ಕಾವ್ಯ ಸಂಗಾತಿ
ರಮೇಶ್ ಎಂ ಗೊನಾಳ್
ನೆರಳಿಗಂಟಿದ ಮೌನ
ನೀ ಸುಳಿವ ದಾರಿಯಲಿ
ಹಂದರದ ನಗೆ ಚಿಮ್ಮಿ
ಅರಳಿದ ಕೆಂದಾವರೆ
ಬಾಡದಿರಲಿ
ಅಬ್ಬರದ ತೂಫಾನಿನ
ನಡು ಮಧ್ಯಾಹ್ನ ಸುರಿವ
ಅಕಾಲಿಕ ವರುಣನಾಗಿ ಬರುವೆಯ ಮನದ ಹೂದೋಟಕೆ
ನೀ ಸವೆದ ಹಾದಿಯಲಿ
ಬಿಟ್ಹೋದ ಹೆಜ್ಜೆಯ
ಗೆಜ್ಜೆ ಸದ್ದು
ನೆರಳಿಗಂಟಿದ ಮೌನ
ರಾಗವಾಗಿ ಹಾಡುತಲಿದೆ
ನಿನದೇ ಗುಂಗಿನಲಿ…!
ಆ ನಿನ್ನ
ಒಲವಿನ ಪಾದ ಮುದ್ರೆಗಳ
ಹೆಜ್ಜೆ ಸಾಗಿದೆ
ನಿನ್ನೂರ ದಾರಿಯೆಡೆಗೆ
ಅದ್ಯಾವ ಮೆಟ್ಟಿಲುಗಳ
ಮೆಟ್ಟಿ ಏರುವುದೋ!?
ಆ ನಿನ್ನ ಜೊತೆ ಪ್ರೇಮ ಸೌಧವ
ನಿನ್ನ ಬಿರುಸು ನಡೆಯ
ಕಾಲಧೂಳಿಂದ
ದೂರತೀರದ
ದಾರಿಯೇ ಕಾಣುತ್ತಿಲ್ಲ..!
ಕಣ್ಣೋಟದ ಕನ್ನಡಿ ರಾಚಿದಷ್ಟು
ನಿನ್ನ ಬಿಂಬದ ಬಯಲೇ ಬಯಲು
ನಿನ್ನ ನೆನಹುಗಳ ಹೊರತಾಗಿ
ಇನ್ನೇನೂ ಉಳಿದಿಲ್ಲ
ಹೂನಗೆಯ ಹಣತೆ ಹಚ್ಚಲು
ಕನಸುಗಳ ತಬ್ಬಿ
ಹಬ್ಬುತಲೇ ಇದೆ
ಪ್ರೇಮಾಂಕುರದ ಬಳ್ಳಿ…
ನೀನು ನನ್ನೊಳೊಗೋ
ನಾನು ನಿನ್ನೊಳಗೋ …!
ರಮೇಶ್ ಎಂ ಗೊನಾಳ್
Super sir we’ll written by ur novels