ಕವಿತೆ ಕಾರ್ನರ್

ವಾರಸುದಾರ!

ಕಪ್ಪು ಕಾಲುಗಳನೇ
ರೆಕ್ಕೆಯಾಗಿಸಿ
ಕಡಿದಾದ ಬೆಟ್ಟವನೇರುವ ಸಾಹಸದೆ

ಕಾಲವೆನ್ನುವುದು ಇಳಿಜಾರಿಗೆ
ಜಾರಿಬಿಟ್ಟ ಚಕ್ರವಾಗಿ
ಸರಸರನೆ ಉರುಳುತ್ತ

ಹಗಲಿರುಳುಗಳು
ಸ್ಪರ್ದೆಗಿಳಿದು
ಗಡಿಯಾರಗಳನೂ ಸೋಲಿಸಿ

ಸೂರ್ಯಚಂದ್ರರೂ ಸರದಿ ಬದಲಿಸಿ
ಉಸಿರೆಳೆದುಕೊಂಡು ಕಣ್ಣರಳಿಸಿ
ಜಗವನರ್ಥಮಾಡಿಕೊಳ್ಳುವಷ್ಟರಲ್ಲಿ

ಬೆನ್ನು ಬಾಗಿ
ಕಣ್ಣು ಮಂಜಾಗಿ
ಚರ್ಮ ಸುಕ್ಕಾಗಿ

ಮುಪ್ಪೆಂಬುದು
ಮುಂದೆ ನಿಂತಿರಲು
ಕವಿತೆಯೆಂಬುದು ಮರಣವಾಕ್ಯವಾಗುವುದು

ಶವದ ಮುಂದೆ ನಿಂತು
ಕಣ್ಣಾಲಿ ತುಂಬಿಕೊಂಡಗೆಳೆಯರ
ಮುಖಗಳಲ್ಲೇನೊ ಸಮಾದಾನದ ಭಾವ

ಕವಿತೆ ಸೋತಿತೊ ಗೆದ್ದಿತೊ?

ಬಿರುಸಿನ ಚರ್ಚೆಯ ನಡುವೆ
ಗೋಣು ಚಿಲ್ಲಿದ ಕವಿ
ಯಾರ ಕಣ್ಣಿಗೂ ಬೀಳುವುದಿಲ್ಲ!

ಅನಾಥ ಶವಕೆ
ವೀರಬಾಹು ಮಾತ್ರವೇ
ವಾರಸುದಾರ!

********

ಕು.ಸ.ಮಧುಸೂದನ ರಂಗೇನಹಳ್ಳಿ

4 thoughts on “ಕವಿತೆ ಕಾರ್ನರ್

Leave a Reply

Back To Top