ವನಜಾ ಜೋಶಿ ಅವರ ಕವಿತೆ

ಸಂಸಾರದಲಿ ಸುಖ ದುಃಖದ ಬೀಜ ಬಿತ್ತುವವರು ನಾವೇ ತಾನೇ
ವಿತ್ತದಾಸೆಗೆ ಮರುಳಾಗಿ ಎಲ್ಲೆಲ್ಲೋ ಸುತ್ತುವವರು ನಾವೇ ತಾನೇ

ಬಾಳಸಂತೆಯಲಿ ಮುಂದೆ ನಡೆವುದಕೆ ಹಾದಿಯೊಂದು ಬೇಕಲ್ಲವೇ
ಕಠಿಣ ಏರು ಹಾದಿಯಾದರೆ ಅದನು ಹತ್ತುವವರು ನಾವೇ ತಾನೇ

ಎಚ್ಚರವಿರಬೇಕಲ್ಲಿ ಹಾದಿಯ ಹುಡುಕಿ ಮುಂದೆ ನಡೆವಾಗ
ಹೆಜ್ಜೆಯನೂರಿ ಸಹಮತದ ಮುದ್ರೆ ಒತ್ತುವವರು ನಾವೇ ತಾನೇ

ಶಾಂತಿ ಸಹನೆ ವಿವೇಕಗಳ ಸಂಗದಲಿರೆ ಚಿಂತೆಗಿರದು ನೆಲೆಯು
ಭಾವಗಳಿಗೆಲ್ಲ ಬಯಸಿದ ರಂಗು ಮೆತ್ತುವವರು ನಾವೇ ತಾನೇ

ಹಸಿತ ವನಸುಮ ತಲೆ ತೂಗುತಿದೆ ಸೃಷ್ಟಿ ವೈಭವಕೆ ಮೈಮರೆತು
ಮಧುರ ನಾದಸ್ವಾದಗಳ ನೆಲೆಯ ಮುತ್ತುವವರು ನಾವೇ ತಾನೇ


Leave a Reply

Back To Top