ಕೆ.ಎಸ್.ನರಸಿಂಹ ಸ್ವಾಮಿಯವರ ನೆನಪಿನಲ್ಲಿ ಒಂದುಬರಹ ಶಾರದಜೈರಾಂ.ಬಿ.ಅವರಿಂದ

ಕೆ.ಎಸ್.ನರಸಿಂಹಸ್ವಾಮಿ ಅವರ ಜನುಮದಿನದ ಸಂದರ್ಭದಲ್ಲಿ ಅವರ ಕವನಗಳ  ಸಾಲು ಅನವರತ ಕಾಡುವಂತಹವು, ಮೈಸೂರು ಮಲ್ಲಿಗೆ ಕವನ ಸಂಕಲನ ಅತ್ಯುತ್ತಮ ದಾಂಪತ್ಯ ಗೀತೆಯಾಗಿದೆ.
ಅದರಲ್ಲಿನ ‌ಬಾರೆ ನನ್ನ ಶಾರದೇ! ಹೊಸದಾಗಿ ಮದುವೆಯಾದ ನವ ಜೋಡಿಯ ಆಸೆ, ಸಾಮೀಪ್ಯ, ಮೃದು ಮಧುರಭಾವ, ರೋಮಾಂಚನ ತರುವ ರಸಘಳಿಗೆಗಳ ಶೃಂಗಾರ ಕಾವ್ಯದಂತಿದೆ, ಹೀಗೆ ಬರೆಯುತ್ತಾರೆ…
ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲಾ
ಬರುವಳೆನ್ನ ಶಾರದೇ!
ಹಿಂದೆ ಮುಂದೆ ನೋಡದೆ
ಎದುರು ಮಾತನಾಡದೆ

ಇಂದೇ ಅದಕೆ ಕರೆವುದು
ನನ್ನ ಹುಡುಗಿ ಎನ್ನುವುದು
ಹೂವ ಮುಡಿಸಿ ನಗುವುದು
ಬಾರೇ ನನ್ನ ಶಾರದೆ
ಬಾರೇ ಅತ್ತ ನೋಡದೇ
ಹೊಸದಾಗಿ ಮದುವೆಯಾದ ನವ ಜೋಡಿಯ ಸರಸ ಸಲ್ಲಾಪ,ಆರಾಧನ ನೋಟ ಪರಸ್ಪರ ಸಾಮೀಪ್ಯ ಬಯಸುವ ಕಾತರತೆ, ಆತುರತೆ,ಕೆಲಸವಿಲ್ಲದಿದ್ದರು ಮತ್ತೆ ಮತ್ತೆ ಕೂಗಿ ಕರೆದು ನೋಡಿ ತಣಿವ ಭಾವ,ಮನೆಯವರು ಏನೆಂದುಕೊಂಡಾರೂ ಎಂಬ ಅಂಜಿಕೆ ಒಂದೆಡೆ ಆದರೂ ಅದನ್ನು ಮೀರುವ ಭಾವೋತ್ಕಟತೆಯ ಅನಾವರಣಗೊಳಿಸಿದ್ದಾರೆ.
ಇನ್ನೋಂದು ಬಹು ಇಷ್ಟವಾಗುವ ಆಗಾಗ ಆ ಸಾಲುಗಳು ನೆನಪಾಗಿ ಕಾಡುವ ಸಾಲುಗಳು..
ನಿನ್ನ ಪ್ರೀತಿಗೆ ಅದರ ರೀತಿಗೆ
ಕಣ್ಣ ಹನಿಗಳೇ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ
ಹೊಂದಲಾರದ ಹೋಲಿಕೆ
ಪರಿಶುದ್ಧವಾದ ಪ್ರಾಮಾಣಿಕ ಪ್ರೀತಿಗೆ  ಏನೇ ನೀಡಿದರೂ ಅದಕೆ ಬೆಲೆ ಕಟ್ಟಲಾಗದು ಏಕೆಂದರೆ ಭಾವಕ್ಕೆ ಸಂಬಂಧಿಸಿದ್ದು ಹೃದಯದ ಭಾವ ಒಂದು ಮಿಡಿಯುವ ಹೃದಯವೇ ಅರಿಯಬಲ್ಲದು,ಕಣ್ಣ ಹನಿಗಳೇ ಕಾಣಿಕೆ ಎಂದಿರುವುದು ಸಮಂಜಸವಾಗಿದೆ ಆನಂದಭಾಷ್ಪವೇ ಆ ವೇಳೆ ಮನದ ಆರ್ದ್ರತೆ ಕಣ್ಣ್ಂಚಲ್ಲಿ ಜಾರುವುದಲ್ಲಾ, ಹೊನ್ನ ಚಂದಿರ, ನೀಲಿ ತಾರೆಯೂ ಸಾಕಾಗದೂ ಆ ಪ್ರೀತಿಯ ಪ್ರಭೆಗೆ ಎಂದಿರುವುದು ಉತ್ಪ್ರೇಕ್ಷೆ ಎನ್ನಿಸದು.ಮುಂದುವರೆದು
ಹೇಳುವ ಇನ್ನೋಂದು ಸಾಲು ನಿನ್ನ ಪ್ರೀತಿಗೆ ಅದರ ರೀತಿಗೆ ನೀಡಬಲ್ಲೆನೇ ಕಾಣಿಕೆ
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯ ಹೋಲಿಕೆ
ಇಲ್ಲಿ ಮತ್ತೋಮ್ಮೆ ಕವಿ ಕೇಳುತ್ತಾರೆ ನಿನ್ನ ಪ್ರೀತಿಗೆ ಕಾಣಿಕೆ ನೀಡಲಾಗುವುದಾ ಎಂದು ಪ್ರಶ್ನಿಸುತ ಕಾಲವು ಅಳಿಸಲಾಗದ ನೆಲದ ಚೆಲುವಿಗೆ ಹೋಲಿಸುತ್ತಾ ಅದು ಅಹರ್ನಿಶಿ ಎಂದು ಹೇಳುವ ಆಶಯವು ಪ್ರೀತಿಯೇ ಪರಮವಾದದ್ದು ಎಂಬ ಭಾವ ವ್ಯಕ್ತಪಡಿಸುತ್ತಾರೆ.
ಇನ್ನೋಂದು ಕವನ ಹೀಗಿದೆ…
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ
ಹಣ್ಣು ಬಂದಾಗ ಹೂ ಬಯಸುವೆವು
ಹೂವು ಬಂದಾಗ ಹಣ್ಣು ಬಯಸುವೆವು
ಹಣ್ಣನ್ನು ಪೀಚು ಎಂದು ಜರಿಯುವೆವು
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ
ನಿಜವಲ್ಲವೇ ಜಗದ ಮನುಜರೇ ಹಾಗೇ ಜನರನ್ನು ಜನಾರ್ದನನೇ ಮೆಚ್ಚಿಸಲು ಸಾಧ್ಯವಿಲ್ಲವಂತೆ ಅಂದರೆ ಪರಮಾತ್ಮನಿಂದಲೂ ಸಾಧ್ಯವಾಗದು ಆಗಿರುವಾಗ ಸೃಷ್ಟಿ ನಿಯಮದಂತೆ ಸಾಗುವ ವೈಪರೀತ್ಯ ಗಳಿಗೆ ಹೊಂದಿಕೊಳ್ಳದೇ ತನಗೆ ಅನುಕೂಲವಾಗುವಂತೆ ಆ ಕ್ಷಣದಲ್ಲೇ ದೊರಕದಾದಾಗ ತನ್ನ ಅಸಮಾಧಾನ ಹೊರಹಾಕುವ ಪ್ರಕ್ರಿಯೆಯನ್ನು ಕವಿ ಎಷ್ಟು ಅರ್ಥವತ್ತಾಗಿ ಮನವರಿಕೆ ಮಾಡುತ್ತಾರೆ ಅಲ್ಲವೇ, ಮನುಷ್ಯನನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಅವನ ಆಸೆಗಳು ಅಪರಿಮಿತ,ಅಂದುಕೊಂಡಾಗಲೇ ಸಿಗಬೇಕು,ಅವ ಬಯಸಿದ ರೀತಿಯಲ್ಲಿ ಇಲ್ಲದಿರೇ ಈ ಟೀಕೆಗಳ ಸುರಿಮಳೆ,ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎಂದು ಕುಚೇದ್ಯವಾಗಿ ಹೇಳುವುದರ ಮೂಲಕ ಪ್ರಕೃತಿ ಸಹಜವಾಗಿ ಸಾಗುವುದು,ಅದ ಅರಿತು ನಾವು ಗೊಣಗದೆ ಒಪ್ಪಿಕೊಂಡು ಕಾಲಕ್ಕೆ ಹೊಂದಿಕೊಂಡು ಸಾಗಿದರೆ ಸಂತಸವಾಗಿರುವೆವು,ತೆಗಳುವುದೇ ಕೆಲಸವಾದರೆ ಅವರಿಗೆ ಸಂತಸ ಎಂಬುಂದು ಮರೀಚಿಕೆಯೇ ಸರಿ, ನಮ್ಮ ನಡುವೆಯೇ ಇದ್ದಾರೆ ಏನೇ ಮಾಡಿದರೂ ಮೊಸರಿನಲ್ಲೂ ಕಲ್ಲು ಹುಡುಕುವ ಜನ ಆಗ ನೀವೇನೆಂದೂ ಸಾಬೀತು ಪಡಿಸಲು ಮುಂದಾಗಿ ಮಾತಿಗಿಂತ ಕೃತಿ ಮುಖ್ಯ ಎಂದು ತಿಳಿದು ಮುನ್ನಡೆದರೆ ಅನ್ನುವವರ ಬಾಯಿಗೆ ಬೀಗ ಜಡಿದಂತೆ.


ಮೈಸೂರು ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್.ನರಸಿಂಹಸ್ವಾಮಿ ಅವರು(ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನವರಿ 26ರಂದು ಜನಿಸಿದರು.ತಂದೆ ಸುಬ್ಬರಾಯ, ತಾಯಿ ನಾಗಮ್ಮ.ಮೈಸೂರಿನ ಮಹಾರಾಜ ಹೈಸ್ಕೂಲ್, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದಾಗಿ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ,22ನೇ ವಯಸ್ಸಿಗೆ ಗುಮಾಸ್ತ ಹುದ್ದೆಗೆ ಸೇರಿದರು ಜೀವನೋಪಾಯಕ್ಕಾಗಿ.ಅಷ್ಟರಲ್ಲಿ ತಿಪಟೂರಿನ ವೆಂಕಮ್ಮನವರೊಂದಿಗೆ ಮದುವೆ ಆಗಿ ಬೆಂಗಳೂರು, ನಂಜನಗೂಡು, ಮೈಸೂರು ಮುಂತಾದ ನಗರಗಳಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1970ರ ಜನವರಿ 26ರಂದು ಸೇವೆಯಿಂದ ನಿವೃತ್ತರಾದರು.
ಮೈಸೂರು ಮಲ್ಲಿಗೆ ಪ್ರಕಟವಾದಾಗಿನಿಂದ 25ಕ್ಕೂ ಹೆಚ್ಚು ಮುದ್ರಣ ಕಂಡಿದೆ.ಅನಂತರ ಹತ್ತಾರು ಕವನ ಸಂಕಲನಗಳ ಮೂಲಕ ನವೋದಯ ಮತ್ತು ನವ್ಯ ಕವಿಗಳನ್ನು ತಮ್ಮದೇ ಆದ ಛಾಪಿನಲ್ಲಿ ಕನ್ನಡಕ್ಕೆ ಕೊಟ್ಟಿದ್ದಾರೆ.ಕೆ.ಎಸ್.ನ ಮೈಸೂರು ಮಲ್ಲಿಗೆ ಕೃತಿಗೆ ದೇವರಾಜ್ ಬಹದ್ದೂರ್ ಬಹುಮಾನ, ತೆರೆದ ಬಾಗಿಲು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇನ್ನೂ ಹಲವಾರು ಬಹುಮಾನಗಳು ಅವರಿಗೆ ಲಭಿಸಿವೆ.
ಅವರ ಕವನ ಸಂಕಲನಗಳ ಬಗ್ಗೆ ಕಾವ್ಯವೇ ಬರೆಯಬಹುದು ಆದರೆ ನನಗೆ ಇಷ್ಟವೆನಿಸಿದ ಕೆಲವೊಂದು ಸಾಲುಗಳ ನನಗೆ ನಿಲುಕಿದ ರೀತಿಯಲ್ಲಿ ಬರೆಯುವ ಒಂದು ಸಣ್ಣ ಪ್ರಯತ್ನವಷ್ಟೇ ರಸಿಕರಿಗೆ  ದಾಂಪತ್ಯಗೀತೆಯ ಸವಿ ಉಣಬಡಿಸಿದ ಕೆ.ಎಸ್.ನರಸಿಂಹಸ್ವಾಮಿ ಅವರ ಕವನಗಳು ಇಂದಿಗೂ ನಮ್ಮೋಡನೆಯ ಇರುವಂತೆ ಜೀವಕಳೆ ಯಿಂದ ಬದುಕ ಸಾಗಿಸಲು ಬೇಕಾಗುವ ಜೀವನೋತ್ಸಾಹ ತುಂಬುವ ಇಂಧನದಂತೆ ಆಗಾಗ ಮೆಲುಕುವ ಮಧುರ ಪ್ರೇಮಕವಿತೆಗಳು ಇಂದು ಮುಂದೆ ಎಂದೆಂದಿಗೂ ನಿತ್ಯನೂತನ ಅವರೇ ಹೇಳಿದಂತೆ ಕಾಲವಳಿಸದ ನೆಲದ ಮೇಲಿನ ಪ್ರೀತಿಯಂತೆ ಉಸಿರಾಗಿ ಹೆಸರಾಗಿಹವು…!!!


One thought on “ಕೆ.ಎಸ್.ನರಸಿಂಹ ಸ್ವಾಮಿಯವರ ನೆನಪಿನಲ್ಲಿ ಒಂದುಬರಹ ಶಾರದಜೈರಾಂ.ಬಿ.ಅವರಿಂದ

Leave a Reply

Back To Top