ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಬೆದರುಗೊಂಬೆಯ ಬದುಕು…
ಅರಿವಿನ ಹರಿವು

ಎಷ್ಟೊಂದು ವಿಚಿತ್ರನೋಡಿ! ಮನುಷ್ಯನ ವ್ಯಕ್ತಿತ್ವ ವಿಭಿನ್ನಗಳ ಸಂಗಮ.
ಪ್ರತಿ ಮನೆಯು ಜೀವಸಂಕುಲದ ಜನ್ಮಸ್ಥಳ. ಅದು ಅದರ ಹಿಂದಿನ ಮುಂದಿನ ಸಂಬಂಧಗಳಿಗೆ ಬೆಸೆಯುವ ಕೊಂಡಿಯಂತೆ.ನಮ್ಮಜ್ಜಿ “ನೀನು ಹುಟ್ಟುವಾಗ ಸ್ವಲ್ಪ ಕಾಟಕೊಟ್ಟಿಲ್ಲವ್ವಾ,ನಿಮ್ಮವ್ವ ಎಷ್ಟು ದೇವರಿಗೆ ಹರಕೆ ಹೊತ್ತಿದ್ದಳೋ ನಾ ಕಾಣೆ!”. ಮಕ್ಕಳಾಗದಿದ್ದುದು ಊರ ಮಂದಿ ಆಡಿಕೊಳ್ಳುವ ಮನೆಮಾತಾಗಿದ್ಲು.ಎಂತದರ ಆಗ್ಲಿ ಒಂದು ಕೂಸು ಹುಟ್ಟಿದರ ಸಾಕು ಎನ್ನುವ ಸ್ಥಿತಿ.ಓಲಿಸುವುದು ನಮ್ಮ ಮನಸ್ಸಿಗೆ ಮಾತ್ರ.ಸಮಾಜಕ್ಕೊಂದು ದೃಷ್ಟಿ ಬೊಟ್ಟು ನೀಡಬೇಕಿತ್ತು. ಆಪಾದನೆಗಳನ್ನು ದೂರ ತಳ್ಳಿ ನೆಮ್ಮದಿ ಕಾಣಬೇಕೆಂಬ ಹಂಬಲ..ಇದು ಎಲ್ಲ ಕುಟುಂಬದ ಒತ್ತಾಸೆ ಕೂಡ. ಜನಸಂಖ್ಯೆ ಶೂನ್ಯವಾಗುವ ಸಮಯ ದಿನ ಕಳೆದಂತೆ ಮರಿಚೀಕೆ.ದಿನ ಗಣನೆ ಕೂಡ ಲೆಕ್ಕ ತಪ್ಪುವ ಸಾದ್ಯತೆ.
ಅಜ್ಜಿ ಹೇಳಿದಂತೆ ಹುಟ್ಟುವಾಗ ಬಸಣ್ಣನ ಗುಡಿಯ ಮುಂದೆ ಭಜನೆ,ಹಾಡು ಮತ್ತು ಕೀರ್ತನೆಗಳ ಮೂಲಕ ಊರಿಗೆ ಊರೇ ಬಸವಣ್ಣನ ಪೂಜೆಯಲ್ಲಿ ತಲ್ಲಿಣವಾದ ಸಮಯ..ಮನೆಯಲ್ಲಿ ಒಬ್ಬರು ಇಲ್ಲ.ಎಲ್ಲರೂ ಗುಡಿಯ ಮುಂದೆ ಚಕ್ರಮಂಡಿ ಹಾಕಿ ಧ್ಯಾನಾಸಕ್ತರಾಗಿದ್ದರು.ಅವರಿಗೆಲ್ಲ ಭಕ್ತಿಯಿಂದ ಇವನ್ನೆಲ್ಲ ಕೇಳುವ ಭಾಗ್ಯ ತಮದೆಂದು ಭಾವಿಸಿದ್ದರು. ನನ್ನವ್ವನ ಹೊಟ್ಟೆಯಲ್ಲಿ ಹತ್ತು ತಿಂಗಳು ಕಳೆದರೂ ಹೊರ ಬರದೆ ಅವ್ವನ ಎದೆಗೂಡಲ್ಲಿ ಬೆಚ್ಚಗಿದ್ದೆ.ಊರಲ್ಲಿ ಅವ್ವನ ಹೊಟ್ಟೆ ನೋಡಿ ಎರಡು ಮಕ್ಕಳು ಇರಬಹುದೆಂದು ಆಡಿಕೊಳ್ಳುತ್ತಿದ್ದರು.ಡೆಲಿವರಿ ಹುಣ್ಣಿಮೆ, ಅಮವಾಸ್ಯೆ ಎಲ್ಲವೂ ಮುಗಿದು ಹೋಗಿತ್ತು.ಯಾರಿಗೂ ಇಷ್ಟು ಬೇಗ ಡೆಲಿವರಿ ಆಗಲ್ಲ ಅಂತ ಎಲ್ಲರು ಅವ್ವನ ಜೊತೆ ಯಾರು ಇರದೆ, ಗುಡಿಗೆ ಹೋಗಿದ್ದರು.ವಿಚಿತ್ರ ಅಂದರೆ ನಮ್ಮ ಅಜ್ಜಿ,ದೊಡ್ಡಮ್ಮ ಬಸವಣ್ಣನಲ್ಲಿ ಬೇಡಿಕೊಂಡು ಹರಕೆ ಕಟ್ಟುತ್ತಿದ್ದರು.ಅವತ್ತು ಕೀರ್ತನೆಯಲ್ಲಿ “ಶಿವಲೀಲಾಮೃತ” ವಿಷಯದ ಕುರಿತು ಹೇಳುವಾಗ ಹೆಣ್ಣು ಮಗು ಹುಟ್ಟಿದರೆ ಶಿವಲೀಲಾ ಅಂತ ಹೆಸರಿಡುತ್ತಿವಿ ಅಂತ ಬೇಡಿಕೊಂಡ ಫಲವೇ ಅವತ್ತೆ ಹೆರಿಗೆ ನೋವು ಕಾಣಿಸಿಕೊಂಡು ಬೆಳಗಿನ ಜಾವ ನಾರ್ಮಲ್ ಡೆಲಿವರಿ ಆಗಿ,ಹುಟ್ಟಿದ್ದೆ…ಹತ್ತು ತಿಂಗಳ ಮೇಲೆ ಇಂತಹ ಜನ್ಮ ಭೂಮಿಗೆ ಬಂದಿದ್ದು ದೈವ ಸಂಕಲ್ಪ!. ಪ್ರತಿ ಮಗುವಿನ ಜನ್ಮದ ಹಿಂದೆ ಒಂದಲ್ಲ ಒಂದು ಕತೆ ಇದ್ದೆ ಇರುತ್ತೆ.ಯಾಕೆಂದರೆ ಜೀವನದ ವಿಶೇಷತೆಯೇ ಹೀಗೆ.ಹುಟ್ಟುದಾಗ ಮಗು ಹೇಗಿರುತ್ತೆ? ಗಂಡಾ? ಹೆಣ್ಣಾ? ಅದರ ಬಣ್ಣ? ಹೀಗೆ ಹತ್ತು ಹಲವಾರು ವಿಚಾರಗಳು ಹಾದುಹೋಗುತ್ತವೆ.ಎಲ್ಲರಿಗೂ ಕುತೂಹಲ, ಹುಟ್ಟಿದ್ದು ಹೆಣ್ಣು ಮಗು ಅಂದಾಗ ಮೂಗು ಮುರಿದವರೇ ಹೆಚ್ಚು!.
ಹಿಂದೆಲ್ಲಾ ಅವ್ಯವಸ್ಥೆಯ ಹಿಂದೆ ನಮಗರಿವಿಲ್ಲದ ವ್ಯವಸ್ಥೆ ನಮ್ಮೊಂದಿಗೆ ಪರ್ಯಾಯ ದ್ವೀಪದ ಹಾಗೆ ಇರುತ್ತಿತ್ತು.ನಾವು ಅಂದರೆ ನಮ್ಮ ಮನೆಯ ಹಿರಿಯರು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ದೈವಗಳು ಅಲ್ಲಲ್ಲಿ ವಾಸ್ತವ್ಯ ಹೂಡಿದ್ದು ಇದರಿಂದಲೇ ಇರಬೇಕು.ಮುಕ್ಕೋಟಿ ದೇವರು ನಮ್ಮ ಆತಿಥ್ಯ ಸ್ವೀಕರಿಸಿ,ಕೆಲವರ ಮೈಮೇಲೆ ಬಂದು ತನ್ನೆಲ್ಲ ಆಸೆ ತೀರಿಸಿಕೊಳ್ಳಲು ಶುರುಮಾಡಿದ ಮೇಲೆ,ಹರಕೆಗಳು ಭಯಂಕರ ರೂಪ ತಾಳಿದವು.ವಿವಿಧ ಬೆದರು ಗೊಂಬೆಗಳು ದೃಷ್ಟಿ ಬೊಟ್ಟುಗಳಾಗಿ ದೈವದ ಆಸುಪಾಸು ನಿಂತಿರುವುದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಊರಿಗೆ,ಕೇರಿಗೆ,ಮನೆಯಲ್ಲಿ ಆಚರಿಸುವ ಆಚರಣೆಗಳು ಭಿನ್ನ.ಮನುಷ್ಯನ ಅರಿವು ಮೂಡಿಸುವ ಅನೇಕ ಘಟನೆಗಳು ಹಾದುಹೋಗುತ್ತಿದ್ದರೂ,ಗಮನಿಸಿ ಸರಿಯಾದ ಪಥ ಹಿಡಿಯುವ ಮನಸ್ಸು ಮಾಡಬೇಕಾದವರು ಯಾರು?.ಪ್ರಕೃತಿಯು ಎಲ್ಲರಿಗೂ ಒಂದೆ ಬದುಕನ್ನು ನೀಡಿರುತ್ತದೆ.ಯಾರು ಮೇಲು ಅಲ್ಲ,ಕೆಳಗು ಅಲ್ಲ.ಆದರೂ ನಮ್ಮೊಳಗಿನ ಬೆದರು ಗೊಂಬೆಗಳು ಭಿನ್ನ ಭಿನ್ನ ರೂಪ ತಾಳಿ ಹೊಸ ಅಲೆಯ ಸೃಷ್ಟಿಸುತ್ತಿವೆ.ಭಯ ಮತ್ತು ಆತಂಕ ನಮ್ಮೊಳಗೆ ಅಷ್ಟೇ.

ಆಗೆಲ್ಲ ಪೋನುಗೀನು ಇಲ್ಲ,ಟೆಲಿಗ್ರಾಂ ಒಂದೇ ಉತ್ತರ.ಪತ್ರ ಬರೆದರೆ ತಲುಪುವುದು ಲೇಟು!.ಆಗೆಲ್ಲ ಟೆಲಿಗ್ರಾಂ ಬಂದರೆ ಜನರ ಎದೆ ನೋವು ಜಾಸ್ತಿ.. ಕಾರಣ ಅಂತಹ ಅಘಾತಗಳು ಎದುರಾದವು ಎಂದರ್ಥ. ಎಲ್ಲರ ಜೀವನ ಸುಖದ ಸುಪ್ಪತ್ತಿಗೆಯಲ್ಲಿ ಇರದೇ,ಕಷ್ಟ ನಷ್ಟಗಳ ನಡುವೆ ಬಾಲ್ಯದ ಸುಖವ ಅನುಭವಿಸದೆ ಇರುವಂತಹ ಅನೇಕ ಸಹಸ್ರಾರು ಜೀವಿಗಳು ಇಂದಿಗೂ ಹತಾಶೆಯನ್ನು ಬೆನ್ನಿಗೇ ಬಿದ್ದ ಬೇತಾಳದಂತೆ ಅಂಟಿಸಿಕೊಂಡು ಬದುಕುತ್ತಿರುವವರು ನಮ್ಮ ನಡುವಿದ್ದಾರೆ.ಯಾರಿಗೆಲ್ಲ ತಮ್ಮ ತಮ್ಮ ಜೀವನದ ಪ್ರಾರಂಭದ ದಿನಗಳು ನೆನಪಾದರೆ ಸಾಕು! ಅಚ್ಚಳಿಯದ ಪ್ರಭಾವ ಹೃದಯದ ಮೇಲೆ ದಾಳಿ ಮಾಡದೇ ಇರದು.
ಒಟ್ಟಾರೆಯಾಗಿ ಹೇಳುವುದಾದರೆ,ರೈತ ತನ್ನ ಬೆಳೆಗೆ,ಮನೆಗೆ,ಅಂಗಡಿಗೆ ಹೀಗೆ ಹತ್ತಾರು ಕಡೆ ನೈಜರ್ ತಾಗದಿರಲಿ ಅಂತ ಬೆದರುಗೊಂಬೆಗಳ ಮುಖವಾಡ ಹಾಕುವುದುಂಟು..ಮನುಷ್ಯನ ಕಣ್ಣುಗಳು ಅಷ್ಟೊಂದು ಭಯಾನಕ.ಕಣ್ಮುಚ್ಚಿ ಕುಳಿತವರೆಲ್ಲ ತಪಸ್ಸಿಗಳಲ್ಲ.ಹಾಗಂತ ತಪಸ್ಸು ಎನ್ನುವುದು ಆಂತರಂಗಿಕ ಒಲವು.ಹುಟ್ಟು ಹಾಗೂ ಹುಟ್ಟಿನ ನಂತರದ ಬೆಳವಣಿಗೆಗಗಳು ಯಾವತ್ತಿದ್ದರೂ ಗೌಪ್ಯವೇ.ಘಟನಾವಳಿಗಳು ಮನುಷ್ಯನ ಬದುಕನ್ನು ವಿಸ್ಮಯ ಜಗತ್ತಿಗೆ ತೆರೆದುಕೊಳ್ಳಲು ಅನುವುಮಾಡಿಕೊಡುತ್ತದೆ. ನಂಬಿಕೆ,ಸಂಪ್ರದಾಯಗಳು ಆಯಾ ಕಾಲಘಟ್ಟದಲ್ಲಿ ಬದಲಾಗುತ್ತಲೇ ಇರುತ್ತದೆ.ಬೆದರುಗೊಂಬೆ ಮನಸಿನ ವಿವಿಧ ಭಾವಗಳ ಪ್ರತೀಕ.ಮನಃಶಾಂತಿಗೆ ಎದುರುಗೊಳ್ಳುವ ಪ್ರತಿಬಿಂಬ ಅಷ್ಟೇ….
ಶಿವಲೀಲಾ ಶಂಕರ್





Super..
ವೈಚಾರಿಕ ಬರಹ,ಅಭಿನಂದನೆಗಳು
ತುಂಬ ಸೊಗಸಾದ ಲೇಖನ. ತಮ್ಮ ಸಾಹಿತ್ಯ ದೃಷ್ಟಿಕೋನ ತುಂಬ ವಿಭಿನ್ನ ಮತ್ತು ವಿಶೇಷ ವಾಗಿದೆ.ಅಭಿನಂದನೆಗಳು.