ಕಾವ್ಯ ಸಂಗಾತಿ
ಲಕ್ಷ್ಮಿ ನಾರಾಯಣ ಕೆ.
ಅಂಬೇಡ್ಕರ…. ಅಂಬೇಡ್ಕರ…

ನಾವೂ… ನೀವೆಲ್ಲರೂ
ಒಂದಾಗಬೇಕು… ಸಮಷ್ಟಿಯಾಗಿ
ನನ್ನೊಳಗೂ…. ಅಂಬೇಡ್ಕರ
ನಿನ್ನೊಳಗೂ…. ಅಂಬೇಡ್ಕರ
ಯಾಕಯ್ಯ ಯಾಕs…. ?
ನೀವೂ..ಕೂಡ! ಅಂಬೇಡ್ಕರ..
ಮತ ಜಾತಿಯಾ…
ಅಂಧ ಅಸಮಾನತೆಯಾ..
ಕತ್ತಲ ಕುಲುಮೆಯಲ್ಲಿ
ಕಾದು ಕಾದು ಸವೆದಿಲ್ಲವೇ
ದಮನಿತರಾಗಿ ನಾವೂ ?
ಛ್ಛೀ… ಥ್ಥೂ.… ಎಂಬ
ಶೋಷಣೆಯ ಬೆಂಕಿಯುರಿಯಲಿ
ನೊಂದು ಕೊತಕೊತ ಕುದಿದ
ದಲಿತರೂ ನಾವೂ… ನೀವಲ್ಲವೆ?
ನೊಂದೂ… ಬೆಂದೂ…
ಮೇಲಿನವರ ಕಾಲಡಿಯಲಿ
ಬರಿಯ ಮೈಯಾ ಬೆವರ ಸುರಿಸಿ
ಬಡತವನ ತಿಕ್ಕಿಸಿಕೊಂಡ
ಹೊಲಯಾ.. ಮಾದಿಗರೂ ನಾವಲ್ಲವೆ?
ಹತಾಶೆಯಲಿ.. ಅಸಹಾಯಕರಾಗಿ
ಅವಡುಗಚ್ಚಿ ಧ್ವನಿಯ ಕಳೆದುಕೊಂಡು
ತಲೆ ಬಾಗಿ ಒದಿಸಿಕೊಂಡ
ಜಲಗಾರ ಜಾಡಮಾಲಿಗಳೂ
ನಾವೂ… ನೀವಲ್ಲವೇ?
ತುತ್ತು ತುತ್ತಿಗಾಗಿ ಕೈ ಚಾಚಿದೋರು
ದುಡಿದು ದುಡಿದು ಮೈಯ ಸವೆಸಿದೋರು
ಗುಡಿಸಲೊಳಗೆ ಮುದುಡಿದವರು
ಹಕ್ಕಿಪಿಕ್ಕಿಗಳು.. ಅಲೆಮಾರಿಗಳು
ನಾವೂ.. ನೀವಲ್ಲವೇ?
ಶತಮಾನದ ನೋವುಗಳಲಿ
ಅಡಗಿರುವ ಮನುಷ್ಯರ ಕೊಳೆಯನು
ಮಡಿ ಮೈಲಿಗೆಯ ಹೊಲಸನುಂಡು
ನೊಂದ ಹರಿಜನರು ನಾವೂ… ನೀವಲ್ಲವೇ?
ಇನ್ನೂ ಎಷ್ಟು ದಿನಾ..ಈ ಕತ್ತಲು ?
ಅಕ್ಷರವೇ ಬೆಳಕು ಬನ್ನಿ
ಭೀಮನ ದೀವಿಗೆಯು
ಕೈಯಿ ಕೈಯಿ ಹಿಡಿದು ತನ್ನೀ
ಹೊಸಕಾಲದ ಹೊಸ ಹೆಜ್ಜೆಯನ್ನಿಟ್ಟು
ಸಾಗಬೇಕು.. ನಾವೂ.. ನೀವಲ್ಲವೇ?
ನಾವು ನೀವೆಲ್ಲರು
ಒಂದೇ ಹಾದಿಯಲಿ ಸಾಗಬೇಕು
ಸಂವಿಧಾನದ ಗುರುತು ಅರಿತು…
ಆಗಬೇಕು ನಾವೆಲ್ಲರೂ…ಬಾಬಾ ಸಾಹೇಬರು
ಜೈ ಭೀಮನೆಂದು .
ಲಕ್ಷ್ಮಿ ನಾರಾಯಣ ಕೆ.

One thought on “ಲಕ್ಷ್ಮಿ ನಾರಾಯಣ ಕೆ. ಅವರ ಕವಿತೆ ಅಂಬೇಡ್ಕರ…. ಅಂಬೇಡ್ಕರ…”