ವಿಶೇಷ ಸಂಗಾತಿ
ಗೊರೂರು ಶಿವೇಶ್,
“ನಾವು ಪಟಾಕಿ ಅಂಗಡಿ ಇಟ್ಟಿದ್ದು”
ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಲು ಪ್ರಾರಂಭಿಸಿದೊಡನೆ, ಸಾವಿರಾರು ಜನ ತಮಿಳಿಗರು, ಕೂಲಿ ಕೆಲಸಗಾರರು ಗೊರೂರಿನ ಸುತ್ತ ತಳವೂರಲಾರಂಭಿಸಿದರು. ಇದರ ಜೊತೆಗೆ ಭಾನುವಾರದ ಸಂತೆ ಮನೆಯೆದುರು ಸೇರಲಾರಂಭಿಸಿತು. ಇದರ ಲಾಭ ಪಡೆಯಲು ಅಣ್ಣ (ಅಪ್ಪ) ಅಂಗಡಿಯನ್ನು ತೆರೆದರು. ತೆರೆದ ಕೆಲವೇ ದಿನಗಳಲ್ಲಿ ಹುಷಾರು ತಪ್ಪಿ ಹಾಸಿಗೆ ಹಿಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಫೇಲಾಗಿದ್ದ ದೊಡ್ಡಮ್ಮನ ಮಗ, ರಾಮಣ್ಣ ಮೇಸ್ತ್ರಿ ಕೆಲಸಕ್ಕೆಂದು ಬಂದು ಮನೆಯಲ್ಲಿದ್ದ. ಬೆಳಗಿನಿಂದ ಸಂಜೆಯವರೆಗೆ ಬಿಸಿಲಿನಲ್ಲಿ ನಿಲ್ಲುವ ಬದಲು ತಣ್ಣನೆಯ ನೆಳಲಿನಲ್ಲಿ ವ್ಯಾಪಾರ ಮಾಡುವುದು ಆಕರ್ಷಣೀಯವಾಗಿ ಕಂಡು ವ್ಯಾಪಾರಕ್ಕೆ ಶಿಫ್ಟಾದ.ಅಂಗಡಿಯ ಛಾರ್ಜ್ ತೆಗೆದುಕೊಂಡವನೆ ಅವ ಮೊದಲು ಮಾಡಿದ ಸಾಹಸ ಪಟಾಕಿ ಅಂಗಡಿ ಇಟ್ಟಿದ್ದು.
ನಮ್ಮ ಮತ್ತು ದೊಡ್ಡಪ್ಪನ ಮನೆಯ ನಡುವೆ ಇದ್ದ ಇಷ್ಟಗಲ ಜಗುಲಿ ಮೇಲೆ ಪಟಾಕಿ ಅಂಗಡಿ ಇಡುವುದೆಂದು ನಿರ್ಧರಿಸಿದ. ಮನೆಯಲ್ಲಿದ್ದ ಎಣ್ಣೆ ಡಬ್ಬಗಳನ್ನು ಹಂತ ಹಂತವಾಗಿ ಜೋಡಿಸಿದ. ಹಾಸನಕ್ಕೆ ಹೋಗಿ ನಾಲ್ಕೈದು ಬಿಸ್ಕತ್ ಡಬ್ಬಗಳ ಬಾಕ್ಸ್‍ನಲ್ಲಿ ಪಟಾಕಿಯನ್ನುತಂದು ಮೇಲಿನಿಂದ, ಕ್ರಮವಾಗಿ ರಾಕೆಟ್, ಹೂವಿನ ಕುಂಡ, ಆನೆ ಪಟಾಕಿ, ಸರ ಪಟಾಕಿ, ಅದರಲ್ಲೂ ಹೆಬ್ಬೆರಳು ಗಾತ್ರದಿಂದ ಹಿಡಿದು ವಿವಿಧ ಸೈಜಿನ ಪಟಾಕಿಗಳು ನಂತರದ ಕೊನೆಯ ಸಾಲಿನಲ್ಲಿ ಹನುಮಂತನ ಬಾಲ, ಪೆನ್ಸಿಲ್, ಭೂಚಕ್ರ, ವಿಷ್ಣುಚಕ್ರ, ಕಲ್ಲಲ್ಲಿ ಕುಟ್ಟುವ ಮತ್ತು ರೀಲು ಪಟಾಕಿ ಮುಂತಾಗಿ ಜೋಡಿಸಿ ಆಕಡೆ, ಈ ಕಡೆ ಗನ್‍ಗಳನ್ನು ನೇತು ಹಾಕಿದ. ತಾನು ಜೋಡಿಸಿದ ಪಟಾಕಿಯನ್ನು ತಾನೇ ಒಮ್ಮೆ ಪರಾಂಬರಿಸಿ ಪಾಕೆಟೊಂದನ್ನು ಹೊರತೆಗೆದು ಅದರಲ್ಲಿದ್ದ ಬೆಳ್ಳುಳ್ಳಿ ಪಟಾಕಿಯನ್ನು ಹೊರತೆಗೆದು, ಎಡಗಾಲನ್ನು ನೆಲಕ್ಕೆ
ಒತ್ತಿ, ಬಲಗಾಲನ್ನು ಮೇಲೆತ್ತಿ ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಜಗುಲಿಯ ನೆಲಕ್ಕೆ ಅಪ್ಪಳಿಸಲಾರಂಭಿಸಿದ. ಸಣ್ಣ ಬಟ್ಟೆಗೆ ಚಿಕ್ಕ ಕಲ್ಲುಗಳ ನಡುವೆ ಇರಿಸಿದ್ದ ಗಂಧಕ, ಘರ್ಷಣೆಗೆ ಸಿಲುಕಿ ಮಾಡಿದ ಶಬ್ಧಕ್ಕೆ ಮರುಳಾದವರಂತೆ ಅಕ್ಕ-ಪಕ್ಕದ ಬೀದಿಯಿಂದ ಮಕ್ಕಳು ಬಂದು ಅಂಗಡಿಯ ಸುತ್ತ ನೆರೆಯಲಾರಂಭಿಸಿದವು. ಇನ್ನು ತನ್ನ ಕೆಲಸ ಮುಗಿಯಿತು, ಎಂಬಂತೆ ನಮ್ಮನ್ನು ಅಂಗಡಿಯಲ್ಲಿ ಪ್ರತಿಷ್ಠಾಪಿಸಿ ತಾನು ದಿನಸಿ ಅಂಗಡಿ ವ್ಯಾಪಾರದಲ್ಲಿ ಮಗ್ನನಾದ.
ಅಂಗಡಿಯ ಸುತ್ತ ನೆರೆದ ಚಿಳ್ಳೆ-ಪಿಳ್ಳೆಗಳು ಒಂದೊಂದೆ ಪಟಾಕಿಯನ್ನು ಮುಟ್ಟುತ್ತಾ ‘ಇದೆಷ್ಟು ? ಅದೆಷ್ಟು?’ ಎಂದು ಕೇಳಲಾರಂಭಿಸಿದವು. ಅವುಗಳ ಕೈಗಳನ್ನೆ ಹದ್ದಿನ ಕಣ್ಣಿನಿಂದ ಕಾಯುತ್ತ ಅವುಗಳ ಬೆಲೆ ಹೇಳಲಾರಂಬಿಸಿದೆವು, ನಮ್ಮಣ್ಣ ಮತ್ತು ನಾನು. ಎಲ್ಲ ಕೇಳುವವರೆ ಹೊರತು ಕೊಳ್ಳುವವರು ಇಲ್ಲ. ಮೊದಮೊದಲು ಉತ್ಸಾಹದಿಂದ ಹೇಳಿದವೆಯಾದರೂ ಕೊನೆ ಕೊನೆಗೆ ‘ದುಡ್ಡು ತಂದಿದ್ದೀಯ ?’ ಎಂದು ಕೇಳಿ ನಂತರ ಉತ್ತರಿಸುತ್ತಿದ್ದೆವು. ಬೆಳಗಿನಿಂದ ಸಂಜೆಯವರಿಗೂ ಹತ್ತು ರೂಪಾಯಿ ವ್ಯಾಪಾರವೂ ಆಗದೇ ಇದ್ದಾಗ ಅಣ್ಣ ಬಂದು ರಾಮಣ್ಣನ ಮೇಲೆ ‘ಸುಮ್ನೆ ದಿನಸಿ ವ್ಯಾಪಾರ ಮಾಡೋ ಬದಲು ಇದೆಲ್ಲಾ ಬೇಕಿತ್ತಾ’ ? ಎಂದು ರೇಗಿದರು.ಮಾರನೇ ದಿನದ ಅದೇ ಕಥೆ. ರಾಮಣ್ಣ ಆಗಾಗ ಬಂದು ಆನೆ ಪಟಾಕಿಯೊಂದನ್ನು ಹಚ್ಚಿ ಪುರಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದ. ನಾವೇನಾದರೂ ಪಟಾಕಿ ಹಚ್ಚಲು ಹೋದರೆ “ಷರಾಬು ಅಂಗಡೀಲಿ ಕುಳಿತವರೆ ಕುಡಿಯೋಕೆ ಕೂತ್ರೆ ಅಂಗಡಿ ಉದ್ದಾರಾಗುತ್ತಾ ? ಹೆಂಗೆ ನಾವೇ ಪಟಾಕಿ ಹೊಡುದ್ರೆ ಹೆಂಗೆ ?” ಎಂದು ನಮ್ಮ ಉತ್ಸಾಹಕ್ಕೆ ತಣ್ಣೀರು ಎರಚುತ್ತಿದ್ದ.
ಕಪ್ಪು ಬಣ್ಣದ ಪಿಸ್ತೂಲನ್ನು ಸವರಿ ಸವರಿ ನೋಡುತ್ತಿದ್ದ ಮೂಲೆ ಮನೆ ರವಿ, ಮನೆಗೆ ಹೋಗಿ ದೊಡ್ಡ ರಾದ್ದಂತವನ್ನು ಪ್ರಾರಂಭಿಸಿದ್ದ. ಬೀದಿಯಲ್ಲಿ ಬಿದ್ದು ಉರುಳಲಾರಂಭಿಸಿದ್ದ. ಅವನನ್ನು ಅವರವ್ವ ಏಳಿಸಿ ಒಳ್ಳೆ ಮಾತಿನಲ್ಲಿ ಪಳಗಿಸಲು ಯತ್ನಿಸಿದಳಾದರೂ ಮಾತು ಕೇಳದ ಮಗ ತನ್ನ ತಾಯ ಕೈಯನ್ನು ಕಿತ್ತುಕೊಂಡು ಉರುಳಾಡುವುದನ್ನು ಮುಂದುವರಿಸಿದ. ಹತಾಶಳಾದ ಅವರವ್ವ ಅಂಗಡಿ ಇಟ್ಟ ನಮ್ಮನ್ನು ಬೈಯುತ್ತ ಅವನನ್ನು ಅಂಗಡಿ ಬಳಿ ಎಳೆ ತಂದಳು. ಬಂದವನೆ ಅವನು ನೇರವಾಗಿ ಪಿಸ್ತೂಲಿಗೆ ಕೈಹಾಕಿದ. ‘ಅದು ಬೇಡ, ಯಾವುದಾದ್ರು ಸಣ್ಣ ಪಟಾಕಿ ತಗೋ’ ಎಂಬ ಅವರವ್ವನ ಮಾತನ್ನು ಮೈಟ್ ಮಾಡಲಿಲ್ಲ. ‘ನೀವು ಅಂಗಡಿ ಇಟ್ಟು
ನಮ್ಮೊಂಥರ್ನೆಲ್ಲ ಹಾಳು ಮಾಡ್ತೀರ’ ಎಂದು ಕೂಗಾಡಿ ತನ್ನ ಎಲೆ, ಅಡಿಕೆ, ಹೊಗೆಹುಡಿ ಚೀಲದಿಂದ ಒಂದೊಂದೆ ನೋಟನ್ನು ತೆಗೆದು ಎಣಿಸಿಕೊಟ್ಟಳು. ರವಿ ಪಿಸ್ತೂಲಿನ ಜೊತೆಗೆ ರೀಲು ಪಟಾಕಿಯನ್ನು ತೆಗೆದುಕೊಂಡವನೆ ಜೇಮ್ಸ್ ಬಾಂಡ್ ಮಾದರಿಯಲ್ಲಿ ಪಿಸ್ತೂಲನ್ನು ಹಿಡಿದು ಒಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ, ಕೈಮೇಲೆ ಕೈಇಟ್ಟು ಬೆನ್ನಿನ ಹಿಂದೆ, ಕಾಲಿನ ಸಂದಿಯಲ್ಲಿ ಟ್ರಿಗರನ್ನು ಅದುಮುತ್ತಾ, ಅದು ಮಾಡುತ್ತಿದ್ದ ಸದ್ದಿಗೆ ಆನಂದಿಸತೊಡಗಿದ. ಆ ಸದ್ದಿನ ಜೊತೆಗೆ ತಾನು ಟಿಷ್ಯುಂ. . . ಟಿಷ್ಯುಂ. . . ಎನ್ನುತ್ತ ‘ಡಬಲ್ ಸೌಂಡ್ ಎಫೆಕ್ಟ್’ ನೊಂದಿಗೆ ಸುತ್ತ ಸೇರಿದ್ದ ಬಾಲಕರು ಕರುಬುವಂತೆ ಮಾಡಿದ. ಪಕ್ಕದ ಮನೆ ಉಷಾ ಆಂಟಿ, ತನ್ನ ಒಬ್ಬಳೆ ಮಗಳಿಗೆ ಕಲರ್, ಕಲರ್ ಬೆಳಕು ಚೆಲ್ಲುವ ಬೆಂಕಿಪೊಟ್ಟಣ ಜೊತೆಗೆ ಸುರುಸುರುಬತ್ತಿಯನ್ನು ಕೊಡಿಸುವುದರ ಮೂಲಕ ‘ತಮಗೂ ಇಂಥ ತಾಯಿ ಇರಬಾರದಿತ್ತ’ ಎನ್ನುವಂತೆ ಮಾಡಿದರು.
ಇದೆ ಸಮಯದಲ್ಲಿ ಊರಿಗೆ ಆಗಮಿಸಿದ ಹಾಸನದಲ್ಲಿ ಡಿಗ್ರಿ ಮಾಡುತ್ತಿದ್ದ ಎದುರುಗಡೆ ಅಂಗಡಿ ಅಣ್ಣಿಗನಹಳ್ಳಿ ಶೆಟ್ಟರ ಮಗ, ಈಶ್ವರ್ ನಮ್ಮ ಅಂಗಡಿಯ ವಹಿವಾಟನ್ನು ಗಮನಿಸಿ, ಸಂಜೆಯ ವೇಳೆಗೆ ತಾನು ಒಂದು ಪಟಾಕಿ ಅಂಗಡಿಯನ್ನು ಅವರ ಮನೆ ಜಗುಲಿಯ ಮೇಲೆ ತೆರೆದು, ಮನೆಯ ಆ ಸೂರಿನಿಂದ ಈ ಸೂರಿಗೆ ದಾರವನ್ನು ಕಟ್ಟಿ, ಅದರಲ್ಲಿ ಏರೋಪ್ಲೇನ್ ಪಟಾಕಿಯನ್ನು ಆತ ಹಚ್ಚಲು ಅದು ‘ಸುರ್ರು’ ಎಂದು ಸದ್ದು ಮಾಡುತ್ತ ಅತ್ತಿತ್ತ ಓಡಾಡಲು ನಮ್ಮ ಅಂಗಡಿಯ ಮುಂದೆ ಸೇರಿದ್ದ ಮಕ್ಕಳೆಲ್ಲಾ ಅತ್ತ ಧಾವಿಸಿದವು. ಇದರ ಜೊತೆಗೆ ಸೂರಿಗೆ ಸರಪಟಾಕಿಯನ್ನು ಕಟ್ಟಿ ಹಚ್ಚಲು ಅವು ಒಂದೊಂದೆ ಸಿಡಿಯುತ್ತಾ ಕೆಳಗೆ ಬೀಳಲಾರಂಭಿಸಿದವು. ತನ್ನ ಪ್ರಯೋಗವನ್ನು ಇಷ್ಟಕ್ಕೆ ನಿಲ್ಲಿಸದೆ ಆತ ಆಟಂಬಾಂವಿನ ಮೇಲೆ ಡಬ್ಬವೊಂದನ್ನು ಮುಚ್ಚಿ ಹಚ್ಚಲು ಅದು ಮಾಡಿದ ಸ್ಪೋಟಕ್ಕೆ ಡಬ್ಬ ಹತ್ತಾರು ಅಡಿ ಮೇಲಾರಿತು. ಸ್ಪೋಟದ ಸದ್ದಿಗೆ ಬೆದರಿದ ಮುದುಕರು, ರೋಗಿಗಳು, ಆಚೆಗೆ ಬಂದು ‘ಆಟಂಬಾಂಬ್ ಹೊಡೆಯೋದಾದ್ರೆ ಹೊರಗೆ ಹೋಗಿ ಬಯಲಿನಲ್ಲಿ ಹೊಡೆ, ಇಲ್ಲಿ ಬೇಡ’ ಎಂದು ತಾಕೀತು ಮಾಡಿದರು. ಅವರ ಮಾತಿಗೆ ಗೌರವ ಕೊಡವವನಂತೆ ಒಳಹೋದ ಈಶ್ವರ್ ಈ ಬಾರಿ ರಾಕೆಟ್‍ನೊಂದಿಗೆ ಹೊರ ಬಂದು ಹಳೆಯ ಬಾಟಲಿಯಲ್ಲಿಟ್ಟು ಹಚ್ಚಲು ಅದು ನೇರ ನಮ್ಮ ಅಂಗಡಿಯೊಳಗೆ ನುಗ್ಗಬೇಕೆ !.
ಇದೇ ಸಂದರ್ಭದಲ್ಲಿ ಇಡೀ ಹೆಚ್.ಆರ್.ಪಿ. ಕಾಲೋನಿಗೆ ಸಾಲ ನೀಡುತ್ತಿದ್ದ ದೊಡ್ಡಪ್ಪನ ಮಗ ಶ್ರೀಕಾಂತನು ತನ್ನ ಅಂಗಡಿಗೆ ಪಟಾಕಿ ತಂದು ಜೋಡಿಸಲು ಅಣ್ಣನ ಚಿಂತೆ ಹೆಚ್ಚಿತು. ‘ನಮ್ ಅಜ್ಜಿ, ನಮ್ಮ ಭಾವ ಬಂದಾಗ ಅವರತ್ರ ದುಡ್ಡು ಇಸ್ಕೊಂಡು ನಿಮ್ಮ ಅಂಗಡೀಲಿ ಪಟಾಕಿ ತಗೋತೀವಿ’ ಎಂದು ಆಶ್ವಾಸನೆ ನೀಡಿದ್ದ ಚಿಳ್ಳೆ-ಪಿಳ್ಳೆಗಳು ‘ನಮ್ಮಜ್ಜಿ ಹಾಸನದಿಂದ ಬರ್ತಾನೆ ತರ್ತಾನಂತೆ. ನಮ್ಮ ಭಾವ ಬೆಂಗ್ಳೂರಲ್ಲಿ ಪಟಾಕಿ ಚೀಟಿ ಹಾಕವ್ರಂತೆ, ಬರ್ವೇಕಾದ್ರೆ ಬಾಕ್ಸ್ ಪಟಾಕಿ ತರ್ತಾರಂತೆ’ ಎಂದು ಹೇಳಿ ನಮ್ಮ ಗಾಬರಿಯನ್ನು ಹೆಚ್ಚಿಸಿದವು.ನಾವೆಲ್ಲಾ ಅಪಾರವಾಗಿ ನಿರೀಕ್ಷಿಸಿದ್ದ ಭಾನುವಾರದ ಸಂತೆ ಬಂತು. ಆದರೆ ಬಂದ ರೈತರು ‘ಈ ಬಾರಿ ಮಳೆ-ಬೆಳೆ ಕಮ್ಮಿ ಎಂತಲೋ, ಪಿತೃಪಕ್ಷ ಮಾಡಿ ಸುಸ್ತಾಗಿದ್ದೀವಿ ಎಂತಲೋ ನೆವಹೇಳಿ ಐದು ರೂಪಾಯಿಗೆ ಎಲ್ಲಾ ಪಟಾಕಿನೂ ಕಟ್ಟು’ ಎನ್ನುತ್ತಿದ್ದರು. ಇನ್ನು ಕೆಲವರು ‘ಹಾಸನದಲ್ಲಿ ಅಷ್ಟೊಂದು ಅಗ್ಗ, ನೀವು ನೋಡಿದ್ರೆ, ರೂಪಾಯ್ಗೆ ರೂಪಾಯಿ ಲಾಭ ಇಟ್ಟಿದೀರಿ’ ಎನ್ನುತ್ತಿದ್ದರು. ‘ಹಾಸನಕ್ಕೆ ಹೋಗೋ, ಬರೋ ಬಸ್ಟಾರ್ಜ್ ಯಾರಿಗೆ ಬಿಟ್ರಿ’ ಎಂಬ ತಿರುಗುಬಾಣ ನಮ್ಮಿಂದ ಅವರೆಡೆಗೆ ಸಾಗುತ್ತಿತ್ತು. ಇರೋ ಪಟಾಕಿ ಮಾರಾಟವಾಗದೆ ತಲೆಮೇಲೆ ಕೈಹೊತ್ತು ನಾವು ಕುಳಿತರೆ ಆಗಲೇ ಎದುರುಮನೆ ಈಶ್ವರ್ ಎರಡು ಬಾರಿ ಹಾಸನದಿಂದ ಪಟಾಕಿ ತಂದು ಮಾರಾಟ ಮಾಡಿದ್ದರೆ ಶ್ರೀಕಾಂತ್ ಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ಆಚರಿಸಿ ಅಬ್ಬರದಿ ಪಟಾಕಿಯ ಹೊಡೆದು ” ಪಬ್ಲಿಕ್ ಗೆ ಇರ್ಲಿ , ಅಕೌಂಟ್ ಹೋಲ್ಡರ್ಸ್‍ಗೆ ಪಟಾಕಿ ಷಾರ್ಟೆಜ್ ಆಗಂಗೆ ಕಾಣಸ್ತಾ ಇದೆ’. ಎಂದು ಚಿಂತಿತನಾಗಿದ್ದ.
ಹೀಗಿರುತ್ತಿರಲಾಗಿ ಹಬ್ಬದ ದಿನ ಬಂತು. ಮಧ್ಯಾಹ್ನವಾಗುತ್ತಿದ್ದಂತೆ ಪಟಾಕಿ ಕೊಳ್ಳಬಾರದೆಂದು ನಿಶ್ಚಯಿಸಿದವರು, ಮಕ್ಕಳ ಒತ್ತಾಯ ತಡೆಯಲಾರದೆ ಅಂಗಡಿಯ ಕಡೆ ಬರಲಾರಂಭಿಸಿದರು. ವ್ಯಾಪಾರದ ರಂಗು ಹೆಚ್ಚಿತ್ತು. ನೋಡುನೋಡುತ್ತಿದ್ದಂತೆ ಸುರುಸುರುಬತ್ತಿ, ಹನುಮಂತನ ಬಾಲ, ವಿಷ್ಣುಚಕ್ರ, ಭೂಚಕ್ರ, ಸರ ಪಟಾಕಿ
ಮುಂತಾಗಿ ಬಹುತೇಕ ಪಟಾಕಿಗಳು ಖಾಲಿಯಾಗತೊಡಗಿದವು. ಆ ದಿನದ ಮಟ್ಟಿಗೆ ರಾಮಣ್ಣ, ಪಟಾಕಿ ಅಂಗಡಿ ಛಾರ್ಜ್ ತೆಗೆದಕೊಂಡಿದ್ದ.
ಸಂಜೆಯಾಗುವಷ್ಟರಲ್ಲಿ ಆಟಂಬಾಂಬ್, ಆನೆ ಪಟಾಕಿ, ಲಕ್ಷ್ಮಿಪಟಾಕಿಯಂಥ ಭಯಂಕರ ಸದ್ದುಮಾಡುವ ಪಟಾಕಿಗಳನ್ನುಳಿದು ಉಳಿದ ಪಟಾಕಿಗಳೆಲ್ಲವೂ ಖಾಲಿಯಾಗಿದ್ದವು.ಸಂಜೆ, ರಾತ್ರಿಗೆ ತಿರುಗುತ್ತಿದ್ದಂತೆ ತಮ್ಮಲ್ಲಿದ್ದ ಪಟಾಕಿ ಹೊಡೆದು ತೃಪ್ತರಾಗದ ಜನ ಹೆಚ್ಚಿನ ಪಟಾಕಿಕೊಳ್ಳಲು ಬಂದು ಇಲ್ಲದೆ ನಿರಾಶರಾಗಿ ಮರಳಿದರು. ಬೆಳಿಗ್ಗೆ ತಾನೇ ‘ಲಾಸಾದ್ರೆ ಏನು ಗತಿ?’ ಎಂದು ಚಿಂತಿರಾಗಿದ್ದ ಅಣ್ಣ ಈಗ ‘ಇನ್ನಷ್ಟು ಪಟಾಕಿ ಇದ್ದಿದ್ರೆ ಒಳ್ಳೆ ವ್ಯಾಪಾರ ಆಗ್ತಿತ್ತು’ ಅನ್ನತೊಡಗಿದರು. ಆಶ್ಚರ್ಯಚಕಿತರಾಗಿ ಅವರ ಮುಖ ನೋಡುತ್ತಿದ್ದಂತೆ ‘ವ್ಯಾಪಾರ ಅಂದ್ರೆ ಹೀಗೆ, ಪ್ರತಿ ದಿನ ಲಾಭಸಿಗೋಲ್ಲ, ಯಾವೊತ್ತೊ ಒಂದು ದಿನ ಹೀಗೆ ಕಚ್ಗೊಳ್ಳುತ್ತೆ’ ಎಂದು ವ್ಯಾಪಾರದ ಮರ್ಮ ತೆರೆದಿಟ್ಟರು.
ಅಳಿದುಳಿದ ಆಟಂಬಾಂಬ್, ಲಕ್ಷ್ಮಿ ಪಟಾಕಿಗಳನ್ನು ನಾವು ಭಯಪಡುತ್ತಲೇ ನಾಲ್ಕೈದು ಹೊಡೆಯುತ್ತಿದ್ದಂತೆ, ಆಚೆ ಬಂದ ಅಣ್ಣ ‘ನನ್ಗೆ ಹುಷಾರಿಲ್ಲಪ್ಪ, ಇದೆಲ್ಲಾ ಆಗೋಲ್ಲ’ ಎಂದು ತಡೆಯೊಡ್ಡಿದರು. ನಾವು ವಿಧಿಯಲ್ಲದೆ ಆಚೆ ನಿಂತು ಅಕ್ಕ – ಪಕ್ಕದವರು ಹೊಡೆಯುತ್ತಿದ್ದ ಪಟಾಕಿಗಳನ್ನು ಗಮನಿಸುತ್ತಿದ್ದಂತೆ ‘ಉಳಿದ ಪಟಾಕಿನ ಕಟ್ಟಿಡಿ. ಮುಂದಿನ ವರ್ಷದ ವ್ಯಾಪಾರಕ್ಕೆ ಆಗುತ್ತೆ’ ಎಂಬ ಅಕ್ಕನ ಮಾತು ಕೇಳಿ ಬಂತು.
ಗೊರೂರು ಶಿವೇಶ್,