ಲಹರಿ

ನೆನಪುಗಳೇ ಮಧುರ.

Music #6949126

ಶೀಲಾ ಭಂಡಾರ್ಕರ್

ನೆನಪುಗಳೇ ವಿಚಿತ್ರ. ಒಂದಕ್ಕೊಂದು ಸಂಬಂಧ ಕೂಡಿಸಿ ಎಲ್ಲಿಂದೆಲ್ಲಿಗೋ ಎಳಕೊಂಡು ಹೋಗುವ ಪರಿಯಂತೂ ಅದ್ಭುತ.

ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾರಾಂತ್ಯದಲ್ಲಿ ನಮ್ಮನೆಗೆ ಬರುವುದಿತ್ತು. ನಾವು ಚಿಕ್ಕವರಿದ್ದಾಗ ಶನಿವಾರವನ್ನು ಬಹಳ ಕಾತರದಿಂದ ಕಾಯುತಿದ್ದೆವು.ಚಿಕ್ಕಮ್ಮ ಭಾನುವಾರದ ತಿಂಡಿ, ಇಡ್ಲಿ ಅಥವಾ ಖೊಟ್ಟೆಯ ಹಿಟ್ಟನ್ನು ರುಬ್ಬುವ ಕಲ್ಲಿನಲ್ಲಿ ರುಬ್ಬಿ ಕೊಡುತಿದ್ದರು. ಆ ಉದ್ದಿನ ಹಿಟ್ಟು ರುಬ್ಬುತ್ತಾ ಅವರು ನಮಗೆ ಚಂದ ಚಂದದ ರೋಮಾಂಚಕಾರಿ ಕಥೆಗಳನ್ನು ಸೃಷ್ಠಿ ಮಾಡಿ ಹೇಳುವುದಿತ್ತು. ನಮಗದುವೇ ದೊಡ್ಡ ಫ್ಯಾಂಟಸಿಯಾಗಿತ್ತು.ಈಗಲೂ ಚಿಕ್ಕಮ್ಮನ ನೆನಪಾದ ಕೂಡಲೇ, ಹಿಂದೆಯೇ ಅವರು ಹೇಳುವ ಕಥೆಗಳು, ಉದ್ದಿನ ಹಿಟ್ಟಿನ ವಾಸನೆ, ಆ ಅಡುಗೆ ಮನೆ. ಅಲ್ಲಿ ಕೂತ ನಾವು ಎಲ್ಲವೂ ಸಿನೆಮಾ ರೀಲಿನ ಹಾಗೆ.

ಹಾಡುಗಳ ಜತೆಯ ನೆನಪುಗಳಂತೂ ನಮ್ಮನ್ನು ಯಾವುದೋ ಲೋಕಕ್ಕೆ ಎಳಕೊಂಡು ಹೋಗುವುದು ಸುಳ್ಳಲ್ಲ.

ಹಾಡುಗಳೆಂದರೆ ಜೀವ ನನಗೆ. ಕನ್ನಡ, ಹಿಂದಿ, ಚಿತ್ರಗೀತೆ, ಭಾವಗೀತೆ, ಶಾಸ್ತ್ರೀಯ, ಹಿಂದುಸ್ಥಾನಿ, ಕರ್ನಾಟಕಿ, ಗಜ಼ಲ್, ಠುಮ್ರಿ, ಠಪ್ಪಾ, ಸೂಫಿ, ಖವ್ವಾಲಿ ..ಯಾವುದಾದರೂ ಸರಿ. ಇಡೀ ದಿನ ರೇಡಿಯೋ ಹಾಡುತ್ತಲೇ ಇರುತಿತ್ತು. ಆಮೇಲೆ ಟೇಪ್ ರೆಕಾರ್ಡರ್ ಬಂತಲ್ಲ. ಅದನ್ನು ಹೊತ್ತುಕೊಂಡೇ ತಿರುಗುತಿದ್ದೆ. ನಾನೆಲ್ಲಿ ಹೋಗ್ತೇನೋ ಅಲ್ಲಿ.


ಮತ್ತೆ.. ಯಾವುದಾದರೂ ಹಾಡು ಹಾಕುವುದಷ್ಟೇ.. ನಮ್ಮ ಮನೆಯಲ್ಲಿ ಎಲ್ಲರೂ ಸೇರಿ ನಮ್ಮ ನಮ್ಮ ರಾಗದಲ್ಲಿ ಅದಕ್ಕಿಂತ ಜೋರಾಗಿ ಹಾಡುತಿದ್ದೆವು. ಆದರೆ, ಯಾರೊಬ್ಬರೂ, ಯಾರಿಗೂ ಬಾಯಿ ಮುಚ್ಚು ಅಂತಿರಲಿಲ್ಲ.

ಅದೇ ಅಭ್ಯಾಸದಂತೆ, ಈಗಲೂ.. ಮಕ್ಕಳು ಯಾವುದಾದರೂ ಹಾಡು ಹಾಕಿದರೆ, ನಾನು ಹಾಡಲು ಹೋಗಿ ಬೈಯಿಸಿಕೊಳ್ಳುತ್ತೇನೆ. ಸಿನ್ಮಾ ಹಾಡನ್ನು ಭಜನೆಯ ಹಾಗೆ ಹಾಡ್ತೇನೆ ಅಂತ ಅವರ ಕಂಪ್ಲೇಂಟ್.
ಹಾಗಾಗಿ, ಕಷ್ಟ ಪಟ್ಟು ತಡೆದುಕೊಳ್ಳುತ್ತೇನೆ.

ಹಾಡುಗಳ ಜತೆಗಿನ ನೆನಪಿನ ಬಗ್ಗೆ ಹೇಳುವುದಾದರೆ ತುಂಬಾ ಇದೆ.

ನಮ್ಮ ಪಕ್ಕದ ಮನೆಯಲ್ಲಿದ್ದ ಲಿಲ್ಲಿಮಾಯಿ.. ಕೆಲಸ ಮಾಡಿ ದಣಿದಾಗ, ನಮ್ಮೂರ ಸೆಕೆಯ ಬೆವರಿಗೆ.. ಅವರ ಹಣೆಯ ಕುಂಕುಮ ಕರಗಿ ಮೂಗಿನ ಮೇಲೆ ಇಳಿಯುತಿತ್ತು. ಹಾಡುಗಳನ್ನು ಕೇಳಿ ಮಾತ್ರ ಗೊತ್ತಿತ್ತು. ಸಿನೆಮಾದ ದೃಶ್ಯ ಹೇಗಿತ್ತೋ ಗೊತ್ತಿಲ್ಲ. “ಕುಂಕುಮ ಹಣೆಯಲಿ ಕರಗಿದೆ” ಎನ್ನುವ ಹಾಡು ರೇಡಿಯೋದಲ್ಲಿ ಬರುವಾಗ.. ನನಗೆ ನೆನಪಾಗುವುದು ಲಿಲ್ಲಿ ಮಾಯಿ.


ಮೊನ್ನೆ ತುಂಬಾ ವರ್ಷದ ನಂತರ ಆ ಹಾಡನ್ನು ಕೇಳಿದಾಗ, ಮತ್ತೆ ಲಿಲ್ಲಿ ಮಾಯಿ, ಅವರ ಬಿಡುವಿರದ ಕೆಲಸಗಳು, ಅವರ ಮಕ್ಕಳು, ಅವರ ಅಮ್ಮ. ಎಲ್ಲರೂ ಬಂದರು ಹಿಂದೆ ಹಿಂದೆ.

“ಬೆಸುಗೆ .. ಲಲಲಲಾ,… ಬೆಸುಗೆ” ಹಾಡು ತುಂಬಾ ಚಂದ.
ಇಷ್ಟದ ಹಾಡು.ಆದರೆ ಒಮ್ಮೆ ಯಾವುದೊ ಪಾತ್ರೆ ತೂತಾಗಿದೆ ಎಂದು ಅಮ್ಮ ಇದಕ್ಕೆ ಬೆಸುಗೆ ಹಾಕಿ ತರಬೇಕು ಅಂದಿದ್ರು.ದೊಡ್ಡ ಹಿತ್ತಾಳೆಯದೋ, ತಾಮ್ರದ ಪಾತ್ರೆ ಅದು‌.ಅಲ್ಲಿಂದ ಆಮೇಲೆ.. ಬೆಸುಗೆ ಹಾಡು ಬಂದರೆ ಸಾಕು.. ನನಗೆ ರಾಶಿ ರಾಶಿ, ದೊಡ್ಡ, ಸಣ್ಣ ಹಿತ್ತಾಳೆ, ತಾಮ್ರ, ಎಲ್ಯೂಮಿನಿಯಮ್ ಪಾತ್ರೆಗಳ ನಡುವೆ ಬೆಸುಗೆ ಹಾಕಲು ಚಿಕ್ಕದೊಂದು ಸ್ಟೂಲ್ ಮೇಲೆ ಕೂತ ಸೋಜ಼ಾ ಮತ್ತು ಅವರ ಅಂಗಡಿಯೇ ಕಣ್ಣ ಮುಂದೆ ಬರುವುದು.

ಇನ್ನೊಂದು, ಹಿಂದಿ ಹಾಡು.
“ತೇರೆ ಘರ್ ಕೆ ಸಾಮನೆ, ಎಕ್ ಘರ್ ಬನಾವುಂಗಾ..”

ನನಗಾಗ ಪ್ರತೀ ಸಲ ಅನಿಸುವುದು. ಯಾರಾದರೂ ಇದೇ ರೀತಿ ನನಗಾಗಿ ಹಾಡಿದರೆ, ನಮ್ಮ ಮನೆಯ ಮುಂದೆ ಎಲ್ಲಿ ಮನೆ ಕಟ್ಟಿಸಬಹುದು? ನಮ್ಮ ಅಂಗಳದೊಳಗೋ?
ಎದುರಿಗಿದ್ದಿದ್ದು, ರೈಲ್ವೇ ಹಳಿ. ಏನು ಮಾಡ್ತಾನಪ್ಪಾ ಅವನು?..
ಅಥವಾ ಈ ಹಾಡೇ ಬೇಡ ಅಂತ ಬೇರೆ ಯಾವುದನ್ನು ಹುಡುಕಬಹುದು.?

ಇತ್ತೀಚೆಗೆ ಊರಿಗೆ ಹೋಗುವಾಗ ಹಳೆ ಹಾಡುಗಳನ್ನು ಒಂದಿಷ್ಟು, ಪೆನ್ ಡ್ರೈವ್‍ಗೆ ಹಾಕಿ ತಗೊಂಡು ಹೋಗಿದ್ದೆ.

ಪ್ರತಿಯೊಂದು ಹಾಡು ಕೇಳುವಾಗಲೂ ಹಳೆಯ ನೆನಪುಗಳು ಬಂದು ಆ ಕಾಲಕ್ಕೆ ಕೊಂಡೊಯ್ದವು.

**********

One thought on “ಲಹರಿ

Leave a Reply

Back To Top