ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಹಾರುವಮನದ ಹಾಡು
ಮನಸೊಂದು ವಿಚಿತ್ರ ಹಕ್ಕಿ
ಹಾರುವದು ಎಲ್ಲೆಲ್ಲೊ ಭೇಟಿಯಾಗುವದು ಯಾರನ್ನೊ
ಎಷ್ಟೊ ವರ್ಷದ ಹಿಂದಿನ
ನೆನಪುಗಳ ಹೆಕ್ಕಿ
ಮಾಡುವದು ಗಾಯ
ಒಮ್ಮೊಮ್ಮೆ ಹಳೆಯ ಗಾಯಕೆ ಮುಲಾಮು ಒರೆಸಿ ಮಾಡುವದು ಮಾಯ
ಸುಮ್ಮನಿರೆಂದು ಯಾರು ಹೇಳಿಯಾರು ಇದಕೆ?
ಸದಾ ಜಿಗಿವ ಬಯಕೆ
ನಿನಗೆ ಅರವತ್ತು ಯಾಕೀಗ ಒಣ
ಹವಣಿಕೆ
ಎನ್ನುವದು ಕೆಲ ಆಪ್ತರಪ್ರಶ್ನೆಯ ಕುಣಿಕೆ
ಮನಕೆ ಹದಿನಾರರ ಲಂಗರು
ಇರುವದು ಹೇಳುವದು
ಹೇಗೆ ನಾಚಿಕೆ
ಹಾರೊ ಹಕ್ಕಿಯ ಬಯಸಿ ಹರಿವ ನೀರ ಮೂಲವನರಸಿ ಸಾಗುವದು
ಎಂದಿನಂತೆ
ಹಾಕಿದವ ಮನಕೆ ಬೇಲಿ,
ಸಂತ ಮಹಾಂತ …
ನನಗಂತೂ ಸಾಧ್ಯ ಇಲ್ಲ ಸ್ವಾಮಿ
ನಾನೊಬ್ಬ ಸಾಮಾನ್ಯ
ಸದಾ ಚಿಂತಿತ
ಏನನೊ ನೆನೆದು ಏನನೊ ಧ್ಯಾನಿಸಿ
ಸದಾ ಉರಿವ ಒಲೆ ನನ್ನ ಮನ
ಅದಕ್ಕೆ ಬೇಕು ಜಗದ ಧ್ಯಾನ!
ವೈ.ಎಂ.ಯಾಕೊಳ್ಳಿ