ಸಿದ್ಧರಾಮ ಹೊನ್ಕಲ್: ಈ ಭೂಮಿ ಯಾರದು? (ಸಣ್ಣ ಕಥೆ)(ರಾಯಚೂರು ವಿವಿ ವ್ಯಾಪ್ತಿಯಲ್ಲಿ ಬಿ.ಎಸ್ಸಿ ಪ್ರಥಮ ಸೆಮ್ ಗೆ ಪಠ್ಯವಾದ ಒಂದು ಕಥೆ. ತಮ್ಮ ಓದಿಗೆ ಅನೇಕರ ಕೋರಿಕೆಯ ಮೇರೆಗೆ)

ಭೂಮಿಯನ್ನು ತಾಯಿ
ಅನ್ನುತ್ತಾರೆ;
ಹಾಗಾದರೆ
ಈ ಭೂ… ತಾಯಿ
ಆಂಧ್ರದವರಿಗೇನಾಗಬೇಕು
ನಮ್ಮ ಕನ್ನಡದವರಿಗೇನಾಗಬೇಕು

(ಪಂಜಾಬಿ ಕವಿಯ ಕ್ಷಮೆ ಕೋರಿ)

ಬುದಣ್ಣ ಸಾಹುಕಾರನ ಆಳುಮಗ ಮನೆ ಬಾಗಿಲಿಗೆ ಬಂದು ನಿಂತು “ಏ ನಿಂಗಪ್ಪಾ… ಏ ನಿಂಗಪ್ಪ, ಮನ್ಯಾಗ ಯಾರೀರಿ ?” ಎಂದು ಕೂಗಿದಾಗ ಆಗಲೋ ಈಗಲೋ ಆ ಸಾಹುಕಾರನ ಆಳುಮಗ ಇವತ್ತು ತನಗ ಕರೀಲಾಕ ಬಂದೇ ಬರ್ತಾನ ಅಂತ ಕಾಯ್ಕಂತ ಕುಂತಿದ್ದ ನಿಂಗಪ್ಪ ಕೈಯಲ್ಲಿ ಉಣ್ಣಲು ಹಿಡಿದಿದ್ದ ರೊಟ್ಟಿ ಹಿಂಡಿ ಪಲ್ಯವನ್ನು ಅಲ್ಲೇ ನೀರಿನ ಕಟ್ಟಿ ಮ್ಯಾಗ ಇಟ್ಟು ಬಾಯಲ್ಲಿಯ ತುತ್ತು ನುಂಗಿ ಒಂದು ಗುಟುಕು ನೀರು ಕುಡಿದವನೇ ಹೊರಬಂದು “ಬಂದೆನಪ ರಾಮಣ್ಣ, ಈಗಷ್ಟೆ ನಾಲ್ಕು ತುತ್ತು ರೊಟ್ಟಿ ತಿಂದ್ರಾಯ್ತು” ಅಂತ ಕುಂತಿದ್ದೆ. ಅಷ್ಟರಾಗ ನೀ ಬಂದಿದಿ ನೋಡು, ನಡಿ ಹೋಗಾಮು” ಅಂದವನೆ ಕರೆಯಲು ಬಂದ ಸಾಹುಕಾರನ ಆಳುಮಗ ರಾಮಣ್ಣಗ ಹಿಂದ ಹಾಕಿ ತಾನೇ ಮುಂದ ಮುಂದ ಸಾಹುಕಾರನ ಮನಿಕಡಿ ಹೊರಟ.

ಇವನ ಗಡಬಿಡಿ ಅವಸರ ನೋಡಿ ಆ ರಾಮಣ್ಣಗೆ ಆಶ್ಚರ್ಯ ಆಗುತ್ತಿತ್ತು. ನಮ್ಮ ಈ ಮಂದಿಗಿ ಏನು ಹಾಳಾಗೋ ಕಾಲ ಬಂದಾದಲ್ಲಪ್ಪ ಅಂತ ಅವನು ಮನಸ್ಸಿನೊಳಗ ಕುದಿತಿದ್ದ. ಇರೋ ಹತ್ತನ್ನೆರಡು ಎಕ್ರೆ ಭೂಮಿ ಮಾರಿ ಬರೋ ರೊಕ್ಕ ನೋಡಿ ಈ ಮಂದಿ ನಾ ಮುಂದು… ನೀ ಮುಂದು ಅಂತ ಮೈಮ್ಯಾಲ ಬಿದ್ದುಹೋಗಿ ಭೂಮಿ ಮಾರಲಾಕ ಹತ್ಯಾರ. ಈ ಹಣ ಇವರನ್ನು ಎಷ್ಟು ದಿನ ಸಂಭಾಳಿಸಿತು. ಅದೆಲ್ಲ ಆದಮ್ಯಾಲ ಇವರು ಏನು ? ಮಾಡತಾರೆ ? ಇದು ನಮ್ಮ ಮಂದಿಗೆ ಯಾಕ ಅರ್ಥ ಆಗವಲ್ಲದು ?

ಹ್ವಾದವರ್ಷ ಎಕ್ರೆಕ ಐದು ಸಾವಿರ ಲೀಜ್ ಕೊಡ್ತಿವಿ ಅಂತೇಳಿ ಊರಾನ ಕುಲ್ಕರ್ಣಿಯ ನಲವತ್ತು ಎಕ್ರೆ ಭೂಮಿ ಸಾಗುವಳಿ ಮಾಡಿದ ಆ ವೀರಾಸ್ವಾಮಿ ಒಮ್ಮೆಲೇ ಎರಡು ಲಕ್ಷ ರೂಪಾಯಿ ಹತ್ತಾರು ಜನರ ಎದುರಿಗೆ ಕುಲ್ಕರ್ಣಿ ಕೈಯಾಗ ಕೊಟ್ಟಿದ್ದ.ಒಮ್ಮೆಲೇ ಅಷ್ಟೊಂದು ಹಣ ಈ ಜನ್ಮದಾಗ ನೋಡಿರದ ಕುಲ್ಕರ್ಣಿ ಆದಿಯಾಗಿ ಸುತ್ತ ಕುಂತ ಮಂದಿಯ ಕಣ್ಣಾಗ ಗಿರಿಗಿಟ್ಲೇ ತಿರುಗಿದಂಗ ಆಗಿತ್ತು. ನೂರು ನೂರರ ಹೊಸ ನೋಟಿನ ಇಪ್ಪತ್ತು ಪುಡಿಕೆ ನೋಟು ಕೈಯಾಗ ಹಿಡಕೊಂಡು ಕುಂತ ಕುಲ್ಕರ್ಣಿ ಕಣ್ಣಿಂದ ಅದ್ಯಾಕೋ ಗೊತ್ತಿಲ್ಲದೇ ಕಣ್ಣೀರು ಹರಿದುಹಾದ್ವು. ಇದ ಕಂಡು ಮುಂದಿ ಹುಚ್ಚಾಗಿ ಹೋಯ್ತು.

ಮರುದಿನದಿಂದ ಎಲ್ಲರೂ ವೀರಾಸ್ವಾಮಿಗೆ “ನನ್ನ ಜಮೀನು ಮಾಡ್ರಿ… ನನ್ನ ಜಮೀನು ಮಾಡ್ರಿ” ಅಂತ ಗಂಟು ಬಿದ್ದಾಗ ಆಶ್ಚರ್ಯಪಟ್ಟ ವೀರಾಸ್ವಾಮಿ “ಆಯ್ತು; ಇನ್ನೂ ನಾಲ್ಕಾರು ದಿನದಾಗ ನಿಮ್ಮ ಎಲ್ಲರ ಭೂಮಿಗೂ ಒಂದು ವ್ಯವಸ್ಥಾ ಮಾಡ್ತಿನಿ” ಅಂತ ಹೇಳಿದವನೇ ತನ್ನೂರಿನ ಬಸ್ಸು ಹಿಡಿದಿದ್ದ.

ನಾಲ್ಕಾರು ದಿನದಲ್ಲಿ ಒಂದು ಲಾರಿಗಳ ಜನ ಬಂದು ಊರಿನ ಹಳ್ಳದ ರಸ್ತೆಯ ಗುಂಟ ಇಳಿಯಿತು. ನೋಡು ನೋಡುವಷ್ಟರಲ್ಲಿ ಅಲ್ಲಿ ಹತ್ತಾರು ಹೊಸ ಮಾದರಿಯ ಗುಡಿಸಲು ಕಮ್ ಮನೆಗಳು ತಯ್ಯಾರಾಗಿಬಿಟ್ಟವು. ಲುಂಗಿ ಉಟ್ಟುಕೊಂಡ ಜನ ಊರೆಂಬ ಊರ ತುಂಬ ತಿರುಗಾಡಿ “ಯಾರಾರು ಭೂಮಿ ಕೊಡತೀರಿ ಕೊಡ್ರಿ. ಆದರೆ ನಾವು ಪಾಲಿಗಿ ಮಾಡೋದಿಲ್ಲ. ಖರೀದಿಗೆ ಕೊಡಬೇಕು” ಅಂದಾಗ ಜನ ಅದಕ್ಕೂ ಹಿಂದೆ ಮುಂದೆ ತುಳಿಲಿಲ್ಲ. ಊರಲ್ಲಿಯ ನಾಲ್ಕಾರು ಪಡ್ಡೆ ಹೈದರುಗಳು ಅವರ ಜೊತೆ ದೋಸ್ತಿ ಮಾಡಿ “ನಾವು ಭೂಮಿ ಕೊಡಸ್ತಿವಿ, ನೀವು ನಮಗ ಕಮೀಷನ್ ಕೊಡ್ರಿ” ಅಂತ ಮಾತಾಡಿಕೊಂಡು ವ್ಯಾಪಾರಕ್ಕೆ ನಿಂತರು.

ಹಳ್ಳದ ಸಾಲಿನಗುಂಟ, ನದಿಯ ಸಾಲಿನ ಗುಂಟ ಗುಡಿಸಲುಗಳು ವಾರ ಒಪ್ಪತ್ತಿನಲ್ಲಿ ಬೆಳೆದು ಅದೊಂದು ಪುಟ್ಟ ಪುಟ್ಟ ಹಟ್ಟಿಯೇ ಆಗಿ ನಿಂತವು. ಅಲ್ಲಿ ಅವರದೇ ಹೊಟೇಲ್, ಅವರದೇ ಕಿರಾಣಿ ಅಂಗಡಿ, ಇತ್ಯಾದಿ ಎಲ್ಲ ಆದವು. ನಾಲ್ಕಾರು ಪಟಪಟಿಗಳು ಆ ಊರಲ್ಲಿ ಹೊಸತಾಗಿ ಓಡಾಡುವದರ ಜೊತೆಗೆ ಹತ್ತಾರು ಟ್ರಾಕ್ಟರುಗಳು ಸಾಲು ಸಾಲಾಗಿ ಆ ಕ್ಯಾಂಪುಗಳ ಸುತ್ತ ನಿಂತವು. ತಮ್ಮ ಹಳ್ಳಿ ಉದ್ಧಾರ ಆರಂಭ ಆಯ್ತು ಅಂದುಕೊಂಡ ಜನಗಳು ಅವರ ಭಾಷೆ ಇವರಿಗೆ ತಿಳಿಯದೆ; ಇವರ ಭಾಷೆ ಅವರಿಗೆ ತಿಳಿಯದೇ ಇದ್ದರು ಸಹ ಅಷ್ಟಿಷ್ಟು ಅರ್ಥಮಾಡಿಕೊಳ್ಳಲು ಪ್ರಯಾಸ ಪಡುತ್ತಲೆ ಹಣದ ಭಾಷೆಯ ಮುಂದೆ ಎಲ್ಲ ಭಾಷೆಗಳು ಅರ್ಥವಾದಂತಾಗಿ ಹೋದ್ರು.

ಊರಾನ ಬಿಡಾಡಿ ಹುಡುಗ್ರು ಕಮಿಷನ ಮ್ಯಾಲ ಭೂಮಿ ವ್ಯಾಪಾರಕ್ಕೆ ನಿಂತ್ರ ತಮ್ಮದೇನು ಉಳದೀತು ಅಂತ ಲೆಕ್ಕ ಹಾಕಿದ ಗೌಡ, ಸಾಹುಕಾರ ಇಬ್ರು ಸೇರಿ ಆ ಕ್ಯಾಂಪಿನ ಜನಗಳನ್ನು ಕರೆಯಲು ಕಳಿಸಿದ್ರು. “ನೋಡ್ರಿ ಇದು ಊರು ಮಾತದ. ನಮ್ಮ ಭೂಮಿ ನಿಮಗೆ ಮಾರದಾಗಲಿ; ಅಥವಾ ಲೀಜಿಗೆ ತೊಗಬೇಕಂದ್ರು ನೀವು ನಮ್ಮಂತಹ ನಾಲ್ಕು ಪಂಚರ ಸಮಕ್ಷಮ ಮಾಡಿ. ಇಲ್ಲಾಂದ್ರ ನಾಳೆ ನೀವು ಅವರಿಗೆ ಮೋಸ ಮಾಡೋದಾಗಲಿ; ಅವರು ನಿಮಗ ಮೋಸ ಮಾಡೋದಾಗಲಿ ಆಗಬಾರದು, ಏನು ಮಾಡಂಗಿದ್ರು ನಮ್ಮ ಸಮಕ್ಷಮ ಆಗಬೇಕು. ಇಲ್ಲಾಂದ್ರ ನೀವು ಹಾಕಿರೋ ಕ್ಯಾಂಪುಗಳ ಹಳ್ಳದ ಸಾಲಿನ ಹೊಲಗಳು ನಮ್ಮವೇ ಆವ. ನಿಮ್ಮನ್ನ ಖಾಲಿ ಮಾಡ್ಸಿಬಿಡ್ತೀವಿ” ಅಂತ ಗುಟುರು ಹಾಕಿದಾಗ ಆ ಲುಂಗಿಯವರು ಗಪ್ ಚುಪ್ಪಾಗಿ ಒಪ್ಪಿಕೊಂಡರು.

“ಈಗ ವ್ಯವಹಾರ ಮಾತಾಡಮು. ಹಳ್ಳದ ಬಗಲಾಗ ಜವುಳು ಬಿದ್ದಾದಲ್ಲ ಆ ಇಪ್ಪತ್ತು ಎಕ್ರೆ ಭೂಮಿ ನನ್ನದೇ ಆದ, ಅದಕ್ಕೆ ಎಷ್ಟು ರೊಕ್ಕ ಕೊಡತೀರಿ ಹೇಳಿ” ಅಂತ ಗೌಡನೆಂದಾಗ ವೀರಾಸ್ವಾಮಿ “ಎಕ್ರೆಕ ಇಪ್ಪತ್ತು ಸಾವಿರ ಕೊಡ್ತೀವಿ.” ಅಂದಾಗ ಗೌಡ ಮತ್ತು ಸಾಹುಕಾರಗ ಒಳಗೊಳಗೆ “ಇವರೆಂಥ ಮಳ್ಳು ಸೂಳ್ಯಾಮಕ್ಕಳು ಆದಾರಿ, ಆ ಸರಕಾರಿ ಜಾಲಿ ಬೆಳಿಲಾಕ ಯೋಗ್ಯ ಇರೋ ಭೂಮಿಗೆ ಎಕ್ರೇಕ ಇಪ್ಪತ್ತು ಸಾವಿರ ಕೊಡ್ತಾರಂತ. ಇಂತ ಮಳ್ಳು ಸುಳ್ಯಾಮಕ್ಳಿಗೆ ಬಿಡಬಾರ್ದು ಅಂತ ತಿಳ್ದು ಒಮ್ಮಿಲೇ ಒಪ್ಪಬಾರದೆಂದು ತಮ್ಮಷ್ಟಕ್ಕ ತಾವೇ ಶಾಣ್ಯಾರೆಂದುಕೊಂಡು ಹಾಗೇ ಹೀಗೆ ಜಗ್ಗಾಡಿ ಇಪ್ಪತ್ತೆರಡು ಸಾವಿರಕ್ಕೆ ಎಕ್ರೆ ದಂತೆ ಮಾತಾಡಿ ಇಪ್ಪತ್ತು ಎಕ್ರೆ ಜಮೀನು ಊರಗೌಡನೇ ಮೊದಲಿಗನಾಗಿ ಮಾರಿಬಿಟ್ಟ. ಚಂಚಗಾರಿಕಿ ಅಂತ ಐವತ್ತು ಸಾವಿರದ ಒಂದು ಐನೂರರ ನೋಟಿನ ಪುಡಿಕೆಯನ್ನು ವೀರಾಸ್ವಾಮಿಯ ಸಂಬಂಧಿಕನಾಗಿ ಬಂದಿದ್ದ ಮಾಚಿರೆಡ್ಡಿ ನೀಡಿದ. ರಜಿಸ್ಟರದ ದಿನ ಉಳಿದ ಹಣ ಕೊಡುವದಾಗಿ ಮಾತು ಮುಗಿದಿತ್ತು. ಗೌಡನ ಹೊಲ ವ್ಯಾಪಾರ ಆದಮ್ಯಾಲ ಸಾಹುಕಾರ ಯಾಕ ಸುಮ್ನ ಕುಂತಾನು. ಅವನು ಕೂಡಾ ನದಿಯ ಗುಂಟ ಇದ್ದ ತನ್ನ ಸವಳ ಹೊಲವನ್ನು ಇಪ್ಪತ್ತುಮೂರು ಸಾವಿರಕ್ಕೆ ಎಕ್ರೆಯಂತೆ ಇಪ್ಪತ್ತೈದು ಎಕ್ರೆ ಮಾರಿ ತಾನು ಒಂದು ಐನೂರರ ಪುಡಿಕೆಯ ಕಟ್ಟನ್ನು ಚೆಂಚಗರಿಯಾಗಿ ಪಡೆದುಬಿಟ್ಟ.

ಈ ಸುದ್ದಿ ಬೆಳಕು ಹರಿಯುವುದರ ಒಳಗೆ ಊರು ತುಂಬ ಹಬ್ಬಿ ಜನರೆಲ್ಲಾ ಗಾಬರಿ ಆಗಿ ಹ್ವಾದ್ರು. ಒಂದು ಹುಲ್ಲುಕಡ್ಡಿ ಬೆಳಿಲಾ‌ರದ ಆ ಸರ್ಕಾರಿ ಜಾಲಿ ಬೆಳೆದ ಹೊಲಕ ಇಷ್ಟೊಂದು ರೊಕ್ಕ ಬಂದಾದ ಅಂದಮ್ಯಾಗ ತಮ್ಮ ಚೊಲೋ ಚೊಲೋ ಹೊಲಕ್ಕ ಇನ್ನೆಷ್ಟು ರೊಕ್ಕ ಬಂದಾವು ಅಂತ ನಾ ಮಾರ್ತಿನಿ…
ನೀ ಮಾರ್ತಿನಿ… ಅಂತ ಆ ಆಂದ್ರ ಕ್ಯಾಂಪಿಗೆ ತಿರುಗಾಡುವವರ ಸಂಖ್ಯೆ ಜಾಸ್ತಿ ಆಗಿಹೋಯ್ತು.

ಮಾರುವವರು, ಲಿಸಿಗೆ ಕೊಡುವವರು ಮೈಮೇಲೆ ಬಿದ್ದು ಬರತೊಡಗಿದೊಡನೆ ಅವರು ಸ್ವಲ್ಪ ಹುಷಾರಿ ಆದ್ರು. ಬೆಲೆ ಎಕ್ರೆಗೆ ಖರೀದಿಗೆ ೧೫-೨೦ ಸಾವಿರ, ಲಿಸಿಗೆ ೨ ರಿಂದ ೩ ಸಾವಿರಕ್ಕೆ ಇಳಿತು.

ನಲವತ್ತು ಎಕ್ರೆ ಲಿಸಿಗೆ ಕೊಟ್ಟಿದ್ದ ಕುಲ್ಕರ್ಣಿ ಒಂದು ಲಕ್ಷ ಹಣ ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟು ಇನ್ನೊಂದು ಲಕ್ಷದಾಗ ಕೊಡೊರಿಗೆ ಕೊಟ್ಟು ಒಂದು ಸೈಕಲ್ ಮೋಟಾರ್ ತಂದು ಊರಾಗ ತಿರುಗಾಡಲಾಕ ಹತ್ತಿದ. ಹೀಗಾಗಿ ಊರಾಗ ಕುಲ್ಕರ್ಣಿಯ ಹಿಂದಿದ್ದ ಗೌರವ ವರ್ಚಸ್ಸು ಮತ್ತ ಈಗ ಬೆಳಿಲಾಕ ಹತ್ತಿತ್ತು.

ಕುಲ್ಕರ್ಣಿ, ಗೌಡ, ಸಾಹುಕಾರ ಮೂರು ಜನ ಒಂದು ಶುಭದಿನ ರಜಿಸ್ಟ್ರಿ ಆಫೀಸಿಗೆ ವೀರಾಸ್ವಾಮಿ ಸಂಗಟ ಹೋಗಿ ಗೌಡ, ಸಾಹುಕಾರನ ಜಮೀನು ರಜಿಸ್ಟ್ರಿ ಮಾಡಿಸಿಕೊಟ್ಟರು. ಅಲ್ಲಿಯ ಐ.ಬಿ.ಯ ಕಟ್ಟಿಮ್ಯಾಗ ಉಳಿದ ನೋಟಿನ ಪುಡಿಕೆಗಳನ್ನು ಕೈಚೀಲದಲ್ಲಿ ತುಂಬಿಕೊಂಡು ಕುಂತಾಗ ಒಳಗೊಳಗ ದಿಗಿಲು, ಸಂತಸಪಟ್ಟರು.ಇಷ್ಟೊಂದು ಹಣ ಬಂದು ತಾವೆಲ್ಲಾ ಲಕ್ಷಾಧೀಶರಾಗಿ ಬಿಟ್ಟಿವೆಲ್ಲಾ ಎಂಬ ಸಂಭ್ರಮದಲ್ಲಿ ಸಾವಿರಾರು ರೂಪಾಯಿ ಕಿಮ್ಮತ್ತಿಲ್ಲದಂಗ ಖರ್ಚು ಮಾಡಿ ಹಿಂದ ಬಂದಿದ್ದ ಮನುಷ್ಯರಿಗೆಲ್ಲಾ ಖುಷಿ ಮಾಡಿಬರ್ರಿ ಅಂತ ನೂರು ನೂರರ ಹೊಸಾ ನೋಟು ಕೊಟ್ಟು ಕಳಿಸಿದರು.

ಹೊತ್ತಾಗುತ್ತಾ ಬಂದಂತೆಲ್ಲಾ ಈ ಹಣ ಏನು ಮಾಡಬೇಕು ಎಂಬ ಚಿಂತಿ ಅವರನ್ನು ಕಾಡತೊಡಗಿತು. ಥೂ ಇವನವ್ವನ, ರೊಕ್ಕ ಇದ್ರ ಒಂದು ಚಿಂತಿ, ಇಲ್ಲದಿದ್ದರೆ ಇನ್ನೊಂದು ಚಿಂತಿ. ಇಷ್ಟೊಂದು ಹಣ ಅವರು ಜೀವಮಾನದಲ್ಲಿ ಕಂಡವರಲ್ಲಾ, ಈಗ ಈ ಹಣ ಏನು ಮಾಡಬೇಕೆಂಬ ಚಿಂತೆ ಅವರನ್ನು ಕಾಡತೊಡಗಿತು.

“ಕುಲ್ಕರ್ಣಿಯೋರಾ, ಈ ಹಣ ಏನು ಮಾಡಮರಿ ಇದನ್ನ ಎಲ್ಲಿ ಇಡಮ” ಎಂದು ಕೇಳಿದಾಗ ಕುಲ್ಕರ್ಣಿ “ಬ್ಯಾಂಕಿನ್ಯಾಗ ಇಡಲಾಕ ಬರ್ತಿತ್ತು. ಆದ್ರ ಬ್ಯಾಂಕಿನ ಟೈಮು ಮುಗಿದ ಹೋಗ್ಯಾದ. ಆದ್ರ ಇಷ್ಟೊಂದು ಲಕ್ಷಗಟ್ಟಲೇ ರೊಕ್ಕ ತೊಗಂಡು ಹೆಂಗ ಹೋಗದು. ಈಗ ಒಂದು ಜೀಪ್ ತಗಂಡು ಊರಿಗೆ ಹೋಗಮು, ನಾಳಿ ಮುಂಜಾನಿ ಇಚಾರ ಮಾಡಮ” ಎಂದಾಗ ಎಲ್ಲರಿಗೂ ಸರಿ ಅನ್ನಿಸಿತು.

ಒಂದು ಜೀಪ ಬಾಡಿಗೆ ಮುಗಿಸಿಕೊಂಡು ಎಲ್ಲರೂ ಸರಿಯಾಗಿ ದಾಬಾ ಒಂದರಲ್ಲಿ ಉಂಡು ತಿಂದು ಜೀಪ ಹತ್ತಿ ಮನಿ ಸೇರಿದರು. ಬೆಳತನಕ ಗೌಡನ ಮನ್ಯಾಗ, ಸಾಹುಕಾರನ ಮನ್ಯಾಗ ಅಷ್ಟೊಂದು ರೊಕ್ಕ ನೋಡಿ ಎಲ್ಲರೂ ಸಂಭ್ರಮ ಪಟ್ಟಿದ್ದೆ ಪಟ್ಟದ್ದು. ಹೆಂಗಳೆಯರು ತರತರದ ಆಭರಣ ಮಾಡಿಸಿಕೊಳ್ಳುವ ಕನಸು ಕಂಡರು. ಪಡ್ಡೆ ಹುಡುಗರು ಹೀರೋಹೊಂಡಾ ಖರೀದಿಸಿ ಲೈನ್ ಹೊಡೆಯುತ್ತಾ ತಿರುಗಾಡುವ ಕನಸು ಕಂಡರು. ಹಳ್ಳಿಯಲ್ಲಿ ಚಿಮಣಿಯಣ್ಣಿ ಮಾರುವವ ಸಹ ಸಾಹುಕಾರ ಅನಿಸಿಗೆಂತಾನ. ಅಂತಹ ಸಾಹುಕಾರ ಆಗಿದ್ದ ಬುದೆಣ್ಣ ಸಾಹುಕಾರಗೂ ಸಹ ಆ ರಾತ್ರಿ ಕಣ್ಣಿಗೆ ಕಣ್ಣು ಹತ್ತಲಿಲ್ಲ. ನಿದ್ರೆ ಹತ್ತಿರ ಸುಳಿಯಲಿಲ್ಲ.

ಇನ್ನೂ ಬೆಳಕೇ ಹರಿದಿರಲಿಲ್ಲ. ಲೇವಾದೇವಿ ವ್ಯವಹಾರ ಮಾಡೋ ಸಂಗಣ್ಣ ಸಾಹುಕಾರನ ಮನಿಗಿ ಬಂದು ಮೂರರ ಬಡ್ಡೆಂಗ ಐವತ್ತು ಸಾವಿರ ಕೊಡ್ರಿ. ಈಗ ತುಂಬಿದ ಸೆಂಗಾ ಮಾರಿದಮ್ಯಾಲ ಬಡ್ಡಿಗಂಟು ಕೊಡ್ತೀನಿ ಅಂತ ಸಾಹುಕಾರನ ರೊಕ್ಕದ ವಿಲೇವಾರಿಗೆ ದಾರಿ ತೋರಿಸಿದ್ದ. ಅದೇ ರೀತಿ ಗೌಡನ ಹಣಕ್ಕೆ ಹತ್ತಿ ವ್ಯಾಪಾರ ಮಾಡೋ ಭೀಮರಾಯ ಒಂದು ದಾರಿ ತೋರಿಸಿದ್ದ. ಇದು ಕೂಡಾ ಹಳ್ಳಿಯಲ್ಲಿ ದೊಡ್ಡ ಸುದ್ದಿಯಾಗಿ ಸಾಹುಕಾರಗ ಹಾಗು ಗೌಡುಗ ತಿಂಗಳ ತಿಂಗಳ ಇನ್ನೂ ಮ್ಯಾಲ ‘ರಾಷ್ಟ್ರಪತಿ’ಯಷ್ಟು ಪಗಾರದ ಬಡ್ಡಿ ಬರ್ತಾದ. ಅವರ ಸಮ ಯಾರು ಅದಾರು ಅಂತ ಜನ ಮಾತಾಡಿಕೊಂಡ್ರು. ಅವರ ವರ್ಚಸ್ಸು ಕೂಡಾ ಗೇಣು ಗೇಣು ಹೆಚ್ಚಾಗಿ ಹೋಯ್ತು.

ವೀರಾಸ್ವಾಮಿಯ ಕಡೆಯ ಜನಗಳು ಹಳ್ಳಿಗೆ ಬರುವದು ಹೆಚ್ಚಾಗಿ ಹೋಯ್ತು. ಹತ್ತಾರು ಗುಡಿಸಲುಗಳಿದ್ದ ಕಡೆ ಈಗ ಐವತ್ತರವತ್ತು ಗುಡಿಸಲು ಬಿದ್ದಿದ್ದವು. ಬರೀ ಅನ್ನ-ಸಾರು ಕುದಿಸಿಕೊಂಡು ತಿನ್ನುವ ಜನ ಬೆಳಗಿನಿಂದ ರಾತ್ರಿ ತನಕ ಹೆಂಗ ದುಡಿತಾರು. ನಾಲ್ಕಾರು ರೊಟ್ಟಿ ಉಂಡು ನಮಗೆ ಹಸುವು ಆಗ್ತಾದ. ಬರೀ ಅನ್ನ ಬ್ಯಾಳಿ ತಿಂದು ಅವರು ಹೆಂಗ ದುಡೀತಾರ ಅಂತ ಹಳ್ಳಿಯ ಜನ ಕುತೂಹಲದಿಂದ ಅವರ ಕ್ಯಾಂಪಿನ ಕಡೆ ತಿರುಗಾಡಲು ಹೋಗಿ ಆ ಗಟ್ಟಿಮುಟ್ಟಾದ ಕಪ್ಪು ಸುಂದರಿಯರನ್ನು, ರೇಡಿಯೋ ಹಚ್ಚಿಕೊಂಡು ಕುಂತ ಲುಂಗಿ ಉಟ್ಟ ಜನರನ್ನು ಅಚ್ಚರಿಯಿಂದ ನೋಡಿ ಬರತೊಡಗಿದರು. ಇವರಿಗೆ ಅರ್ಥವಾಗದ ಚಿತ್ರಗಳ
ಕ್ಯಾಲೆಂಡರುಗಳು, ತಿರುಪತಿ ತಿಮ್ಮಪ್ಪ ಒಬ್ಬನ ಚಿತ್ರ ಮಾತ್ರ ಅದರಲ್ಲಿ ಇವರಿಗೆ ಗೊತ್ತಾಗುತ್ತಿತ್ತು. ಎನ್.ಟಿ.ಆರ್., ಚಂದ್ರಬಾಬು ನಾಯಿಡು, ಚಿರಂಜೀವಿ ಮುಂತಾದ ಚಿತ್ರನಟರು ನಮ್ಮ ಹಳ್ಳಿಯ ಜನರಿಗೆ ಅಪರಿಚಿತರಾದ್ದರಿಂದ ಅವರು ಕೂಡಾ ಆ ದೇಶದ ಜನರ ದೇವರ ಚಿತ್ರ ಇರಬಹುದೆಂದು ಆ ಪಟಗಳಿಗೆ ಕೈ ಮುಗಿದು ಬರತೊಡಗಿದರು.

ಊರಲ್ಲಿ ಟ್ರಾಕ್ಟರುಗಳು, ಫೋಕಲೈನ್ ಮಷೀನುಗಳ ಆರ್ಭಟ ಜಾಸ್ತಿ ಆಯ್ತು, ನೋಡು ನೋಡುವಷ್ಟರಲ್ಲಿ ಬೀಳುಬಿದ್ದು ಜಾಲಿ ಬೆಳೆದ ಹೊಲಗಳಲ್ಲಿಯ ಜಾಲಿಗಳನ್ನೆಲ್ಲಾ ಆ ದೈತ್ಯ ಮಷೀನುಗಳು ಕಿತ್ತುಹಾಕಿ ಆ ಭೂಮಿಯನ್ನು ಸಮತಟ್ಟು ಮಾಡುವುದನ್ನು ನೋಡಲು ಹಳ್ಳಿಗೆ ಹಳ್ಳಿಯೇ ಅಲ್ಲಿ ನೆರೆಯತೊಡಗಿತು.

ಒಂದು ಕಡೆ ಕೊಂಡ ಜಮೀನುಗಳ ಸ್ವಚ್ಛತೆ ನಡೆದರೆ ಇನ್ನೊಂದಡೆ ಸಾಹುಕಾರ ಬುದೆಣ್ಣ ಹಾಗು ಗೌಡ, ಕುಲ್ಕರ್ಣಿಯ ಸಮಕ್ಷಮ ಊರಲ್ಲಿಯ ಜಮೀನುಗಳ ಮಾರಾಟ ಭರದಿಂದ ಸಾಗಿತ್ತು. ಜಮೀನಿಗೆ ರೇಟು ಕಡಿಮೆ ಮಾಡಿಸಿ ಕೊಡಿಸಿದರೆ ವೀರಾಸ್ವಾಮಿಯ ಜನರು ಇವರಿಗೆ ಎಕ್ರೆ ಗೆ ಇಷ್ಟು ಅಂತ ಹಣ ಕೊಡ್ತಾ ಇದ್ರು. ಹಿಂಗಾಗಿ “ನಮ್ಮ ಭೂಮಿನೆ ಇಪ್ಪತ್ತು, ಇಪ್ಪತ್ತು ಮೂರು ಸಾವಿರಕ್ಕ ಎಕ್ರೆ ಕೊಟ್ಟಿವೆ. ನಿಮ್ಮದೇನು ಮಹಾ ದೊಡ್ಡ ಆಸಿಗಿ ಆದೇನು” ಅಂತ ಇವರು ಭೂಮಿ ಮಾರಲು ಬಂದ ತಮ್ಮಳ್ಳಿಯವರಿಗೆ ಸಮಜಾಯಿಷಿ ನೀಡಿ ಆದಷ್ಟು ಹೆಚ್ಚು ಕಡಿಮಿ ಆಗದಂತೆ ಒಂದು ಲೆಖ್ಯದಲ್ಲಿ ಭೂಮಿ ವ್ಯಾಪಾರ ಮಾಡಿಸತೊಡಗಿದರು.

ಹಿಂಗಾಗಿ “ನನ್ನ ಜಮೀನು ಮಾರಿಸಿಕೊಡ್ರಿ” ಅಂತ ಗಂಟು ಬಿದ್ದಿದ್ದ ನಿಂಗಪ್ಪನನ್ನು ಕರೆಯಲು ಸಾಹುಕಾರನ ಆಳುಮಗ ರಾಮಣ್ಣ ಬಂದು ಕರೆದುಕೊಂಡು ಹೊಂಟಿದ್ದ. ಇಂದಾದರೂ ತನ್ನ ಭೂಮಿ ಯಾಪಾರ ಆಗಿ ಕೈಯಾಗ ಯಾವಾಗ ರೊಕ್ಕ ಬಂದಾವು ಅಂತ ನಿಂಗಪ್ಪಗ ಕೈ ಕಡಿಲಾಕ ಹತ್ತಿತ್ತು. ಸ್ವಲ್ಪ ಮನಿದಾಟಿ ಮುಂದಕ ಬಂದಮ್ಯಾಲ ರಾಮಣ್ಣ ನಿಂಗಪ್ಪಗ ಒಂದು ಕಡಿ ಕುಂದ್ರಿಸಿ “ಅಲ್ಲ ನಿಂಗಪ್ಪ, ನಿನಗ ಇರದೇ ಎಂಟು ಎಕ್ರೆ ಭೂಮಿ ಆದ. ಯಾಡ ಮಕ್ಳು ಅದಾವ, ಮನ್ಯಾಗ ನೀನು ನಿನ್ನ ಹೆಣ್ತಿ ಬೆಳೆದ ನಿಂತ ಮಗ ಒಬ್ಬ ಮಗಳು ಅದಾರ. ನಾಲ್ಕು ಮಂದಿ ಚೆಂದಾಗಿ ದುಡಿದ್ರ ನಿಮ್ಮ ಸಂಸಾರಕ್ಕೆ ಬೇಕಾದಷ್ಟು ಬೆಳೆಯನ್ನು ಆ ಭೂಮಿತಾಯಿ ಕೊಟ್ಟೆ ಕೊಡತಾಳ. ಭೂಮಿಗೆ ದುಡಿದದ್ದು ಎಂದು ಸುಳ್ಳಾಗೋದಿಲ್ಲ. ಆದ್ರೆ ಅದನ್ನ ಮಾರಿದಮ್ಯಾಲ ನೀ ಏನು ಮಾಡ್ತೀದಿ, ಅದ್ರ ಬಗ್ಗೆ ಏನರ ಚಿಂತಿ ಮಾಡಿದೇನು ? ಅಂತ ಕೇಳಿದ.

ಕಿಸೆಯಲ್ಲಿದ್ದ ಬೀಡಿ ಕಟ್ಟು ತೆಗೆದು ಹಚ್ಚಿಕೊಂಡ ನಿಂಗಪ್ಪ ರಾಮಣ್ಣನಿಗೂ ಒಂದು ನೀಡಿದ. ಇಬ್ಬರು ಬೀಡಿ ಸೇದತೊಡಗಿದರು. “ನಾನೇನು ದಡ್ಡ ಇನೇನೋ ರಾಮಣ್ಣ. ಈಗಷ್ಟೆ ನಮ್ಮ ಭೂಮಿಗೆ ನೀರು ಬಂದಾವ. ಈ ನೀರಾವರಿ ಹೆಂಗ ಮಾಡಬೇಕೆನ್ನದು ನಮ್ಮ ಮಂದಿಗಿ ಗೊತ್ತಿಲ್ಲ. ಹಂಗೆಲ್ಲಾ ಅದಕ್ಕೆ ಬೇಕಾದ ಗೊಬ್ಬರ, ಯಣ್ಣೆ ತಂದು ಹೊಡೆಯುವದು ನಮ್ಮ ಕೈಯಲ್ಲಿ ಹೆಂಗ ಆಗ್ತದ. ಹ್ವಾದ ವರ್ಷ ನಾ ಭೂಮಿಗೆ ಹಾಕಿದ ನಲವತ್ತು ಸಾವಿರ ಹಣ
ಗೊಬ್ಬರ ಅಂಗಡಿಯಾಗ ಬಡ್ಡಿ ಬೆಳಕೊಂತ ಕುಂತಾದ. ತೊಗ್ರಿಗೆ ಯಣ್ಣಿ ಹೊಡ್ಡು ಹೊಡ್ಡು ಸತ್ತುಹೋಗಂಗ ಆಯ್ತು ಹೊರ್ತು ಆ ಹುಳುಗಳು ಸಾಯಲಿಲ್ಲ. ಹಿಂಗಾಗೇ ಅಲ್ಲಲ್ಲಿ ಮಂದಿ ಯಣ್ಣಿ ಕುಡ್ಡು ಸಾಯಲಾಕ ಹತ್ತಾರ. ಇಷ್ಟಾದ್ರು ಸರಕಾರ ಗೊಬ್ಬರದ ಬೆಲೆ ಏರಸ್ತದ ಹೊರ್ತು ನಮ್ಮ ಮಾಲು ಬಂದಮ್ಯಾಲ ರೇಟು ಎರಸದಿಲ್ಲ. ನಾವು ಬ್ಯಾಂಕಿಗೆ ಹ್ವಾದ್ರೆ ಯಾರ ಹಚಿಗೆಂತಾರ. ಹಿಂಗಾಗಿ ಸಾಹುಕಾರ ಬಳಿ ಸಾಲತ‌ಕೋಬೇಕು. ಇಲ್ಲ ಗೊಬ್ಬರ ಅಂಗಡ್ಯಾಗ ಬಾಕಿ ಮಾಡಬೇಕು. ಬೆಳದ ನಿಂತ ಮಕ್ಕಳಿಗೆ ಲಗ್ನ ಮಾಡಬೇಕು, ಸಾಲ ತೀರಿಸಬೇಕು. ಇದಕ್ಕೆಲ್ಲಾ ನಾ ಎಲ್ಲಿಂದ ಹಣ ತರ್ಲಿ, ಅದಕ್ಕೆ ನಾಲ್ಕು ಎಕ್ರೆ ಮಾರಿ ಇವೆಲ್ಲಾ ಕೊಟ್ಟು ಉಳದದ್ರಾಗ ಉಪಜೀವನಾ ಮಾಡಬೇಕು ಅಂತ ಮಾಡೀನಿ ನೋಡು” ಎಂದು ತನ್ನ ಸುದೀರ್ಘ ಕಥೆಯನ್ನು ಹೇಳಿದ.

“ನಿನ್ನದು ಕೂಡಾ ಖರೇ ಅನ್ನಸ್ತದ ನಿಂಗಪ್ಪ. ಆದ್ರ ನಮ್ಮ ಹಿರೇರು ಮಾಡಿಟ್ಟ ಈ ಭೂಮಿ ಮಾರದು ಒಂದೇ ಹಡದ ತಾಯಿನ ಮಾರದು ಒಂದೇ ಅಂತ ನಿನಗ ಅನಿಸೋದಿಲ್ಲೇನು. ಬೇಕಾದರ ಒಂದು ಎರಡು ವರ್ಷ ಲೀಸಿಗೆ ಕೊಡು. ಅವರು ಹೆಂಗ ಒಕ್ಕಲತನ ಮಾಡ್ತಾರ ಅಂತ ನಾವು ನೋಡಬಹುದು. ನಮ್ಮ ಮಣ್ಣಿನಲ್ಲಿ ಅವರು ಎಷ್ಟು ಬೆಳಿತಾರ ಅಂತ ತಿಳ್ಕೊಂಡು ಅವರಂಗೆ ನಾವು ಯಾಕ ದುಡ್ಡು ಬೆಳೆಬಾರ್ದು ಅಂತ ನಮ್ಮಲ್ಲಿ ಹಟ ಹುಟ್ಟಬೇಕು ನೋಡು” ಅಂತ ಓದಲು ಹೋಗಿದ್ದ ನನ್ನ ಮಗ ಊರಿಗೆ ಬಂದಾಗ ಹೇಳಿಹೋಗ್ಯಾನ.

“ನೋಡು, ಆ ಜನರು ಮುಂಜಾನಿಂದ ಚೆಂತ್ಯಾನ ಹೊಲದಾಗ ಹೆಂಗ ದುಡಕಂತ ಇರ್ತರ. ಸರ್ಕಾರಿ ಜಾಲಿ ಬೆಳದು ಬೀಳ ಬಿದ್ದಿದ್ದ ಹೊಲಗಳಿಗೆ ಎಲ್ಲಾ ದೂರದೂರದ ಹಳ್ಳದಿಂದ, ನದಿಯಿಂದ ಪೈಪ್‌ಲೈನ್ ಸಹ ಮಾಡಿ ನೀರು ತಂದು ಒಂದೇ ವರ್ಷದಾಗ ಎಷ್ಟೊಂದು ಕವಳಿ ಬೆಳದಾರ. ಅವು ತಮ್ಮ ಬೀಳು ಹೊಲಗಳು ಹೌದೋ ಅಲ್ಲೊ ಅನ್ನಂಗ ಮಾರಿದವರಿಗೆ ಈಗ ಅನಸಲಾಕ ಹತ್ವಾನ. ಅವರಿಗೇನೋ ಭೂಮಿ ಜಾಸ್ತಿ ಇದ್ದವು. ಮಾರಿಕೊಂಡ್ರು. ಅವರಂಗ ನಾವು ಮಾರಿಕೊಂಡ್ರ ; ನಮ್ಮ ಮಾರಿದ ಹೊಲದಾಗ ನಾವೇ ಕೂಲಿ ಮಾಡ್ತೀವಿ ಅಂತ ಹ್ವಾದ್ರು ಸಹ ಅವರು ಕೂಲಿಗೂ ಸಹ ತಮ್ಮ ಕಡಿ ಮಂದಿನೇ ತಂದಾರ ಹೊರ್ತು ಇಲ್ಲಿಯ ಜನ ದುಡಿಯೋದಿಲ್ಲ ಅಂತ ಕೂಲಿಗೆ ಸಹ ಕರಿತಾ ಇಲ್ಲ.

ಪಕ್ಕದ ಪಟ್ಟಣದ ತುಂಬ ಅವರ ಮಂದಿವೆ ಗೊಬ್ಬರದ ಅಂಗಡಿ, ಅವರವೇ ಬ್ಯಾಂಕುಗಳು, ಎಷ್ಟು ರೊಕ್ಕಾ ತರತಾರಪ್ಪ. ಹರಕು ಲುಂಗಿ ಉಟಗಂಡಾನ; ಅವನ ಬಲ್ಲಿ ಏನಾದ ಅನಂಗಿಲ್ಲ ನೋಡು, ಲುಂಗಿ ಒಳಗಿನ ಚಡ್ಡಿ ಜೇಬಿನಿಂದ ಹೊಸ ಹೊಸ ನೋಟಿನ ಪುಡಿಕಿನೇ ಹೊರಗೆ ಬರ್ತಾವ. ಅಷ್ಟೊಂದು ರೊಕ್ಕ ಅವರೆಂಗ ತಂದಾರ ಗೊತ್ತೇನು. ಆ ಕಡಿ ಎಕ್ರೆಕ ಲಕ್ಷಗಟ್ಟಲೇ ಬೆಲಿ ಅದಾ. ಅಲ್ಲಿ ನಾಲ್ಕು ಏಕ್ರೆ ಮಾರಿ ಬಂದು ಇಲ್ಲಿ ನಲವತ್ತು ಎಕ್ರೆ ತಗೋಲಾಕ ಹತ್ಯಾರ. ಈಗ ಊರು ತುಂಬ ನಮ್ಮ ಮಂದಿಗಿಂತ ಅವರೇ ಹೆಚ್ಚಾಗ್ಯಾರ. ಹಿಂಗಾದಮ್ಯಾಲ ನಾವು ಶಾಣ್ಯರಾಗದಿದ್ದರ ಉಳಿಗಾಲ ಇಲ್ಲ. ಈಗರ ನೀರು ಬಂದಾವ. ಒಂದು ನಾಲ್ಕು ವರ್ಷ ನೋಡಮು. ಇಷ್ಟು ವರ್ಷ ಕಷ್ಟಪಟ್ಟಿವಿ. ಇನ್ನ ನಾಲ್ಕು ವರ್ಷ ತಾಳಿದರ ಇದರಾಗ ನಮಗ ಲಾಭ ಆದ ಇಲ್ಲೋ ತಿಳಿತಾದ. ನಾವು ಹುಟ್ಟಿಬೆಳೆದ ಈ ಮಣ್ಣಿನ್ಯಾಗ ನಾವು ದುಡುದು ಮಣ್ಣಾಗಬೇಕಾಗ್ಯಾದ.
ನಾವು ಇದನ್ನ ಮರ್ತ ಹೋದ್ರ ಗತಿ ಏನು? ಊರಿಗೆ ಬುದ್ಧಿ ಹೇಳಬೇಕಾದ ಗೌಡ, ಕುಲ್ಕರ್ಣಿ, ಸಾಹುಕಾರಗಳೇ ಮೊದಲು ತಮ್ಮ ಭೂಮಿ ಮಾರಿ ರೊಕ್ಕದ ಬೆನ್ನು ಹತ್ತಿದವು. ಅದನ್ನು ನೋಡಿ ಉಳಿದ ಮಳ್ಳುಗಳು ಬೆನ್ನುಹತ್ತಿ ಮಾರಲಾಕ ಹತ್ಯಾವ. ನಾಳಿ ಈ ಊರಾಗ ನಮಗಿಂತ ಅವರ ಜಾಸ್ತಿ ಆಗ್ತರ.

ಆ ಬೀಳ್ ಭೂಮ್ಯಾಗ ಏಕ್ರೆಕ ಎಪ್ಪತ್ತು ಎಂಬತ್ತು ಚೀಲ ಕವಳಿ ಬೆಳಿಲಾಕ ಹತ್ಯಾರ. ಅವರು ದುಡೆದು ನೋಡಿ ನೋಡಿ ನಮಗೆ ಬುದ್ದಿ ಬರಬೇಕು. ನಮ್ಮ ಪಾರಗೋಳು ಮುಂಜಾನೆದ್ದು ತಾಲೂಕ ಆಫೀಸ ಮುಂದೆ ಏನರ ಪುಗಸಟ್ಟೆ ರೊಕ್ಕ ಸಿಗ್ತಾವೇನೋ ಅಂತ ನಾಯಿ ತಿರುಗ್ಯಾಡಿದಂಗ ತಿರುಗಲಾಕ ಬಿದ್ದಾವ.ದುಡಿಬೇಕು ಎಂಬ ವಿಚಾರ ಇಲ್ಲ.ಊರಿನ ಮುಖಂಡರು, ಪುಡಾರಿಗಳು ಕಮಿಷನ್ ಆಸೆಗೆ ಬಿದ್ದು ತಾವು ಏನು ಮಾಡ್ತಾ ಇದ್ದೀವಿ ಅಂಬ ಕಬರಿಲ್ದೇ  ಏನೇನೋ ಮಾಡ್ತಾ ಇದ್ದಾರ. ಅವರಿಗೆಲ್ಲಾ ಓಟರಲಿಸ್ಟಿನ್ಯಾಗ ಹೆಸರು ಬರಿಸಿಬಿಟ್ಟಾರ. ನಾಳಿ ಅವ್ರು ಮನಸ್ಸು ಮಾಡಿದವರೆ ಆರಿಸಿ ಬರಂಗ ಆಗ್ತದ. ಅದೆಲ್ಲಾ ರಾಜಕೀಯ ಏನಾರ ಹಾಳಾಗಿಹೋಗ್ಲಿ, ನೀ ಜಮೀನು ಮಾರದು ಬ್ಯಾಡ. ನಿನಗೆ ಅಷ್ಟ ತ್ರಾಸಿದ್ಧ ನಾಲ್ಕು ವರ್ಷ ಲೀಸಿಗೆ ಹಾಕು. ಅದರ ರೊಕ್ಕಾದಾಗ ಹೆಂಗರ ನಿನ್ನ ತಿಪ್ಲ ನೀನು ಮಾಡಿಕೊ. ಆಮ್ಯಾಲ ಅವರು ಹೆಂಗ ದುಡುದ್ರು, ಏನು ಮಾಡಿದ್ರು ಅಂತ ನೋಡಿ ಅದೇ ದುಡುಮೆ ನಾವು ಕಲ್ತ ಮಾಡಲಾಕರ ಒಂದು ಚಾನ್ಸ ಸಿಗ್ತದ. ಮಾರಿಕೆಂಡು ತಿಂದು ಕುಂತಿವಿ ಅಂದ್ರೆ ಆಯ್ತು. ನಾಳಿ ನಾವು ಪುಣೆ, ಬೊಂಬಾಯಿ ಅಂತ ದುಡಿಲಾಕ ಹೋಗಬೇಕಾಗದ ನೋಡಪ್ಪ.

 “ನಿಂಗಪ್ಪ, ಇಷ್ಟೆಲ್ಲಾ ನನ್ನ ಮಗ ತಿಳಿಸಿ ಹೇಳಿದ್ದು ನಿನಗೆ ಹೇಳಿನಿ. ನಿನಗ ದೇವರು ಇಷ್ಟರ ಮ್ಯಾಲ ಹೆಂಗ ಬುದ್ಧಿ ಕೊಡ್ತಾನ ಹಂಗ ಮಾಡು” ಅಂತ ಹೇಳಿದವನೇ ರಾಮಣ್ಣ ಇನ್ನೊಂದು ಬೀಡಿ ಹಚ್ಚಿ ಕುಳಿತ.

ನಿಂಗಪ್ಪನಿಗೆ ಇದೆಲ್ಲ ಕೇಳಿ ಖರೇ ಅನ್ನಿಸ್ತು, ಆದ್ರೆ ಅವರಂಗ ಭೂಮಿಗೆ ಅಷ್ಟೊಂದು ಖರ್ಚು ಮಾಡಿ ಬೆಳೆತೆಗಿಯೋದು ತನ್ನಿಂದ ಆದೀತೆ ಎಂಬ ಚಿಂತೆ. ಅವರು ಸಾವಿರಾರು ರೂಪಾಯಿಯ ಪೈಪು ತರುವದು, ಆ ಮೂಲಕ ನೀರು ಹರಿಸುವದು, ಸಾವಿರಾರು ರೂಪಾಯಿ ಮಸಾಲಿ ಬೀಜಕ್ಕೆ ಖರ್ಚು ಮಾಡುವದು ನೋಡಿದರೇನೇ ಅಂಜಿಕೆ ಬರುತ್ತಿತ್ತು. ನಾವು ಅಡ್ಡ ಅರಗಿ ಉದ್ದಕ್ಕೆ ಬಿತ್ತಿ ಆಕಾಶ ನೋಡುತ್ತಾ ಕುಳಿತು ಸತ್ತುಹೋದ ಜನ, ನಮಗೆ ಪಕ್ಕದ ಹಳ್ಳದಲ್ಲಿಯ ನೀರು, ನದಿಯ ನೀರು ಹೊಲಕ್ಕೆ ಹೇಗೆ ತಗೋಬೇಕು ಅನ್ನುವದು ಕೂಡಾ ಗೊತ್ತಿಲ್ಲದಂತಹ ಅಜ್ಞಾನದಲ್ಲಿಯ ಜನ ನಾವು. ಅದಕ್ಕೆ ಬೇಕಾಗುವ ಸಾವಿರಾರು ರೂಪಾಯಿ ಹಣ ಎಲ್ಲಿಂದ ಹುಟ್ಟಬೇಕು. ಎಲ್ಲಿಂದ ಹುಟ್ಟುತ್ತದೆ ಎನ್ನುವದರ ಬಗ್ಗೆ ಇಲ್ಲಿಯತನಕ ಯಾವ ರೈತ ಮುಖಂಡರಾಗಲಿ, ಸಮಾಜ ಸುಧಾರಕರಾಗಲಿ, ರಾಜಕೀಯ ಮುಖಂಡರಾಗಲಿ ಜ್ಞಾನ ನೀಡಲಿಲ್ಲ. ಅವಕಾಶಗಳನ್ನು ಕಲ್ಪಿಸಿ ಕೊಡುವದಂತೂ ತೀರ ದೂರ ಉಳಿಯಿತು. ಒಕ್ಕಲುತನ ಸಹ ಆ ಜನರಿಗೆ ಒಂದು ವ್ಯಾಪಾರ,ಉದ್ದಿಮೆ ಆದಂತೆ ಹಣ ತೊಡಗಿಸುತ್ತಾರೆ.

 ನಮ್ಮ ಜನಗಳಿಗೆ ಅದ್ಯಾರು ಒದಗಿಸಬೇಕು. ಇದೆಲ್ಲಾ ಆಗುಹೋಗು ಮಾತಲ್ಲ ರಾಮಣ್ಣ. ನಿನ್ನ ಮಗ ಸಾಲಿ ಕಲ್ತು ಇದೆಲ್ಲಾ ತಿಳ್ಕೊಂಡಾನ ಖರೇ ಆದ. ಆದ್ರ ನಮ್ಮ ಬಡತನದ ಬದುಕಿಗೆ ಇದು ನೀಗೋ ಮಾತಲ್ಲ” ಎಂದ ನಿಂಗಪ್ಪ ಇನ್ನೊಂದು ಬೀಡಿ ಹಚ್ಚಿ ಚಿಂತಿಸುತ್ತಾ ಕುಳಿತ.

ನಂತರ ಘಳಿಗೆ ಆದಮೇಲೆ ಏನೋ ನಿರ್ಧರಿಸಿದವನಂತೆ ಎದ್ದು ನಿಂತು “ಆಯ್ತು ರಾಮಣ್ಣ, ಭೂಮಿ ಮಾರದು ಅಂದ್ರ ತಾಯಿನ ಮಾರಿದಂಗಪ್ಪ. ನೀ ಹೇಳಿದಂಗ ನನ್ನ ತಿಪ್ಲಕ್ಕ ನಾಲ್ಕು ವರ್ಷ ಲೀಸಿಗೆ ಹಾಕ್ತನಿ ಹೊರ್ತು ಮಾರಂಗಿಲ್ಲ. ನಾನು ನನ್ನ ಹೇಣ್ಣಿ ಹಾಗು ಬೆಳೆದ ಮಕ್ಕಳು ಎಲ್ಲಾ ಸೇರಿ ಹೊಲದಾಗ ಒಂದು ಗುಡುಸಲು ಹಾಕಿ ಈ ಸಲ ಅವರಂಗೆ ದುಡುದು ನೋಡ್ತೀನಿ. ಅವರಂಗ ನಾನು ಎಲ್ಲಾ ಮಾಡಿ ನೋಡ್ತೀನಿ. ನನ್ನ ಪ್ರಾಮಾಣಿಕ ದುಡಿಮೆ ದೇವರಿಗೆ ಮೆಚ್ಚಿಕೆ ಆಗಿ ಬೆಳಿಕೊಟ್ಟ ಅಂದ್ರ ನಾ ಬದುಕೆಂತಿನಿ. ಇಲ್ಲಾಂದ್ರ ಮುಂದ ಮತ್ತ  ಆ ಇಚಾರ ಮಾಡಿದ್ರಾಯ್ತು.

“ಆಯ್ತು ರಾಮಣ್ಣ, ನಿಮ್ಮ ಸಾಹುಕಾರಗ ಹಾಗು ಅವರಿಗೆಲ್ಲಾ ಹೇಳು ಈ ನಿಂಗಪ್ಪ ಇನ್ನ ಈ ತಾಯಿನ ಮಾರಂಗಿಲ್ಲ ಅಂತ ಹೇಳ್ತಾನ. ಅವರಂಗೆ ನಾನು ದುಡಿದು ಬೆಳೆದು ತೋರಿಸ್ತೀನಿ ಅಂದಾನ ಅಂತ ಹೇಳುಹೋಗು ಎಂದವನೇ ಗಟ್ಟಿಯಾದ ನಿರ್ಧಾರದಿಂದ ಮನೆಯಡೆಗೆ ಹೋಗಿ ಎತ್ತು ಮುಂದೆ ಮಾಡಿಕೊಂಡು ಹೊಲದ ಕಡೆಗೆ ಹೊರಟೇಬಿಟ್ಟ. ‘ಭೂಮಿತಾಯಿ’ ಮಗ ನಿಂಗಪ್ಪನಿಗೆ ಭರವಸೆಯ ಉಸಿರು ಬೀಸಿದಂತೆ ತಂಗಾಳಿ ಆಗ ಬೀಸತೊಡಗಿತ್ತು.

——————————————————–

Leave a Reply

Back To Top