡಿರದಿದ್ದ ಅಮ್ಮನೇ ಸಾಕಿದ್ದಹಸು, ಅಮ್ಮನನ್ನು ನೋಡಿ ಬಾಲ ನಿಮಿರಿಸಿ ಕುಣಿದು ಕುಪ್ಪಳಿಸಿತು .”ಬಂದೆಯಾ ಕುಂಟಿಮಾಚಕ್ಕ” ಎಂದು ಅಮ್ಮ ಹಸುವನ್ನು ಸ್ವಾಗತಿಸಿದಾಗ., ಇದೆಂತ ಹೆಸರು ಎಂಬ ನಮ್ಮ ಪ್ರಶ್ನೆಗೆ, ಕುಳ್ಳಗಿನ ಮಾಚಕ್ಕ ಎಂಬ ಹಸು ಕೊಂಡಾಟದಲ್ಲಿ ಕುಂಟಿಮಾಚಕ್ಕ ಎಂದಾಗಿದೆ ಎಂದರು.ನಮಗಂತೂ ಅದಕ್ಕಾಗಿ ಕಟ್ಟಿದ ಸಣ್ಣ ಹಟ್ಟಿಗೆ ದಿನಕ್ಕೊಂದು ಐವತ್ತು ಸಲ ಹೋಗಿ ಹಸು ಕರುವನ್ನು ನೋಡಿಕೊಂಡು ಬರುವುದೇ ಒಂದು ಸಂಭ್ರಮವಾಯಿತು .ಅಲ್ಲಿಂದ ಮುಂದೆ ನಮಗೆ ಕುಡಿಯಲು ಮಾತ್ರವಲ್ಲದೆ ಮಾರಾಟ ಮಾಡುವುದಕ್ಕೂ ಹಾಲು ಒದಗತೊಡಗಿತು.


ಅನಂತರ ಹುಟ್ಟಿದ ಕರುಗಳಿಗೆ ಹೆಸರಿಡುವುದೇ ನಮಗೊಂದು ಸಂಭ್ರಮ. ಮೊದಲು ಹುಟ್ಟಿದವಳೇ ”ಚಿನ್ನಿ”. ಹೆಸರಿಗೆ ತಕ್ಕಂತೆ ಚಿನ್ನದಂತಹ ಹಸು. ನಮ್ಮಿಂದ ಹೆಚ್ಚಿನ ಕೊಂಡಾಟವನ್ನು ಅಪೇಕ್ಷಿಸದ ಅವಳಿಗೆ ತನ್ನ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಮರೆಮಾಚಲು ಗೊತ್ತಿರಲಿಲ್ಲ. ಅನಂತರ ಪುಟ್ಟಿ…ಬಂಗಾರಿ …ಹೀಗೆ ಸುಮಾರು ಕರುಗಳಾದವು. ಮೊದಲ ಎರಡು ತಿಂಗಳು ಕರುಗಳೆಲ್ಲ ಮನೆಯ ಒಳಗೇ ವಾಸ. ಮನೆಯೊಳಗೆ ಅವಕ್ಕೆ ಬೇಕಾದಲ್ಲಿ ಹೋಗಿ ಕೂರುವುದು, ಮಲಗುವುದು ಮಾಡುತ್ತಿದ್ದವು. ಮುಸ್ಸಂಜೆಗೆ ಎಲ್ಲರೂ ಕೂತು ದೇವರ ಭಜನೆ, ಶ್ಲೋಕ ಹೇಳುವಾಗ ನಮ್ಮ ಬಳಿಯೇ ಬಂದು ಅಂಟಿ ಕೂರುತ್ತಿದ್ದವು. ರಾತ್ರಿ ಚಾಪೆ ಹಾಸಿ ಮಲಗುವಾಗ ನಮ್ಮ ಚಾಪೆಯಲ್ಲೇ ಬಂದು ಮಲಗುತ್ತಿದ್ದವು.


ಆದರೆ ಅಸಲಿ ಆಟ ಶುರುವಾಗಿದ್ದೇ ಚಿನ್ನಿ ಕರು ಹಾಕಿದ ನಂತರ.ಆವರೆಗಿನ ಎಲ್ಲಾ ಕರುಗಳೂ ಊರಿನ ತಳಿಯವಾಗಿದ್ದರೆ, ಚಿನ್ನಿ ಹಾಕಿದ ಕರು ಬೇರೆ ತಳಿ. ಉದ್ದಉದ್ದ ಕೈ..ಕಾಲಿನ, ದೊಡ್ಡ ದೊಡ್ಡ ಕಿವಿಯ, ನೀಲಿಕಣ್ಣಂಚಿನ, ಇಟ್ಟಿಗೆಬಣ್ಣದ, ಹಣೆಯ ಮೇಲೆ ಎರಡು ಬಿಳಿಯ ಬೊಟ್ಟುಳ್ಳ, ಬೆಣ್ಣೆಯಂತೆ ನುಣುಪಾದ ಕೂದಲಿನ, ಮುದ್ದು ಮುದ್ದಾಗಿ ಓಡಾಡುತ್ತ ನಮ್ಮ ಮಡಿಲಿನಲ್ಲೇ ಎಂಬಂತೆ ಬಂದು ಕೂರುತ್ತಿದ್ದ ಸುಂದರಿ ಕರುವಿಗೆ ನಾವೆಲ್ಲರೂ ಒಮ್ಮತದಿಂದ ಇಟ್ಟ ಹೆಸರು “ಸಿಂಗಾರಿ”.ನಾವೆಲ್ಲರೂ ಆಕೆ ಧರೆಗಿಳಿದ ಶಾಪಗ್ರಸ್ತ ಅಪ್ಸರೆಯೇನೋ ಎಂಬಂತೆ ಅವಳ ಮೋಹಕ್ಕೆ ಒಳಗಾಗಿದ್ದೆವು. ಸಂಜೆ ಶಾಲೆ ಬಿಟ್ಟಾಗ ಎಲ್ಲಿಯೂ ನಿಲ್ಲದೆ ಓಡೋಡಿ ಬಂದು ಅವಳ ಜೊತೆ ಆಟಕ್ಕೆ ಬೀಳುತ್ತಿದ್ದೆವು. ಸ್ವಲ್ಪ ಸಮಯದ ನಂತರ ಮನೆ ಬಿಟ್ಟು ಆಕೆ ಹಟ್ಟಿಗೆ ಶಿಫ್ಟ್ ಆದಮೇಲೆ ನಾವೆಲ್ಲ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದರೆ ಕೊನೆಯವನಾದ ನನ್ನ ತಮ್ಮ, ಅವಳ ಜೊತೆ ಹಟ್ಟಿಗೇ ಶಿಫ್ಟ್ ಆಗಿಬಿಟ್ಟಿದ್ದ. ಸಂಜೆ ಹೊತ್ತು ಶಾಲೆ ಮುಗಿಸಿ ಬಂದು, ತಿನ್ನಲು ಹಾಳುಮೂಳುಗಳೆಲ್ಲಾ ಇರದ ಆ ದಿನಗಳಲ್ಲಿ, ಬೆಲ್ಲ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದ ಆತ,ತನ್ನ ಅಂಗಿಯ ಕಿಸೆ ತುಂಬಾ ಬೆಲ್ಲದ ಚೂರುಗಳನ್ನು ತುಂಬಿಕೊಂಡು ಹೋಗಿ ದನಗಳಿಗೆ ಹುಲ್ಲು ಹಾಕುವ ಬೈಪಣೆಯಲ್ಲಿ ಮಲಗಿಬಿಡುತ್ತಿದ್ದ. ಅವನ ಕೆನ್ನೆ,ಮುಖ, ಕೈಯನ್ನೆಲ್ಲಾ ನೆಕ್ಕುತ್ತಿದ್ದ ಚಿನ್ನಿ ಮತ್ತು ಸಿಂಗಾರಿ ಬೆಲ್ಲದ ಪರಿಮಳಕ್ಕೆ ಕಿಸೆಯೊಳಗೇ…… ನಾಲಿಗೆ ಹಾಕಿ ಬೆಲ್ಲ ಖಾಲಿ ಮಾಡುತ್ತಿದ್ದವು.


ಕಾಲ ಸರಿದಂತೆ ಕರುವಾಗಿದ್ದ ಸಿಂಗಾರಿ ದನವಾಗಿ ತಾನೇ ಕರು ಹಾಕತೊಡಗಿದಾಗ, ನಮಗೋ ಅವುಗಳಿಗೆ ಹೆಸರಿಡುವುದೇ ಒಂದು ಸಂಭ್ರಮ. ರಾಜ…ಭೋಜ ಇನ್ನೂ ಏನೇನೋ.. ನಮ್ಮ ಮೂರು ಜನ ಮಕ್ಕಳ ಬದುಕು ರೂಪಿಸುವ ಜವಾಬ್ದಾರಿ ಹೊತ್ತ ನಮ್ಮ ಅಮ್ಮನ ಹೊರೆ ಹೆಚ್ಚಾಗಿದ್ದುದರಿಂದ ಖರ್ಚಿನ ನಿರ‍್ವಹಣೆಗೂ ನಾವು ಜಾನುವಾರುಗಳನ್ನು ಅವಲಂಬಿಸಿದ್ದೆವು. ಮೂರು ಹೊತ್ತೂ ಹುಲ್ಲು ಹೆರೆದು ಹಾಕಿ ಸಾಕಲು ಕಷ್ಟವಾಗುತ್ತಿದ್ದರಿಂದ ಹಗಲು ಹೊತ್ತು ಗುಡ್ಡೆಗೆ ಹೋಗಿ ತಾವೇ ಮೇಯಲು ಬಿಟ್ಟುಬಿಡುತ್ತಿದ್ದೆವು. ದಿನವಿಡೀ ಮೇದು ಸಂಜೆಗೆ ಮನೆಗೆ ಮರಳುತ್ತಿದ್ದವು. ನಮ್ಮ ಚಿನ್ನಿ ನಾಯಕತ್ವದ ದನಗಳ ಗುಂಪು. ಆದರೆ ಎಲ್ಲರಂತಲ್ಲದ ನಮ್ಮ ಸಿಂಗಾರಿ ಈ ವಿಷಯದಲ್ಲಿ ಹೇಗೆ ಎಲ್ಲರಂತೆ ಆದಾಳು?ಹಗಲು ಮೇಯುವಾಗ ಅವಳಿಗೆ ಹೊಟ್ಟೆತುಂಬುತ್ತಿರಲಿಲ್ಲವೋ,..ಅಲ್ಲ ಬೇಕೆಂದೇ ಚೇಷ್ಟೆ ಮಾಡುತ್ತಿದ್ದಳೋ…..?ಕೆಟ್ಟಬುಧ್ಧಿಯೊಂದು ಕಲಿತುಬಿಟ್ಟಳು. ಸಂಜೆ ಎಲ್ಲರೊಂದಿಗೆ ಮನೆಗೆ ಬರದೆ, ಎಲ್ಲಾದರೂ ಮರೆಯಲ್ಲಿ ಕಾದಿದ್ದು, ಹಗಲು ಗುರುತು ಮಾಡಿಕೊಂಡಿರುವ ಜಾಗಕ್ಕೆ ರಾತ್ರಿ ಹೋಗಿ ಮೇದು,ನಡುರಾತ್ರಿಯಲ್ಲಿ ವಾಪಾಸಾಗುತ್ತಿದ್ದಳು.ಅದೂ ಇಡೀ ಊರಿಗೇ ಕೇಳುವಂತೆ ಶಂಖ ಊದಿದಂತೆ ಕೂಗಿಕೊಂಡು. ಕ್ರಮೇಣ ದಿನ ಕಳೆದಂತೆ ಫಸಲು ಕಳೆದುಕೊಂಡ ಒಬ್ಬೊಬ್ಬರೇ ಬಂದು ಅಮ್ಮನಲ್ಲಿ ದೂರು ಹೇಳಲು ಸುರುಮಾಡಿದರು. ಕಟ್ಟಿ ಹಾಕಿ ಸಾಕುವ ಸಾಧ್ಯತೆಗಳೇ ಇಲ್ಲದೆ ಅಮ್ಮ ಒಳಗಿಂದೊಳಗೇ ಪೇಚಾಡತೊಡಗಿದರು. ಕಡೆಗೂ ಅವಳನ್ನು ಯಾರಾದರೂ ಸಾಕಿಕೊಳ್ಳುವವರಿಗೆ ಕೊಡುವುದು ಎಂದು ತೀರ‍್ಮಾನವಾದಾಗ ಹೊಟ್ಟೆಯೊಳಗೆ ಆದ ಸಂಕಟವನ್ನು ನಾನು ಇವತ್ತಿಗೂ ಅನುಭವಿಸಬಲ್ಲೆ. ಪೇಟೆಯಲ್ಲಿ ಅಪ್ಪನ ಅಂಗಡಿ ಸಮೀಪದ ಮನೆಯವರು ಬಂದು ಅವಳನ್ನು ಕರೆದೊಯ್ಯುವಾಗ ನಾವು ಮನೆಯಲ್ಲಿರಲಿಲ್ಲ
ಮರುದಿನ ಅಂಗಡಿಗೆ ಹೋದ ಅಪ್ಪ ರಾತ್ರಿ ಮರಳುವಾಗ ಮಾಮೂಲಿನಂತಿರಲಿಲ್ಲ. ಏನೆಂದು ವಿಚಾರಿಸಿದಾಗ ಅವರು ಹೇಳಿದ್ದು, “ಸಿಂಗಾರಿ ಅಂಗಡಿ ಬಳಿ ಬಂದವಳು ಸಂಜೆವರೆಗೂ ಹೋಗಲೇಇಲ್ಲ. ಅಂಗಡಿ ಬಾಗಿಲಲ್ಲೇ ಮಲಗಿದ್ದಳು”ಎಂದು.ನಮಗೆಲ್ಲ ಹೃದಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಅನುಭವ. ಹೊಟ್ಟೆಯಲ್ಲಿ ಅದೇನೋ ಕಿಚಿಪಿಚಿ.ಮರುದಿನ ಅಪ್ಪ ಅಂಗಡಿಗೆಹೊರಟಾಗ, ಆವತ್ತಿನ ತಿಂಡಿಯದೊಂದು ಪೊಟ್ಟಣ ಕಟ್ಟಿ ಅಮ್ಮ, ಅಪ್ಪನ ಕೈಗಿತ್ತು”ಸಿಂಗಾರಿಗೆ ತಿನ್ನಿಸಿ “ಎಂದಾಗ ಆಕೆಯ ಕಣ್ಣಂಚಿನಲ್ಲಿ ನೀರು ಜಿನುಗಿದ್ದನ್ನು ಆಕೆಗೆ ನಮ್ಮಿಂದ ಮರೆಮಾಚಲಾಗಲಿಲ್ಲ ಎಂಬುವುದು ನನಗೆ ಇಂದಿಗೂ ನೆನಪಿದೆ.


ಇವತ್ತಿನ ಆಧುನಿಕತೆಯ ನಾಗಾಲೋಟದ ನಡುವೆಯೂ ಹಟ್ಟಿಯಲ್ಲಿರುವ ಹಸುಕರುಗಳಿಗೆ ಹೆಸರಿಟ್ಟು, ಅವುಗಳ ಜೊತೆಗೆ ಕುಣಿದು ಸಂಭ್ರಮಿಸುವ ನನ್ನ ಮಗಳನ್ನು ನೋಡಿದರೆ, ಸಧ್ಯ ನಾನೂ ನನ್ನ ಗೆಳತಿಯಂತೆ ಸಿಟಿವಂತಳಾಗದೇ ಉಳಿದೆನಲ್ಲಾ ಎಂದು ಸಮಾಧಾನವಾದರೂ…….ಕಾಮನ್ಸೆನ್ಸ್ ಇಲ್ಲದ, ಹಳ್ಳಿಗರು ಎಂದರೆ ತಾತ್ಸಾರ ಮಾಡುವ ಸಿಟಿಯವರನ್ನು ನೆನೆದರೆ ಮರುಕ ಹುಟ್ಟುತ್ತದೆ.
*************

3 thoughts on “ಇತರೆ

Leave a Reply

Back To Top