ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಮೌನ ಪ್ರೇಮಿಗೆ

ಕೇಳದೇ ನೀ ಬಂದೆ
ಹೇಳದೆ ಜೊತೆಯಾದೆ
ನಿನ್ನ ರೀತಿಗೆ ನಾ ಮರುಳಾದೆ
ನಿನ್ನ ಪ್ರೇಮದ ದಾಸಿಯಾದೆ

ನೀ ನಗುವಾಗ ಆ ಮಲ್ಲಿಗೆ
ಬಿರಿದಂತೆ ಅನಿಸುವುದು ನನಗೆ
ಮುಗುಳ್ನಗಲು ನೀ ಮೆಲ್ಲಗೆ
ಪರಮಾನಂದವು ನನಗೆ

ಪಿಸುಮಾತು ನೀ ನುಡಿವಾಗ
ನನ್ನ ಮನದಿ ಅರುಣರಾಗ
ಸಾವಧಾನದಿ ನೀ ನಡೆವಾಗ
ಹಿಂಬಾಲಿಸಿದೆ ನಾನಾ ಮಾರ್ಗ

ನೀನಿರಲು ಜೊತೆಯಲ್ಲಿ
ನಾ ತೇಲುವೆ ಪರದಲ್ಲಿ
ಮಾತು ಮರೆಯಾಗಿ ಮೌನದಲ್ಲಿ
ಪದಗಳಿಲ್ಲದ ತನನ ಮನದಲ್ಲಿ

ನೀ ಕಾಣದಿರೆ ನನಗೆ ಆತಂಕ
ಮತ್ತೆ ನಿನ್ನ ಕಾಣುವ ತವಕ
ನಿನ್ನ ನೋಡುವ ತನಕ
ಹೃದಯದಿ ಧಿಮಿತಕ

ಹೇ ಎಲ್ಲಿರುವೆ ನೀನೀಗ
ಕೇಳಿಸದೆ ಮನದರಾಗ
ಮುರಿದು ನಿನ್ನ ಮೌನರಾಗ
ಸಂತೈಸು ನನ್ನ ಬಂದು ಬೇಗ

ಹೇಳದೆ ಮರೆಯಾಗದಿರು
ಹೇಳಿ ದೂರವಾಗದಿರು
ಕೇಳಿ ಮುಂದುವರಿಯದಿರು
ಕೇಳದೆ ಬಂದು ನನ್ನ ನೀ ಸೇರು


Leave a Reply

Back To Top