ಮೊದಲ ಕವಿತೆ
ಸವಿತಾ ದೇಶಮುಖ
ಡಾ.ಜಯದೇವಿ ತಾಯಿ
ಗಡಿನಾಡಿನಲ್ಲಿ ಹುಟ್ಟಿ, ಕನ್ನಡವೇ ಉಸಿರಾಗಿ, ಕನ್ನಡಕ್ಕಾಗಿ ಬದುಕಿ, ಕನ್ನಡಿಗರಿಗಾಗಿ -ನಾಡ- ನುಡಿಗಾಗಿ ಹೋರಾಡಿದ, ಕನ್ನಡವೇ ಮೈದಳಿದು ನಿಂತ ಗಡಿನಾಡ ಕನ್ನಡತಿ ಡಾ.ಜಯದೇವಿ ತಾಯಿಯ ಮೊಮ್ಮಗಳಾಗಿ ನಾನು ಬರೆದ ಮೊಟ್ಟ ಮೊದಲ ಕವಿತೆ ……
ಜಯದೇವಿತಾಯಿ
ಸಿದ್ದನ ವಸುದೆಯಲಿ ಸ್ಪೂರಿಸಿ
ಕರುಣೆಯ ಕೂಸಾಗಿ
ಗಡಿನಾಡ ಮಗಳಾಗಿ
ಕರುನಾಡ ಸೊಸೆಯಾಗಿ
ಕನ್ನಡಿಗರ ತಾಯಿಯಾಗಿ
ನಿಂದೆ – ನೀ ನನ್ನ ಅವ್ವ -ದೊಡ್ಡವ್ವ…..
ಸದಾಚಾರದ ಖಣಿ
ಭಕ್ತಿರಸ ಸಾದ್ವಿಮಣಿ
ಸಮತೆಯ ಹಾಲಿನಲ್ಲಿ
ಮಮತೆಯ ಸಕ್ಕರೆ ಹೊನಲಿನಲಿ
ದೊಡ್ಡ ಸಂಸಾರ ಸಾಮರಸ್ಯದಲಿ
ನೀಗಿಸಿದಿ – ನೀ ನನ್ನವ್ವ ದೊಡ್ಡವ್ವ….
ಯೋಗಿಣಿ -ತ್ಯಾಗದ ಮಣಿ
ರಾಗಭೋಗಗಳ ಆಚೆ ನಿಂದಿ
ಧವಲ ವಸ್ತ್ರವ ಧರಿಸಿದಿ
ರುದ್ರಾಕ್ಷಿ ಮಾಲೆ-ಬೆಳೆಯ ತೊಟ್ಟಿ
ವಜ್ರ ವೈಡೂರ್ಯ ದೂರವಿಟ್ಟಿ
ಸಂಥಿಣಿ -ನೀ ನನ್ನವ್ವ ದೊಡ್ಡವ್ವ
ಸಿದ್ದನ ವರವ ಪಡೆದಿ
ಶಿವಯೋಗಿಯ ಧ್ಯಾನದಿ
ಅವಿರತ , ದೈವ ಸಾಕ್ಷಾತ್ಕಾರಣಿ
ಭಾವ ಪರವಶ ಬಂಧಿ,
ಮಿಥ್ಯೆ ಜೀವನದ ಸಂತೆ
ಸಾರಿದೆ ನೀ- ನನ್ನವ್ವ ದೊಡ್ಡವ್ವ
ಅಬಲೆಯರ ಕಣ್ಣುವರಿಸಿ
ಕನ್ನಡ ಶಾಲೆಗಳ ತೆರಸಿ
ಶಿಕ್ಷಕರ ವುಂದವ ಒದಗಿಸಿ
ಶಿಕ್ಷಣ ಜ್ಞಾನನಿಧಿ ಅರಸಿ,
ಹಿಂದುಳಿದವರ ಕೈ ಹಿಡಿದು ಎಬ್ಬಿಸಿ
ನೀ ನನ್ನವ್ವ ದೊಡ್ಡವ್ವ …..
ಕನ್ನಡದಿ ಮಹಾಕಾವ್ಯ ರಚಿಸಿ
ಕಣ್ಮಣಿಗಳ ಕಣ್ಣು ತೆರೆಸಿದಿ,
ರಜಾಕಾರರ ಬಡಿದೊಡಿಸಿದಿ
ನಿರಾಶ್ರಿತರಿಗೆ ಆಶ್ರಯಿಸಿದಿ,
ನಿಜಾಮನ ಉಲ್ಲಂಘಿಸಿ -ಏಕೀಕರಣ
ಕೈಗೂಡಿಸಿದೆ ನೀ ನನ್ನವ್ವ ದೊಡ್ಡವ್ವ…
ಸತ್ಯಕಾಯಕದಿ ಮನರಮಿಸಿ
ಸೊನ್ನಲಿಗೆ ಕರುನಾಡ ಸೇರದಿದಾಗ
ಶರಣರ ಬೀಡು ಕಲ್ಯಾಣದತ್ತ ನಡೆದೆ
ಶರಣರ ಭೂಮಿಯಲ್ಲಿ ಒಂದಾಗಿ
ದಿವ್ಯ ಜ್ಞಾನ ನಿಜ ಸಂಪದ
ಪಡದೆ ನೀ -ನನ್ನವ್ವ ದೊಡ್ಡವ್ವ…..
ಶರಣರ ಗತಕಾಲ ಮರುಕಳಿಸಿ
ಸಿದ್ಧಶೈಲದಲಿ ಬಯಲೊಳು
ಬಯಲಾದೆ ಜಗದಲಿ ಬಾರಿಸಿ
ಜಯದ ಜಯಭೇರಿ
ಖುಷಿ ಶರಣರ ವಂಶಕ್ಕೆ ಶುಭ
ಕಳೆ ನೀ- ನನ್ನವ್ವ ದೊಡ್ಡವ್ವ …….
ಸವಿತಾ ದೇಶಮುಖ
ಈ ಕವಿತೆ ಗಳನ್ನು ಬರೆಯಲು ಪ್ರಾರಂಭಿಸುವುದರ ಹಿಂದೆ ಸ್ಪೂರ್ತಿಯಾಗಿ ನಿಂತವರನ್ನು ನಾನು ನೆನೆಯುವುದು ಇದು ಒಂದು ಸುಅವಕಾಶ ಅಂತ ತಿಳಿದುಕೊಳ್ಳುತ್ತೇನೆ.
ನನ್ನ ಅಜ್ಜಿ ಜಯದೇವಿ ತಾಯಿ ಅವರಿಗೆ ನಾವು ದೊಡ್ಡವ ಅಂತ ಕರೆಯುತ್ತಿದ್ದೆವು. ನನ್ನ ತಾಯಿ ಶ್ರೀ ಲಲ್ಲೇಶ್ವರಿ ತಾಯಿ ಮೂಗಿ ಅವರ ತಾಯಿ ಜಯದೇವಿ ತಾಯಿಯವರು. ಜಯದೇವಿ ತಾಯಿಯವರು ಕನ್ನಡದಲ್ಲಿ ಮಹಾಪುರಾಣವನ್ನೇ ಬರೆದರು. ಅದೆಷ್ಟು ಕವನಗಳನ್ನು ತ್ರಿಪದಿಗಳನ್ನು ಛಂದಸ್ಸಿನ ಸಹಿತವಾಗಿ ಬರೆದರು ಅವರು ಕನ್ನಡ ಶಾಲೆಯನ್ನು ಕಲಿತವರಲ್ಲ, ನಾಲ್ಕನೇಯತೆ ಮರಾಠಿ ಕಲಿತವರು .ಎಂಟು ದಿನದಲ್ಲಿ ಕನ್ನಡವನ್ನು ಕಲಿತು ತ್ರಿಪದಿಯಲ್ಲಿ ಮಹಾಪುರಾಣವನ್ನು ಅಂದರೆ ಸರ್ವಜ್ಞನ ನಂತರ ಸಿದ್ದೇಶ್ವರರ ಮಹಾಪುರಾಣವನ್ನು ಬರೆದವರು ಜಯದೇವಿ ತಾಯಿಯವರೇ ಮೊದಲಿಗರು. ಅವರು ಬರೆಯುತ್ತಿದ್ದ ಶೈಲಿ, ಶಬ್ದಗಳ ತಾಳಮೇಳ ಒಂದು ಅಕ್ಷರವನ್ನು ಅಳಿಸದೆ ಬರೆಯುತ್ತಿದ್ದ ಆ ತ್ರಿಪದಿಗಳನ್ನು ನೋಡಿ ನನಗೆ ಬಹಳ ಸೂಜಿಗೆಗವಾಗುತಿತು. ಶಾಲೆಯಲ್ಲಿ ಕುವೆಂಪು ಬೇಂದ್ರೆ ತರಾಸು ಇಂತಹವರ ಅನೇಕರ ಮಹಾನ ವ್ಯಕ್ತಿಗಳ ಗೀತೆಗಳನ್ನು ಓದುತ್ತಿದೆ. ಅವುಗಳನ್ನು ಕಂಠಪಾಠ ಮಾಡಿ ಕವಿತೆ ಬರೆಯುವುದು ಅಂದರೆ ಒಂದು ಸಾಹಸದ ಕೆಲಸವೇ ಅನಿಸುತ್ತಿತ್ತು .ಇನ್ನು ಅವುಗಳನ್ನು ಪರೀಕ್ಷೆಯಲ್ಲಿ ಬರೆಯುವುದು ಇನ್ನೂ ಹರ ಸಾಹಸದ ಕೆಲಸವಾಗಿತ್ತು .ಆದರೆ ಇಲ್ಲಿ ತಾಯಿಯವರು ಕನ್ನಡ ಭಾಷೆಯನ್ನು ಎಂಟು ದಿನದಲ್ಲಿ ಕಲಿತು ತ್ರಿಪದಿಯನ್ನು ಸರಳ ಭಾಷೆಯಲ್ಲಿ ಬರೆಯುವುದನ್ನು ನೋಡಿದರೆ ಒಂದೊಂದು ಶಬ್ದಗಳ ಆಳಕ್ಕೆ ಆಗ ನನಗೆ ಇಳಿಯಲಾಗುತ್ತಿರಲಿಲ್ಲ. ನಾನು ಯಾವಾಗಲೂ ಅವರಿಗೆ ಕೇಳುತ್ತಿದ್ದೆ ನಿವು ಕವನವನ್ನು ಹ್ಯಾಗೆ ಬರೆತಿರಿ ಅಂತ ನನಗೂ ಹೇಳ್ರಿ ನಾನು ಬರೀತೀನಿ… ಆಗ ಅವರು ಹೇಳ್ತಿದ್ರು ಅದಕ್ಕೆ ಅನುಭವ ಬೇಕು, ತನ್ಮಯತೆ ಬೇಕು -ಅನುಭಾವ ಬೇಕು, ಅಂತ ಕರ್ಣದಿಂದ ಬರಬೇಕು ಎಲ್ಲಕ್ಕಿಂತ ಮುಖ್ಯವಾಗಿ ಭಾವನೆ ಶುದ್ದಿ ಇರಬೇಕು. ಅಂದಾಗ ಮಾತ್ರ ಒಳ್ಳೆಯ ಸಾಹಿತ್ಯ ನಿರ್ಮಾಣವಾಗಲು ಸಾಧ್ಯ ಅನ್ನುತ್ತಿದ್ದರು. ಆಗ ಈ ಎಲ್ಲ ಪದಗಳ ಅರ್ಥ ನನಗೆ ತಿಳಿಯದಾಗಿತ್ತು. ಕವನ ಬರಿಯೋ ಗೋಜಗೆ ಹೋಗಲೇ ಇಲ್ಲ.
ಅದೆಷ್ಟೋ ದಿನಗಳು ವರ್ಷಗಳು ಕಳೆದು ಹೋದವು ಸಂಸಾರದ ಜಂಜಡದಲ್ಲಿ ಮುಳುಗಿ ಆಗಿದೆ. ಸಾಹಿತ್ಯವು ನಮ್ಮ ಕೈಗೆ ಎಟುಕಲಾರದ ತುತ್ತು ಅನ್ನುವ ಭ್ರಮೆಯಲ್ಲಿ ಇರುವಾಗ ವಚನ ಸಾಹಿತ್ಯ ಅಧ್ಯಯನ ವೇದಿಕೆ ಹಾಗೂ ಅಕ್ಕನ ಬಳಗ ಮತ್ತು ಕನ್ನಡ ಕವನ ಕೂಟಗಳ ವೇದಿಕೆಯನ್ನು ಸೇರಿದಾಗ , ನಮಗೆ ಅತ್ಯಂತ ಶ್ರದ್ಧೆಯ ಗುರುಗಳಾಗಿ ಡಾ.ಶಶಿಕಾಂತ್ ಪಟ್ಟಣ ಸರ್ ಗುಂಪಿನಲ್ಲಿರುವ ಸಾಹಿತಿ ಶರಣಮನಗಳು ಸಾಹಿತಿಗಳೊಂದಿಗೆ ನನಗೂ ಬರೆಯಲು ಪ್ರೋತ್ಸಾಹಿಸಿದ್ದ ಶ್ರೇಯಸ್ಸು ಪಟ್ಟಣ್ ಸರ್ ಅವರಿಗೆ ಸಲ್ಲಬೇಕು. ಅವರು ನಮ್ಮ ಒಬ್ಬರಿಗೆ ಅಲ್ಲ ಅನೇಕ ಕವಿ ಮನಗಳಲ್ಲಿ ಅಡಗಿ ಹುದುಗಿ ಕೂತಥಂಹ ಭಾವನೆಗಳನ್ನು ಹೊರಹಾಕಲು ಸಹಾಯ ಮಾಡಿದರು ಅಂತ ಹೇಳಬಹುದು. ಆ ಗುಂಪಿನಲ್ಲಿ ಪ್ರತಿವಾರ ಕವಿತೆಯ ಸ್ಪರ್ಧೆಗಳು ಇರುವುದರಿಂದ ನಾವು ಅನಿವಾರ್ಯವಾಗಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದೆವು ಅಂತ ಹೇಳಬಹುದು. ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಹೇಳ್ತಾ, ಹಾಗೆ ಮಧು ಸೂಧನ್ ಸರ್ ಅವರು ಕೂಡ ನಮ್ಮ ತಪ್ಪು ಒಪ್ಪುಗಳನ್ನು ತಿದ್ದಿ ಅದಕ್ಕೊಂದು ರೂಪ ಕೊಟ್ಟು ಮತ್ತೆ ಪ್ರಕಟಿಸುತ್ತಾ ಹೋಗಿದ್ದು. ನಿಮಗೂ ಕೂಡ ಹೃತ್ಪೂರ್ವಕವಾದ ಧನ್ಯವಾದಗಳು. ಹಾಗೂ ಸಂಗಾತಿ ಪತ್ರಿಕೆಗೂ ಕೂಡ ತುಂಬು ಹೃದಯದ ಧನ್ಯವಾದಗಳು ಏಕೆಂದರೆ ಈ ಪತ್ರಿಕೆಗೆ ಸೇರಿದ ನಂತರವೇ ಅನೇಕ ಕವಿಗಳ ಕವನಕ್ಕೆ ಸ್ಪಂದಿಸಲು ಪ್ರಾರಂಭಿಸಿದೆವು ಕವಿ ಹೃದಯವನ್ನು ತಿಳಿದುಕೊಳ್ಳಲು ದೀವಿಗೆಯನ್ನು ಹಿಡಿದು ಈ ಪತ್ರಿಕೆ , ವೈವಿಧ್ಯಮಯವಾದ ಕವಿತೆಗಳನ್ನು ಓದುತ್ತಾ ಓದುತ್ತಾ ಇನ್ನಷ್ಟು ಕವನ ಬರೆಯೋಕೆ ಗಟ್ಟಿಯಾಗಿ ನಿಲ್ಲಲು ಕಲಿಸಿತು.
ಕವಿ ಹೃದಯವನ್ನು ತೆರೆದಿಡಲು ಸಹಾಯಕರಾದ ನಿಮಗೆಲ್ಲರಿಗೂ ಉಪಕೃತವನ್ನು ಸಲ್ಲಿಸುವುದು ಬಹಳ ಮುಖ್ಯ , ಈ ವೇದಿಕೆಯು ಅದಕ್ಕೆ ಉಪಯೋಗವಾಯಿತು ಅನ್ನುವುದು ನನಗೆ ಬಹಳ ಸಂತೋಷ ತಂದಿದೆ.
ಧನ್ಯವಾದಗಳು
—————————
ಸವಿತಾ ದೇಶಮುಖ
Excellent
Super mam
Super
ಅಜ್ಜಿ ಯವರ ಕುರಿತಾದ ನಿಮ್ಮ ಲೇಖನ ಆತ್ಮೀಯ ಭಾವ ವನ್ನು ಮೂಡಿಸುತ್ತದೆ. ಅನೇಕ ಮೊದಲುಗಳಿಗೆ ಕಾರಣರಾದ ಜಯದೇವಿ ತಾಯಿಯವರಿಗೆ ನಮನಗಳು
Exactly
ತಮಗೆ ತುಂಬು ಹೃದಯದ ಧನ್ಯವಾದಗಳು
Nice mqm
Thanku madum