ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನೀ ದೇವತೆಯಾದರೆ

ದೇವತೆಯಾದರೆ;
ಬಿಡದೇ ಪೂಜಿಸುತ್ತಲಿರುವೆ!
ಸ್ವಾರ್ಥವಿರದೆ!
ಸಿದ್ಧಿಯಾದರೆ;
ಬೇಡದೇ ಜಪಿಸುತ್ತಲಿರುವೆ!
ಆಸೆಯಿರದೆ!
ಬುದ್ಧಿಯಾದರೆ;
ವಿರಮಿಸದೆ ದುಡಿಯುತ್ತಲಿರುವೆ!
ಭವಿಷ್ಯವಿರದೆ!
ನೀ ಚಿಗುರಾದರೆ;
ಅತ್ತಲಿತ್ತಲೋಗದೆ ಕಾವಲಿರುವೆ!
ಸಂಭಾವನೆಯಿರದೆ;
ಹೂವಾದರೆ;
ಎವೆಯಿಕ್ಕದೆ ನೋಡುತ್ತಲಿರುವೆ!
ಬಯಕೆಗಳಿರದೆ!
ಗಗನವಾದರೆ;
ಎತ್ತರೆತ್ತರ ಹಾರುತ್ತಲಿರುವೆ!
ನಿರೀಕ್ಷೆಯಿರದೆ!
ಮಳೆಯಾದರೆ;
ಮರೆಯಾಗದೆ ಮೈಯೊಡ್ಡಿ ನಿಲ್ಲುವೆ!
ಮೋಹವಿರದೆ!
ಪೃಥ್ವಿಯಾದರೆ;
ಹೆಜ್ಜೆಹೆಜ್ಜೆಗು ಮಣಿಯುತ್ತಲಿರುವೆ!
ಫಲಾಪೇಕ್ಷೆಯಿರದೆ!
ನೀ ವಿಶ್ವವಾದರೆ;
ಸುತ್ತಿಬಳಸದೆ ನಿನ್ನಂಕೆಯಲ್ಲಿರುವೆ!
ಅಂತರವಿರದೆ!
ನೀ ನಾನಾದರೆ;
ಉಸಿರನ್ನೇ ಮೀಸಲಿಟ್ಟಿರುವೆ!
ಜೀವದಾಸೆಯಿರದೆ!
ನಾ ನೀನಾದರೆ;
ಅಮರ ಪ್ರೇಮಿಯೇ ಆಗುವೆ!
ಮರುಜನ್ಮವಿರದೆ!

———————————————————–
ಟಿ.ಪಿ.ಉಮೇಶ್