ಅವಳು ದೇವರ ಮುಂದೆ ನಿಂತು, ಹಿಗ್ಗಾಮುಗ್ಗಾ ಬೈಯುತ್ತಾಳೆ…ಕೈ ಕೈಹಿಚುಕಿಕೊಳ್ಳುತ್ತಾ ಲಟಗಿ ಮುರಿಯುತ್ತಾಳೆ. ತಾನು ನಂಬಿದ ದೇವರಿಗೆ ಹಿಡಿಶಾಪ ಹಾಕುತ್ತಾಳೆ.

ತನ್ನ ಬೇಡಿಕೆ ಇಡೇರಿದ ಕಾರಣಕ್ಕೆ ತನ್ನ ಮನೆಯ ಹೆಣ್ಣು ದೇವರಿಗೆ ಮೇಕೆಯ ಬ್ಯಾಟಿ ಮಾಡಲು ಸಿದ್ಧತೆ ಮಾಡಿಕೊಂಡು, ಎಲ್ಲರನ್ನೂ ಕರೆದು ಬ್ಯಾಟಿಯ ಮಾಂಸದೂಟವನ್ನು ಹಾಕುತ್ತಾನೆ…

ಈ ಮೇಲಿನ ಎರಡು ಸನ್ನಿವೇಶಗಳು ಬಹುತೇಕವಾಗಿ  ಹಿಂದಿನಿಂದಲೂ ನಮ್ಮ ಗ್ರಾಮೀಣ ಭಾಗದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ.  ಕಾರ್ಪೊರೇಟ್ ಸಂಸ್ಕೃತಿಯ ದೇವರುಗಳಿಗಿಂತ ನಮ್ಮ ಜಾನಪದ ದೇವರು ಅತ್ಯಂತ ಪ್ರೀತಿಯ ಹೃದಯಸ್ಪರ್ಶಿಯಾಗಿರುತ್ತಾರೆ..!  ನಮ್ಮ ನೋವಿನಲ್ಲಿಯೂ ಬೇಕು ಬೇಡಿಕೆಗಳು ಎಲ್ಲವನ್ನು ಮುಖಾಮುಖಿಯಾಗಿ ಕೇಳುವ ನಮ್ಮ ಹಿರಿಯರು ಜಾನಪದೀಯರು ದೇವರ ಮುಂದೆ ಎದುರುಗೊಳ್ಳುತ್ತಾರೆ. ಜನಪದೀಯ ದೇವರನ್ನು ನಾವು ಯಾವತ್ತೂ ಬಂಧಿಸಿಲ್ಲ.  ಅವರು ಈ ಸಮಾಜಕ್ಕೆ ಮುಕ್ತವಾಗಿ ತಮ್ಮನ್ನು ತೆರೆದುಕೊಳ್ಳುತ್ತಾರೆ. ಅವರನ್ನು ಯಾರು ಬೇಕಾದರೂ ಮುಟ್ಟಬಹುದು. ಯಾರು ಬೇಕಾದರೂ ಮಾತನಾಡಿಸಬಹುದು.

 ಅರೆ ಇದೇನು..? ದೇವರು ಇದ್ದಾನೋ..? ಇಲ್ವೋ…? ಎನ್ನುವ ಆಸ್ತಿಕ ನಾಸ್ತಿಕರ ಮಧ್ಯ ಆಸ್ತಿಕತೆಯನ್ನು ಹುಟ್ಟು ಹಾಕುವ ನಿಮ್ಮ ಅಭಿಪ್ರಾಯ ಸರಿಯೇ..?  ಎಂದು ನೀವು ಕೇಳಬಹುದು.  ದೇವರು ಇರುವುದು ಬಿಡುವುದು ಅದು ಎರಡನೇ ಮಾತು. ಆದರೆ ನಮ್ಮ ನಂಬಿಕೆಗಳು, ಆಚರಣೆಗಳು, ದೇವರನ್ನು ಕಂಡುಕೊಳ್ಳುವ ಸತ್ಯಗಳು ಯಾವತ್ತಿಗೂ ಆಪ್ತವಾಗಿರುತ್ತವೆ.  ದೇವರನ್ನು ನಂಬುವವರು ಆಸ್ತಿಕರಾಗಿಯೂ ;  ದೇವರನ್ನು ನಂಬದೇ ಇರುವವರು ನಾಸ್ತಿಕರಾಗಿಯೂ ಇರಬಹುದು.  ಅಲ್ಲದೆ ನಮ್ಮ ಜನಪದೀಯರು ಯಾವತ್ತಿಗೂ ಆಸ್ತಿಕರೇ..!!  ಆದರೆ ಇನ್ನೊಬ್ಬರ ನೋವುಗಳಿಗೆ ಪ್ರತಿಸ್ಪಂದಿಸಿ, ಪರಧರ್ಮ, ಜಾತಿ,  ಎಲ್ಲವನ್ನು, ಎಲ್ಲರನ್ನೂ ಪ್ರೀತಿಸುತ್ತಲೇ ಎಲ್ಲಾ ದೇವರನ್ನು ಒಳಗೊಳ್ಳುವ ಮನೋಭಾವ ನಮ್ಮ ಗ್ರಾಮೀಣ ಭಾಗದ ಜನರ ಹೃದಯ ವಿಶಾಲತೆಗೆ ಉದಾಹರಣೆಯಾಗಬಲ್ಲದು.

ಜ್ವರ, ನೆಗಡಿ ಕೆಮ್ಮು  ಬಂದರೆ ಹಿಂದೆ ನಮ್ಮ ಸುತ್ತಮುತ್ತಲಿನಲ್ಲಿ ಸಿಗುವ ಆಯುರ್ವೇದ ಔಷಧಿಗಳನ್ನು ಬಳಸಿಕೊಳ್ಳುತ್ತಿದ್ದರು. ಅಲ್ಲದೆ ಚಿಕ್ಕ ಮಕ್ಕಳು ಹೆದರಿದರೆ ಗ್ರಾಮದಲ್ಲಿರುವ ಅಯ್ಯನವರು, ಆಚಾರ್ಯರು, ಸ್ವಾಮ್ಯರು, ಮುಲ್ಲಾಗಳಿಂದಲೂ, ಪಾದ್ರಿಯಿಂದಲೂ   ತಾಯತ, ಅಂತ್ರವನ್ನು ಕಟ್ಟಿಸಿ ಲೋಬಾನ ಹಾಕಿಸಿಕೊಳ್ಳುತ್ತಿದ್ದರು.  ಅಲ್ಲಿ ಅಲ್ಲಾಸಾಬ, ಸ್ವಾಮ್ಯಾರು, ಆಚಾರ್ಯರು ನಮ್ಮ ಗ್ರಾಮೀಣ ಜನರಿಗೆ ದೇವರಾಗಿ ಗೋಚರಿಸುತ್ತಾನೆ.
“ಉಪ್ಪು ಪಟ ಪಟನೆ ಸುಟ್ಟು ಹೋಗುವಂತೆ ನಮ್ಮ ಮಕ್ಕಳಿಗಾದ ಗಾಯಗಳು ಸುಟ್ಟು ಹೋಗಲಿ…” ಎಂದು ಬೇಡಿಕೊಳ್ಳುತ್ತಾರೆ.

 “ಯಾವುದೇ ದೇವರಿಗೆ ನಡೆದುಕೊಂಡರೂ,  ನಿನಗೆ ಬ್ಯಾಟಿ ಮಾಡುತ್ತೇನೆ..” ಎಂದು ಹೆಣ್ಣು ದೇವರಿಗೆ ಬೇಡಿಕೊಳ್ಳುತ್ತಾರೆ.

 ನಮ್ಮ ಭಾಗದ ಪ್ರಸಿದ್ಧ  ಹೆಣ್ಣು ದೇವತೆ ಹುಲಿಗೆಮ್ಮ, ಯಲ್ಲಮ್ಮ, ಮತ್ತು  ಗ್ರಾಮ ದೇವತೆಗಳಾದ  ಹಲಗೇರಮ್ಮ, ಮಾರೆಮ್ಮ, ಮರಿಯಮ್ಮ, ದುರ್ಗಮ್ಮ, ಚೌಡಮ್ಮ , ಮುತ್ಯಾಲಮ್ಮ, ನರಸಮ್ಮ, ಹೊನ್ನಮ್ಮ, ಮಾಯಮ್ಮ, ಮೌನಮ್ಮ, ಗಾಳಿ ದುರ್ಗಮ್ಮ, ಕೆಂಚಮ್ಮ,   ಸೀತಾಳಮ್ಮ, ದೇವಿರಮ್ಮ, ಸಣ್ಣಮ್ಮ, ದೊಡ್ಡಮ್ಮ, ಈರಮ್ಮ, ಅಂಬಮ್ಮ, ಹಟ್ಟಿ ಲಕ್ಕವ್ವ, ಮುದ್ದಮ್ಮ… ಅಂದರೆ ಗ್ರಾಮ ದೇವತೆಗಳೆಂದರೆ ಗ್ರಾಮದ ಹೆಸರಿನೊಂದಿಗೆ ಸೇರಿರುತ್ತದೆ. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ದೇವತೆಗಳಿಗೆ ನಾವು ಮೊದಲು ಗುಡಿ ಸಂಸ್ಕೃತಿ ಇರಲಿಲ್ಲ.  ನಂತರ ಗುಡಿ ಸಂಸ್ಕೃತಿಯು ಬೆಳಕಿಗೆ ಬಂತು. ಈ ಹಿಂದೆ ಬಟಾಬಯಲಾಗಿ ದೇವರನ್ನು ಪೂಜಿಸುತ್ತಿದ್ದೆವು. ಇನ್ನು ಗ್ರಾಮ ಸಂಸ್ಕೃತಿ ಮತ್ತು ಗ್ರಾಮದ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಬ್ರಹ್ಮದೇವರು ಅರ್ಥಾತ್ ಪ್ರತಿ ಗ್ರಾಮದ ಕರಗಲ್ಲಿನಲ್ಲಿರುವ ಭರಮಪ್ಪ ದೇವರು..! ಆತನನ್ನು ಭೇಟಿಯಾಗಿಯೇ ನಾವೆಲ್ಲರೂ ಗ್ರಾಮದೊಳಗೆ ಕಾಲಿಡಬೇಕು.

 ಮದುವೆಯಾಗಿ ಊರಿಗೆ ಬರುವ ಹೊಸ ಮಾಲಗಿತ್ತಿಯಿರಲಿ, ಹುಟ್ಟಿದ ಕೂಸಿನೊಂದಿಗೆ ತೊಟ್ಟಿಲೊಂದಿಗೆ ಬರುವವರು,  ಸತ್ತ ವ್ಯಕ್ತಿಯ ಶವವನ್ನು ಒಯ್ಯುವ ಸಮಯವಿರಲಿ… ಎಲ್ಲರೂ ಬ್ರಹ್ಮದೇವ ಅರ್ಥ ಭರಮಪ್ಪನನ್ನು ನಾವು ಭೇಟಿಯಾಗಿ, ಆತನಿಗೆ ಎಣ್ಣೆ ಮಜ್ಜನ ಮಾಡಿ ಹೋಗಲೇಬೇಕು..! ಬ್ರಹ್ಮದೇವರು ಗ್ರಾಮೀಣ ಪರಿಸರದ ಅಪ್ಪಟ ಭರಮದೇವರು  ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರತಿ ಗ್ರಾಮದಲ್ಲಿರುವ ಹನುಮಪ್ಪ ಅರ್ಥಾತ್  ಆಂಜನೇಯ ದೇವರು ಇಲ್ಲದ ಊರೇ ಇಲ್ಲ ಎನ್ನಬಹುದು. ಕೊರಗಜ್ಜ, ಭೂತಪ್ಪ,  ಬೀರಪ್ಪ, ಮೈಲಾರಿ, ಶಿವಲಿಂಗ, ಈಶ್ವರ, ಹಾದಿ ಬಸಣ್ಣ, ಓಣಿಬಸಣ್ಣ, ಪರಶುರಾಮ… ಹೀಗೇ ಪಟ್ಟಿ ಬೆಳೆಯುತ್ತಾ ಹೋದರೂ… ನಮ್ಮ ಗ್ರಾಮ ಪರಿಸರದಲ್ಲಿರುವ  ಹೆಣ್ಣು ದೇವರು ಇದ್ದಷ್ಟು ಪುರುಷ ದೇವರು ಇಲ್ಲ ಎನ್ನಬಹುದು.  

ಅದೇನೇ ಇರಲಿ,  ಈ ದೇವರು  ಹಾದಿ ಬೀದಿಯಲ್ಲಿ ಮುಕ್ತವಾಗಿ ತೆರೆದಿಟ್ಟ ದೇವರುಗಳು ಇಂದು ಗುಡಿ ಸಂಸ್ಕೃತಿಗೆ ಒಳಗಾಗಿ ಅಲ್ಲಿಯೂ ಕಾರ್ಪೊರೇಟ್ ಸಂಸ್ಕೃತಿಗೆ ವಾಲುತ್ತಿರುವುದು ವಿಷಾದನೀಯ.  ತಾವು ಬೇಡಿಕೊಂಡ ಬೇಡಿಕೆಗಳು ಈಡೇರದಿದ್ದಾಗ,  ಆದ ಸಂಕಟಗಳು ಪರಿಹಾರವಾಗದಿದ್ದಾಗ, ನಮ್ಮ ಜಾನಪದರು ದೇವರನ್ನು ಸುಮ್ಮನೆ ಬಿಡುವುದಿಲ್ಲ..!  ಅವರು ಎದುರು ನಿಂತುಕೊಂಡು ತಮಗೆ ಮನಸ್ಸೋ ಇಚ್ಛೆ  ಬಯ್ಯುತ್ತಾರೆ..!  “ನಿನಗೆ ಕಾಣಿಕೆ ಸಲ್ಲಿಸಿದೆ,  ನಿನ್ನ ಜಾತ್ರಿಗೆ ಬಂದೆ, ನಿನಗೆ ಕರ್ಪೂರ ಕಾಯಿ ಅರ್ಪಿಸಿದೆ.. ನಿನ್ನ ಸುತ್ತ ಸುತ್ತು ತಿರುಗಿದೆ.. ನೀನು ನನ್ನ ಸಂಕಟ ಕಳಿಲಿಲ್ಲ. ನಿನಿಗಂತದು  ಏನ ಬಂದೈತಿ..?  ನನ್ ಇಡೀ ಜೀವ ನಿನ್ನ ಕೈಯಾಗ ಕೊಟ್ಟಿನಿ…ಯಪ್ಪ ನನ್ನ ಕಾಪಾಡು. ಯವ್ವ ನೀನು ಸತ್ಯುಳ್ಳಕಾದ್ರ ನೋಡಿಕೋ…”  ಎಂದು ದೇವರನ್ನೇ ಪರೀಕ್ಷೆಗೆ ಒಳಪಡಿಸುತ್ತಾರೆ.  ದೇವರು ಅಷ್ಟೇ ಯಾವುದೇ ಅಡ್ಡಗೋಡೆಗಳನ್ನು ಹಾಕಿಕೊಳ್ಳದೆ, ಮುಕ್ತವಾಗಿ ಮನಸ್ಸು ತೆರೆದಿರುತ್ತಾನೆ.

ಇಂತಹ ಸನ್ನಿವೇಶಗಳನ್ನು ನಾವು  ಮೊಹರಂ ದಿನದಲ್ಲಿ ದೇವರನ್ನು ಹೊತ್ತವರು ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಅವರ ನೋವು ನಲಿವುಗಳಿಗೆ ಕಿವಿಯಾಗುತ್ತಾರೆ. ಬ್ಯಾಟಿ ಜಾತ್ರಿ ಮಾಡುವಾಗ ಮಾರೆಮ್ಮನ,  ದುರ್ಗಮ್ಮನ ಮೈಮೇಲೆ ಬಂದಿದೆ ಎನ್ನು ವ ಸಾಂಪ್ರದಾಯದಲ್ಲಿಯೂ ಕೂಡ ಅವರ ಸಂಕಟಗಳನ್ನು ಕೇಳುತ್ತಾರೆ. ಅದೇನೇ ಇರಲಿ, “ದೇವರು ಇದ್ದಾನೆ..? ಇಲ್ಲವೋ..? ಎನ್ನುವ ಮಾತು ಒಂದು ಕಡೆ ಇರಲಿ.  ನಾವು ದೇವರನ್ನು ನೇರ ನೇರವಾಗಿ ಭೇಟಿಯಾಗುವ,  ದಾಷ್ಟ್ಯಯಿಂದ ಆಗ್ರಹಪೂರ್ವಕವಾಗಿ  ಮಾತನಾಡುವಷ್ಟು ಸಲಿಗೆ ನಮ್ಮ ಜಾನಪದದ ದೇವರಲ್ಲಿದೆ, ಹೊರತು ಕಾರ್ಪೊರೇಟ್ ಸಂಸ್ಕೃತಿಯ ದೇವರಲ್ಲಿ ನಾವು  ನೋಡುವುದೇ ಇಲ್ಲ.  

 ದೇವರನ್ನು, ದೇವಸ್ಥಾನವನ್ನು ಭೇಟಿಯಾಗಲು ಅನೇಕ ನಿರ್ಬಂಧಗಳು ಇರುವುದು ಕಾರ್ಪೊರೇಟ್ ದೇವರಲ್ಲಿ ಮಾತ್ರ. ದೇವಾಲಯದೊಳಗೆ  ಹೋಗಬೇಕಾದರೆ ಜಾತಿ, ಧರ್ಮಗಳನ್ನು  ನೋಡುವ  ಅಡ್ಡ ಗೋಡೆಗಳು ಎದುರು ನಿಲ್ಲುತ್ತವೆ.  ಡ್ರೆಸ್ ಕೊಡ್ ಸಂಸ್ಕೃತಿ, ನಾಮ, ವಿಭೂತಿ, ಭಂಡಾರ, ಕುಂಕುಮ, ಟೊಪ್ಪಿಗೆ, ಸಿಲುಬೆ… ಹೀಗೆ ಹಲವು ಸಂಕೇತಗಳು ನಮ್ಮೆದುರು ಬೇಕಾಗುತ್ತವೆ. ಉಳ್ಳವರಿಗೆ ಒಂದು ರೀತಿಯ ಪ್ರೀತಿಯ ಸ್ವಾಗತ, ಇಲ್ಲದವರಿಗೆ ಮತ್ತೊಂದು ರೀತಿಯ ಸ್ವಾಗತ.. ಈ ಕಾರ್ಪೊರೇಟ್ ದೇವರುಗಳು ಅಥವಾ ದೇವರ ಹೆಸರಿನಲ್ಲಿ ನಡೆಯುವ ಶೋಷಣೆಗೆ ಕೊನೆಯೇ ಇಲ್ಲ.!  ಆದರೆ ನಮ್ಮ ಜಾನಪದ ದೇವರು ಬಟಾ ಬಯಲಿನಲ್ಲಿ ಬಯಲು ಬಯಲಾಗಿ ಮುಕ್ತವಾಗಿ ಎಲ್ಲರಿಗೂ ಎದುರುಗೊಳ್ಳುತ್ತಾರೆ. ಇದೇ ನಮ್ಮ ಜಾನಪದದ ಬಹು ದೊಡ್ಡ ಸೊಗಸು. ಜಾನಪದದ ದೇವರ ಆರಾಧನೆಯಲ್ಲಿ ಮನುಷ್ಯನ ಸಂಕಟಗಳು ಸಂತೋಷಗಳು ಮಾತ್ರ ಪ್ರಧಾನ ಪಾತ್ರವಹಿಸುತ್ತವೆ. ಧರ್ಮ, ಜಾತಿ, ವೇಷ, ಭಾಷೆಗಳಲ್ಲ..! ಇಂತಹ ಮನುಷ್ಯ ಪ್ರೀತಿಯ ಜಾನಪದ ದೇವರು ಮತ್ತು ದೇವರ ಆರಾಧನೆಯ ಮಜಲುಗಳನ್ನು ಆಚರಿಸುತ್ತಾ, ಜಗಕೆ ಪ್ರೀತಿ ಹಂಚೋಣ.


Leave a Reply

Back To Top