ಸುಮತಿ ಹಾಗೂ ಕುಟುಂಬವು ಬಹಳ ಕಷ್ಟಕರವಾದ ದಿನಗಳನ್ನು ಕಳೆಯುತ್ತಿತ್ತು ಇದರ ನಡುವೆ ಸುಮತಿ ಮತ್ತೊಮ್ಮೆ ಗರ್ಭಿಣಿಯಾದಳು. ಒಂದು ದಿನ ಕೆಲಸದಿಂದ ಮನೆಗೆ ರಾತ್ರಿ ಹಿಂದಿರುಗಿದ ವೇಲಾಯುಧನ್ ರವರಿಗೆ ವಿಪರೀತ ಕೆಮ್ಮು ಪ್ರಾರಂಭವಾಯಿತು. ಸುಮತಿ ಕರಿ ಮೆಣಸು, ಶುಂಠಿ, ತುಳಸೀದಳಗಳನ್ನು ಸೇರಿಸಿ ಕಷಾಯ ಮಾಡಿ ಕುಡಿಯಲು ಕೊಟ್ಟಳು. ಕಷಾಯ ಕುಡಿದಾಗ ಸ್ವಲ್ಪ ತಗ್ಗಿದ್ದ ಕೆಮ್ಮು ರಾತ್ರಿಯಾದಂತೆ ಹೆಚ್ಚಾಯಿತು. ಕೆಮ್ಮಿನ ಜೊತೆ ಜ್ವರವೂ ಬಂದಿತು. ರಾತ್ರಿಯೆಲ್ಲಾ ಎಚ್ಚರವಿದ್ದು ಸುಮತಿ ಪತಿಯ ಆರೈಕೆ ಮಾಡಿದಳು. ಆದರೂ ಕೆಮ್ಮು ಕಡಿಮೆ ಆಗುವ ಲಕ್ಷಣ ಕಾಣಲಿಲ್ಲ. ಬೆಳಗ್ಗೆ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸುಮತಿ ತೀರ್ಮಾನಿಸಿದಳು. ಮನೆಯ ಪಕ್ಕದಲ್ಲಿಯೇ ಒಂದು ಶಿವನ ದೇವಾಲಯವಿತ್ತು. ಸುಮತಿಯ ಮಕ್ಕಳು ಹಾಗೂ ಅಲ್ಲಿಯ ಅಕ್ಕ ಪಕ್ಕ ವಾಸಿಸುವ ಮಕ್ಕಳು ಸದಾ ಅಲ್ಲಿಯೇ ಆಡುತ್ತಿದ್ದರು. ಅಂದು ಏಕೋ ವೇಲಾಯುಧನ್ ತಾನು ಶಿವನ ದರ್ಶನ ಮಾಡಿ ಆಸ್ಪತ್ರೆಗೆ ಹೋಗುತ್ತೇನೆ ಎಂದರು. ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋದರು. ದೇವರ ದರ್ಶನ ಪಡೆದರು. ದೇವಸ್ಥಾನದಿಂದ ಹೊರಡುವ ವೇಳೆ ಮತ್ತೆ ವಿಪರೀತ ಕೆಮ್ಮು ಪ್ರಾರಂಭವಾಯಿತು. ಅಲ್ಲಿಯೇ ದೇವಸ್ಥಾನದ ಜಗುಲಿಯಲ್ಲಿ ಪತಿಗೆ ಕುಳಿತುಕೊಳ್ಳುವಂತೆ ಹೇಳಿದಳು ಸುಮತಿ. ಆದರೆ ವೇಲಾಯುಧನ್ ತಾನು ಶಿವನ ದರ್ಶನ ಮಾಡುತ್ತಾ ದೇವಾಲಯದ ಒಳಗೆ ಕುಳಿತುಕೊಳ್ಳಬೇಕು ಎಂದರು. ಸ್ವಲ್ಪ ಹೊತ್ತು ಪತಿಯ ಜೊತೆ  ಸುಮತಿಯೂ ಅಲ್ಲಿ ಕುಳಿತುಕೊಂಡಳು. ಸುಮಾರು ಹೊತ್ತು ಕಳೆದರೂ ವೇಲಾಯುಧನ್ ಅಲ್ಲಿಂದ ಎದ್ದು ಆಸ್ಪತ್ರೆಗೆ ಹೋಗುವ ಮನಸ್ಸು ಮಾಡಲಿಲ್ಲ. “ಬನ್ನಿ ಆದಷ್ಟು ಬೇಗ ಆಸ್ಪತ್ರೆಗೆ ಹೋಗೋಣ” ಎಂದು ಸುಮತಿ ಹೇಳುತ್ತಿದ್ದರೂ 

ವೇಲಾಯುಧನ್ ಬೇಡವೆಂದು ತಲೆಯಾಡಿಸುತ್ತಿದ್ದರು. 

ಅವರಿಗೆ ಕೆಮ್ಮು ಮತ್ತಷ್ಟು ಉಲ್ಬಣಗೊಂಡಿತು. 

ದೇವಸ್ಥಾನದ ಅರ್ಚಕರು ಹೇಳಿದರು… “ಇಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ…. ಭಕ್ತಾದಿಗಳು ಬರುತ್ತಿರುತ್ತಾರೆ…. ಅವರುಗಳು ದೇವರ ದರ್ಶನ ಮಾಡಬೇಕು…. ನೀವು ಹೀಗೆ ಇಷ್ಟೊಂದು ಹೊತ್ತು ಕೆಮ್ಮುತ್ತಾ ಕುಳಿತರೆ ನೆಮ್ಮದಿಯಿಂದ ಅವರು ಹೇಗೆ ದರ್ಶನ ಮಾಡುತ್ತಾರೆ?….ದಯವಿಟ್ಟು ನಿಮ್ಮ ಪತಿಯನ್ನು ಕರೆದುಕೊಂಡು ಮನೆಗೆ ಹೋಗಿ….ಇಲ್ಲದಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ”ಎಂದು ಸುಮತಿಗೆ ತಿಳಿ ಹೇಳಿದರು. ಸುಮತಿಯು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದಳು. ಇತ್ತ ಎಷ್ಟು ಹೇಳಿದರೂ ಪತಿಯು ದೇವಾಲಯದಿಂದ ಆಚೆ ಬರುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ. ಒಂದೆಡೆ ದೇವಸ್ಥಾನದ ಅರ್ಚಕರು ಇಲ್ಲಿಯೇ ಹತ್ತಿರಲ್ಲಿ ಇರುವ ಮನೆಗೆ ತೆರಳಲು ಹೇಳುತ್ತಿದ್ದಾರೆ. ಏನು ಮಾಡುವುದು ಎಂದು ತೋಚದೇ…. “ಸ್ವಲ್ಪ ಹೊತ್ತು ಇಲ್ಲಿಯೇ ಕುಳಿತು ನಂತರ ಮನೆಗೆ ಹೋಗುತ್ತೇವೆ”…. ಎಂದಳು ಸುಮತಿ. ದೇವಸ್ಥಾನದ ಅರ್ಚಕರು ಇವರಿಗೆ ತಿಳಿಯದಂತೆ ಊರಿನ ಪಟೇಲರಿಗೆ ಈ ಸುದ್ದಿ ಮುಟ್ಟಿಸಿದರು. ಸ್ವಲ್ಪ ಹೊತ್ತಿಗೆಲ್ಲಾ ಪಟೇಲರ ಸಿಬ್ಬಂದಿಗಳು ಬಂದರು. ದೇವಾಲಯದಿಂದ ಹೊರಗೆ ಹೋಗುವಂತೆ ಸುಮತಿ ಹಾಗೂ ವೇಲಾಯುಧನ್ ಇಬ್ಬರಿಗೂ ತಾಕೀತು ಮಾಡಿದರು. ವಿಧಿಯಿಲ್ಲದೇ ದೇವಾಲಯದಿಂದ ಹೊರಗೆ ಬಂದು ಮನೆಯ ಕಡೆಗೆ ಇಬ್ಬರೂ ಹೊರಟರು. ವೇಲಾಯುಧನ್ ರವರಿಗೆ ಕೆಮ್ಮು ಕಡಿಮೆ ಆಗುವ ಲಕ್ಷಣವೇ ಕಾಣಲಿಲ್ಲ. ಮಾರನೇ ದಿನ ಬೆಳಗ್ಗೆ ಸುಮತಿಯು ಪತಿಯನ್ನು ಬಲವಂತಪಡಿಸಿ, ಹೇಗೋ ಹಾಸನದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಳು. ಬಹಳ ಜನ ರೋಗಿಗಳು ಇದ್ದ ಕಾರಣ ತುಂಬಾ ಹೊತ್ತು ಕಾಯಬೇಕಾಯಿತು. ವೇಲಾಯುಧನ್ ರನ್ನು ವೈದ್ಯರು ಪರೀಕ್ಷಿಸಿ …. “ನಿಮ್ಮ ಪತಿಗೆ ತೀವ್ರ ರೂಪದಲ್ಲಿ ನ್ಯುಮೋನಿಯಾ ಆಗಿದೆ. ಹಾಗಾಗಿ ಕೂಡಲೇ ಇಲ್ಲಿಯ ವಾರ್ಡ್ ನಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ ” ಎಂದು ಸುಮತಿಗೆ ತಿಳಿಸಿದರು.

ಮಕ್ಕಳು ಮೂವರನ್ನೂ ಮನೆಯಲ್ಲಿ ಬಿಟ್ಟು ಪತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಸುಮತಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆದರೂ ಹಿರಿಯ ಮಗಳು ಜಾಣೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಂಗಿಯರನ್ನು ನೋಡಿಕೊಳ್ಳುವಳು ಎನ್ನುವ ಸಮಾಧಾನ ಸುಮತಿಗೆ ಇತ್ತು. ಹಾಗಾಗಿ ಪತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲು ಸುಮತಿ ತಯಾರಾದಳು. ಅಲ್ಲಿ ದಾಖಲಿಸಿಕೊಂಡ ವೈದ್ಯರು ತಮ್ಮ ಶುಶ್ರೂಷೆಯನ್ನು ಆರಂಭಿಸಿದರು. ಕೆಮ್ಮು ತೀವ್ರ ರೂಪದಲ್ಲಿ ಇದ್ದ ಕಾರಣ ವೇಲಾಯುಧನ್ ಉಸಿರಾಡಲು ಬಹಳ ಕಷ್ಟ ಪಡುತ್ತಿದ್ದರು. ಪತಿಯು ಈ ರೀತಿ ಕಷ್ಟ ಪಡುವುದನ್ನು ಕಂಡು ಸುಮತಿಗೆ ಬಹಳ ಸಂಕಟವಾಗುತ್ತಿತ್ತು. ಆದರೂ ತೋರ್ಪಡಿಸಿಕೊಳ್ಳದೇ ಪತಿಯ ಸೇವೆ ಮಾಡಿದಳು. ನೀರು ಕುಡಿಸುವುದು, ತಿಂಡಿ ಊಟವನ್ನು ಸಮಯಕ್ಕೆ ಸರಿಯಾಗಿ ಮಾಡಿಸುವುದು ಮತ್ತು ಅವರಿಗೆ ಅಗತ್ಯವಿದ್ದಾಗ ಶೌಚಾಲಯಕ್ಕೆ ಕರೆದುಕೊಂಡು ಹೋಗುವುದು ಹಾಗೂ ವೈದ್ಯರು ಸೂಚಿಸಿದ ಇನ್ನಿತರ ಸೇವೆಗಳನ್ನೂ ಮಾಡುತ್ತಿದ್ದಳು. ಅನಾರೋಗ್ಯ ಪೀಡಿತನಾದ ಪತಿಯನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಳು. ತಾನು ಆರು ತಿಂಗಳ ಗರ್ಭಿಣಿ ಎನ್ನುವುದನ್ನು ಮರೆತು, ತನ್ನ ಬಗ್ಗೆ ಯೋಚಿಸದೇ ಆಸ್ಪತ್ರೆಯಲ್ಲಿ ಪತಿಯ ಆರೈಕೆ ಮಾಡಲು, ವೈದ್ಯರು ಬರೆದ ಔಷಧಿಗಳನ್ನು ತರಲು ಓಡಾಡುತ್ತಿದ್ದಳು. ಆಸ್ಪತ್ರೆಯಲ್ಲಿ ಪತಿಗೆ ಕೊಡುವ ಬೆಳಗಿನ ಕಾಫಿಯ ಜೊತೆಗೆ ಸಿಗುವ ಬ್ರೆಡ್ ಹಾಗೂ ಮಧ್ಯಾಹ್ನ, ರಾತ್ರಿ ದೊರೆಯುತ್ತಿದ್ದ ಊಟದಲ್ಲಿ ಪತಿ ತಿಂದು ಉಳಿಸಿದ್ದರಲ್ಲಿಯೇ 

ತಾನು ಕೂಡಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು.

ಇತ್ತ ಮನೆಯಲ್ಲಿ ಅಮ್ಮನನ್ನು ಕಾಣದೇ ತಂಗಿಯರಿಬ್ಬರೂ ಅಳುವಾಗ ಸುಮತಿಯ ಹಿರಿಯ ಮಗಳು …”ಅಪ್ಪನಿಗೆ ಆರೋಗ್ಯ ಸರಿಯಿಲ್ಲ…ಅಮ್ಮ ಆಸ್ಪತ್ರೆಯಲ್ಲಿ ಇದ್ದುಕೊಂಡು  ಅಪ್ಪನನ್ನು ನೋಡಿಕೊಳ್ಳುತ್ತಿದ್ದಾರೆ…. ಅಪ್ಪ ಸ್ವಲ್ಪ ಸುಧಾರಿಸಿದ ಮೇಲೆ ಮನೆಗೆ ಇಬ್ಬರೂ ಬರುತ್ತಾರೆ ಎಂದು ಸಮಾಧಾನ ಪಡಿಸುತ್ತಿದ್ದಳು. ಸಮಯಕ್ಕೆ ಸರಿಯಾಗಿ ಅವಳು ಮನೆಯಲ್ಲಿ ಇದ್ದ ಸ್ವಲ್ಪ ಅಕ್ಕಿಯಲ್ಲೇ ಒಂದಿಷ್ಟು ಗಂಜಿ ಮಾಡಿ ತಂಗಿಯರಿಗೆ ಕೊಟ್ಟು, ಉಳಿದದ್ದನ್ನು ತಾನೂ ಕುಡಿಯುತ್ತಿದ್ದಳು.

ಈ ಮೂವರು ಮಕ್ಕಳ ಸ್ಥಿತಿಯನ್ನು ಕಂಡು ನೆರೆಹೊರೆಯಲ್ಲಿ ಇದ್ದ ಜನರು ಮರುಗುತ್ತಿದ್ದರು. ಅವರ ಮನೆಗೆ ಸ್ವಲ್ಪ ಸಮೀಪದಲ್ಲಿಯೇ ಇದ್ದ ತುಳುವರ ಕುಟುಂಬವೊಂದು ಅವರ ಬಗ್ಗೆ ಅಕ್ಕರೆ ಸ್ವಲ್ಪ ತೋರಿಸುತ್ತಿತ್ತು. ತಾವು ಮಾಡಿದ ಆಹಾರ ಪದಾರ್ಥಗಳನ್ನು ಮೂವರ ಆತ್ಮೀಯ ಗೆಳೆಯನಾದ ಮಗನ ಕೈಲಿ ಕೊಟ್ಟು…. “ಹೋಗು ಪಾಪ ಆ ಮಕ್ಕಳು ಏನು ತಿಂದಿರುವರೋ?…. ಮೂವರೂ ಏನು ಮಾಡುತ್ತಿದ್ದಾರೆ ನೋಡಿಕೊಂಡು, ಅವರ ಜೊತೆ ಸ್ವಲ್ಪ ಹೊತ್ತು ಇದ್ದು ಆಟವಾಡಿಕೊಂಡು ಬಾ….ಅವರ ಅಪ್ಪನ ಆರೋಗ್ಯ ಸರಿಯಿಲ್ಲ…ಆಸ್ಪತ್ರೆಗೆ ಹೋದವರು ಇನ್ನೂ ಬಂದಿಲ್ಲ….ಆಗಾಗ ಹೋಗಿ ನೋಡಿಕೊಂಡು ಬಾ”  ಎಂದು ಹೇಳಿ ಕಳುಹಿಸುತ್ತಿದ್ದರು. ಆಗಾಗ ಹುಡುಗನ ತಾಯಿಯೂ ಕೂಡಾ ಮನೆಯ ಕೆಲಸಗಳನ್ನು ಮುಗಿಸಿ ಈ ಮೂವರೂ ಹೆಣ್ಣುಮಕ್ಕಳ ಯೋಗಕ್ಷೇಮವನ್ನು  ವಿಚಾರಿಸಿಕೊಳ್ಳುತ್ತಿದ್ದರು. ಆ ಮೂವರಿಗೂ ನೆರೆಮನೆಯ ಹುಡುಗನೆಂದರೆ ಅಚ್ಚುಮೆಚ್ಚು. ತನ್ನ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆ ಹನ್ನೆರಡರ ಹುಡುಗ. ಸುಮತಿ ವೇಲಾಯುಧನ್ ರ ಮೂವರು ಮಕ್ಕಳಿಗೂ ಆ ಹುಡುಗನೆಂದರೆ ಪಂಚಪ್ರಾಣ. ಅವನು ಕೊಯ್ದು ತರುತ್ತಿದ್ದ ಸೀಬೇಹಣ್ಣು, ನೈದಿಲೆ ಹೂವು ಮತ್ತು ಅದರ ಕಾಯಿ ಎಂದರೆ ಅವರಿಗೆ ಬಹಳ ಪ್ರಿಯ. ಕಾಯಿಯ ತಿರುಳು ಬಹಳ ರುಚಿಕರವಾಗಿರುತ್ತಿತ್ತು. ನಾಲ್ವರೂ ಸೇರಿ ಕುಳಿತು ತಿನ್ನುತ್ತಿದ್ದರು. ಸುಮತಿ ಮತ್ತು ವೇಲಾಯುಧನ್ ಆಸ್ಪತ್ರೆಗೆ ಹೋಗಿ ಒಂದು ದಿನ ಕಳೆಯಿತು. ಮೂವರು ಮಕ್ಕಳೂ ಹೇಗೋ ಅಂದಿನ ರಾತ್ರಿಯನ್ನು ಮನೆಯಲ್ಲಿ ಅಪ್ಪ ಅಮ್ಮ ಇಲ್ಲದೇ ಕಳೆದರು. ಇತ್ತ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಲಾಯುಧನ್ ಚುಚ್ಚುಮದ್ದು ಹಾಗೂ ಔಷಧಿಗಳನ್ನು ಪಡೆದ ನಂತರ ಸ್ವಲ್ಪ ಗೆಲುವಾದರು. ತೀವ್ರವಾದ ಕೆಮ್ಮು ಸ್ವಲ್ಪ ತಗ್ಗಿತು. ಸಂಜೆ ಮನೆಗೆ ಹೋಗುವ ಮೊದಲು ಮತ್ತು ಮಾರನೇ ದಿನ ಶಿವರಾತ್ರಿ ಹಬ್ಬ ಇರುವ ಕಾರಣ ರಜೆ ಇರುವುದರಿಂದ, ವೈದ್ಯರು ವೇಲಾಯುಧನ್ ರನ್ನು ಮತ್ತೊಮ್ಮೆ ಪರೀಕ್ಷಿಸಿ, ಬೇಕಾದ ಸಲಹೆಗಳನ್ನು ದಾದಿಯರಿಗೆ ನೀಡಿ, ಚುಚ್ಚುಮದ್ದನ್ನು ಕೊಡಲು ಸಲಹೆ ಕೊಟ್ಟರು.


One thought on “

Leave a Reply

Back To Top