ಹೊಸವರ್ಷದ ಕ್ಯಾಲೆಂಡರ್ ಎಲ್ಲರ ಮನೆಯಲ್ಲಿ ತನ್ನ ಸ್ಥಾನ
ಅಲಂಕರಿಸಿದೆ.ಅದಕ್ಕನುಗುಣವಾಗಿ ಎಲ್ಲ ರಾಶಿಗಳ ಜಾತಕಪಲದ ಪುಸ್ತಕಗಳು ಕೂಡ ಆಸಕ್ತರ ಜಗುಲಿಯಲ್ಲಿ ವಿರಾಜಮಾನವಾಗಿವೆ. ಯಾಕೆಂದರೆ ಈ ವರ್ಷ ನಮ್ಮ ಪಾಲಿಗೆ ಒಳಿತು ಹೇಳುವುದೋ, ಕೆಡುಕು ಬಯಸುವುದೋ,ಕಳೆದ ವರ್ಷದಲ್ಲಿ ಕಂಡಂತಹ ಸೋಲು,ಹತಾಸೆ, ನೋವು ಎಲ್ಲವನ್ನೂ ಮರೆತು ಮುಂದೆ ಸಾಗಬೇಕೆಂದು ಹಟತೊಡಲು ಮನಸ್ಸು ಮಾಡಿದ ಕ್ಷಣಗಳು.ಕುಟುಂಬ ಕಲಹಗಳು,ಗಂಡಹೆಂಡತಿಯ ಮನಸ್ತಾಪಗಳು,ತಂದೆತಾಯಿಯರು ವೃದ್ದಾಶ್ರಮ ಭರ್ತಿಯಾದ ವರುಷ ಕರಾಳವೆಂದು,ಇನ್ನಾದರೂ ಈ ವರ್ಷ ನಮಗೊಂದು ಹೊಸ ಹರುಷ ತರಬಹುದೆಂಬ ನಿರೀಕ್ಷೆ….. ಆದ್ರೆ ಚಳಿ,ಮಳೆ,ಬೇಸಿಗೆಯ ಸಮ್ಮಿಶ್ರಣಕ್ಕೆ ಎಳ್ಳು ಬೆಲ್ಲದ‌ ಮಿಶ್ರಣವೇ ಪರಿಹಾರವಾದಿಯೆಂಬ ಮಾತಿದೆ.ಪ್ರತಿ ಹವಾಮಾನಕ್ಕೆ ಸರಿಯಾಗಿ ಆಹಾರಗಳು ದೇಹ ಸೇರಿದರೆ ಮಾತ್ರ ಆರೋಗ್ಯವಂತರಾಗಲು‌ ಸಾಧ್ಯ!.

ಹೌದಲ್ಲವಾ? ವೈಜ್ಞಾನಿಕ ಹಿನ್ನಲೆಯಲ್ಲಿ ಉತ್ತರಾಯಣ,ದಕ್ಷಿಣಾಯಣದ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ‌.ರವಿಯ ಪಥದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಮನಸ್ಸುಗಳು ಲೆಕ್ಕವಿರದಷ್ಟು.ಸಂಕ್ರಮಣಕ್ಕೆ ಮೈ ಮನಸ್ಸು ಸದೃಢವಾಗುತ್ತ ಸಾಗಿದರೆ,ವರ್ಷದ ಮೊದಲ ಹಬ್ಬ ಮತ್ತು ಹೊಸ ಪೈರಿನ ರಾಶಿಯಲ್ಲಿ ಕಾಣುವ ರೈತನ ಹುಮ್ಮಸ್ಸನ್ನು ಯಾರು ಮರೆಯುವಂತಿಲ್ಲ.ನೈಜತೆಯನ್ನು ಪುನಃ ಸೃಷ್ಟಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇಂದು ನಾವೆಲ್ಲ ಸಹಜತೆಯಿಂದ ಕೃತ್ರಿಮ ಜಗತ್ತಿಗೆ ಪ್ರವೇಶ ಪಡೆದಿದ್ದೆವೆ.ಯಾವುದರಲ್ಲೂ ಉತ್ಸಾಹ ಇಲ್ಲ.ಗಡಿಬಿಡಿಯ ಬದುಕಿಗೆ ಒಗ್ಗಿ ಯಂತ್ರದಂತೆ ಉಸುರಾಡುತ್ತಿದ್ದೆವೆ ಅಷ್ಟೇ. ಇದೊಂದೇ ಭಾವಿ ಭವಿಷ್ಯದ ಅಡಿಗಲ್ಲು ಅಂತ ಭಾವಿಸಿದ್ದೆವೆ.ಹಬ್ಬ ಹರಿದಿನಗಳ ಮಹತ್ವದ ಬಗ್ಗೆ ಕುತೂಹಲವನ್ನು ಮಕ್ಕಳಿಗೆ ನಾವು ಮೂಡಿಸುತ್ತಿಲ್ಲ.ಕೆಲವೇ ಕೆಲವು ಪಾಲಕರು ‌ಹಬ್ಬಗಳ ಹಿನ್ನೆಲೆಯ ವೈಜ್ಞಾನಿಕ ಮಹತ್ವ ತಿಳಿಸಿಕೊಡುವ ಮೂಲಕ‌ ಮಕ್ಕಳಿಗೆ ಮನದಟ್ಟಾಗುತ್ತಿದೆ.ಇದನ್ನು ಅರ್ಥೈಸಿಕೊಂಡು ಶಾಲಾ ಪಠ್ಯವಸ್ತುವಿನಲ್ಲಿ ಅಳವಡಿಸಿರುವುದರಿಂದ ಮಗು ಪ್ರಾಥಮಿಕ ಪರಿಸರದಿಂದ ಕಲಿಯಲು ಅವಕಾಶ ಕಲ್ಪಿಸಲಾಯಿತು.

ನನಗಂತೂ ಸಂಕ್ರಾತಿಯ ಸಂಭ್ರಮಕೆ ಮನೆಯಂಗಳದಲ್ಲಿ ಅವ್ವ ಹಾಕುವ ರಂಗೋಲಿಯಿಂದ ಹಿಡಿದು,ಎಳ್ಳಹೋಳಿಗೆ,ಎಳ್ಳ ಹಚ್ಚಿದ ರೊಟ್ಟಿ, ಮಾದಲಿ ಹೀಗೆ ಎಳ್ಳುಬೆಲ್ಲದ ಮಿಶ್ರಣದ ಅಡಿಗೆ ತಿಂದಷ್ಟು ಮನಸ್ಸು ಆನಂದದಿಂದ ತೇಲುತ್ತದೆ.ಇನ್ನೂ ಅವತ್ತು ಹರಿಯುವ ನೀರಿನಲ್ಲಿ ಕರಿಎಳ್ಳ ಹಚ್ಚಿಕೊಂಡು ಸ್ನಾನ ಮಾಡುವುದು ಅದರ ಅನುಭವವೇ ಖುಷಿ ಕೊಡುವಂತಹುದು.ಈಗ ನನ್ನ ಸರದಿ ನನ್ನ ಮಕ್ಕಳಿಗೆ ವರ್ಗಾಯಿಸುವ ಸುಸಮಯ…ಸಾತೊಡ್ಡಿಜಲಪಾತ ಕಾಳಿನದಿಯ ಹರಿಯಲ್ಲಿ ಮಿಂದು..
ಕುಟುಂಬದೊಂದಿಗೆ ಆಚರಿಸುವ ಸಂಭ್ರಮ ಮಕ್ಕಳಿಗೆ ಎಳ್ಳುಬೆಲ್ಲ ಹಂಚಲು ಲಂಗಾದಾವಣಿ ಧರಿಸಿ ಓಣಿಯ ಮನೆಗಳಿಗೆ ಹೋಗಿ ಸಂಕ್ರಾಂತಿ ಕಾಳು ಹಂಚಿ ಅವರು ಕೊಡುವ ದುಡ್ಡು ತಗೊಂಡು ಬಂದು ಕುಣಿದಾಡುವ ಪರಿಯನ್ನು ನೆನೆದಾಗ ಹಬ್ಬಗಳು ಮನೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಮತ್ತು ನಮ್ಮ ಯೋಚನೆಗಳು ಹೊಸದಾಗಿ ರೂಪುಗೊಂಡಂತೆ ಭಾಸವಾಗುತ್ತವೆ.ಮಕ್ಕಳು ಕೇಳುವ ಸಂಕ್ರಾಂತಿ ಹಬ್ಬದ ಕೆಲವು ವಿಷಯ ತಿಳಿಸುವುದು ನಮ್ಮ ಜವಾಬ್ದಾರಿ ಅನ್ನಿಸದಿರದು.

ಸಂಕ್ರಾಂತಿ ದಿನದಂದು, ಭಗವಾನ್ ವಿಷ್ಣುವು ತನ್ನ ಕೂರ್ಮ (ಆಮೆ) ಅವತಾರದಲ್ಲಿ ರಾಕ್ಷಸನನ್ನು ಸೋಲಿಸಿದನು ಎಂದು ನಂಬಲಾಗಿದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದು ಹಾಗೂ ವಿಜಯವನ್ನು ಸಂಕೇತಿಸುತ್ತದೆ. ಸುಗ್ಗಿಯ ಹಬ್ಬ ರೈತರಿಗೆ ಅದರಲ್ಲೂ ಮಕರ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವಾಗಿ ಆಚರಿಸುವುದು,ಜಾನುವಾರುಗಳಿಗೆ ವಿಶೇಷ ಆಕರ್ಷಣೆ, ಅವುಗಳಿಗೆ ಅಲಂಕಾರ ಮತ್ತು ಕೆಂಡಹಾಯಿಸುವುದರ ಮೂಲಕ ಅವುಗಳಿಗೆ ಆರೋಗ್ಯ ಪಾಠ..ಭೂತಾಯಿಗೆ ಶರಣೆಂದು ರಾಶಿ ಪೂಜಿಸುವ ಮತ್ತು ಮೊದಲ ಬೆಳೆಯನ್ನು ಗೌರವಿಸುವ ಸಮಯ ನೆನೆದರೆ ಅದೊಂದು ಸುಂದರ ನನಸಾದ ಕನಸು…

ಒಟ್ಟಾರೆಯಾಗಿ ಹೇಳುವುದಾದರೆ, ಬದುಕು ನಿಂತ ನೀರಲ್ಲ ಅದು ಯಾವತ್ತು ಚಾಲನೆಯಲ್ಲಿ ಇರಬೇಕು.ಉಸಿರು ಇರುವ ತನಕ ನಿಷ್ಕ್ರಿಯ ವಾಗದೇ ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುವಂತಹುದು.ಇಂದಿನ ದಿನ ಮಾನಗಳಲ್ಲಿ ಯಾಕೋ ಸಮಾಜದ ವ್ಯವಸ್ಥೆ ಬದಲಾಗುತ್ತಿದೆ‌‌ ಎಂಬ‌ ಅನುಮಾನ…ಎಲ್ಲರೂ ಅವರ ಇಚ್ಚೆಯಂತೆ,ಹೃದಯ ಮತ್ತು ಮೆದುಳು ಎರಡು ಭಿನ್ನವಾಗಿ ಯೋಚಿಸುತ್ತಿದೆ.ಹೀಗಾಗಿ ನಮ್ಮಗಳ ನಡುವೆ ಸಣ್ಣದಾದ ಮನಸ್ತಾಪವೊಂದು ಬೇರು ಬಿಡುತ್ತಿರುವುದನ್ನು ಕಂಡು ಕಾಣದಂತೆ ಪೋಷಿಸುವ ಕಾಣದ ಕೈಗಳಿಗೆ ಬಲಿಯಾಗುತ್ತಿರುವುದು ಸಮಾಜದ ಸ್ವಾಸ್ಥ್ಯ!. ಬದಲಾದ ಮನೋಭಾವಕ್ಕೆ ಮೌಲ್ಯವನ್ನು ನಿಗದಿಪಡಿಸುವುದು ಅಷ್ಟು ಸುಲಭದ ಮಾತಲ್ಲ..ಎಳ್ಳುಬೆಲ್ಲದಂತೆ ಸಾಮರಸ್ಯದ ಬದುಕು ನಮ್ಮದಾಗಲೆಂಬ‌ ಸದಾಶಯ!.
——————————————

Leave a Reply

Back To Top