ಗೊರೂರು ಅನಂತರಾಜು ಅವರ ಹಾಸ್ಯಲೇಖನ-ʼನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!ʼ

ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ.    ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ನೋಡಿದ್ದೆನು. ಅದೇನು ಭಯಂಕರ ಹೊಡೆದಾಟ..!  ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು.!  ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ವೀರ ಪಾಂಡ್ಯ ಕಟ್ಟಬೊಮ್ಮನ್.! ಕನ್ನಡದ ಕಟ್ಟಾಳು! ಉರಿ ಮೀಸೆ ಗೋಪಾಲನ್.! ಬಿದ್ದ ಏಟಿನ ರಭಸಕ್ಕೆ ಸಿಟ್ಟು ಬಂದರೂ  ತೋರಿಸಿಕೊಳ್ಳುವಂತಿಲ್ಲ. ಅದುಮಿಡಿದೆನ್.!  ಶಕುನಿಯಂತೆ ವಕ್ರನೋಟದಲ್ಲಿ ನಾ ನಕ್ಕೆನು.
“ಎಲ್ಲಿಗೆ ಹೊರಟ್ಯೋ ವಿಕಟಕವಿ..?” ಕಟ್ಟಾಳು ಜೊತೆ ಸ್ವಚ್ಛ ಕನ್ನಡ ಮಾತನಾಡಿದರೆ ಬಚಾವ್ ಇಲ್ಲವಾದರೇ ನನ್ನ ಗ್ರಹಾಚಾರ  ಕೆಟ್ಟನ್. ತರಕಾರಿ ತರಲು ಬಂದಿರುವೆ ಗುರುವೆ.. ಮೆಲುಧ್ವನಿಯಲ್ಲಿ ಪಿಸುಗುಟ್ಟೆನ್.  
“ ಬಾ ಗುರುಭವನದಲ್ಲಿ ಟೀ ಕುಡಿಸು.. ಎಂದು ಹೊರಟ ಕಟ್ಟಾಳು ಹಿಂದೆ ಕೈ ಕಟ್ ಬಾಯ್ ಮುಚ್ ಹಿಂಬಾಲಿಸಿದೆನು. ಕನ್ನಡದ ಮಕ್ಕಳೆಲ್ಲಾ ಕ್ಯೂನಲ್ಲಿ ಬನ್ನಿ.. ನಾನು ಪ್ರೌಢಶಾಲೆಯಲ್ಲಿ ಓದುವಾಗ ನವೆಂಬರ್ ಒಂದರಂದು ಊರಿನಲ್ಲಿ ನಾವು ಹುಡುಗರು ಮೆರವಣಿಗೆಯಲ್ಲಿ ಸಾಗುವಾಗ ನಮ್ಮ ಸೈನ್ಸ್ ಮೇಷ್ಟ್ರು ಎಸ್.ಎನ್.ಎಸ್  ಹೀಗೆ ಹಾಡಿದ್ದರು.  ಅವರು ಮಸಾಲೆ ಪ್ರಿಯ ನಾಟಕ ಬರೆದಿದ್ದರು.
ಇಲ್ಲಿ ಗುರುಭವನದಲ್ಲಿ  ನಮ್ಮ ಕನ್ನಡ ಗುರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು. (ಷಷ್ಠಿ ಹಬ್ಬ ಕಾರಣ ನಾನು ತಿನ್ನುವಂತಿರಲಿಲ್ಲ) ಏನಪ್ಪ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಐವತ್ತಕ್ಕೆ ಒಂದು ಕಮ್ಮಿ ಇದೆ. ಆಯ್ಕೆಗೆ ಯಾವ  ಮಾನದಂಡ..!  
“ ಆ ಮಾತು ಈಗ ದಂಡ. ನೀವೊಂದು ಅರ್ಜಿ ಹಾಕಿದ್ದರೆ ಫಿಪ್ಟಿ ಆಗುತ್ತಿತ್ತಲ್ಲ..!
ನಾನು ಕನ್ನಡ ಸೇವಕ. ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು ಅವರ ಧರ್ಮ ಅಲ್ಲವೇ..?
ಅಯ್ಯೋ ನನ್ನ ಕರ್ಮವೇ.!  ಅಣ್ಣ, ಈಗ ಮಸಾಲೆ ದೋಸೆ ಬಂತು. ದಯಮಾಡಿ ತಿನ್ನಿರಿ..
ಆಯ್ತು ಮೂಢ, ಒಂದು ಟೀಗೆ ಆರ್ಡರ್ ಮಾಡು.. ಬೈಟು ಹೇಳಬೇಡ.
ಸರಿ ತಂದೆ.. ಎಂದು ಒಂದು ಟೀಗೆ ಮಾತ್ರ ಆರ್ಡರ್ ಮಾಡಿದೆನು.  ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರುವರ್ಯರು. ನೆನ್ನೆಯ ಹುಳಿ ದೋಸೆಯನ್ನು  ಅರಗಿಸಿಕೊಂಡು ಮೀಸೆ ಮೇಲಿನ ಚಟ್ನಿಯನ್ನು ಟಿಷ್ಯೂ ಪೇಪರ್‌ನಲ್ಲಿ ಒರೆಸಿಕೊಂಡರು. ಟೀ ಕುಡಿದು ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ..!
“ ಹೇ, ಆ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ನನ್ನ ಮಾತಿಗೆ ಸೆನ್ನಾರ್ ಹಾಕಿ “ಈಗ ಹೇಳು ನಿನ್ನ ಬರಹ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡೇ ಕಾಲಹರಣ ಮಾಡುತ್ತಿರುವೆಯಾ ಹೇಗೆ ಕಟುಕ..!
“ಗುರುವೇ, ದಿನಾ ಬೆಳಿಗ್ಗೆ ಬೋರೇಗೌಡರು ವ್ಯಾಟ್ಸಪ್‌ನಲ್ಲಿ ಹಾಯ್ಕು ಹಾಕುತ್ತಿರುತ್ತಾರೆ. ಓದಲು ಬೋರಾಗುವುದಿಲ್ಲ. ನಿಮ್ಮನ್ನು ಗ್ರೂ:ಪ್‌ಗೆ ಅಡ್ಮಿನ್ ಮಾಡುವೇ.
“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ಗ್ರೂಪ್‌ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಹಿಂದಿನಿಂದ ಚುಟುಕು ಬರೀತ್ತಿದ್ದಿಯೆಲ್ಲಾ.. ಅದರ ಕೃಷಿ ಹೇಗಿದೆ..!  ತಲೆಬರಹ ಇಲ್ಲದೇ ಹನಿಗವನ ಬರೀತ್ತಿದ್ದಿಯೆಲ್ಲಾ. ಈಗ ನನ್ನ ತಲೆಯಿಂದ ಹೊಗೆ ಉಗುಳಬೇಕಿದೆ.   ಒಂದು ಬರಕ್ಲೇ ಸಿಗರೇಟು ತೆಗೆದುಕೋ..
ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ  ನನಗೆ ತಿ.. ಮೇಲೆ ಬರೆ.!  
“ ಈಗ ಕವಿಗಳೆಲ್ಲಾ ಜಡೆ ಕವನ ಬರೆಯುತ್ತಿದ್ದಾರಂತಲ್ಲಾ.. ನೀನ್ಯಾವುದು ಜಡೆಗೆ ಕೈ ಹಾಕಿಲ್ಲವೇ ? ಹೊಗೆ ಉಗುಳಿ ಅಣ್ಣ ನಿರಾಳರಾದರು.
ಅಣ್ಣ, ಹಿಂದೊಂದು ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ. ಕೇಳಿಕೊಂಡು  ಮನೆಗೆ ಹೊರಡಿ.
ದ್ರೌಪದಿ ತೊಟ್ಟಿದ್ದರೆ ಚೂಡಿದಾರ
ದುಶ್ಯಾಸನ ಎಳೆಯುತ್ತಿದ್ದನೆ ದಾರ..
“ ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಅಲ್ಲಿ  ಪರಮೇಶ್ ಮೇಷ್ಟ್ರ ಬಳಿ ಪಾಠ ಕಲಿ.. ನೀನು ಮೊದಲನೇ ತರಗತಿಯಿಂದ ಪದ್ಯ ಬರೆಯುವುದು ಕಲಿಯಬೇಕು.
“ ಈಗ ಪದ್ಯಗಳೆಲ್ಲಾ ವ್ಯಾಟ್ಸಪ್‌ನಲ್ಲಿ ಬರುತ್ತಿರುತ್ತವೆ.  ನನ್ನ ಕಣ್ಣು ಹಿಂಗಿ ಹೋದರೂ ಚಿಂತೆಯಿಲ್ಲ. ಅವುಗಳನ್ನೇ  ಓದಿ ಅರಗಿಸಿಕೊಳ್ಳುವೆ.
“ ಸರಿ ಇವತ್ತು ಶನಿವಾರ  ಷಷ್ಟಿ  ಹಬ್ಬ. ರಾಮನಾಥಪುರ ತೇರು. ಮನೆಗೆ  ತರಕಾರಿ ಕೊಂಡೊಯ್ದು ಬಾತ್ ತಿಂದು ರಾಮನಾಥಪುರ ಜಾತ್ರೆಗೆ ಹೋಗಿ ಬಾ. ಈಗ  ನೀನು  ಹೊರಡು ನಾನೂ ಹೊರಡುತ್ತೇನೆ. ಇದೇ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿದ ಮೇಲೆ ನನಗೂ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತ್ರಾಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಬೋರ್ಡ್ಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.
ಅಣ್ಣ ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..!  


Leave a Reply

Back To Top