ಕೈರಳಿಯ ದೇವನಾಡಿನಲ್ಲಿ ರಂಗಪಯಣ
ಪುಸ್ತಕದ ಹೆಸರು- ರಂಗ ಕೈರಳಿ
ಲೇಖಕರು- ಶ್ರೀ ಕಿರಣ ಭಟ್
ಬೆಲೆ- ೧೫೦/-
ಪುಸ್ತಕದ ಹೆಸರು- ರಂಗ ಕೈರಳಿ
ಲೇಖಕರು- ಶ್ರೀ ಕಿರಣ ಭಟ್
ಬೆಲೆ- ೧೫೦/-
ಕೂಸೆ ಅಡ್ರೆಸ್ ಹೇಳು… ಕಿರಣ ಭಟ್ಟರ ಫೋನ್.
ಶ್ರೀದೇವಿ ಕೆರೆಮನೆ, ಹಬ್ಬುವಾಡ, ಕಾರವಾರ ಬರೆದುಹಾಕು ಸಾಕು. ಬರ್‍ತು.
ಅಷ್ಟೇ ಸಾಕೇನೆ? ಕೆ.ಎಚ್.ಬಿ ಹಾಕದು ಬ್ಯಾಡ್ದಾ? ರೋಡ್ ನಂಬರ ಹೇಳ್ಬಿಡೆ…
ನಿಂಗೆ ಬೇಕರೆ ಕೆ.ಎಚ್.ಬಿ. ಡಿ-೬ ರಸ್ತೆ ಎಲ್ಲ ಹಾಕು. ಹಾಕದಿದ್ರು ಬರ್‍ತು. ಚಿಂತೆ ಮಾಡಡ… ನಾನು ನಗುತ್ತ ಹೇಳಿದೆ.
ವರ್ಲ್ಡ್ ಫೇಮಸ್ಸು ಮಾರಾಯ್ತಿ ನೀನು… ನಕ್ಕಿದ್ದರು.
ಎಂತಕ್ಕೋ… ಪುಸ್ತಕ ಕಳಸ್ತ್ಯಾ? ಯಾವುದು? ನಾನು ಮಾಮೂಲಿಯಾಗಿ ಕೇಳಿದೆ. ನನ್ನ ಕೆಲವು ಸ್ನೇಹಿತರಿಗೆ, ಹಿರಿಯರಿಗೆ ತಾವು ಓದಿದ ಒಳ್ಳೆಯ ಪುಸ್ತಕಗಳನ್ನು ನನಗೆ ಕಳುಹಿಸಿ ಓದು ಎನ್ನುವ ರೂಢಿಯಿದೆ.
ಹಾಂ ನನ್ನ ಪುಸ್ತಕ ಕಳಸ್ತೆ. ಅದೇ ಅವಧಿಲಿ ಬತ್ತಿತ್ತಲೇ…
ಒಂದು ಕ್ಷಣ ಹೊಟ್ಟೆಕಿಚ್ಚಾಯಿತು. ಅವಧಿಯ ನನ್ನ ಪುಸ್ತಕ ಆಗಲೇ ಇಲ್ಲ, ಅದರ ಬಗ್ಗೆ ಯಾವ ಮಾತುಕತೆಯೂ ಆಗ್ತಿಲ್ಲ ಎನ್ನುವ ಬೇಸರ. ಆದರೆ ಮರುಕ್ಷಣವೇ ಖುಷಿ. ಬಹುಶಃ ಕಿರಣ ಭಟ್ಟರ ಪರಿಚಯ ಇದ್ದವರು ಯಾರೂ ಅವರ ಬಗ್ಗೆ ಹೊಟ್ಟೆಕಿಚ್ಚು ಕೋಪ ಮಾಡಿಕೊಳ್ಳುವುದಿಲ್ಲ. ಅಷ್ಟೊಂದು ಪ್ರೀತಿ ತುಂಬಿದ ಜೀವ ಅದು. ಎದುರಿಗಿರುವ ಯಾರೇ ಆದರೂ ಪ್ರೀತಿ ತುಂಬಿದ ಕಳಶವನ್ನು ಕಂಡಂತೆ ತಮ್ಮೆಲ್ಲ ನೋವನ್ನು ಮರೆತು ಬಿಡುವಷ್ಟು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಕಿರಣ ಭಟ್ಟರ ಬಗ್ಗೆ ಹೇಳಹೊರಟರೆ ನನಗೆ ನೆನಪಾಗುವುದು ನನ್ನ ಅಮ್ಮನೇ. ಅದೇ ತಾಯಿ ಪ್ರೀತಿಯ ಕಿರಣರ ಬಗ್ಗೆ ಹೇಳುತ್ತ ಹೋದರೆ ಹೇಳುತ್ತಲೇ ಹೋಗಬಹುದು. ಅವರ ಪುಸ್ತಕ ರಂಗ ಕೈರಳಿ ಕೂಡ ಹಾಗೇ. ಥೇಟ್ ತಾಯಿ ಪ್ರೀತಿಯನ್ನೇ ಹೊದ್ದುಕೊಂಡು ನಿಂತಷ್ಟೇ ಆತ್ಮೀಯವೆನಿಸಿತು ನನಗೆ.
ಕಿರಣ ಮತ್ತು ಶ್ರೀಪಾದ ಎಂದರೆ ನೆನಪಾಗುವುದು ನಾಟಕ. ಚಿಕ್ಕ ಮಕ್ಕಳೊಡನೆ ಅವರಿಬ್ಬರೂ ಮಕ್ಕಳಾಗುವ ಪರಿ. ಅದರಲ್ಲೂ ಕಿರಣನೆಂದರೆ ಮಕ್ಕಳ ನಾಟಕ, ಮಕ್ಕಳ ಬೇಸಿಗೆ ಶಿಬಿರ. ಹಿಂದೊಮ್ಮೆ ಬೇಸಿಗೆ ಶಿಬಿರಕ್ಕೆ ನನ್ನ ಮಗನನ್ನು ಸೇರಿಸಿಕೊಳ್ಳಲು ಕೇಳಿದ್ದೆ. ಆಗ ನನ್ನ ಮಗನಿಗೆ ನಾಲ್ಕೋ ಐದೋ ವಯಸ್ಸು. ಈಗ ಬ್ಯಾಡ್ದೆ. ಒಂಚೂರೂ ದೊಡ್ಡಾಗಲಿ. ತನ್ನ ಕೆಲಸ ಆದ್ರೂ ಮಾಡ್ಕಳ್ಳಂಗಿದ್ರೆ ಛಲೋ ಆಗ್ತು. ಎಂದಿದ್ದರು. ತನ್ನ ಕೆಲಸ ಮಾಡ್ಕತ್ತಾ. ಆದ್ರೆ ರಾಶಿ ತುಂಟ. ಎಂದಿದ್ದೆ. ತುಂಟ ಅಲ್ದಿರೆ ಶ್ರೀದೇವಿ ಮಗ ಹೇಳಿ ಗೊತ್ತಾಪುದರೂ ಹ್ಯಾಂಗೆ ಮಾರಾಯ್ತಿ..? ಎಂದು ನಕ್ಕಿದ್ದರು. ಆದರೆ ನನ್ನ ಅಭಿಪ್ರಾಯದಲ್ಲಿ ಕಿರಣ ಭಟ್ ಇದ್ದಾರೆಂದರೆ ಮಕ್ಕಳನ್ನು ನಿಶ್ಚಿಂತೆಯಿಂದ ಬಿಟ್ಟುಹೋಗಬಹುದು ಎಂಬ ನಂಬಿಕೆ. ರಂಗ ಕೈರಳಿಯ ಪ್ರತಿ ಲೇಖನದಲ್ಲೂ ಇಂತಹುದ್ದೊಂದು ನಂಬಿಕೆಯ ಕಥೆಯನ್ನೇ ಕಿರಣ ಭಟ್ ಹೇಳಹೊರಟಿದ್ದಾರೆ. ಸಾಧಾರಣವಾಗಿ ಓದಿದವರಿಗೆಲ್ಲ ರಂಗ ಕೈರಳಿ ಎಂಬುದು ನಾಟಕದ ಕುರಿತಾದ ಮಾಹಿತಿ ಎನ್ನಿಸಬಹುದು. ಲಘು ಪ್ರಬಂಧ ಎನ್ನಿಸಬಹುದು. ಅಥವಾ ಕೇರಳದ ರಂಗ ಪ್ರವಾಸ ಎಂದೂ ಕಾಣಿಸಬಹುದು. ಆದರೆ ನನಗೆ ಮಾತ್ರ ಇಲ್ಲಿಯ ಪ್ರತಿ ಲೇಖನದಲ್ಲೂ ಕಂಡಿದ್ದು ಕಿರಣ ಭಟ್ಟರ ನಂಬಿಕೆ ಮತ್ತು ಪ್ರೀತಿ, ಅದೂ ತಾಯಪ್ರೀತಿ.
ಇಂತಹುದ್ದೊಂದು ನಂಬಿಕೆಯಿಂದಾಗಿಯೇ ಕಿರಣ ಭಟ್ಟರು ಕೇರಳಕ್ಕೆ ಹೊರಡುತ್ತಾರೆ. ನಮ್ಮ ಕಡೆ ಮಲೆಯಾಳಿ ಮಾಂತ್ರಿಕರು ಎಂದರೆ ಭಯಂಕರ ಎಂಬುದೊಂದು ಮಾತಿದೆ. ಹೀಗಿರುವಾಗ ಮಲೆಯಾಳಿ ಮಾಂತ್ರಿಕರ ಬಾಯಿಗೆ ನೇರವಾಗಿ ಹೋಗಿ ಬೀಳುವುದೆಂದರೆ ಅದಕ್ಕೆ ನಂಬಿಕೆಯೆನ್ನದೇ ಬೇರೇನು ಹೇಳಲು ಸಾಧ್ಯ? ಅದೇ ನಂಬಿಕೆಯಿಂದಲೇ ಉನ್ನಿಕುಟ್ಟಿ, ಬಾಬು ಮುಂತಾದವರು ಸ್ನೇಹಿತರಾಗುತ್ತಾರೆ. ಮತ್ತದೇ ನಂಬಿಕೆಯೇ ಪಾರ್ವತಿ ಅಜ್ಜಿಯನ್ನು ಆರೇಳು ದಶಕಗಳ ನಂತರ ತನ್ನ ತವರಿನೊಂದಿಗೆ ಬೆಸೆಯುವಂತೆ ಮಾಡುತ್ತದೆ. ಮತ್ತು ಹಾಗೆ ಜನರ ಮೇಲೆ ನಂಬಿಕೆಯನ್ನಿಡುವ ಕಿರಣ ಭಟ್ಟರ ಗುಣವೇ ಪಾರ್ವತಿ ಅಜ್ಜಿ ತವರನ್ನು ಬಿಟ್ಟು ಬರುವಾಗ ಆರೇಳು ವರ್ಷದವರಾಗಿದ್ದ ಅವರ ತಮ್ಮ ದಾಮೋದರ ಭಟ್ಟರನ್ನು ಹುಡುಕಿಸುತ್ತದೆ. ಹೀಗಾಗಿಯೇ ಇಲ್ಲಿನ ಪ್ರತಿ ಲೇಖನದಲ್ಲೂ ಕಿರಣ ನಂಬಿಕೆಯ ಪಾಠ ಹೇಳುತ್ತಾ ಹೋಗುತ್ತಾರೆ.
ಕೇರಳಕ್ಕೆ ಹೋಗುವುದು ಕಿರಣನಿಗೆ ಕೇವಲ ನೌಕರಿಗಾಗಿ ಮಾತ್ರವಾಗಿರಲಿಲ್ಲ. ಅದೊಂದು ರಂಗಯಾತ್ರೆ ಎಂದುಕೊಂಡೇ ಹೊರಟಿದ್ದು. ಈ ಪುಸ್ತಕ ಎಂದರೆ ನಾಟಕದ ಮಾತುಕತೆ ಎಂದುಕೊಂಡರೂ ಇದು ಬದುಕಿನ ಪಯಣದ ಕಥೆಗಳೇ ಆಗಿರುವುದು ವಿಶೇಷ. ಹೀಗಾಗಿ ಇಲ್ಲಿನ ಮಾತುಗಳು, ಘಟನೆಗಳು ಕೇವಲ ಅವರ ಜೀವನಕ್ಕಷ್ಟೇ ಅಲ್ಲ, ಎಲ್ಲರ ಜೀವನಕ್ಕೂ ಕನೆಕ್ಟ್ ಆಗುತ್ತವೆ. ಈ ಕಾರಣದಿಂದಾಗಿಯೇ ರಂಗ ಕೈರಳಿ ನಮ್ಮೆಲ್ಲರ ಬದುಕಿನ ಘಟನೆಗಳಂತೆಯೇ ಗೋಚರಿಸುತ್ತದೆ. ಎಲ್ಲೋ ಹೋದಲ್ಲಿ ನಮ್ಮದೇ ಆಸಕ್ತಿಯ ಉಣ್ಣಿಯಂತಹ ಸ್ನೇಹಿತ ಸಿಕ್ಕಿಬಿಡುವುದು ಅದೆಷ್ಟು ಖುಷಿಯ ವಿಷಯ. ಹಾಗಾದಾಗ ಸಿಕ್ಕಿಕೊಂಡ ಉಸಿರು ಸರಾಗವಾಗಿ ಹೊರಬಂದಂತೆನಿಸುತ್ತದೆ. ಕುಮಟಾದಲ್ಲಿ ಆಗತಾನೆ ಬಿಇಡಿ ಮುಗಿಸಿದ್ದೆ. ರಿಸಲ್ಟ್ ಬರಲು ಇನ್ನೂ ತಡವಿತ್ತು. ಅಲ್ಲೇ ಸಮೀಪದ ಆಂಗ್ಲ ಮಾಧ್ಯಮ ಶಾಲೆಯೊಂದು ಇಂಗ್ಲೀಷ್ ಭಾಷಾ ಶಿಕ್ಷಕರು ಬೇಕು ಎಂದಿದ್ದರಂತೆ. ನಮ್ಮ ಇಂಗ್ಲೀಷ್ ಮೆಥಡ್‌ನ ಪ್ರೊಫೆಸರ್ ಬಳಿ. ಅವರೋ ನನ್ನ ಪ್ರೀತಿಯ ಗುರುಗಳು, ಕಥೆಗಾರರಾದ ಶ್ರೀಧರ ಬಳಗಾರರು. ಒಂದು ನಾನವರ ಪ್ರೀತಿಯ ಶಿಷ್ಯೆ. ಜೊತೆಗೆ ಇಂಗ್ಲೀಷ್ ಭಾಷೆ ಮತ್ತು ಮಾಧ್ಯಮದ ವಿದ್ಯಾರ್ಥಿಗಳಲ್ಲಿ ನಾನು ತುಸು ಮುಂದಿದ್ದೆ ಎಂಬ ಕಾರಣಕ್ಕಾಗಿ ಸಹಜವಾಗಿಯೇ ನನ್ನ ಹೆಸರನ್ನು ಸೂಚಿಸಿದ್ದರು. ಆದರೆ ಅಲ್ಲಿ ಹೋದ ಮೇಲೆ ನಾನು ನೀರಿಂದ ತೆಗೆದ ಮೀನಿನಂತಾಗಿದ್ದೆ. ಅಲ್ಲಿ ಯಾರೆಂದರೆ ಯಾರಿಗೂ ಸಾಹಿತ್ಯದ ಕುರಿತಾಗಿ ಒಂದಿಷ್ಟೂ ಆಸಕ್ತಿ ಇರಲಿಲ್ಲ. ನಾನಂತೂ ಖಿನ್ನತೆಯಲ್ಲಿ ಕಳದೇ ಹೋಗುತ್ತೇನೆ ಎನ್ನುವಂತಾಗಿದ್ದೆ. ಅದೇ ಸಮಯದಲ್ಲಿ ಅಲ್ಲಿ ಲಕ್ಷ್ಮಿ ಹೆಗಡೆ ಜೊತೆಯಾಗಿದ್ದರು. ಒಂದಿಷ್ಟು ಪುಸ್ತಕಗಳ ಮಾತು ಪ್ರಾರಂಭವಾಗಿತ್ತು. ಕಿರಣ ತನ್ನ ನಾಟಕದ ಆಸಕ್ತಿಯ ಉನ್ನಿಕೃಷ್ಣನ್ ದೊರೆತಾಗ ಬರೆದ ಖುಷಿ ಓದುವಾಗ ಇದೆಲ್ಲ ನೆನಪಾಗಿತ್ತು. ಇಂತಹ ಹಲವಾರು ನಮ್ಮ ಜೀವನಕ್ಕೂ ಅನ್ವಯಿಸುವ ಸ್ನೇಹಿತರನ್ನು ನಾವಿಲ್ಲಿ ಕಾಣಬಹುದು. ಅದಕ್ಕೆಂದೆ ಮುನ್ನುಡಿಯಲ್ಲಿ ಶ್ರೀಪಾದ ಭಟ್ಟ ‘ನನ್ನ ಬೆರಳಿನಗಾಯಗಳ ಕುರಿತು ಮಾತನಾಡುವ ಅಂದುಕೊಂಡರೂ ಅದು ಏಕಲವ್ಯನ ಬೆರಳಿನ ಗಾಯದ ಕಥೆಯಾಗಿ ಮಾರ್ಪಡುತ್ತದೆ. ಸಮಾಜದ ಗಾಯದ ಮಾತಾಗಿಬಿಡುತ್ತದೆ.’ ಎಂದು ಬರೆದುದು ನಿಜವಾದರೂ ಅದು ಉಲ್ಟಾ ಕೂಡ ಆಗಬಹುದು. ಏಕಲವ್ಯ ನಾಟಕ ನೋಡುತ್ತಿದ್ದರೆ ನಮ್ಮದೇ ಜೀವನದ ಘಟನೆಯೂ ಅದಕ್ಕೆ ರಿಲೇಟ್ ಆಗಿಬಿಡಬಹುದು ಎಂಬುದೂ ಅಷ್ಟೇ ಸತ್ಯ.
‘ಅದೃಷ್ಟಾನಾ, ನೋಡಿ ಅದೇ ನನ್ನ ಹುಡುಕಿಕೊಂಡು ಬರ್ತದೆ’ ಎಂದು ‘ಕಿಳವನುಂ ಕಡಲುಂ’ ನಾಟಕದ ಕೊನೆಯಲ್ಲಿ ಯುವ ಮೀನುಗಾರ ಹುಡುಗನೊಬ್ಬ ಆಶಾವಾದಿಯಾಗಿ ಹೇಳುತ್ತಾನೆ. ಬಹುಶಃ ನಾಟಕಗಳ ವಿಷಯದಲ್ಲಷ್ಟೇ ಅಲ್ಲ, ಜೀವನದಲ್ಲೂ ಈ ಅದೃಷ್ಟ ಕಿರಣರನ್ನು ಹುಡುಕಿಕೊಂಡೇ ಬಂದಿದೆ. ಇಲ್ಲವೆಂದರೆ ಪಾರ್ವತಿ ಅಜ್ಜಿಯ ತವರುಮನೆಯನ್ನು ಎಷ್ಟೋ ದಶಕಗಳ ನಂತರ ಹುಡುಕಿಕೊಡುವ ಸೌಭಾಗ್ಯ ಒದಗುವುದು ಸುಲಭದ ವಿಷಯವಲ್ಲ. ಸುಮಾರು ಅರವತ್ತೈದು ವರ್ಷಗಳ ಹಿಂದೆ ಕುಮಟಾದ ಮುರೂರಿಗೆ ಕೇರಳದ ಪಯ್ಯನೂರಿನಿಂದ ಮದುವೆಯಾಗಿ ಬಂದ ಪಾರ್ವತಿ ಅಜ್ಜಿ ನಂತರ ಒಮ್ಮೆಯೂ ತವರಿಗೆ ಹೋಗಿದ್ದೇ ಇಲ್ಲ. ಸಂಪರ್ಕವೂ ಇರಲಿಲ್ಲ. ಅವರು ಮದುವೆಯಾಗಿ ಬರುವಾಗ ಅವರ ಸಹೋದರ ದಾಮೋದರ ಇನ್ನೂ ತೀರಾ ಚಿಕ್ಕವ. ಉಳ್ಳಾಲತಿಟ್ಟ, ಪಯ್ಯನೂರು, ಶಿವ ದೇಗುಲದ ಹೊರತಾಗಿ ಅವರಿಗೆ ಬೇರಾವ ನೆನಪೂ ಇರಲಿಲ್ಲ. ಅಲ್ಲಿ ಹೋಗಿ ನೋಡಿದರೆ ಉಳ್ಳಾಲತಿಟ್ಟ ಎಂಬ ಹೆಸರಿನ ಊರೇ ಇರಲಿಲ್ಲ. ಹೀಗಿರುವಾಗ ಒಬ್ಬ ಲೈನ್‌ಮನ್ ವಿಲಿಯಂಕೋಡ್‌ದಲ್ಲಿ ಶಿವ ದೇಗುಲದಲ್ಲಿ ದಾಮೋದರ ಭಟ್ಟರು ಇರುವ ಬಗ್ಗೆ ತಿಳಿಸಿದ್ದ. ನೋಡಿದರೆ ನೆನಪಿಟ್ಟುಕೊಳ್ಳುವ ವಯಸ್ಸಿಗೆ ಬರುವ ಮುನ್ನವೇ ಪಾರ್ವತಿ ಎಂಬ ಚೇಚಿಯನ್ನು ಕಳೆದುಕೊಂಡ ಅದೇ ದಾಮೋದರ. ಒಂದು ತಾಯಿಗೆ ತವರನ್ನು, ಮಕ್ಕಳಿಗೆ ಅಜ್ಜಿಮನೆಯನ್ನು ದೊರಕಿಸಿಕೊಡುವುದು ಅದೃಷ್ಟ ಒಂದು ಚೂರು ಕೊಟ್ಟಿಯಾದರೂ ಅವಕಾಶ ಸಿಗುವುದಿಲ್ಲ. ಹೀಗಿರುವಾಗ ಕಿರಣ ಭಟ್ಟರಿಗೆ ಈ ಅದೃಷ್ಟ ಅನಾಯಾಸವಾಗಿ ಒದಗಿಬಂದಿದೆ. ಇಂತಹ ಮನಕಲಕುವ ಬಹಳಷ್ಟು ಕಥೆಗಳು ಇಲ್ಲಿವೆ. ಹೀಗಾಗಿಯೇ ಇದು ಮನುಕುಲದ ಕಥೆ.
ನಾನು ನಾಟಕ ಮತ್ತು ಸಿನೇಮಾ ನೋಡುವುದೇ ಕಡಿಮೆ. ಮೂರು ತಾಸು ಕುಳಿತು ನೋಡುವ ತಾಳ್ಮೆ ನನ್ನಲ್ಲಿ ಇಲ್ಲ ಎನ್ನುವುದು ಮೊದಲ ಕಾರಣವಾದರೆ ಒಮ್ಮೆ ನೋಡಿದರೆ ಎರಡು ದಿನ ಅದರಲ್ಲೇ ಮನಸ್ಸು ಮುಳುಗಿ ಬೇರೇನೂ ಮಾಡಲಾಗುವುದಿಲ್ಲ ಎನ್ನುವುದು ಇನ್ನೊಂದು ಕಾರಣ. ಹೀಗಾಗಿ ನನ್ನ ಮತ್ತು ನಾಟಕದ ಸಂಪರ್ಕ ಇತ್ತೀಚಿನ ದಿನಗಳವರೆಗೂ ಕಡಿಮೆಯೇ. ಚಿಕ್ಕವಳಿರುವಾಗ ಒಮ್ಮೆ ಶಿರಸಿ ಜಾತ್ರೆಯಲ್ಲಿ ಯಾವುದೋ ನಾಟಕಕ್ಕೆ ಹೋಗಿದ್ದೆ. ಕಂಪನಿ ನಾಟಕ ಅದು. ಹೆಸರಾಂತ ಕಂಪನಿಯದ್ದೇ. ಆದರೂ ಅಲ್ಲಿನ ಡಾನ್ಸು, ಅಭಿನಯ ಹಾಗೂ ಡಬಲ್ ಮೀನಿಂಗ್ ಮಾತುಗಳು ಬೇಸರ ಹುಟ್ಟಿಸಿ ನಾಟಕವೆಂದರೆ ಇಷ್ಟೇ ಎಂಬ ಭಾವನೆ ಹುಟ್ಟಿಸಿಬಿಟ್ಟಿತ್ತು. ಇನ್ನೊಮ್ಮೆ ಊರಲ್ಲಿಯೇ ನಡೆದ ನಾಟಕವೊಂದಕ್ಕೆ ಹೋಗಿದ್ದೆ. ಅದೂ ನನ್ನೂರಿನ ವೆಂಕಟೇಶಣ್ಣ ಅದರಲ್ಲಿ ಪಾತ್ರ ಮಾಡಿದ್ದ ಮತ್ತು ಪ್ರತಿಸಲ ಎದುರಿಗೆ ಸಿಕ್ಕಾಗಲೂ ‘ತಂಗಿ, ನನ್ನ ನಾಟಕ ನೋಡಲು ಬಾರೆ..’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಎಂಬ ಕಾರಣಕ್ಕಾಗಿ. ಶಾಲೆಯ ಆಟದ ಮೈದಾನದಲ್ಲಿ ಕುಳಿತು ನೋಡುವ ನಾಟಕ ಅದು. ಯಾಕೋ ಅಲ್ಲಿ ನಡೆದ ಅಹಿತಕರ ಸನ್ನಿವೇಶ ಇನ್ಯಾವತ್ತೂ ನಾಟಕವನ್ನೇ ನೋಡಬಾರದು ಎಂಬಷ್ಟು ಬೇಸರ ಹುಟ್ಟಿಸಿತ್ತು. ರಘು ಅಣ್ಣನವರ ತುಮುರಿ ಕಾರ್‍ಯಕ್ರಮದಲ್ಲಿ ತುಮುರಿಯ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಗೆಳೆಯ ಜಿ. ಟಿ ಸತ್ಯನಾರಾಯಣ ಲಂಕೇಶರ ಜೀವನವನ್ನು ಆಧರಿಸಿದ ನಾಟಕನ್ನು ಮಾಡಿದ್ದರು. ‘ಅರೆ, ನಾಟಕ ಇಷ್ಟು ಚಂದನೂ ಇರ್ತದಲ್ಲ’ ಎಂದು ಅಂದುಕೊಂಡಿದ್ದೆ. ಹಿಂದಿನ ವರ್ಷ ಅದ್ಭುತ ರಂಗಪ್ರಯೋಗಗಳ ಮೂಲಕ ಮನೆಮಾತಾಗಿರುವ ಕೆ ಆರ್ ಪ್ರಕಾಶರವರು ‘ಕಾರವಾರದ ರಾಕ್ ಗಾರ್ಡನ್‌ನಲ್ಲಿರುವ ತೂಗುಸೇತುವೆಯ ಮೇಲೆ ಒಂದು ನಾಟಕ ಮಾಡೋಣ. ಬರೆಯಿರಿ’ ಎಂದಿದ್ದರು. ನಾಟಕಗಳನ್ನು ಹೆಚ್ಚು ನೋಡಿಲ್ಲದ ಕಾರಣ ಮೊದಲೊಂದಿಷ್ಟು ಗಡಿಬಿಡಿಯಲ್ಲಿ ಬರೆದೆನಾದರೂ ನಂತರ ಕುಳಿತು ಅದನ್ನು ಮತ್ತೆ ತಿದ್ದಿ ಬರೆದಿದ್ದೆ. ಆದರೆ ನನ್ನಿಂದ ಅದಕ್ಕೆ ರಂಗಗೀತೆ ಬರೆಯಲಾಗಲಿಲ್ಲ. ಅಷ್ಟರಲ್ಲಿ ಮಳೆಯೂ ಪ್ರಾರಂಭವಾಯಿತಾದ್ದರಿಂದ ನಮ್ಮ ನಾಟಕದ ಪ್ರೋಗ್ರಾಂ ಅಲ್ಲಿಗೇ ಮುಗಿಯಿತು. ಮುಂದೆ ಪ್ರಕಾಶ ನಾಟಕ ಅಕಾಡೆಮಿಯ ಸದಸ್ಯರಾಗಿ ಬ್ಯೂಸಿ ಆಗಿಬಿಟ್ಟರು. ಹೀಗಾಗಿ ನಾಟಕದೊಡನೆ ನನ್ನ ಒಡನಾಟ ತೀರಾ ಕಡಿಮೆಯೆ. ಆದರೆ ಕಿರಣ ಭಟ್ಟರ ‘ರಂಗ ಕೈರಳಿ’ಯನ್ನು ಓದಿದ ಮೇಲೆ ಇನ್ನು ಮುಂದೆ ನಾಟಕ ನೋಡಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದೇನೆ. ನೀವೂ ಓದಿನೋಡಿ. ಖಂಡಿತಾ ನೀವೂ ನಾಟಕ ಹುಡುಕಿಕೊಂಡು ಹೋಗಿ ನೋಡಬೇಕು ಎಂದುಕೊಳ್ಳುತ್ತೀರಿ.
*******
ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ಆತ್ಮೀಯವಾಗಿ ಮೂಡಿದ ಲೇಖನವಿದು.ಪ್ರೀತಿ ಮತ್ತು ನಂಬಿಕೆಯ ಒಡಲಾದ ಕಿರಣಭಟ್ಟರ ಈ ರಂಗ ಪ್ರವಾಸವೂ ರಂಗಭೂಮಿ ಬಗ್ಗೆ ಪ್ರೀತಿ ಮತ್ತು ನಂಬಿಕೆ ಮೂಡಿಸಿಬಿಡುತ್ತದೆ ಎಂದು ನಂಬಿಕೆ ಮೂಡಿಸುತ್ತಿದೆ ಈ ಬರಹ.
ನಿಮ್ಮ ಈ ಅಂಕಣ ಓದುತ್ತಲೆ ನಾನಾದೆ ನಾಟಕದ ಪಾತ್ರಧಾರಿ
ನಿಮ್ಮ ಅಂಕಣ ಕವನಗಳ ಓದುವ ಪ್ರೀತಿ ಈ ಬರಹವನ್ನೂ ಕುತೂಹಲದಿಂದ ಓದುವಂತೆ ಮಾಡಿತು. ಕುತೂಹಲ ತಣಿಯಿತು ಅದೇ ಹದವಾದ ಲಯ, ಅದೇ ಖುಷಿ. ತುಂಬಾ ಸೊಗಸಾಗಿದೆ. ಈಗ ರಂಗ ಕೈರಳಿ ಓದುವ ಕತೂಹಲ.
ಕಿರಣ ಭಟ್ಟರ ರಂಗಪ್ರೇಮವನ್ನು ಅಕ್ಷರಪ್ರೇಮಿಗಳಿಗೆ ಪರಿಚಯಿಸಿಕೊಟ್ಟ ಪರಿ ಸುಂದರವಾಗಿತ್ತು.
ಥ್ಯಾಂಕ್ಯೂ ಶ್ರೀದೇವಿ. ಖುಷಿಯಾಯ್ತು
ತುಂಬಾ ಆತ್ಮೀಯವಾಗಿ ಬರೆದಿರುವಿರಿ ಮೇಡಂ, ನಾನೂ ಬಾಲ್ಯದಲ್ಲಿ ತುಂಬಾ ರಂಗಾಸಕ್ತನಾಗಿದ್ದೆ. ಪ್ರೈಮರಿ ಮತ್ತು ಹೈಸ್ಕೂಲ್ ದಿನಗಳಲ್ಲಿ ಪ್ರತಿ ವರ್ಷ ಎರಡು ಸಾಮಾಜಿಕ ನಾಟಕ ಮಾಡುತ್ತಿದ್ದೆವು.
ನಿಮ್ಮ ಬರಹ ಚೆಂದವಿದೆ. ನಾನೂ ಪುಸ್ತಕ ತರಿಸಿ ಕೊಳ್ಳುವೆ ಮೇಡಂ.
ಚೆನ್ನಾಗಿದೆ ಬರಹ.
ಪುಸ್ತಕದ ಕುರಿತು ಇನ್ನು ಒಂದಷ್ಟು ಹೇಳಬಹುದಿತ್ತು. ಪುಸ್ತಕದ ಬಗ್ಗೆ ಹೇಳುವಾಗ ವೈಯಕ್ತಿಕ ವಿಚಾರಗಳು ಆದಷ್ಟೂ ಕಡಿಮೆ ಇರುವುದು ಒಳ್ಳೆಯದು. ಪುಸ್ತಕದ ಮೇಲಿರಬೇಕಾದ ಫೋಕಸ್ ತಪ್ಪಿಹೋಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.
ವಿಮರ್ಶಾತ್ಮಕತೆಯ ಕೊರತೆ ಅನಿಸಿತು.