ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ

ಡಿಸೆಂಬರ್…

ಮಾತನಾಡು!!
ಹೊರಟುಹೋಗುತ್ತಿರುವೆ ಸರಿ
ಆದರೆ…
ಗಾಜಾದ ಗಾಯದಂತೆ ನೋಯಿಸುತ್ತಿರುವೆಯಲ್ಲಾ!
ಎಲ್ಲರಂತೆಯೇ ನಾನು ನಿನಗೆ ವಿದಾಯ ಹೇಳಲಾರೆ!
ಮೊದಲು ನನಗೊಂದು ವಿಷಯ ಹೇಳು
ಡಿಸೆಂಬರ್ನಲ್ಲಿ ಯುದ್ಧವೇನಾದರೂ ಮುಗಿಯುವುದೆ?

ಸತ್ತುಹೋದ ಆ ಮಕ್ಕಳು…
ಸಮಾಧಿಗಳೊಳಗಿನಿಂದ ಮರುಜೀವ ಪಡೆದು
ಅಮ್ಮಂದಿರ ಮಡಿಲಲ್ಲಿ ಮುದ್ದಾಗಿ ನಲಿದಾಡುವವೆ?
ಹೋಗಲಿ ಪುಸ್ತಕಗಳನ್ನಿಡಿದುಕೊಂಡು ಶಾಲೆಗೆ ಹೋಗುವವೆ?
ಗಾಜಾದ ಬೀದಿಗಳಲ್ಲಿ ಅಂಗಲಾಚದೆ
ದಾನಿಗಳ ಗಾಡಿಗಳ ಹಿಂದೆ ಭಿಕ್ಷಾ ಪಾತ್ರೆಗಳಿಡಿದು ಓಡದೆ
ಒಲೆಯ ಮೇಲೆ ಅಮ್ಮನು ಸುಟ್ಟ ರೊಟ್ಟಿ ತಿನ್ನುವವೆ?
ಕುಸಿದ ಕಟ್ಟಡಗಳ ಅಡಿಯಲ್ಲಿ
ತಮ್ಮವರ ತುಂಡು ತುಂಡಾದ ರಕ್ತಸಿಕ್ತ ದೇಹಗಳಲ್ಲದೆ
ನಳನಳಿಸುವ ಜೀವಂತ ಮನುಷ್ಯರನ್ನು ನೋಡುವವೆ?
ಹೇಳು ಡಿಸೆಂಬರ್…?

ಆ ಮಕ್ಕಳು…
ಆಸ್ಪತ್ರೆಗಳಲ್ಲಿ ಮೈತುಂಬಾ ಸೂಜಿ ಚುಚ್ಚಿದರೂ
ಸುಟ್ಟುಹೋಗಿ ಬೊಬ್ಬೆಗಳು ಬಂದು ವಿಲವಿಲಾ ಒದ್ದಾಡದೆ
ಮನೆಯಲ್ಲಿ ರಜಾಯಿಯೊಳಗೆ ಬೆಚ್ಚಗೆ ನೋವಿರದೆ ನಿದ್ರಿಸುವವೆ?
ನಿದ್ದೆಯಲ್ಲಿ ಬಾಂಬುಗಳ ಶಬ್ದಗಳನ್ನಲ್ಲದೆ
ಅಪ್ಪಿಕೊಂಡಿರುವ ಅಮ್ಮನ ಎದೆಬಡಿತವನಾಲಿಸುತ ಎದ್ದೇಳುವವೆ?
ಆಕಾಶದಿ ಯುದ್ಧ ವಿಮಾನಗಳಲ್ಲದೆ
ಚಂದಮಾಮ, ಚುಕ್ಕಿಗಳಷ್ಟೇ ಇರುವವೆ?

ಆ ಮಕ್ಕಳು…
ಪ್ರಾಣಗಳನುಳಿಸಿಕೊಳ್ಳಲು ಭಯದಿಂದ ಅಳದೆ
ಉದ್ಯಾನವನಗಳಲಿ ನಗುನಗುತ ನಲಿದಾಡುವವೆ?
ಕೊನೆಯುಸಿರಿನಿಂದ ಕುಸಿದ ಕಟ್ಟಡಗಳ ಅಡಿಯಿಂದಲ್ಲದೆ
ಅಪ್ಪನ ಅಪ್ಪುಗೆಯಲ್ಲಿ ಭದ್ರವಾಗಿರುವವೆ?
ಹೇಳು ಡಿಸೆಂಬರ್…?

ಆ ಮಕ್ಕಳು…
ಗಾಜಾದಲ್ಲಿ ಅಳುತ್ತ, ನೀರಸವಾಗಿ
ಹಸಿವಿನಿಂದ, ಹರಿದ ಅರಿವೆಗಳಲ್ಲಿ
ವಲಸೆ ಹೋಗದೆ…
ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿರುವವೆ?
ಹೇಳು ಡಿಸೆಂಬರ್…?

ಲೋಕವೆಲ್ಲಾ…
ಹೊಸ ವರ್ಷದ ಶುಭಾಶಯಗಳ ಹಬ್ಬ ಆಚರಿಸುತ್ತಿದ್ದರೂ
ಈ ಕ್ಷಣ ಗಾಜಾದಲ್ಲಿ ಎಷ್ಟು ಬಾಂಬುಗಳು ಸ್ಫೋಟಗೊಂಡವೋ
ಎಷ್ಟು ಮಂದಿ ಉಸಿರು ಚೆಲ್ಲಿದರೂ ಅಲ್ವಾ…
ಹೇಳು ಡಿಸೆಂಬರ್…?
ಗಾಜಾದಲ್ಲೇನು ಮಾಡಲಿರುವೆ?

ಹಳೆಯ ಕೊಲೆಗಳು, ಮಾರಣಕಾಂಡಗಳು
ಹಸಿವಿನ ಸಾವುಗಳು, ಬಾಂಬುಗಳ ಬಿರುಮಳೆ
ಪ್ರವಾಹಗಳು, ವಲಸೆಗಳು, ದಹಿಸುವ ಅಗ್ನಿ ಕೀಲಗಳು (ಕೀಲ = ಬೆಟ್ಟ)
ಶವಗಳ ಗುಡ್ಡದ ನಡುವೆ ಶತ್ರುಗಳ ವಿಜಯೋತ್ಸವ ಉನ್ಮಾದದ ನೃತ್ಯಗಳು, ಹಾಡುಗಳು!
ಮತ್ತೊಂದು ಕಡೆ ಮಕ್ಕಳಿಗಾಗಿ ತಾಯಂದಿರು
ತಾಯಂದಿರಿಗಾಗಿ ಮಕ್ಕಳ ಹುಡುಕಾಟಗಳು
ಕೊರಳು ಬಿರಿಯುವ ರೋದನೆಗಳು
ಬೀದಿಗಳಲ್ಲಿ ನಡುಗುತ್ತಿರುವ ರಕ್ತಸಿಕ್ತ ದೇಹಗಳು
ಇವೇನೂ ಇರದ ಅಂದವಾದ ಗಾಜಾದೊಳಕ್ಕೆ
ಬೆಚ್ಚಗಿನ ಬೆಳಗ್ಗೆಗಳನ್ನು, ತಣ್ಣನೆಯ ರಾತ್ರಿಗಳನ್ನು
ಹೂಗಳರಳಿ ನಗುವ ತೋಟಗಳನ್ನು
ಖುಷಿಯಾಗಿ ಶಾಲೆಗೆ ಹೋಗುವ ಮಕ್ಕಳ ಬೀದಿಗಳನ್ನು
ಸಂಜೆಯ ನಮಾಜು ಅಜಾದಿಂದ ಪುಳಕಿಸುವ ಮಸೀದಿ ಗಲ್ಲಿಗಳನ್ನು
ಅಮ್ಮಂದಿರ ಅಡುಗೆಗಳಿಂದ ಘಮ್ಮೆನ್ನುವ ಅಡುಗೆಯ ಮನೆಗಳನ್ನು
ಮರಳಿಕೊಡುವೆಯಾ? ಹೇಳು ಡಿಸೆಂಬರ್…?

ಹೇಳು ಡಿಸೆಂಬರ್…?
ಮಾತನಾಡು ಡಿಸೆಂಬರ್…
ಸುಭಿಕ್ಷವಾದ, ಸುಭದ್ರವಾದ
ಆ ಗಾಜಾ ಮರಳಿಕೊಡುವ ಆಣೆ ಮಾಡುವೆಯಾ ಹೇಳು?
ನಿಶ್ಶಬ್ದವಾಗಿ ಹೊರಟುಹೋಗುವುದಲ್ಲಾ
ಆಣೆ ಮಾಡಿ ಹೋಗು
ಗಾಯಗಳಿಂದಲೇ ತುಂಬಿಹೋಗಿರುವ
ಶವಗಳು ನಡೆದಾಡುವ ಸ್ಮಶಾನ ಗಾಜಾವನ್ನಲ್ಲ!
ಅಂದವಾದ… ಜೀವಂತವಾದ ಮನುಷ್ಯರು ಹೂಗಳಂತೆ ಅರಳುವ ಗಾಜಾವನ್ನು ಮರಳಿಕೊಡು!
ಸೌಂದರ್ಯಭರಿತವಾದ ಗಜಲ್ಲಿನಂತಹ ಗಾಜಾವನ್ನು ಮರಳಿಕೊಡು…


One thought on “ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ

  1. ಕವಿತೆ ಪ್ರಕಟಿಸಿದ್ದಕ್ಕೆ ಸಂಗಾತಿಗೆ ಶರಣು

    ಧನಪಾಲ ನಾಗರಾಜಪ್ಪ

Leave a Reply

Back To Top