ಕೃತಿ: ಹಾಣಾದಿ(ಕಾದಂಬರಿ
ಲೇಖಕರು: ಕಪಿಲ ಪಿ.ಹುಮನಾಬಾದ್
ದೀಪಾಜಿ
“ಹಾಣಾದಿ” ಕಾದಂಬರಿ ಒಬ್ಬ ಅದ್ಭುತ ಕಲಾಕಾರನ ಕೈಚಳಕದ ಪ್ರತೀಕದಂತಿದೆ. ಹಾಣಾದಿಯ ಹಾದಿಯಲ್ಲಿ ನಡೆಯುವ ಪ್ರತಿ ಸಂಗತಿಯು ಇಲ್ಲೆ ಓದುಗನೆದುರಲ್ಲೆ ಜರುಗುತ್ತಿರುವಂತೆ ಗೋಚರಿಸುತ್ತವೆ.
ಅದಕ್ಕೆ ಕಾರಣ ಕಥೆಗಾರನ ತೂಕದ ಶಬ್ಧಗಳು ಹಾಗೂ ಆ ಶಬ್ದಗಳನ್ನು ಹಂದರದಂತೆ ಅಚ್ಚುಕಟ್ಟಾಗಿ ಹೊಂದಿಸಿದ ಕಲ್ಪಾನಾ ಶಕ್ತಿ. ಜೊತೆಗೆ ಉತ್ತರ ಕರ್ನಾಟಕದ ಕಿರೀಟ ಬೀದರದ ಮೆದು ಹೃದಯದ ಗಂಡು ಭಾಷೆ.
ಕಥೆ ಓದುತ್ತ ಹೋದಂತೆ ಉಪಮೇಯಗಳು ಎದುರಾಗುತ್ತವೆ . “ಚಂದ್ರನಿಗೆ ಒದ್ದು ಸೂರ್ಯ ಹುಟ್ಟಲೇಬಾರದು ಜನ ಎಷ್ಟು ಆರಾಮವಾಗಿರುತ್ತಿದ್ದರು? ಕೇವಲ ಮಲಗಿರುತ್ತಿದ್ದರಷ್ಟೆ “, “ಶಿಲುಬೆಗೇರಿದ ಕ್ರಿಸ್ತನಿಗೆ ವಯಸ್ಸಾದಂತೆ ಕಂಡಿತು”,
“ಈಗಿನವರಿಗೆ ಕಷ್ಟಗಳ ಸುಖ ಗೊತ್ತಿಲ್ಲ. ಸುಖದ ಸುಖ ಮಾತ್ರ ಗೊತ್ತು ಮಗ”.
ಈ ವಾಕ್ಯರಚನೆಗಳು ಅದೆಷ್ಟು ಮಜಬೂತಾಗಿವೆ ಎಂದರೆ ಓದುಗನನ್ನು ಒಂದು ಕ್ಷಣ ನಿಲ್ಲಿಸಿ ಶಬ್ಧಾರ್ಥಕ್ಕೂ ಸನ್ನಿವೇಶದ ಭಾವಾರ್ಥಕ್ಕೂ ಇರುವ ಮಧ್ಯದ ತೆಳು ಗೆರೆಯೊಂದನ್ನು ಹುಡುಕ ಹಚ್ಚುತ್ತವೆ.
ಪಾಳುಬಿದ್ದ ಊರಿಗೆ ಬಂದ ಅದೆ ಊರಿನ ಮಗನಿಗೆ ಕಾಲದ ಕಾಲಿಗೆ ಸಿಕ್ಕು ನಲುಗಿದ ತನ್ನೂರಿನ ಬದಲಾವಣೆಗಳು ದಿಗಿಲು ಹುಟ್ಟಿಸುವ ಬಗೆ ಮತ್ತದನ್ನು ಚಿತ್ರಿಸಿದ ಬಗೆ ಮಾರ್ಮಿಕವಾಗಿದೆ.
ಕಥೆಗಾರನ ಕೈಯಲ್ಲಿ ಅರಳಿದ ಅಪ್ಪ ಒಮ್ಮೆ ಓದುಗರ ಅಪ್ಪನೊಂದಿಗೆ ಹೋಲಿಸಿಕೊಳ್ಳದೆ ಇರಲಾರನು. ತಾನು ಆಡಿದ ಅಂಗಳ, ಶಾಲೆಯ ಬಯಲು ಊರಾಚೆಗಿನ ಗೌವ್ವನೆ ಗುಹೆ, ಹೊಲದ ದಾರಿ, ಹಳ್ಳದ ಹುತ್ತ ಕೆಡಿಸಿ ಬಡಿಸಿಕೊಂಡ ಮೈ ನೋವು ಮನೋಜ್ಞವಾಗಿದೆ.
ಅಕ್ಕನೆಂಬ ಬೆಂಬಲ, ಅವ್ವನೆಂಬ ಸೋತ ಜೀವ ಮತ್ತು ತನ್ನಪ್ಪನ ಜೀವಕ್ಕೆ-ಸಾವಿಗೆ ಜತೆಯಾದ ಬಾದಾಮ ಗಿಡ. ಮರದೊಡೆಯ ಅಪ್ಪ ಮರಕ್ಕಾಗಿ ಜೀವಿಸಿದ ಕಥೆ, ಜೀವ ತೆತ್ತ ಕಥೆ ಇಂದು ನಡೆಯುತ್ತಿರುವ ಪರಿಸರ ಪ್ರಜ್ಞೆಯ ಪ್ರತೀಕವೆನ್ನಿಸುವುದು ಸುಳ್ಳಲ್ಲ.
ಹಳ್ಳಿಯ ಬದುಕಿನಲ್ಲಿ ಸಾಕು ಪ್ರಾಣಿಗಳು, ಬೆಳಸಿದ ಮರಗಳು ನಮ್ಮದೆ ಮನೆಮಕ್ಕಳಾಗಿ ಬದುಕುತ್ತವೆ ಮತ್ತು ಬದುಕಿಸುತ್ತವೆ ಎಂಬುದಕ್ಕೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಕಾರಣಗಳು ಸಿಗುತ್ತವೆ.
ಹೋರಾಟದ ಬದುಕಿಗೆ ಮುಳ್ಳಗಳು ಹೆಚ್ಚು, ಇಲ್ಲಿ ಕಥಾನಾಯಕನ ಅಪ್ಪನಿಗೆ ಸಿಕ್ಕ ನೆರೆ-ಹೊರೆಯ ಪಾತ್ರಗಳ ಕಾರ್ಯ ವೈಖರಿ ಕಂಡಾಗ ನಮ್ಮ ನಡುವಿರುವ ಖಳನಾಯಕರನ್ನು ಧೊಪ್ಪನೆ ಎಳೆದು ತಂದು ಎದುರಿಗೆ ನಿಲ್ಲಿಸುತ್ತವೆ. ಬೆಳೆದು ನಿಂತ ನೆರಳು ನೀಡುವ ಮರದೊಡನೆ ಜಿದ್ದಿಗೆ ಬಿದ್ದ ಊರ ಮಂದಿ, ಊರು ಬಿಟ್ಟು ಊಸಿರು ಬಿಟ್ಟು ಹೋದ ಕಥೆಯನ್ನು ಹೇಳುವ ಪರಿ-ವೈಖರಿ ಚಂದವಾಗಿದೆ.
ಕಥೆಯ ಆರಂಭದಲ್ಲಿ ಸಿಗುವ, ಊರಿಗೆ ಹೋಗುವಂತೆ ದುಂಬಾಲು ಬೀಳುವ ಯುವ ಪೀಳಿಗೆಯ ಪ್ರತೀಕದಂತಿರುವ ಗೆಳತಿಯ ಮಾತುಗಳು ಎಂತವರಿಗಾದರೂ ಎರಡು ನಿಮಿಷಗಳ ಕಾಲ ತಟಸ್ಥವಾಗುವಂತೆ ಮಾಡುತ್ತವೆ.
“ನಿವೇಲ್ಲ ಗಂಡಸರೆ ಹೀಗೆ ಕಣೊ ಕುಡಿಯೋಕೆ,ಸೇದೋಕೆ, ರಾತ್ರಿ ಮೈ ಬಿಸಿ ಆರಿಸೊಕೆ ಒಂದು ಹುಡುಗಿ ಸಿಕ್ರೆ ಸಾಕು ಜೀವನ ಸಾರ್ಥಕ ಅಂತೀರಾ”-ಎಂತ ಪಕ್ವ ಮಾತು.ಇಷ್ಟು ಮಾತ್ರ ಕಂಡ ಹುಡುಗನೊಬ್ಬ ವರಷಾನುಗಟ್ಟಲೆ ಹುಟ್ಟುರಿನ ಗೋಜಿಗೆ ಹೋಗದೆ ಉಳಿದರೆ ಹೆತ್ತ ತಂದೆಗೆ ಮರವೇ ಮಗನಂತೆ ಆಶ್ರಯಿಸುವ ಕಥೆ ಮನಕಲಕುತ್ತದೆ.
ಕಂಟಿ ಎಂಬ ಆಳು ಧರ್ಮಾಂತರದ ಕಥೆ ಹೇಳುತ್ತಾನೆ. “ಚರ್ಚ್ ನ ಪೂಜಾರಪ್ಪ”ನೆನ್ನುವ ಮುಗ್ಧತೆ, ಅಪ್ಪನಿಗೆ ಜೀವದ ಗೆಳೆಯನಂತುಳಿಯುವ ಭಾವೈಕ್ಯತೆ ಸನ್ನವೇಶಗಳು ಧರ್ಮಾಂಧರ ಮುಖಕ್ಕೆ ರಾಚುವಂತಿವೆ.
ಕಂಟಿಯ ಮಗ ತೋತ್ಯಾ ಕಥಾನಾಯಕನನ್ನು ಕೊನೆಯ ಪುಟಗಳಲ್ಲಿ ಕಾಯುವ ಬಗೆ, “ಮಾಲಕ್” ಎಂಬ ಶಬ್ಧ ಎಲ್ಲವು ಭಾವನೆಗಳ ತಿಕ್ಕಾಟದಲ್ಲಿ ಅರೆಗಳಿಗೆ ವಿರಮಿಸುತ್ತವೆ.
ಇದು ಕಥೆಯಲ್ಲಿ ಬರುವ ಸಣ್ಣಪುಟ್ಟ ಪಾತ್ರಗಳ ವಿವರಣೆಯಾಯಿತು ಅಸಲಿ ಪಾತ್ರದ ಬಗೆಗೆ ನಾನೀನ್ನು ಎನನ್ನು ಹೇಳಲೆ ಇಲ್ಲ. ಪುಸ್ತಕದ ಮುಖಪುಟದಲ್ಲಿ ಕಾಣ ಸಿಗುವ ಹಣ್ಣು ಹಣ್ಣು ಮುದುಕಿ, ಬದುಕಿನ ಜಂಜಾಟಕ್ಕೊ ಕಾಲದ ಹೊಡೆತಕ್ಕೊ, ವಯಸ್ಸಿನ ಪಕ್ವತೆಗೋ ಸಿಕ್ಕು-ಸುಕ್ಕಾದ ಹಿರಿ ಜೀವ ಕಥೆಗೆ ಬೇಕಾದ ಮೂಲ ವಸ್ತುಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅಸಲಿಗೆ ಕಥೆ ಹೇಳುವವಳು ಅವಳೆ ಇಲ್ಲಿ ಈ ಊರಿಗೆ ಬಂದ ಯುವಕ ತನ್ನ ನೆನಪನ್ನು ಅವಳ ಕಥೆಗೆ ಹೊಂದಿಸಿಕೊಳ್ಳುತ್ತಾ ಹೋಗುತ್ತಾನೆ. ಕಥೆಯಲ್ಲಿ ಅವಳ ಹೆಸರು ಗುಬ್ಬಿ ಆಯಿ. ಅವಳೆ ಹೇಳುವಂತೆ ಕಥೆ ಹೇಳಲಿಕ್ಕಾಗಿಯೆ ನಾನೊಬ್ಬಳು ಉಳಿದಿದ್ದೇನೆ ಎನ್ನುವ ಮಾತು ಕಥೆ ಓದುವವ ಗಮನಕ್ಕೆ ಬರದೆ ಇರಲಾರದು.
ಗುಬ್ಬಿ ಆಯಿ, ಗುಬ್ಬಿ ಆಯಿ ಹಿಂದೆ ಮುಂದೆ ಚಿಲಿಪಿಲಿಗುಟ್ಟುವ ಗುಬ್ಬಿಗಳು ಆಕೆಯ ಹೃದಯವಂತಿಕೆಗೆ ಹಿಡಿದ ಕೈಗನ್ನಡಿ.
ಆಕೆಯನ್ನು ವಿಮರ್ಶಿಸುವ ಗೋಜಿಗೆ ನಾನಿಲ್ಲಿ ಹೋಗಲಾರೆ ಕಾರಣ ವಿಮರ್ಶೆಗೆ ದಕ್ಕದ ಗತಕಾಲದ ಪ್ರತೀಕವದು.
ಈ ಕಥೆಯ ರೂವಾರಿಯಾದ ತಮ್ಮನ ವಯಸ್ಸಿನ ಕಪಿಲ ಪಿ ಹುಮನಾಬಾದಿಯವರಿಗೆ ಸಾಕಷ್ಟು ಶುಭಕಾಮನೆಗಳು. ವಯಸ್ಸಿಗೆ ಮೀರಿದ ಬರವಣಿಗೆ ಒಂದನ್ನ ಓದುಗರಿಗೆ ನೀಡಿದ್ದೀರಿ ವಾಸ್ತವಕ್ಕೂ ಭೂತಕಾಲದ ಘಟನೆಗಳಿಗೂ ಕೊಂಡಿ ಹಾಕಿ ಹಾಣಾದಿಯಲ್ಲಿ ಹಳ್ಳ-ಕೊಳ್ಳ, ಜಾಲಿಯ ನೆರಳಲ್ಲಿ ನಡೆಸುವಾಗ ನಮ್ಮಲ್ಲೂ ಒಂದು ಜಾಲಿ ಮುಳ್ಳು ನಟ್ಟು ಕಿತ್ತಷ್ಟು ನೋವನ್ನು ಉಳಿಸುವ ತಾಕತ್ತು ನಿಮ್ಮ ಅಭಿವ್ಯಕ್ತಿ ಶೈಲಿಗೆದೆ. ಶುಭವಾಗಲಿ.
ಹಾಣಾದಿ ಪುಸ್ತಕವನ್ನು ನಮ್ಮ ಹಸಿವಿಗೆ ಪೂರೈಸಿದ ತಮ್ಮ ಚಾಂದ್ ಕವಿಚಂದ್ರ ಹಾಗೂ ಬಯಲ ಬಾಗಿಲು ಖ್ಯಾತಿಯ ಶಿವಮಾಧುವಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.