ಸಂಪ್ರೋಕ್ಷಣ

ಕನಸಿನ ಚಾದರ

ಬರಹ-02

ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ ನಕ್ಕು ಕನಸಿನಂತೆ ಮರೆಯಾಗುತ್ತಿದ್ದ ಹುಡುಗನೊಬ್ಬ ಎರಡು ಮಕ್ಕಳ ತಂದೆಯಾಗಿ ಮಾರ್ಕೆಟ್ಟಿನಲ್ಲೆಲ್ಲೋ ಎದುರಾಗಿಬಿಡಬಹುದು. ಹಳೆಯ ಕನಸೊಂದು ಇಂದಿನ ವಾಸ್ತವವಾಗಿ, ಇವತ್ತಿನ ಸುಂದರ ಬದುಕೊಂದು ನಾಳೆಯ ಕನಸಾಗಿ, ಏನೆಲ್ಲವೂ ಆಗಿಬಿಡಬಹುದು.


ಮನುಷ್ಯ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸೀಮ. ಜನ್ಮದಾಖಲೆಯಿಂದ ಶುರುವಾಗುವ ಮನುಷ್ಯಜನ್ಮದ ಯಶಸ್ಸೆಲ್ಲವೂ ದಾಖಲೆಗಳ ಸುತ್ತಲೇ ಸುತ್ತುವಂಥದ್ದು. ಆದರೆ ಕನಸುಗಳೊಂದಿಗಿನ ನಮ್ಮ ಪಯಣ ಮಾತ್ರ ಇಂಥದ್ದೇ ದಿನದಂದು ಇದೇ ಸಮಯದಲ್ಲಿ ಪ್ರಾರಂಭವಾಯಿತೆಂದು ನಿಖರವಾಗಿ ದಾಖಲಿಸಲಾಗದು. ಬಾಳೆಮರದಲ್ಲಿ ತೆಂಗಿನಕಾಯಿ ಬಿಟ್ಟಂತೆ ನಿದ್ದೆಯಲ್ಲೊಮ್ಮೆ ಕನಸು ಬಿದ್ದಿರಬಹುದು ಅಥವಾ ಮುಸ್ಸಂಜೆಯಲ್ಲೊಮ್ಮೆ ಕಾಫಿ ಕುಡಿಯುತ್ತಾ ಅಂಥ ವಿಲಕ್ಷಣ ಯೋಚನೆಯೊಂದು ಕನಸಿನಂತೆ ಹಾದುಹೋಗಿರಬಹುದು. ಅಂಥದ್ದೊಂದು ಕನಸಿಗೆ ಪ್ರತಿಕ್ರಿಯೆಯಾಗಿ ಒಮ್ಮೆ ನಕ್ಕು ಸುಮ್ಮನಾಗಿಬಿಡುತ್ತೇವೆಯೇ ಹೊರತು ವಿಲಕ್ಷಣ ಕನಸುಗಳದ್ದೊಂದು, ಸುಂದರ ಕನಸುಗಳದ್ದೊಂದು ಅಥವಾ ಕನಸುಗಳೇ ಮುಗಿದುಹೋದ ಬದುಕಿನದೊಂದು ದಾಖಲೆಗಳನ್ನು ಸೃಷ್ಟಿ ಮಾಡಲಾಗದು. ನಮ್ಮೊಳಗೇ ಹುಟ್ಟಿ, ಕಸುವಿಗನುಸಾರವಾಗಿ ಬೆಳೆದು, ಒಮ್ಮೊಮ್ಮೆ ಸಂಭವಿಸಿ, ಮತ್ತೆಲ್ಲೋ ಮುಗಿದುಹೋಗುವ ಕನಸುಗಳೆಲ್ಲವೂ ಮುಖಪುಟ-ಮುನ್ನುಡಿಗಳಿಲ್ಲದ ಸ್ವಚ್ಛಂದ ಆತ್ಮಕಥನಗಳು.


ಈ ಆತ್ಮಕಥನಗಳಲ್ಲೊಂದಿಷ್ಟು ವಿವರಗಳು ಕಥೆಗಳಾಗಿ ಅವರಿವರ ಕಿವಿಗಳನ್ನು ತಲುಪಿದರೆ, ಇನ್ನೆಷ್ಟೋ ಅನುಭವಗಳು ನಮ್ಮೊಳಗೇ ಉಳಿದು ಬದುಕಿಗೊಂದು ದಿವ್ಯತೆಯನ್ನು ಒದಗಿಸುತ್ತವೆ. ನಡುವೆ ಕನವರಿಸುವ ಕನಸುಗಳು ಮಾತ್ರ ಆಗಾಗ ಬಣ್ಣಗಳನ್ನು ಬದಲಾಯಿಸುತ್ತ, ತಾವೇ ಸೃಷ್ಟಿಸಿದ ತಲ್ಲಣಗಳನ್ನೆಲ್ಲ ತಮ್ಮದೇ ಜವಾಬ್ದಾರಿಯೆನ್ನುವಂತೆ ತಣ್ಣಗಾಗಿಸುತ್ತ ತಪಸ್ಸಿಗೆ ಕುಳಿತ ಆತ್ಮವೊಂದರಂತೆ ನಮ್ಮೊಳಗೊಂದು ನೆಲೆ ಕಂಡುಕೊಳ್ಳುತ್ತವೆ. ಒಳ್ಳೊಳ್ಳೆಯ ಕನಸುಗಳು ಸಂಭವಿಸಿದಾಗಲೆಲ್ಲ ಮುದಗೊಳ್ಳುವ ನಾವು, ಕೆಟ್ಟ ಕನಸುಗಳಿಗೆಲ್ಲ ಸಮಾಧಾನ ಹುಡುಕಲಿಕ್ಕೆಂದು ಆಶ್ರಯ ಹುಡುಕುವುದು ಕೂಡಾ ಇನ್ನೊಂದು ಕನಸಿನ ಮಡಿಲಿನಲ್ಲಿಯೇ. ಕೆಟ್ಟಕನಸು ಬಿತ್ತೆಂದು ಅಮ್ಮನ ಮಡಿಲು ಹುಡುಕುವ ಪುಟ್ಟ ಮಗುವಿಗೆ ಮುಂದೊಂದು ದಿನ ಅಮ್ಮನ ಮಡಿಲು ಕೂಡಾ ಕನಸಾಗಿಬಿಡುವ ಕಲ್ಪನೆ ಇದ್ದೀತೇ! ಪರ್ಯಾಯ ಕನಸೆನ್ನುವ ಪರಿಕಲ್ಪನೆಯೊಂದು ಇದ್ದಿದ್ದರೆ ಬದುಕಿನುದ್ದಕ್ಕೂ ಒಳ್ಳೊಳ್ಳೆಯ ಕನಸುಗಳು ಹೂವರಳಿ ನಿಂತ ಪಾರಿಜಾತ ಮರವೊಂದರ ನೆರಳಿನಂತೆ ನಮ್ಮನ್ನು ಪೊರೆಯುತ್ತಿದ್ದವೇನೋ; ಬಾಲ್ಯವೊಂದು ಮುಗಿದುಹೋಗುವ ದುಃಖ ಯಾರ ಎದೆಗೂ ಇಳಿಯುತ್ತಿರಲಿಲ್ಲವೇನೋ!


ಬಾಲ್ಯ ಎನ್ನುವ ಸುಂದರ ಸಮಯವೊಂದು ಮುಗಿದೇ ಹೋಗಿದ್ದರೂ ಬಾಲ್ಯದ ನೆನಪುಗಳನ್ನೆಲ್ಲ ಜೋಪಾನವಾಗಿ ಗಳಿಗೆ ಮಾಡಿ ಮೂಲೆಯ ಕಪಾಟೊಂದರಲ್ಲಿ ಭದ್ರವಾಗಿ ಇಟ್ಟುಕೊಂಡಿರುತ್ತೇವೆ. ಆ ನೆನಪಿನ ನವಿಲುಗರಿಯ ನೂಲೊಂದರಲ್ಲಿ ಬಾಲ್ಯದ ಗೆಳೆಯನೊಬ್ಬನ ಚಕ್ರವೊಂದು ಕನಸಾಗಿ ಸುತ್ತುತ್ತಿರಬಹುದು; ಹೈಸ್ಕೂಲಿನ ಯೂನಿಫಾರ್ಮಿನಲ್ಲಿ ಟೀಚರಾಗಬೇಕೆಂದಿದ್ದ ಕನಸೊಂದು ಇನ್ನೂ ಹಸಿರಾಗಿದ್ದಿರಬಹುದು; ಗ್ರೀಟಿಂಗ್ ಕಾರ್ಡ್ ಒಂದು ಹೊಸವರುಷದ ಕನಸು ಕಾಣುತ್ತಿರಬಹುದು. ಒಟ್ಟಿನಲ್ಲಿ ನೆನಪುಗಳನ್ನು ನೇವರಿಸುವ ಕನಸೊಂದು ನಮ್ಮೊಳಗನ್ನು ಸದಾ ಕಾಯುತ್ತಿರುತ್ತದೆ. ಅಂಥದ್ದೇ ಒಂದು ಕನಸಿನಂತಹ ನೆನಪಲ್ಲಿ ಅಪ್ಪನ ಕೆಂಪು ಚಾದರವೊಂದು ಬೆಚ್ಚಗೆ ಕುಳಿತಿದೆ. ಆ ಚಾದರದ ಮೇಲೆ ನೀಲಿಕಣ್ಣಿನ ನವಿಲುಗರಿಯ ಚಿತ್ರವಾಗಲೀ, ಮಾವಿನ ಎಲೆಯ ಪೇಂಟಿಂಗ್ ಆಗಲೀ ಯಾವುದೂ ಇರಲಿಲ್ಲ; ಮಬ್ಬುಬಿಳುಪು ದಾರಗಳ ನೇಯ್ಗೆಗಳು ಕೆಂಪುಬಣ್ಣವೇ ತಮ್ಮದೆನ್ನುವಂತೆ ಚಾದರವನ್ನೆಲ್ಲ ಆವರಿಸಿಕೊಂಡಿದ್ದವು. ಅಪ್ಪ ನಿದ್ರೆಹೋಗಿ ಅದೆಷ್ಟೋ ಸಮಯದ ನಂತರ ಮಲಗುವ ಅಭ್ಯಾಸವಿದ್ದ ನಾನು ಗುಬ್ಬಚ್ಚಿಯೊಂದು ಗೂಡು ಸೇರಿಕೊಳ್ಳುವಂತೆ ಚಾದರದೊಳಗೆ ಸೇರಿಕೊಳ್ಳುತ್ತಿದ್ದೆ. ನಾನು ಎದ್ದೇಳುವಷ್ಟರಲ್ಲಿ ಅಪ್ಪ ತನ್ನ ದಿನನಿತ್ಯದ ಕೆಲಸದಲ್ಲಿ ನಿರತನಾಗಿರುತ್ತಿದ್ದನಾದರೂ ಚಾದರ ಮಾತ್ರ ಬೆಳಗಿನ ಜಾವದ ಕನಸುಗಳನ್ನೆಲ್ಲ ಸಲಹುತ್ತಿತ್ತು. ಕೆಟ್ಟ ಕನಸುಗಳನ್ನೆಂದಿಗೂ ತನ್ನೊಳಗೆ ಬಿಟ್ಟುಕೊಳ್ಳದ ಕೆಂಪು ಚಾದರ ಬಾಲ್ಯವನ್ನು ಸೊಗಸಾಗಿ ಪೊರೆದ ಪರಿಗೆ ಈಗಲೂ ಬೆರಗಾಗುತ್ತೇನೆ; ಅಗತ್ಯಗಳನ್ನೆಲ್ಲ ಪರಿಮಿತಿಗನುಗುಣವಾಗಿ ಒದಗಿಸುವ ಪ್ರಕೃತಿಯ ಚಮತ್ಕಾರಕ್ಕೆ ಅಚ್ಚರಿಗೊಳ್ಳುತ್ತೇನೆ.


ಈ ಕನಸುಗಳ ಸಾಂಗತ್ಯದಲ್ಲಿ ಅಪ್ಪನಷ್ಟೇ ಅಲ್ಲದೇ ಅಜ್ಜನ ಪಾತ್ರವೂ ಇದೆ. ಬೇರೆಯವರಿಗೆ ತೊಂದರೆಯಾಗದ ಚಟುವಟಿಕೆಗಳೆಲ್ಲವನ್ನೂ ಕಾನೂನುಬದ್ಧವೆಂದು ಪರಿಗಣಿಸುತ್ತಿದ್ದ ಹಳ್ಳಿಗಳಲ್ಲಿ ಓಸಿ ಎನ್ನುವ ಜೂಜಾಟವೊಂದು ಪ್ರಚಲಿತದಲ್ಲಿದ್ದ ಕಾಲವದು. ನಂಬರುಗಳ ಮೇಲೆ ದುಡ್ಡು ಕಟ್ಟುವ ಈ ಆಟದಲ್ಲಿ ಕನಸಿನ ಆಧಾರದ ಮೇಲೂ ನಂಬರುಗಳನ್ನು ಹುಡುಕಿ ತೆಗೆಯುತ್ತಿದ್ದರು. ಕನಸಿನಲ್ಲಿ ಕಾಣುವ ನದಿಗೆ ಒಂದು ನಂಬರಾದರೆ, ನಾಯಿಗೆ ಇನ್ನೊಂದು, ಹಾವಿಗೊಂದು ಹೀಗೆ. ಹದಿನೈದು ಇಪ್ಪತ್ತು ಜನರು ಒಟ್ಟಿಗೇ ವಾಸಿಸುತ್ತಿದ್ದ ಹಳ್ಳಿಗಳ ಮನೆ ಜಗಲಿಗಳೆಲ್ಲ ಮಕ್ಕಳಿಂದ ತುಂಬಿರುತ್ತಿದ್ದವು. ಬೇಸಿಗೆರಜೆಗಳಲ್ಲಂತೂ ಮೊಮ್ಮಕ್ಕಳಿಂದ ತುಂಬಿಹೋಗುವ ಮನೆಯಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಶಿಸ್ತಿನ ಮನುಷ್ಯ ಅಜ್ಜ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿದವನೇ ನಮ್ಮೆಲ್ಲರನ್ನೂ ಕೇಳುತ್ತಿದ್ದ ಮೊದಲ ಪ್ರಶ್ನೆಯೆಂದರೆ ರಾತ್ರಿಯೇನಾದರೂ ಕನಸು ಬಿದ್ದಿತ್ತಾ ಎಂದು. ನಮ್ಮ ಕನಸುಗಳ ಆಧಾರದ ಮೇಲೆ ಅವನ ಓಸಿ ನಂಬರೊಂದು ರೆಡಿಯಾಗುತ್ತಿತ್ತು. ಅಡುಗೆಮನೆಯಲ್ಲಿ ತಿಂಡಿಯ ತಯಾರಿಯಲ್ಲಿರುತ್ತಿದ್ದ ಅಮ್ಮ-ದೊಡ್ಡಮ್ಮಂದಿರೆಲ್ಲ ಅವರವರ ಕನಸುಗಳನ್ನು ಮಕ್ಕಳ ಮೂಲಕ ಜಗಲಿಗೆ ಕಳಿಸುತ್ತಿದ್ದರು. ಒಮ್ಮೊಮ್ಮೆ ಮನೆಯವರ್ಯಾರಿಗೂ ಕನಸೇ ಬೀಳದೇ ಅಜ್ಜ ನಂಬರಿಗಾಗಿ ಪರದಾಡುವ ಪರಿಸ್ಥಿತಿಯೂ ಎದುರಾಗುತ್ತಿತ್ತು. ಆಮೇಲಾಮೇಲೆ ಈ ಓಸಿ ಎನ್ನುವುದು ಒಂದು ಕನಸಿನ ಆಟದಂತಾಗಿ, ಮಲಗುವ ಮೊದಲು ದೇವರಿಗೆ ನಮಸ್ಕರಿಸುವ ಪರಿಪಾಠವಿದ್ದ ನಾವೆಲ್ಲರೂ ರಾತ್ರಿ ಕನಸು ಬೀಳುವಂತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವು.


ಈಗಲೂ ಲಿಂಬೆಹಣ್ಣಿನ ಗೊಂಚಲೊಂದು ಕನಸಿನಲ್ಲಿ ತೂಗಿತೊನೆದಾಡಿದರೆ, ಹಾರರ್ ಸಿನೆಮಾದ ಪಾತ್ರವೊಂದು ಕನಸಿಗೆ ಬಂದು ಭಯಹುಟ್ಟಿಸಿದರೆ, ಓಸಿಪಟ್ಟಿಯ ನಂಬರುಗಳೊಂದಿಗೆ ಸಂತೋಷದಿಂದ ಬದುಕಿದ ಅಜ್ಜನ ನೆನಪೊಂದು ಸುಂದರವಾದ ಕನಸಾಗಿ ಮನಸ್ಸನ್ನೆಲ್ಲ ಆವರಿಸಿಕೊಳ್ಳುತ್ತದೆ. ಕ್ವಿಲ್ಟ್ ಗಳನ್ನು ಕೊಳ್ಳಲೆಂದು ಅಂಗಡಿಗೆ ಹೋದಾಗಲೆಲ್ಲ ಅಲ್ಲೆಲ್ಲಾದರೂ ಕೆಂಪುಚಾದರವೊಂದು ಮೈತುಂಬ ನೇಯ್ಗೆ ಹೊತ್ತು ಎದುರಾಗಬಾರದೇ ಎಂದುಕೊಳ್ಳುತ್ತೇನೆ. ಹುಟ್ಟಿದದಿನದಂದು ನೆಟ್ಟ ಸಂಪಿಗೆಗಿಡ ಒಂದಿಂಚು ಚಿಗುರಿದರೂ ಮೈತುಂಬ ಹೂವರಳಿಸಿ ನಿಂತ ಸಂಪಿಗೆಮರವೊಂದು ಅರಳಿಸಬಹುದಾದ ಹೊಸಹೊಸ ಕನಸುಗಳಿಗಾಗಿ ಪ್ರತಿನಿತ್ಯ ಕಾಯುತ್ತೇನೆ. ಸದಾ ಮುಗುಳ್ನಗುತ್ತ ಚಿಗುರುವ ಹೊಸ ಕನಸುಗಳೆಲ್ಲವನ್ನೂ ಅಪ್ಪನ ಕೆಂಪು ಚಾದರ ಪೊರೆಯುತ್ತಿರಬಹುದು!

**************

ಲೇಖಕರ ಬಗ್ಗೆ ಎರಡು ಮಾತು:

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

11 thoughts on “ಸಂಪ್ರೋಕ್ಷಣ

  1. ಕನಸುಗಳ ವಿಸ್ಮಯ ಲೋಕದೊಳಗೊಂದು ಸುತ್ತು.‌ ಚಂದದ ಬರಹ.

Leave a Reply

Back To Top