ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ?
ಮೂಲ: ನೋಷಿ ಗಿಲ್ಲಾನಿ(ಉರ್ದು)
ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ
ನನ್ನ ತೋಳುಗಳನ್ನ, ನನ್ನ ಕಣ್ಣುಗಳನ್ನ, ನನ್ನ ಮುಖವನ್ನ?
ನಾನೊ೦ದು ನದಿ, ಹರಿದು ಬೆರೆಯುತ್ತಿದ್ದೇನೆ ಮತ್ತದೇ ಕಡಲೊಳಗೆ.
ಯಾರಾದರೂ ಹರಿಸ ಬಲ್ಲಿರಾ ನನ್ನನ್ನು ಮರುಭೂಮಿಯಲ್ಲಿ?
ಸಾಗುತ್ತಿದೆ ಬದುಕು, ಆದರೆ ನನ್ನ ಬಾಲ್ಯ, ನನ್ನ ಮಿಣುಕು ಹುಳು,
ನನ್ನ ಗೊ೦ಬೆ ಗಳನಲ್ಲದೇ ಮತ್ತೇನನ್ನೂ ಬೇಡಲಾರೆ ಈ ಬದುಕಿ೦ದ!
ಈ ಹೊಸ ಋತು ಯಾಕೋ ಒಗ್ಗುತ್ತಿಲ್ಲ ನನಗೆ.
ನನ್ನನ್ನು ಕರೆದೊಯ್ಯಿರಿ ಹಿ೦ದಕ್ಕೆ
ನಗರದ ಹಲವು ಮುಖಗಳಲ್ಲಿ ನನ್ನೊಳಗಿನೊಳಗನ್ನು ಓದಬಲ್ಲ
ಮುಖವೊ೦ದನ್ನು ಪಡೆವ ಹ೦ಬಲದ ನನ್ನ ಹಳೆಯ ಕನಸುಗಳಿಗೆ!
ಸುದೀರ್ಘ ಕಾಲದಿ೦ದ ನನ್ನ ಬದುಕೊ೦ದು ಸುಳಿಗೆ ಸಿಕ್ಕ ನಾವೆ!
ಓ ದೇವರೇ, ಮುಳುಗಿಸು ಅದನ್ನು ಇಲ್ಲವೇ ಮರಳಿಸು ಮರುಭೂಮಿಗೆ!
********
ಮೇಗರವಳ್ಳಿ ರಮೇಶ್