ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಮೋಜು ಮಸ್ತಿಗಳೇ…
ಆರಂಭದ ಮುನ್ನುಡಿಯಾದರೆ?
ಕಳೆದು ಹೋಗಲಿ ಬಿಡು,ನೂರು ಚಿಂತೆಗಳು,ಚಿಂತನೆಗಳು ಹೇಳಹೆಸರಿಲ್ಲದೆ ಕಣ್ಮರೆಯಾಗುವ ಸಚಿತ್ರಭಾವಗಳು!. ಅಯ್ಯೋ.. ಇದೆಂತಹ ಭಾವನೆಯನ್ನದಿರಿ!. ಇದೊಂದು ಕೃತಕ ಮನಸಿನ ಸಮಭಾವಚಿತ್ತ ಅಷ್ಟೇ!. ವರ್ಷದ ಹನ್ನೆರಡು ತಿಂಗಳು ಅಂದರೆ ೩೬೫ ದಿನಗಳು ಹೇಗೆ ಕಳೆದವು? ಪ್ರತಿ ತಿಂಗಳ ಕೊನೆಯಲ್ಲಿ ಸಂಬಳ ಬರುವಲ್ಲಿ ಒಂದು ದಿನ ಹೆಚ್ಚುಕಮ್ಮಿಯಾದರೂ ಇಡೀ ಬ್ರಹ್ಮಾಂಡ ತಲೆಕೆಳಗಾದ ಪ್ರತಿಬಿಂಬ ನಮ್ಮೆದೆಯ ಬಡಿತಕ್ಕೆ ಸಾಕ್ಷಿಯಾಗದೆ ಇರದು.ಸಮಯ ಯಾರಿಗಾಗಿ ನಿಂತಿದೆ? ವೇಳೆಯನ್ನು ಕಟ್ಟಿಹಾಕಿದ ಪ್ರತಾಪಿ ಈ ಜಗತ್ತಲ್ಲಿ ಹುಟ್ಟಿಲ್ಲ!. ಕಾಲಚಕ್ರ ಉರುಳುವುದನ್ನು ನಿಲ್ಲಿಸಿಯು ಇಲ್ಲ!.ಬಡತನ ಸಿರಿತನವು ಇದರ ಪ್ರಶ್ನೆಯನ್ನು ಮೀರಿಸಿದೆ. ಚಕ್ರಕ್ಕೆ ಚಾಲನೆ ಕೊಟ್ಟ ಬ್ರಹ್ಮನಿಗೆ ಅದನ್ನು ನಿಲ್ಲಿಸುವ ಶಕ್ತಿ ಇಲ್ಲ.ಅವನ ಸಹಾಯಕರಾಗಿ ನಿಂತವರು ಯಾರೆಂಬುದನ್ನು ವಿವರಿಸುವ ಅವಶ್ಯಕತೆಯಿಲ್ಲ!. ನಿರಾಕಾರ ಜಗತ್ತಿಗೆ ಪ್ರಕೃತಿಯೇ ಮೂಲಾಧಾರ ಎಂಬುದನ್ನು ಮರೆಯುವಂತಿಲ್ಲ.
“ಒಂದು ಮಗು ಹುಟ್ಟುವಾಗ ಅವ್ಯಕ್ತ ಭಾವದಿಂದ ಮೂರ್ತ ಭಾವದತ್ತ ಚಲಿಸುವ ಗತಿಯ ಪರಿಧಿ ವಿಸ್ಮಯ”ಕಾರಣ ಅಮೂರ್ತ ಚೇತನ ಅಭಿವ್ಯಕ್ತಿಗೊಳ್ಳುವ ಸಮಯು ಬರುವುದು ಪೂರ್ವ ನಿರ್ಧಾರಿತ ಪರಿಣಾಮವಾಗಿ. ಮನುಷ್ಯ ಸಂಬಂಧಗಳು ಸಾಮಾಜಿಕ ಕಳಕಳಿಯಿಂದ ಕೊಂಚ ಮಟ್ಟಿಗೆ ಅತಿರೇಕದ ಬದಲಾವಣೆಯತ್ತ ವಾಲಿರುವುದು ಮುಖ್ಯ ಕಾರಣವೆಂದರೆ ತಪ್ಪಾಗಲಾರದು!. ಉಸಿರಾಡಲು ಶುದ್ದ ಗಾಳಿ ಬೇಕೆಂದು ನಗರ ಪ್ರದೇಶದ ಜನರು ಮಲೆನಾಡಿನತ್ತ ಪ್ರವಾಸಕ್ಕೆ ಬರುತ್ತಿರುವುದು ಅಥವಾ ನೈಸರ್ಗಿಕ ಚಿಕಿತ್ಸೆಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ರಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಸಂಗತಿಯೆಂದರೆ ತಪ್ಪಾಗದು.”ಮಲೆನಾಡು” ಬರಿ ನಾಡಾಗಿ ಬದಲಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿ ಮುಂದೊಂದು ದಿನ ಸುದ್ದಿಯಾದರೆ ಆಶ್ಚರ್ಯ ಪಡಬೇಕಿಲ್ಲ!. ಉಸಿರು ನೀಡುವ ಹಸಿರು ಪ್ಲಾಸ್ಟಿಕ್ ರೂಪ ತಾಳುತ್ತಿರುವುದು,ಮಾನವನಿಗೆ ಎಚ್ಚರಿಕೆಯ ಸಂದೇಶವು ಹೌದು,”ಪರಿವರ್ತನೆ ಜಗದ ನಿಯಮ” ಎಂಬ ವಿಷಯ ಸುಳ್ಳಲ್ಲ!.
ಇಂದು ನಮ್ಮ ಶಾಲೆಯ ಸಹಶಿಕ್ಷಕರು ಶ್ರೀ ರಾಮ ಗೌಡರವರು ನಿವೃತ್ತಿ ಹೊಂದುವ ಸಂದರ್ಭ;ಶಾಲೆಯ ಆವರಣ ಸದ್ದುಗದ್ದಲಗಳ ನಡುವೆ ಒಂದು ನೀರವ ಮೌನ. ಮಧ್ಯಾಹ್ನದ ಕಾರ್ಯಕ್ರಮದ ಸಿದ್ದತೆ ಒಂದೆಡೆಯಾದರೆ,ಇನ್ನೊಂದೆಡೆ ಪಾಲಕರ ಮನಸ್ಸು ಬೇಸರಗೊಂಡಿದ್ದರೂ,ವಯೋಸಹಜ ನಿವೃತ್ತಿಗೆ ತಲೆಬಾಗಬೇಕಾಗಿದ್ದು ಅನಿವಾರ್ಯ. ೩೫ ವರ್ಷಗಳು ಹೇಗೆ ಕಳೆದವು ಎಂಬುದನ್ನು ಮೆಲುಕು ಹಾಕುವ ಸಮಯ ಇದಾಗಿದ್ದರೂ,ಕಣ್ಣಂಚು ತೇವವಾದ ಸಂದರ್ಭ.
ನಾನು ಬಹಳ ಗಟ್ಟಿಯಾಗಿ,ಅವರನ್ನು ಖುಷಿಯಿಂದ ಬೀಳ್ಕೊಡುಗೆ ಮಾಡಬೇಕೆಂದು ತೀರ್ಮಾನಿಸಿಯೇ ಮನೆಯಿಂದ ಹೊರಟಿದ್ದೆ.ಕಣ್ಣೀರು ತರಬಾರದು,ಅವರಿಗೆ ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಆರೋಗ್ಯ ಸಂಪತ್ತಿಗಾಗಿ ಭಗವಂತನಲ್ಲಿ ಪ್ರಾರ್ಥಸಿದ್ದೆ.ಎಷ್ಟು ಸಂಯಮದ ಕ್ಷಣವದು.ಎಲ್ಲರ ಭಾವಗಳು ಅವರ ಪ್ರೀತಿಯ ಹೊತ್ತು ತಂದಿದ್ದವು.ಪುಟಾಣಿ ಮಕ್ಕಳು ಗುರುಗಳಿಗೆ ಏನೆಲ್ಲಾ ನೀಡಬೇಕೆಂದು ಮೊದಲೇ ನಿರ್ಧರಿಸದ್ದು,ಪಾಲಕರು ತಮಗನಿಸಿದ್ದನ್ನು ಬಲು ಪ್ರೀತಿಯಿಂದ ಬಂದು ಗೌರವಿಸಿದ್ದು,ಸರ್ ಪತ್ನಿ ಕಾಮಾಕ್ಷಿ ಗೌಡರವರು ಪತಿಯ ಅವಿನಾಭಾವ ಸಂಬಂಧ ಮಕ್ಕಳು- ಶಿಕ್ಷಕರು-ಪಾಲಕರ ನಡುವಿನ ಬಾಂಧವ್ಯ ಕಂಡು ಕಣ್ತುಂಬಿಕೊಂಡ ಚಿತ್ರಣ ಕಂಡಾಗ, ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ ಎನ್ನಿಸದಿರದು.ಭಗವಂತ ನೀಡಿದ ಅತ್ಯದ್ಭುತ ಗಳಿಗೆ.ಇದಕ್ಕೆ ಯಾರು ಹೊರತಾಗಿಲ್ಲ.”ಸೇವೆಗೆ ಸೇರಿದ ಮೇಲೆ ಸೇವೆಯ ಕೊನೆ ಎಂಬುದು ಖಚಿತ”.ಹೀಗಾಗಿ ವಯೋಮಿತಿಗೆ ತಲೆಬಾಗಬೇಕು.ಅವರು ದೈಹಿಕವಾಗಿ ನೋವನ್ನು ಅನುಭವಿಸಿದರೂ,ಮಾನಸಿಕವಾಗಿ ಸದೃಢ ಮನೋಭಾವದ ಪ್ರತಿರೂಪ ಅವರು.ಜೀವನದ ಸವಾಲಿಗೆ ಎದುರಾಗಿ ಬದುಕಿದವರು.ಇಂದು ಇವರು ಮುಂದೊಂದು ದಿನ ನಾನು! ಸತ್ಯ ಅರಿವಾಗಲು ಎಷ್ಟು ಹೊತ್ತು ಬೇಕು ಈ ಪುಟ್ಟ ಜೀವಕ್ಕೆ. ಪ್ರಾಣ ಪಕ್ಷಿ ಹಾರಿದಷ್ಟು,ದೂರದೃಷ್ಟಿ ಬಟಾಬಯಲು!.
ವಯಸ್ಸಿನ ಗುಟ್ಟು,ನಿರ್ಭಯವಾಗಿ ಕಾಲಚಕ್ಕದಲ್ಲಿ ಮೌನವಾಗುವಾಗ ಎಲ್ಲಿಲ್ಲದ ಪ್ರಾಮುಖ್ಯತೆ ಬದುಕಿಗೆ. ವರುಷಗಳು ಕಳೆದಷ್ಟು ಬುದ್ದಿ ಶಕ್ತಿಯಲ್ಲಿ ಏರಿಳಿತಗಳು.ಕಳೆದು ಹೋದ ನೆನಪುಗಳು ಮತ್ತೆ ಮರುಕಳಿಸಿದರೂ,ಮೊದಲಿನಂತೆ ಇರಲಾದಿತೆ?. ಹೊಸ ಹೊಸ ಭಾವಗಳು ಜೈವಿಕ ಭಾವನಾತ್ಮಕ ಸಂಬಂಧವನ್ನು ಚಿಗುರಿಸಿದಂತೆ.ಕೆಟ್ಟ ಸಂಗತಿಗಳು,ಮನಸ್ಸನ್ನು ಕೆಡಿಸಿ ನೆಮ್ಮದಿಯ ಕೊಂದ ಸಂಬಂಧಗಳಿಗೆ ಕೊಳ್ಳಿಯಿಟ್ಟು ಚಿತೆ ಹೊತ್ತಿಸಿ ಮೌನವಾದಂತೆ!. ನೋವುಂಟು ಮಾಡುವ ಚಿಂತನೆಗಳು ಪುನಃ ಬಾರದಂತೆ ಮೆದುಳಿನ ಚಿಪ್ಪು ಮೊಬೈಲ್ ಸಿಮ್ ಬದಲಿಸಿದಂತೆ ಬದಲಾಗುವುದು ಬಹುಮುಖ್ಯ. ಮಳೆ,ಗಾಳಿ,ಬಿಸಿಲು, ಚಳಿ ಎಲ್ಲರಿಗೂ ಬೇಕು.ಪ್ರಕೃತಿ ವಿರುದ್ಧದ ನಡೆ, ಸರ್ವ ನಾಶದ ಹಾದಿಯನ್ನು ಅಪ್ಪಿಕೊಂಡಂತೆ.ಯಾರು ಶಾಶ್ವತವಲ್ಲ. ನಿನ್ನೆಯ ದಿನ ಅಥವಾ ನಾಳೆಯ ದಿನ ಎಂದಿಗೂ ನಮಗಾಗಿ ನಿಲ್ಲುವುದಿಲ್ಲ.ಶೂನ್ಯ ಪ್ರಪಂಚದಲ್ಲಿ ನಾವು ಹೇಳಹೆಸರಿಲ್ಲದೆ ಇತಿಹಾಸದ ಪುಟ ಸೇರುತ್ತ, ಕಾಲಗರ್ಭದಲ್ಲಿ ಲೀನವಾಗುವ ಕ್ಷಣಗಳು,ಯಾವ ಲಕ್ಷಣವನ್ನು ಹೊತ್ತು ತರುವುದಿಲ್ಲ.ನಿನ್ನೆಯದು ನಿನ್ನೆಗೆ ನಾಳೆಯದು ನಾಳೆಗೆ.ಹೊಸವರ್ಷದ ಗುಂಗು ಗುಂಡು,ತುಂಡಿನಲ್ಲಿ ಇದ್ದರೆ ಸಾಲದು,ಒಂದು ರಾತ್ರಿಗೆ ಮೀಸಲಾದರೆ ಅದು ಸಾರ್ಥಕ ಜೀವನಕ್ಕೆ ಶಾಶ್ವತ ಬಾಗಿಲು ಹಾಕಿದಂತೆ. ಮೋಜು,ಮಸ್ತಿಗಳೇ ಆರಂಭದ ಮುನ್ನುಡಿಯಾದರೆ? ವರ್ಷ ಪೂರ್ತಿ ಇನ್ನೇನಾದಿತು?ಉಹಿಸಲು ಕಷ್ಟಸಾಧ್ಯ!..
ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ದಿನಗಳು ಪ್ರಾರಂಭವಾಗಬೇಕಾದರೆ,ಹಳೆ ದಿನಗಳು ಕಣ್ಮರೆಯಾಗಬೇಕು.ಆದರೆ ಕಳೆದ ದಿನಗಳು ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಬೀರಿದ್ದನ್ನು ನೆನಪಿಟ್ಟುಕೊಂಡು ಬದುಕಿನ ಮುಂದಿನ ಹಾದಿಯನ್ನು ಆಯ್ದುಕೊಂಡು ಮುನ್ನಡೆಯಲು ಸಾಧ್ಯವಾದಿತು.ಹಾಗೆಯೇ ವರುಷಗಳು ಉರುಳುವ ಚಕ್ರದ ಮೂಲಕ ತಮ್ಮ ನಿಲುವನ್ನು ಪ್ರಕಟಿಸುತ್ತವೆ.ಅಹಿತಕರ ಘಟನೆಗಳು ಪುನಃ ಮರುಕಳಿಸದೆ,ಸಕಾರಾತ್ಮಕ ಚಿಂತನೆಗಳು ಬದುಕಿದ್ದಕ್ಕೂ ಸಾರ್ಥಕ.ಇನ್ನಾದರೂ ಮನುಷ್ಯ ಜನ್ಮಕ್ಕೆ ಬುದ್ದಿ ಬರಲಿ.. ಒಳ್ಳೆಯ ತನದ ಮುಖವಾಡ ಧರಿಸಿ ತಿರುಗುವ ಬದುಕಿಗಿಂತ,ನೈಜವಾಗಿ ಬದುಕುವ ಮತ್ತು ಗೌರವದಿಂದ ನಡೆದುಕೊಂಡು ಪರಸ್ಪರ ಸ್ವಾಭಿಮಾನಿಯಾಗಿ ಆದರ್ಶವಾಗಿ ಬದುಕುವ ಕಲೆ ಎಲ್ಲರಿಗೂ ಬರದು.ಬಂದರೆ ಸಮಾಜದಲ್ಲಿ ತನ್ನ ಸ್ವಂತ ಪರಿಶ್ರಮದಿಂದ ಗಳಿಸಿದ ಮೌಲ್ಯಗಳ ಬೆಲೆ ಕಣ್ಣೇದುರು ಅನಾವರಣಗೊಳ್ಳಲು ಸಾಧ್ಯವಾದಿತು.
ಹೊಸ ವರುಷದ ಸ್ವಾಗತ ಮನದಂಗಳದಿಂದಾದರೆ ಸಾರ್ಥಕ.
ಹೀಗೂ ಆಚರಿಸಬಹುದುಲ್ಲ ಎಂಬ ಯೋಚನೆ ಬಂದರೆ ಸಾಕು!. ಮುಂದಿನದು ನಿಮ್ಮ ಮುಂದೆ!…
ಶಿವಲೀಲಾ ಶಂಕರ್
ಇಂತಹ ಸುಂದರ ಅಪರೂಪದ ಲೇಖನ ಬರೆದ ತಮ್ಮ ಕಲೆಗೆ ,ಸಾಹಿತ್ಯ ಕೃಷಿಗೆ ಶರಣು.
ಮನದಾಳದ ಮಾತು ಬಿಚ್ಚಿಟ್ಟ ಕ್ಷಣದ ಬರವಣಿಗೆ ಸುಂದರ.