ಜನೆವರಿ ಒಂದು ಅಂದ್ರ ಎಲ್ಲರೂ ಹೊಸ ವರ್ಷದ ಆಚರಣೆ ಸಂಭ್ರಮದಲ್ಲಿ ಇರೋರು. ಆದ್ರ ನಾವು ಕ್ಯಾಲೆಂಡರ್ ಹೊಸ ವರ್ಷದ ಆಚರಣಿ ಮಡ್ಲಾರದೆ ಯುಗಾದಿಗಿ ಹೋಸ ವರ್ಷ ಅನ್ನಬೇಕು ಅನ್ನೋ ಧೋರಣೆಯವರು. ಇರಲಿ ವರ್ಷಗಳು ಮುಂದಕ್ಕ ಹೋಗತಾ ಇರತಾವ.ನಾವೂ ಅವುಗಳೋಂದಿಗಿ ಮುಂದಕ್ಕ ಹೋಗತಿರತಿವಿ , ವಯಸ್ಸಿನಲ್ಲಿ , ಆದ್ರ ನಮ್ಮ ವಿಚಾರ , ಸಾಧನೆ, ಬದಲಾವಣೆ ಇವುಗಳನ್ನ ಎಷ್ಟರ ಮಟ್ಟಿಗಿ ಮುಂದುವರೆಸ್ತಿವಿ ..! ಇದು ನಮಗ ಬಿಟ್ಟದ್ದು. ಎಲ್ಲರ ಗೂಡ ನಾವು ಎರಡಸಾವ್ರದ ಇಪ್ಪತೈದನೆ ಇಸ್ವಿಗಿ ಬರಮಾಡಕೊಂಬರಿ. ಖುಷಿಗಿ ಒಂದು ಕಾರಣ ಬೇಕು. ಯಾರರೆ ಖುಷಿ ಆಚರಸ ್ತಾರಂದ್ರ ಅವ್ರ ಜೋಡಿ ನಾವೂ ಭಾಗಿ ಆದ್ರ ಆಯ್ತಪ. ಅದು ಯುಗಾದಿಗಿ ಹೋಸ ವರ್ಷ ಮಾಡೋರರೇ ಆಗಿರ್ಲಿ. ಜನವರಿ ಒಂದಕ್ಕರೆ ಮಾಡೋರಾಗಿರ್ಲಿ. ಆದ್ರ ನಮ್ಮ ಹರೆದ ಪಾರಗೋಳ ರಾತ್ರಿ ಎಲ್ಲಾ ಕುಡದು ಬೈಕ ಎರ್ರಾ ಬಿರ್ರಿ ಓಡಾಡಸ್ಕೋಂತ ಹೋಸ ವರ್ಷ ಮಾಡತಿದ್ರ ಆತಂಕ ಆಗತದ. ಆದ್ರ ಹರೇದ ರಕ್ತದ ಅವ್ರು ಯಾರ ಮಾತು ಕೇಳತಾರ. ತಂದಿ ತಾಯಿಗಳ ಚಿಂತಿ ಅವ್ರಿಗೊಂದಿಷ್ಟು ಅರಿವು ಇದ್ರ ಸಾಕು.

ಈಗ ಎಲ್ಲಾ ಕಡಿ ಮದುವೆ ಸೀಸನ್ , ಹಂಗ ನೋಡ್ದರ ಈಗಿನ ಕಾಲದಾಗ ಮದುವಿ ಮಾಡ್ಲಕ ಇಂತದೇ ಸೀಸನ್ ಇರಬೇಕು ಅಂತೇನಿಲ್ಲ ಬಿಡ್ರಿ.ಯಾಕಂದ್ರ ಹಳ್ಳಿಗಳದಾಗೂ ಫಂಕ್ಷನ್ ಹಾಲ್ ಗಳು ಆಗ್ಯಾವ.ಯಾವ ಸಮಾರಂಭ ಮಾಡ್ಲಿಕ್ಕೂ ಮಳಿ ಚಳಿಗಿ ಅಂಜದಿಲ್ಲ ಈಗ. ಮನೆವ್ರೆಲ್ಲ ರೆಡಿ ಆಗಿ ಫಂಕ್ಷನ್ ಹಾಲ್ ಗಿ ಹೋಗಿ ಕಾರಣ ಮಾಡ್ಕೊಂಡು ಬಂದ್ರಾಯ್ತು.

ನಮ್ಮ ದೇಶದ ಆರ್ಥಿಕತೆಗೆ ಮದುವೆ ಖರ್ಚು ವೆಚ್ಚಗಳಿಗಿ ಎಷ್ಟೋ ಮಿಲಿಯನ್ ಹಣದ ವಹಿವಾಟು  ಅದ ಅಂತ. ಚೀನಾ ನಂತರ ಮದುವೆಗಳಿಗೆ ಹಣ ಖರ್ಚು ಮಾಡೊದ್ರಾಗ ಭಾರತ ಎರಡನೇ ಸ್ಥಾನ ದಾಗ ಅದ ಅಂತ. ನಮ್ಮ ದೇಶದಾಗ ತಂದಿತಾಯಿಗಳು ತಮ್ಮ ಹೆಣ್ಣ ಮಕ್ಕಳಿಗಿ ವಿದ್ಯಾಬ್ಯಾಸಕ್ಕ ಹಣ ಖರ್ಚು ಮಾಡ್ಲಿಕ್ಕ ಲೆಕ್ಕ ಹಾಕತಾರ. ಆದ್ರ ಮಗಳ ಮದುವಿ ಮಾಡಿ ಕುಡಲಾಕ ಅಷ್ಟು ಲೆಕ್ಕ ಹಾಕಲ್ಲ ನೋಡ್ರಿ. ಹೆಣ್ಣ ಮಗು ಹುಟ್ಟದೆ ತಡ ಅದ್ರ ಮದುವಿ ಬಗ್ಗೆನೆ ವಿಚಾರ ಮಾಡ್ತಿವಿ. ಈಗ ಕಾಲ ಬದಲಾಗೇದ , ಹೆಣ್ಣ ಮಕ್ಳಿಗೂ ಓದಸಲತಾರ. ಎಷ್ಟೇ ಖರ್ಚು ಮಾಡಿ ಓದಿಸಿದ್ರೂ ಮತ್ತ ಮದುವಿಗಿ ಖರ್ಚು ಮಾಡ್ಲೇ ಬೇಕಾಗತದ. ವರದಕ್ಷಿಣಿ ವರೋಪಚಾರ ಇವೆಲ್ಲ ಇರಲಾರ್ದ ಯಾವ ಮದುವಿ ಆಗತವ..!

ಇದೆಲ್ಲದರ ಜೋಡಿ ನಾವು ಭಾಳ ಅನುಕರಣೆಗೆ ಒಳಪಡತಿವ್ರಿ. ಅವ್ರು ಮಾಡ್ಯಾರಂತ ಇವರು , ಇವ್ರು ಮಾಡ್ಯಾರ ..ಇವ್ರಿಗಿಂತ ಜೋರ್ ಮಾಡರಿ ನಾವು , ಅನ್ನೋ ಆಪೇಕ್ಷೆ.ಈಗ ಎಲ್ಲರೂ ಆರ್ಥಿಕ ವಾಗಿ ಸದೃಢರಾಗಿದ್ದಾರ. ಉಳ್ಳವ್ರು ಖರ್ಚು ಮಾಡತಾರ , ಇರಲಾರದವ್ರು ಸಾಲ ಸೋಲ ಮಾಡಿ ಖರ್ಚು ಮಾಡ್ಲಕ್ಕೂ ಲೆಕ್ಕಹಾಕೋದಿಲ್ಲ. ಒಟ್ಟ ಮದುವಿ ಅದ್ದೂರಿ ಆಗಬೇಕು ಅಷ್ಟ. ಒಂದು ನಾಲ್ಕು ಜನ್ರಿಗಿ ಕರದು ಮದುವಿ ಶಾಶ್ತ್ರ ಮಾಡರಿ ಅಂತ ಯಾರು ಇಷ್ಟ ಪಡಲ್ಲ . ಬೇಕಾದವ್ರಿಗಿ ಬ್ಯಾಡಾದವ್ರಿಗಿ ಒಟ್ಟು ಒಂದೆರಡು ಸಾವ್ರ ಜನರಿಗಿ ಕರದು ಮದುವಿ ಊಟ ಹಾಕಿಸಿದ್ರ ಜೋರ್ ಮದುವಿ ಮಾಡಿದಂಗ ನೋಡ್ರಿ. ಒಬ್ಬರ್ದು ನೋಡಿ ಒಬ್ಬರ ಮಾಡೋ ಎಲ್ಲಾ ಸಮಾರಂಭಗಳು ಅದ್ದೂರಿನೆ ಆಗಿರತಾವ ಈಗ. ಸಾಲ ಆದ್ರ ಮುಂದ ನೋಡರಿ , ಅನ್ನೊ ಉಢಾಫೆ.

ಅದ್ಕ ನಮ್ಮ ದೇಶದ ಹೆತ್ತವರು ತಮ್ಮ ಮಕ್ಕಳಿಗಿ ಮದುವಿ ಮಾಡೋದೆ ಒಂದು ದೊಡ್ಡ ಜೀವಮಾನದ ಸಾಧನೆ ಆಗ್ತಾದ. ವರದಕ್ಷಿಣೆ ಇಲ್ದ ನಮ್ಮ ಬೀದರ ಕಲಬುರಗಿ ಕಡಿ ಮದುವಿನೆ ಆಗಲ್ಲ. ಈಗೀನ ಹುಡುಗನ ಕಡಿಯವ್ರೂ ಬಾಯಿ ಬಿಟ್ಟು ವರದಕ್ಷಿಣೆ ಕೇಳದಿದ್ರೂ ಬಂಗಾರ ನಿಮ್ಮ ಮಗಳ ಮ್ಯಾಲ ಹಾಕಿ ಮದುವಿ ಮಾಡ ಕೋಡ್ರಿ ಅಂತ ಪರೋಕ್ಷವಾಗಿ ಹೆಳತಾರ. ಅವ್ರೂ ಕೆಳ್ದೆ ಇದ್ರೂ ಹೆಣ್ಣು ಹೆತ್ತವ್ರು ತಮ್ಮ ಮಗಳಿಗಿ ಖಾಲಿ ಕಳಸಲ್ಲರಿ.ತಮಗಾದಷ್ಟು ಕೊಟ್ಟು ಮದುವಿ ಮಾಡತಾರ.

ಈ ವರದಕ್ಷಿಣೆ ಎಂಬುದು ನಮ್ಮ ಸಮಾಜದಾಗ ಒಂದು ಪಿಡುಗು ಅಂತಿವಿ. ಇರಲಿ . ಹೆಣ್ಣು ಹೆತ್ತವ್ರು ನನ್ನ ಮಗಳಿಗೂ ನಮ್ಮ ಆಸ್ತಿದಾಗ ಅರ್ಧ ಪಾಲು ಕೊಡತಿವಿ ಅಂತ ಧೈರ್ಯ ಮಾಡಿ ಹೇಳತಾರೇನು..! ಇಲ್ಲ . ಹುಂಡ ಕೇಳದು ತಪ್ಪಂದ್ರ ನಾವು ನಮ್ಮ ಹೆಣ್ಣು ಮಕ್ಕಳಿಗೂ ಗಂಡ ಮಕ್ಕಳ  ಜೋಡಿ  ಆಸ್ತಿದಾಗ ಸಮ ಪಾಲು ಕೊಡಬೇಕು.ಆಗ ವರದಕ್ಷಿಣೆ ಕೋಡೋದು ತಗೊಂಬದು ತಾನೆ ಕಮ್ಮಿ ಆಗತದ. ಕೊಟ್ಟು ಹೆಣ್ಣು ಕುಲಕ್ಕ ಹೋರಗ ಅಂತ ಮದುವಿದಾಗ ಅವ್ಳಿಗಿ ಏನು ಕೊಡತಿವೋ ಅಷ್ಟೆ ಖರೆ. ಮದ್ವಿ ಆದ ಮ್ಯಾಲ ಅವ್ಳು ತವರ ಮನಿಗಿ ನೆಂಟ್ತಿ ಆಗತಾಳ. ಬಂದು ತವರಿನಾಗ ನಾಲ್ಕು ದಿನ ಇರಬೇಕಂದ್ರೂ ಪರಕೀಯ ಭಾವ ಬಂದಬಿಡತದ.

ಎಲ್ಲರ ಪರಿಸ್ಥಿತಿ ನೂ ಬ್ಯಾರೆ ಬ್ಯಾರೆ. ಆದ್ರ ಈಗ ಎಲ್ರಿಗೂ ಇರೋದೆ ಎರಡೆರಡು ಮಕ್ಳು. ಹೆತ್ತವ್ರು ತಮ್ಮ ಇರೋ ಒಂದು ಹೆಣ್ಣ ಮಗಳಿಗಿ ಓದಿಸಿ ಅವ್ರು ಕೆಳಿದಷ್ಟು ವರದಕ್ಷಿಣೆ ಕೊಟ್ಟು ಮದುವಿ ಮಾಡಕೊಡಲಾಕ ಲೆಕ್ಕ ಹಾಕಲತಿಲ್ಲ. ಆದ್ರ ಇನ್ನೂ ಎಷ್ಟೋ ಹೆಣ್ಣು ಮಕ್ಕಳು ಆರ್ಥಿಕ ವಾಗಿ ಸ್ವಾವಲಂಬನೆ ಇಲ್ದೆ ಗಂಡನ ಮ್ಯಾಲ ಅವಲಂಬಿತರಾಗಿರೋರು ಹರ. ತವರ ಮನ್ಯಾಗ ಎಷ್ಟೇ ಆಸ್ತಿ ಇದ್ರು ಅದೆಲ್ಲ ಅವ್ಳ ಅಣ್ಣ ತಮ್ಮದಿರ ಸ್ವತ್ತು. ಇಲ್ಲಿ ಗಂಡು  ಮಕ್ಕಳಿಗಿ  ಬ್ಯಾಡ ಅಂತ ಹೇಳತಿಲ್ಲ. ತಂದಿ ತಾಯಿಗಿ ನೋಡಕೊಳ್ಳೋರು ಅವ್ರೆ ಆಗಿರತಾರ. ಅವ್ರು ಸ್ವಲ್ಪ ಹೆಚ್ಚೆ ಆಸ್ತಿ ಇಟ್ಟಕೊಳ್ಲಿ. ಆದ್ರ ಮನಿ ಮಗಳಿಗಿ ಆಸ್ತಿ ಬ್ಯಾಡ ಎಲ್ಲಾ ನಮಗೆ ಇರಲಿ ಅಂದ್ರ ಅದು ದುರಾಸೆ. ಬೇಕಾದದ್ದು ಕೋರ್ಟ್ ಕಚೇರಿ ಮೂಲಕ ತಗೊಂಡ್ರ ಸಂಭಂಧಗಳಿಗಿ ತಿಲಾಂಜಲಿ ಇಟ್ಟಂಗ. ಅಣ್ಣತಮ್ಮಂದಿರಗಿ ಅನ್ನೊದಕ್ಕಿಂತ ತಂದಿತಾಯಿ ತಮ್ಮ ಹೆಣ್ಣಮಕ್ಕಳ ವಿಚಾರ ಮಾಡಬೇಕು. ಹೆತ್ತವ್ರು ಹೆಣ್ಣ ಮಗಳು ಗಂಡ ಮಗ ಅಂತ ಭೇದ ಭಾವ ಮಾಡ್ದೆ ಇರಬೇಕು.

ಹಾಗಂತ ಮಗ ಸೋಸಿ ಏನಾರ ಮಾಡಕ್ಕೋಳಿ.ನಾವು ಗಳಸಿದ್ದು ಅರ್ಧ ಮಗಳಿಗಿ ಕೊಡತಿವಿ ಅನ್ನೊದು ತಪ್ಪು. ಪರಿಸ್ಥಿತಿ ಗಿ ಅನುಗುಣವಾಗಿ ಸಹಾಯ ಮಾಡುವ ಮನಸ್ಸಿರಬೇಕು.ತವರಿನ ಆಸ್ತಿ ತಗೊಂಡ ಮ್ಯಾಲ ಹೆಣ್ಣು ಮಗಳು ತನ್ನ ತಂದಿತಾಯಿಯರ ಜವಾಬ್ದಾರಿನೂ ತಗೋಬೇಕಾಗತದ. ಇಲ್ದಿದ್ರ ಅಣ್ಣ ಅತ್ತಿಗಿ ಸುಮ್ನ ಇರತಾರೇನು..ಆಗ ತನ್ನ ಅತ್ತಿ ಮಾವ , ಮತ್ತ ತಂದಿ ತಾಯಿಯರ ಜವಾಬ್ದಾರಿ ಭಾರ ಅನಸ್ತದ. ಅದ್ಕ ತವರ ಮನ್ಯಾಗ ಆಸ್ತಿ ಇದ್ರ ಅಣ್ಣ ತಮ್ಮದೇರು ಹೆಚ್ಚು ಇಟ್ಕೊಂಡು ಹೆಣ್ಣ ಮಗಳಿಗೂ ಸ್ವಲ್ಪ ಕೊಡ್ಲಿ.ಅಥವಾ ವರದಕ್ಷಿಣೆ ವರೋಪಚಾರ ಅಂತ ತವರ ಮನಿದು ಹಣ ಆಸ್ತಿ ಅರ್ದ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಮಗಳಿಗಿ ಕೋಡೊದು ಒಳಿತೆ.

ನಾನು ವರದಕ್ಷಿಣೆ ಪರನೂ ಇಲ್ಲ ವಿರೋಧನೂ ಇಲ್ಲ. ಆದ್ರ ವರದಕ್ಷಿಣೆ ಗಾಗಿ ಕಿರುಕುಳ ಕೊಡೊದಾಗ್ಲಿ , ಡಿಮ್ಯಾಂಡ್ ಮಾಡೊದಾಗ್ಲಿ ವಿರೋಧಿಸ್ತಿನಿ. ಇದ್ದಷ್ಟು ಆಸ್ತಿ ಎಲ್ಲಾ ಗಂಡ ಮಕ್ಕಳಿಗಿ ಮಾತ್ರ , ಹೆಣ್ಣ ಮಕ್ಕಳಿಗಿ ಒಂದಿಟು ವರದಕ್ಷಿಣೆ ಕೊಟ್ಟು ಮದಿವಿ ಮಾಡ್ದರ ಆಯ್ತು ,  ನಮ್ಮ  ಜವಾಬ್ದಾರಿ ಮುಗೀತು ಅಂಬೋ ಹೆತ್ತವರ ಮನಸ್ಥಿತಿ ಗೂ ನನ್ನ ಅಸಮಾಧಾನ ಅದ. ಅದಲ್ದ ನಾವು ನಮ್ಮ ಮಗಳಿಗಿ ಎಲ್ಲಾ ಮಾಡ್ತಿವಿ ,  ಮಗ ಸೋಸಿ ಅವ್ರರು ಗಳಿಸಿ ಅವ್ರು ಇಟ್ಟಕೊಳ್ಳಿ ಅಂಬೋ ಹೆತ್ತವರ ಆಶಾಢಬೂತಿನು ವಿರೊಧಿಸ್ತಿನಿ.

ಈಗ ಮದುವೆಗಳಿಗೆ ಹೆತ್ತವರು ಮಾಡೋ ಖರ್ಚು ನೋಡ್ದರ ಗಾಬರಿ ಆಗತದ. ಉಳ್ಳವರ ಮದುವೆಗಳಂತೂ ಲಕ್ಷಗಳು ದಾಟಿ ಕೋಟಿಗಳಲ್ಲಿ ಆಗಲತದ.ಅದು ಅನಿವಾರ್ಯ ವೋ , ಆಸಕ್ತಿಯೋ , ಪ್ರೇಸ್ಟೀಜೋ , ಗೊತ್ತಾಗವಲ್ದು. ಎಲ್ಲಾ ಮದುವಿಗಳು ಅದ್ದೂರಿ. ಸಾವಿರಾರು ಜನ. ಸಾಲ ಮಾಡಿಯಾದ್ರು ತುಪ್ಪ ತಿನ್ನು ಅನ್ನೊಹಂಗ , ಸಾಲ ಮಾಡಿಯಾದ್ರೂ ಅದ್ದೂರಿ ಮದುವೆ ಮಾಡು ಅಂಬಂಗ ಆಗ್ಯಾದ. ಒಬ್ಬರಿಗಿ ನೋಡಿ ಒಬ್ಬರು ಅನುಸರಿಸೋ ಈ ಪದ್ದತಿಗಳಿಂದ ಲಾಭ ಆಗತಿರೋದು ನಮ್ಮ ದೇಶದ ಆರ್ಥಿಕತೆಗೆ.ಒಂದು ಮದುವೆ ಅಂದ್ರ ನೂರಾರು ಉದ್ಯೋಗಾವಕಾಶಗಳು ಒದಗತಾವ .  ಕೆರೆಯ ನೀರು ಕೆರೆಗೆ ಚಲ್ಲು ಎಂಬಂತೆ ಗಳಿಸಿದ್ದೆಲ್ಲ ಅದ್ದೂರಿ ಮದುವೆಗೆ ಖರ್ಚು ಮಾಡ್ರಿ ಎಂಬ ಹೇಳಿಕೆ ಪ್ರಚಲಿತ ಆಗ್ಯಾದ ನೋಡ್ರಿ.

ಈಗಿನ ಜನರೇಶನ ಮಕ್ಳು ಸಿಂಪಲ್ ಅನ್ನೊದಕ್ಕ ಒಪ್ಪೋದೆ ಇಲ್ಲ ನೋಡ್ರಿ. ತಂದಿ ತಾಯಿ ಹತ್ರ ಅದ ಇಲ್ಲ ಅಂತ ಚಿಂತಿನೆ ಮಾಡಲ್ಲ , ಅವರ ಆಸಿ ಪೂರಾ ಆಗ್ಬೇಕು ಅಷ್ಟೆ. ಇದ್ರಾಗ ಅವ್ರ ತಪ್ಪು ಇಲ್ಲ ಬಿಡ್ರಿ. ಎಲ್ಲಾ ಮಾಡದು ನಿಮ್ಮ ಸಲ್ಯಾಕ ಅಂತ ಅವರಿಗಿ ಹೇಳಿ ಅಟ್ಟಕ್ಕ ಏರಿಸಿರತಿವಿ. ಅವ್ರಿಗಿ ಇಲ್ಲ ಅಂತ ಕೇಳೋ ಅವಕಾಶನೆ ಕೊಡಂಗಿಲ್ಲ. ಅದ್ಕ ಅವ್ರಿಗಿ ತಂದಿ ತಾಯಿ ಅಂದ್ರ ಎಟಿಎಮ್ ಮಶಿನ್ ಗಳಿದ್ದಾಂಗ. ಈ ಮದುವಿ ವಿಷಯಗಳದಾಗ ಅವ್ರು ಹೆಳ್ದಂಗೆ ನಡಿಬೇಕು. ತಂದಿತಾಯಿಗಳು ನಡಸ್ತಾರ ಕೂಡ .

ಈ ರೀತಿ ಅದ್ದೂರಿ ಮದುವೆಗಳ ಅಡಂಬರ ಬಿಡಬೇಕಂದ್ರ ಗಂಡು ಹೆಣ್ಣು ಇಬ್ಬರ ಕಡಿಯವ್ರು ಮನಸ್ಸು ಮಾಡಬೇಕು . ಒಬ್ಬರು ಸಿಂಪಲ್ಲ ಇರ್ಲಿ ಅಂದ್ರ ಮತ್ತೊಬ್ರು , ಐ ,ಮದುವಿ ಏನು ಮತ್ತ ಮತ್ತ ಆಗತದೇನ್ರಿ . ಜೀವನ್ದಾಗ ಆಗೋದೆ ಒಮ್ಮ . ರೊಕ್ಕಕ್ಕ ಲೆಕ್ಕ ಹಾಕ್ದರ ಹ್ಯಾಂಗ..ಅಂತ ಅಸಮಾಧಾನದ ಮಾತಾಡತಾರ. ಇಲ್ಲಿ ಪ್ರಬುಧ್ದರಾದ ಹುಡುಗ ಹುಡುಗಿಯರಯ ನಿರ್ಧಾರ ತಗೋಬೇಕು. ಲಕ್ಷಾಂತರ ರೂ ಗಳು ಬಟ್ಟೆ , ಪೋಟೋ ಶೂಟ್ , ಹೂ , ಮೇಕಪ್ ಅಂತ ಮಾಡೋ ಖರ್ಚು  ಉಳಿಸಿಕೊಂಡು ತಮ್ಮ ಮುಂದಿನ ಭವಿಷ್ಯಕ್ ಕಾಯ್ದಿರಸಿದ್ರ..ಆದ್ರ ಮತ್ತೊಬ್ಬರ ವಿಚಾರನೆ ಬ್ಯಾರೆ. ಜೀವನದಾಗ ಇವೆಲ್ಲ ಒಮ್ಮೆ ಬರತಾವ್ರಿ ..ಮೊನ್ನ ನೋಡಿದ್ರಲ್ಲ ಪಾಟಿಲ್ರು ಮಗಳ ಮದಿ ಎಷ್ಟು ಖರ್ಚು ಮಾಡಿ ಮಾಡ್ದರು..ಅನ್ನೋ ಉದಾಹರಣೆ.  ಅಲ್ಲಿ ಮತ್ತೆ ಅನುಕರಣೆ.

ಇದ್ರ ಜೋಡಿ ನಮ್ಮ ಸಿನಿತಾರೆಗಳ ಮತ್ತು ಸೆಲಿಬ್ರಿಟಿಗಳ ಮದುವೆಗಳ ವಿಡಿಯೋ ನೋಡಿ  ಈಗೀನ ಯುವ ಜನಾಂಗ ಅನುಕರಣೆ ಮಾಡ್ತಾರ. ಒಟ್ಟಿನಲ್ಲಿ ಮತ್ತೊಬ್ರದ್ದ ನೋಡಿ ಬದಿಕೋ ಕಾಲ ಇದು.
ಕಾಲಾಯಃ ತಸ್ಮ ನಮಃ.

̲——————————————————————————-

2 thoughts on “

  1. ಬದುಕು ಅನುಕರಣಾಯುತವೇ, ಆಡಲು,ಓಡಲು ನಡೆಯಲು,ಉಡಲು,ಉಣ್ಣಲು ಕಲಿತಿದ್ದು ಅನುಕರಣೆಯ ಮೂಲಕವೆ.
    ಅನುಕರಣೆಯ ಜೊತೆಗೆ, ತನ್ನ ತನವನ್ನೂ ರೂಢಿಸಿಕೊಂಡು ಬದುಕುವುದೇ ಭಿನ್ನತೆಯ ಬೀಜ. ಊಟ ಅನುಕರಣೆ ಆದರೆ ನನಗೆ ಇಷ್ಟವಾದುದು, ಮತ್ತು ಸಹಜವಾದದ್ದು, ಸಾಧ್ಯ ಆದದ್ದು ನಾನು ಉಣುತ್ತೇನೆ.
    ಹೀಗೇ ಹಲವು ಅನುಕರಣೆ ಎನ್ನಿಸಿದರೂ ನಮ್ಮತನ ಬೆಳೆಸಿಕೊಂಡಿರುತ್ತೇವೆ. ವಿವಾಹ ಕೂಡ ನಮಗೆ ಒಗ್ಗುವ,ಒಪ್ಪುವ,ನಿಮಗೆ ಸಾಧ್ಯ ಎನಿಸುವ ದಾರಿಯಲ್ಲಿ ಇರಬೇಕು. ಹಾಗಾಗುತ್ತಿಲ್ಲ ಏಕೆ? ಆಡಂಬರದ ಜೀವನಾನುಕರಣೆ ಒಳ್ಳೆಯದಲ್ಲ . ಹುಡುಗರಿಗಿಂತ ಹುಡುಗಿಯರು ಇದರಲ್ಲಿ ಬಹಳ ಮುಂದೆ ಇದ್ದಾರೆ.
    ಸರಳತೆ ರೂಢಿಸಿಕೊಳ್ಳುವುದು ಒಳಿತು ತನ್ಮೂಲಕ ಪಾಲಕರ ಮೇಲಿನ ಹೊರೆ ಕಡಿಮೆ ಮಾಡಬಹುದು

Leave a Reply

Back To Top