ಕಾವ್ಯ ಸಂಗಾತಿ
ಯ.ಮಾ. ಯಾಕೊಳ್ಳಿ
ʼಅಕಾರಣವೀ ಬದುಕು…ʼ
ಇಲ್ಲಿ ಯಾರಿಗೆ ಯಾರೋ
ಸಾಂತ್ವನ ಹೇಳುತ್ತಾರೆ
ಯಾವ ಹಕ್ಕಿಗೆ ಯಾವಗಿಡದ
ಕೊಂಬೆಯೋ ಆಸರೆ ಕೊಡುತ್ತದೆ
ಗೊತ್ತಿರದೆ ನದಿಯ ನೀರು
ಯಾವುದೊ ಹೊಲಕ್ಕೆ ನುಗ್ಗುತ್ತದೆ
ತನಗೂ ಅರಿವಿರದೆ ಯಾವುದೊ
ಸಸಿಯ ಬೇರು ನೀರು ಕುಡಿಯುತ್ತದೆ
ಫಲ ಅಪೇಕ್ಷಿಸದೆ ಒಂದು ಗಿಡ
ಹೂವು ಅರಳಿಸುತ್ತದೆ
ಪ್ರತಿಫಲ ಕೊಡದೆ ಒಂದು ದುಂಬಿ
ಆ ಗಂಧ ಸವಿಯತ್ತದೆ
ಯಾವುದೊ ತೊಟ್ಟಿಲಲ್ಲಿ
ಒಂದು ಅನಾಥ ಮಗು ಅಳುತ್ತಿರುತ್ತದೆ
ಒಂದು ತಾಯಿ ಎದೆ ಬರೀ ವಾತ್ಸಲ್ಯ
ಸೂಸಲೆಂದೆ ಕೂಸ ತಬ್ಬುತ್ತದೆ
ಗೊತ್ತಿರದೆ ನನ್ನ ಕವಿತೆಯ ಸಾಲು
ಯಾರದೊ ಕಣ್ಣಿರಿಗೆ ಜೊತೆಯಾಗುತ್ತದೆ
ಕವಿಯನ್ನಿಸಿಕೊಂಡದ್ದಕ್ಕೆ ತುಸು
ಖುಷಿ ಅನುಭವಿಸಿ ಮೌನಿಯಾಗುತ್ತೇನೆ
ಯ.ಮಾ. ಯಾಕೊಳ್ಳಿ
ಗೊತ್ತಿರದ ಅನೇಕ ಸಂಗತಿಗಳು ಗೊತ್ತಿರುವವರಂತೆ ನಮ್ಮದಾಗಿಬಿಡುತ್ತವೆ ಮನಸ್ಸಿಗೆ ಮುದ ನೀಡುತ್ತವೆ ಬದುಕಿಗೆ ಭರವಸೆಗಳಾಗುತ್ತವೆ ಸುಂದರ ಕವಿತೆ ಸರ್ ಧನ್ಯವಾದಗಳು
Meaningful poem Sir….