ಪುಸ್ತಕ ಸಂಗಾತಿ

ಪುಸ್ತಕ: ಫೂ ಮತ್ತು ಇತರ ಕಥೆಗಳು


ಲೇಖಕರು: ಮಂಜುನಾಯಕ ಚಳ್ಳೂರು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರಾದ ಮಂಜುನಾಯಕ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿತು ಕೆಲಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸೃಜನಶೀಲ ಲೇಖಕರಾದ ಮಂಜುನಾಯಕ ಅವರ ಮೊದಲ ಕಥಾ ಸಂಕಲನ ಇದು. ಇಲ್ಲಿನ ಫೂ, ಖತಲ್ ರಾತ್ರಿ ಹಾಗೂ ತೇರು ಸಾಗಿತಮ್ಮ ನೋಡಿರೆ ಎಂಬ ಮೂರು ಕಥೆಗಳಿಗೆ ೨೦೧೮ರ ಟೊಟೊ ಯುವ ಪುರಸ್ಕಾರ ಲಭಿಸಿದೆ.

ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿರುವ ಈ ಕಥಾ ಸಂಕಲನದಲ್ಲಿ ಒಟ್ಟು ೭ ಕಥೆಗಳಿವೆ. ವೈವಿಧ್ಯಮಯ ಕಥಾವಸ್ತುಗಳು, ಪಾತ್ರಗಳ ಮೂಲಕ ಇಲ್ಲಿನ ಕಥೆಗಳು ಓದುಗರನ್ನು ಸೆಳೆದುಬಿಡುತ್ತವೆ. ಈ ಪುಸ್ತವನ್ನ ಓದಿ ಮುಗಿಸುವಾಗ ಖುಷಿಯೊಂದು ಮನಸ್ಸನ್ನು ಆವರಿಸಿಕೊಂಡಿತ್ತು. ಈ ಕಥೆಗಳು ನಮ್ಮನ್ನು ಕೂಡ ಬಿಸಿಲ ಸೀಮೆಗೆ ಕರೆದೊಯ್ಯುತ್ತವೆ. ಅಲ್ಲಿನ ಜನರ ಬದುಕನ್ನು ಪರಿಚಯಿಸುತ್ತದೆ. ಇಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ ಉತ್ತರ ಕನ್ನಡ ಭಾಷೆಯನ್ನು ಬಳಸಲಾಗಿದೆ.

ಮೊದಲ ಕಥೆ ‘ಫೂ’ ಅಲ್ಲಿ ಕುಟುಂಬದೊಳಗೆ ಹೆಣ್ಣಿನ ಮೇಲೆ ನಡೆಯುವ ಹಿಂಸೆಯನ್ನು ಪದರ ಪದರವಾಗಿ ತಿಳಿಸಲಾಗಿದೆ. ಚಿಕ್ಕ ಹುಡುಗನ ನಿರೂಪಣೆಯಂತು ಮನಸನ್ನು ತಟ್ಟುತ್ತದೆ ಅವಿವಾಹಿತಳಾದ ಜಯತ್ತೆಯ ಪಾತ್ರವಂತು ಮನದಲ್ಲಿ ಉಳಿದುಬಿಡುತ್ತದೆ. ಎಲ್ಲ ಕಷ್ಟಗಳನ್ನೂ ಅಣ್ಣ ಅತ್ತಿಗೆಯರ ಚುಚ್ಚುಮಾತುಗಳನ್ನು ಸಹಿಸಿಕೊಂಡೇ ಬರುವ ಜಯತ್ತೆ, ಪುಟ್ಟ ಬಾಲಕನೊಡನೆ ಆಕೆಯ ಒಡನಾಟ ತಾಯಿ ಮಗುವಿನಂತಿರುತ್ತದೆ. ‘ನನ ಹೊಟ್ಯಾಗ್ ಹುಟ್ಟೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ” ಎಂಬ ಮಾತಿನಲ್ಲಿ ಅಳಿಯನ ಮೇಲಿನ ಮಮತೆ ವಾತ್ಸಲ್ಯಗಳನ್ನು ಗಮನಿಸಬಹುದು. ಜಯತ್ತೆ ಎಂದರೆ ತನಗೆ ಜೀವ ಎಂದೂ ಆಕೆಯ ಬಾಯಲ್ಲಿ ಕಾಮನಬಿಲ್ಲಿತ್ತು ಎಂದು ಹೇಳುವ ಹುಡುಗ, ಅತ್ತೆ ಬಾಯಲ್ಲಿ ನೀರು ತುಂಬಿಕೊಂಡು ಬಿಸಿಲಿಗೆ ಮುಖ ಮಾಡಿ ಫೂ ಮಾಡುವಾಗಲೆಲ್ಲ ಮೂಡಿ ಬರುವ ಕಾಮನಬಿಲ್ಲನ್ನು ಕಂಡು ವಿಸ್ಮಯಗೊಳ್ಳುವ ಮುಗ್ಧ ಹುಡುಗ ತುಂಬ ಇಷ್ಟವಾಗಿಬಿಡುತ್ತಾನೆ. ಇಲ್ಲಿನ ಜಯತ್ತೆಯ ಪಾತ್ರವು ವೈದೇಹಿ ಅವರ ‘ಜಾತ್ರೆ’ ಸ್ಮೃತಿ ಕಥನದಲ್ಲಿ ಬರುವ ‘ಮಂಜತ್ತೆ’ಯ ಪಾತ್ರವನ್ನು ನೆನಪಿಸುತ್ತದೆ.

‘ಖತಲ್ ರಾತ್ರಿ’ ಕಥೆಯಲ್ಲಿ ಮೊಹರಂ ದೇವರುಗಳ ಕೊನೆಯ ರಾತ್ರಿಯೇ ಖತಲ್ ರಾತ್ರಿ. ಜಾತಿ ಧರ್ಮಗಳನ್ನು ಮರೆತಯ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬದ ಸಂಭ್ರಮವಿದೆ. ಜೊತೆಗೇ ಮಕ್ಕಳಲ್ಲಿ ಅಗಲಿದ ಅಪ್ಪನ ನೆನಪುಗಳಿವೆ. ಸಂತೋಷದ ಮಧ್ಯೆಯೇ ನೋವಿನ ಎಳೆಯೊಂದು ಗೋಚರಿಸುತ್ತದೆ.

‘ತೇರು ಸಾಗಿತಮ್ಮ ನೋಡಿರೆ’ ಕಥೆಯಲ್ಲಿ ಶ್ರೀಶೈಲ ಎಂಬ ಹುಡುಗನ ಹೃದಯವಿದ್ರಾವಕ ಕಥೆಯಿದೆ. ಓದಲು ಬುದ್ಧಿವಂತನಾದ ಆತನಿಗೆ ಭಜನೆಯ ಮೇಲೆ ಅಪಾರ ಆಸಕ್ತಿ. ಶಾಲೆ ಬಿಟ್ಟ ಮೇಲೆ ಶರಣಪ್ಪನಿಂದ ಸಾಧ್ಯವಾದಷ್ಟೂ ಭಜನೆಗಳನ್ನು ಕಲಿತು ಹಾಡುತ್ತಿದ್ದ. ಶರಣಪ್ಪ ಹುಡುಗನಿಗೆ ಪ್ರೀತಿಯ ಕಕ್ಕಪ್ಪನಾಗಿದ್ದ. ಕಕ್ಕಪ್ಪನ ಸಾವು ಶ್ರೀಶೈಲನ ಬದುಕಿನ ಮೇಲೆ ಮಾಡಿದ ದಟ್ಟ ಪರಿಣಾಮಗಳನ್ನು ವಿವರಿಸಲಾಗಿದೆ. ಸಮಾಜದ ಕಣ್ಣಿಗೆ ಹುಚ್ಚನಂತೆ ಕಾಣುವ ಮಗನ ಬಗ್ಗೆ ತಾಯಿಯ ದುಃಖ ಸಂಕಟಗಳಿವೆ.

‘ವಜ್ರಮುನಿ’ ಕಥೆಯಲ್ಲಿ ಕೆಟ್ಟ ಚಟಕ್ಕೆ ಬಲಿಯಾಗಿ ಇದ್ದದ್ದನ್ನೆಲ್ಲ ಕಳಕೊಂಡು ಕೆಲಸಕ್ಕೂ ಹೋಗದೆ ತನ್ನ ಜವಾಬ್ದಾರಿಗಳ ಕಡೆ ಗಮನ ಹರಿಸದೆ ಮಕ್ಕಳೊಂದಿಗೆ ಆಡುತ್ತಾ, ಕಾಲ ಬದಲಾದರೂ ತನ್ನ ನೆನಪುಗಳಲ್ಲೇ ಮೈಮರೆತಿರುವ ಭಗವಂತ ಊರವರ ದೃಷ್ಟಿಯಲ್ಲಿ ವಜ್ರಮುನಿಯಾದ ಕಥೆ ಹೇಳುತ್ತಾರೆ.

‘ಕನಸಿನ ವಾಸನೆ’ ಕಥೆಯಲ್ಲಿ ಮಿರ್ಚಿ ರಂಗಮ್ಮನ ಪಾತ್ರ ಗಮನಾರ್ಹವಾಗಿದೆ. ಲಚುಮನಿಗೆ ತನ್ನ ತಪ್ಪಿನ ಅರಿವಾಗಿ ಮನ ಪರಿವರ್ತನೆಗೊಂಡು “ತಪ್ಪಾತಾ ನಮವ್ವಾ” ಎಂದು ರಂಗಮ್ಮನಲ್ಲಿ ಕ್ಷಮೆಯಾಚಿಸಿ ಅವಳ ಮಡಿಲಲ್ಲಿ ಮಗುವಾಗಿ ಮಲಗುವ ಚಿತ್ರಣ ಅಪ್ಯಾಯಮಾನವಾಗಿದೆ.

‘ಪಾತಿ’ ಕಥೆಯಲ್ಲಿ ಬಾಲ್ಯದಿಂದ ಹದಿಹರೆಯದವರೆಗೆ ಜೊತೆಗೆ ಆಡಿಬೆಳೆವ ಮಕ್ಕಳ ಸಂಭ್ರಮ ಓದುಗರನ್ನೂ ತಮ್ಮ ಬಾಲ್ಯವನ್ನು ನೆನಪಿಸುವಂತೆ ಮಾಡುತ್ತದೆ. ಮತ, ವರ್ಣ ಬೇಧಗಳಿಲ್ಲದೆ ಹುಟ್ಟಿ ಬೆಳೆವ ಸ್ನೇಹ. ಮುಗಿಯದ ಮಾತು, ನಿಸ್ವಾರ್ಥ ಪ್ರೀತಿ, ಪರಸ್ಪರ ರೇಗಿಸುವಿಕೆ ಜಗಳ, ಮುನಿಸು, ರಾಜಿ ಕೋಪಗಳು ಅವರ ಸ್ನೇಹದ ಸಂಬಂಧವನ್ನು ಗಟ್ಟಿಗೊಳಿಸುತ್ತಿತ್ತು. ಈ ಕಥೆ ಓದಿ ಮುಗಿಸಿದಾಗ ಫಾತಿಮಳಂಥ, ಆಕೆಯ ಗೆಳೆನಂಥ ಸ್ನೇಹಿತರು ಇರಬೇಕೆಂದು ಅನಿಸಿಬಿಡುತ್ತದೆ.
‘ಮಿಂಚುಹುಳ’ದ ಬಗ್ಗೆ ಕಲ್ಪನೆಯಲ್ಲಿ ಮೂಡಿದ ಕಥೆಯನ್ನೂ ಹೇಳುತ್ತಾರೆ. ಇದರಲ್ಲಿ ಲೇಖಕರ ಕಲ್ಪನೆಯಿಂದಲೇ ಕಥೆ ಕಟ್ಟುವ ರೀತಿಯನ್ನು ಗಮನಿಸಬಹುದು.

ಇವರ ಕಥೆಯಲ್ಲಿ ಬಡತನದ ಬದುಕು, ಮುಗ್ಧ ಜನರ ಆಲೋಚನೆಗಳು, ಧಾರ್ಮಿಕ ನಂಬಿಕೆಗಳು, ಮಕ್ಕಳ ಮನದಲ್ಲಿ ಮೂಡುವ ಅದ್ಭುತ ಕಲ್ಪನೆಗಳು, ಹದಿಹರೆಯದವರ ಸಂಭ್ರಮ, ಆತ್ಮೀಯರ ಅಗಲುವಿಕೆಯಿಂದಾಗುವ ಪರಿಣಾಮಗಳು , ಎದುರಾಗುವ ಕಷ್ಟಗಳು, ಕುಟುಂಬದೊಳಗೆ ಹೆಣ್ಣಿಗಾಗುವ ಹಿಂಸೆ ಮನುಷ್ಯ ಸಂಬಂಧಗಳು, ಭಾವನಾತ್ಮಕ ವಿಚಾರಗಳನ್ನು ಎಲ್ಲವನ್ನು ಸಮರ್ಥವಾಗಿ ಕಥೆಗಳಲ್ಲಿ ಕಟ್ಟಿಕೊಡುತ್ತಾರೆ. ಇವರ ಬರಹ ತುಂಬ ಆಪ್ತವಾಗಿದ್ದು ನಿರೂಪಣೆಯ ಶೈಲಿಯೂ ಭಿನ್ನವಾಗಿದೆ. ಓದುಗರನ್ನೂ ತಮ್ಮ ಲೋಕಕ್ಕೆ ಕೊಂಡೊಯ್ಯುವ, ಓದಿ ಮುಗಿಯುವವರೆಗೆ ಅಲ್ಲೇ ಹಿಡಿದಿಡುವ ಶಕ್ತಿ ಈ ಕಥೆಗಳಿಗಿವೆ.

ಇವರ ಬರವಣಿಗೆ ನಿರಂತರವಾಗಿ ಸಾಗುತಿರಲಿ, ಇನ್ನಷ್ಟು ಕಥೆಗಳು ಓದುಗರನ್ನು ತಲುಪಲಿ. ಸಾಹಿತ್ಯ ಲೋಕಕ್ಕೆ ಇಂಥ ಉತ್ತಮ ಕೃತಿಗಳನ್ನು ನೀಡುವಂತಾಗಲಿ.

******

ಚೇತನಾ ಕುಂಬ್ಳೆ

Leave a Reply

Back To Top