ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ನಿನ್ನ ಮುಗುಳು ನಗೆಯು ಮನಮಲ್ಲಿಗೆಯನು ಅರಳಿಸಿದೆ ಚಂದದಲಿ ಹೊಸ ವರುಷವೆ
ಕುಡಿನೋಟದಲಿ ಒಲವ ಝರಿ ಉಕ್ಕಿಸಿದೆ ಎದೆಯೊಳು ನಂದದಲಿ ಹೊಸ ವರುಷವೆ
ಮಂಜಿನಹೊದಿಕೆಯ ಸುಖ ಸ್ಪರ್ಶಕೆ ಮುದಗೊಂಡಿವೆ ಗಿರಿಕಾನು
ನಿದಿರೆಯ ಮದಿರೆಯ ಸವಿದ ತೊರೆ ಝರಿಗಳು ಸಾಗುತಿವೆ ಮಂದದಲಿ ಹೊಸ ವರುಷವೆ
ಕಣ್ತೆರೆದ ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಿವೆ ತಂಗಾಳಿಯ ಜೊತೆ ಗಗನಕೆ
ಇರುಳೆಲ್ಲ ಸುರಿದ ಮಳೆ ದಣಿದು ಮೆಲ್ಲನೆ ಮರೆಯಾಗಿದೆ ಮೋಡದಲಿ ಹೊಸ ವರುಷವೆ
ಭೋರ್ಗರೆದು ಅಬ್ಬರಿಸಿದ ಕಡಲ ಅಲೆಗಳು ದಡಸೇರುತಿವೆ ಅದೇಕೋ
ಹೊನ್ನ ತೇರನೇರಿ ಬರುತಿಹನು ನಗುಮೊಗದಿ ರವಿಯು ಮೂಡಣದಲಿ ಹೊಸ ವರುಷವೆ
ಏಸೊಂದು ದಿನಗಳಿಂದ ಹಳತು ಕಳಚಲು ಕಾದಿಹಳು ಬೇಗಂ ನಿನಗಾಗಿ
ನವ ಹರುಷದ ಬಿಸಿಯಪ್ಪುಗೆಯಲಿ ಜಗ ಮೈಮರೆತಿದೆ ಆನಂದದಲಿ ಹೊಸ ವರುಷವೆ
———————————————-
ಹಮೀದಾಬೇಗಂ ದೇಸಾಯಿ