‘ಮಕ್ಕಳಲ್ಲಿ ಎ ಡಿ ಹೆಚ್ ಡಿ ತೊಂದರೆ, ಸವಾಲುಗಳು ಮತ್ತು ನಿರ್ವಹಣೆ’ ವೀಣಾ ಹೇಮಂತ್ ಗೌಡ ಪಾಟೀಲ್

ಯಶಸ್ ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ಆತನನ್ನು ಹಿಡಿಯುವುದು ಆತನ ತಾಯಿ ತಂದೆಯರಿಗೆ ಅತಿ ದೊಡ್ಡ ಸವಾಲಾಗಿತ್ತು. ಸಾಮಾನ್ಯವಾಗಿ ಚುರುಕಾಗಿರುವ ಮಕ್ಕಳಿಗೆ ಹೋಲಿಸಿದರೆ ಈತನದ್ದು ತುಸು ಅತಿರೇಕವೇ ಎನ್ನಿಸುವಂತಹ ವರ್ತನೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ತುಸು ಹೆಚ್ಚೇ ಉದ್ವೇಗಕ್ಕೆ ಒಳಗಾಗುತ್ತಿದ್ದ ಆತ ಮನೆಯ ಎಲ್ಲ ಸಾಮಾನುಗಳನ್ನು ಕಿತ್ತು ಹಾಕುತ್ತಿದ್ದ. ಒಂದೇ ಒಂದು ಕ್ಷಣವೂ ಆತನನ್ನು ಸುಮ್ಮನಿರಿಸಲು ಸಾಧ್ಯವಾಗುತ್ತಿರಲಿಲ್ಲ ಆತನ ಪಾಲಕರಿಗೆ.

 ಮೂರು ವರ್ಷದವನಾದ ಯಶಸ್ ನನ್ನು ಪ್ಲೇ ಹೋಮ್ ಗೆ ಕಳಿಸೋಣವೆಂದು ಯೋಚಿಸಿದ ಪಾಲಕರು ಆತನನ್ನು ಪ್ಲೇ ಹೋಂಗೆ ದಾಖಲು ಮಾಡಿದರೆ ಅಲ್ಲಿಯೂ ಕೂಡ ಆತನನ್ನು ಒಂದೆಡೆ ಕೂಡಿಸಲು ಸಾಧ್ಯವಾಗದೆ ಕೈ ಚೆಲ್ಲುತ್ತಿದ್ದರು ಶಿಕ್ಷಕರು. ಉಳಿದ ಮಕ್ಕಳಿಗೆ ತೊಂದರೆ ಮಾಡದಿದ್ದರೂ ಆಟದ ಸಾಮಾನುಗಳನ್ನು ಕಿತ್ತುವ, ಕೆಡವುವ, ಸರಿದಾಡಿಸುವ ಆಟದ ಜಾರು ಬಂಡೆಯ ನಟ್ಟು ಬೋಲ್ಟ್ ಗಳನ್ನು ಬಿಚ್ಚುವ ಆತನ ಕೃತ್ಯ ಗಳಿಂದ ಆತನನ್ನು ಹಿಡಿಯುವುದರಲ್ಲಿ ಅಲ್ಲಿನ ಸಿಬ್ಬಂದಿಗೆ ಸಾಕಾಗಿ ಹೋಗುತ್ತಿತ್ತು.

 ಮುದ್ದು ಮೊಗದ ಬೊಗಸೆ ಕಂಗಳ ಆ ಬಾಲಕನನ್ನು ಬಯ್ಯಲಾಗದ, ಶಿಕ್ಷಿಸಲೂ ಆಗದ ಪರಿಸ್ಥಿತಿ ಎಲ್ಲರದಾಗಿತ್ತು. ತಿಳಿಸಿ ಹೇಳಿದರೆ ಅರಿತುಕೊಳ್ಳಲಾಗದ ಮಗುವಿನ ಚಟುವಟಿಕೆಯ ವೈಪರೀತ್ಯತೆ ಪಾಲಕರನ್ನು ಕಂಗಾಲಾಗಿಸಿತ್ತು ಎಂದರೆ ತಪ್ಪಿಲ್ಲ.
 ಕೊನೆಗೆ ಆಪ್ತರ ಸಲಹೆಯ ಮೇರೆಗೆ ವೈದ್ಯರಿಗೆ ತೋರಿಸಿದಾಗ ಅರಿವಾಗಿದ್ದು ಆ ಮಗುವಿಗೆ
ಎ ಡಿ ಎಚ್ ಡಿ ತೊಂದರೆ ಇದೆ ಎಂದು.

 ಏನಿದು ಎ ಡಿ ಎಚ್ ಡಿ  ಎಂದಿರಾ??  
“ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸ್ಆರ್ಡರ್” ಎಂದು ಹೆಸರೇ ಹೇಳುವಂತೆ ಇದೊಂದು ಅತಿಯಾದ ಗಮನದ ಕೊರತೆಯನ್ನು ಹೊಂದಿರುವ ಉದ್ವೇಗಕ್ಕೊಳಗಾಗುವ, ಚಂಚಲ ಚಿತ್ತ ವನ್ನು ಹೊಂದಿರುವ, ಯಾವ ಮಾತನ್ನು ಕೇಳಿಸಿಕೊಳ್ಳದಿರುವ ಒಂದು ಸಂಕೀರ್ಣ ಸ್ಥಿತಿಯಾಗಿದ್ದು  ವೈದ್ಯಕೀಯ ವಿಜ್ಞಾನದ ಪರಿಭಾಷೆಯಲ್ಲಿ ಹೇಳುವುದಾದರೆ ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುವ ನರ ವೈಜ್ಞಾನಿಕ ಸಮಸ್ಯೆಯಾಗಿದೆ.

 ಎ ಡಿ ಹೆಚ್‍ ಡಿ ತೊಂದರೆಯು ವಂಶ ಪಾರಂಪರ್ಯ ವಾಗಿ ಕೂಡ ಬರಬಹುದಾದ ತೊಂದರೆಯಾಗಿದ್ದು ಪಾಲಕರಲ್ಲಿ ಈ ತೊಂದರೆ ಇದ್ದರೆ ಅವರ ಮಕ್ಕಳಲ್ಲಿ ತೊಂದರೆ ಕಾಣಿಸಿಕೊಳ್ಳುವ ಶೇಕಡ 50ರಷ್ಟು ಸಾಧ್ಯತೆಗಳು ಇರುತ್ತವೆ.

 ಇದನ್ನು ಹೆಚ್ಚಾಗಿ ನಾವು ಮಕ್ಕಳಲ್ಲಿ ಕಾಣಬಹುದು. ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವೇ? ಎಂದರೆ ಕೇಳಿ ಬರುವ ಬಹುತೇಕ ಉತ್ತರ ಇಲ್ಲ ಎಂದು. ತೀವ್ರತರವಾದ ಈ ತೊಂದರೆಯಿಂದ  ಬಳಲುತ್ತಿರುವ ಮಕ್ಕಳನ್ನು ಒಂದು ಹಂತದವರೆಗೆ ಮಾತ್ರ ಸಾಮಾಜಿಕ ಬದುಕು ನಿರ್ವಹಿಸಲು ಸಾಧ್ಯವಾಗುವಷ್ಟು ಪ್ರಯತ್ನ ಮಾಡಬಹುದೇ ಹೊರತು ಸಂಪೂರ್ಣ ಗುಣಮುಖವಾಗುತ್ತದೆ ಎಂಬ ಭರವಸೆಯನ್ನು ಕೊಡಲು ಸಾಧ್ಯವಿಲ್ಲ.

 ಏಡಿ ಎಚ್ ಡಿ ತೊಂದರೆ ಇರುವ ಮಕ್ಕಳಲ್ಲಿ ನರವ್ಯೂಹಗಳ ಸಂರಚನೆ ಸರಿಯಾಗಿ ಆಗಿರುವುದಿಲ್ಲ.
ಮೆದುಳಿನ ವಾಹಕಗಳು ಕಗ್ಗಂಟಾಗಿದ್ದು ಯಾವುದೇ ರೀತಿಯ ಮಾಹಿತಿಗಳು ಮೆದುಳಿನಿಂದ ದೇಹದ ಉಳಿದ ಭಾಗಗಳಿಗೆ ಸರಳವಾಗಿ ಸಾಗುವುದಿಲ್ಲ. ಇಂತಹ ಮಕ್ಕಳಲ್ಲಿ ಯೋಚಿಸುವ ಮತ್ತು ಯೋಜಿಸುವ ಕ್ರಿಯಾಶೀಲತೆ ಕಡಿಮೆ.

ಎ ಡಿ ಎಚ್ ಡಿ ಇಂದ ಬಳಲುವ ಮಕ್ಕಳು ಅನುಭವಿಸುವ ತೊಂದರೆಗಳು ಹೀಗಿವೆ.
* ಕೆಲವೇ ಕ್ಷಣಗಳ ಹಿಂದೆ ನೀವು ಹೇಳಿದ ವಿಷಯಗಳನ್ನು ಆ ಮಕ್ಕಳು ಮರೆತು ಮತ್ತೆ ತಮ್ಮದೇ ರೀತಿಯಲ್ಲಿ ವ್ಯವಹರಿಸುತ್ತಾರೆ.
*ಮಕ್ಕಳು ವಿಪರೀತ ಮಾತನಾಡುತ್ತಾರೆ ಮತ್ತು ಎಷ್ಟೋ ಬಾರಿ ಅವರ ಮಾತುಗಳು ಅಸಂಬದ್ಧತೆಯಿಂದ ಕೂಡಿರುತ್ತವೆ.
 *ಮಕ್ಕಳು ಅತಿಯಾದ ಚಟುವಟಿಕೆಯಿಂದ ಕೂಡಿರುತ್ತಾರೆ
* ವಸ್ತುಗಳನ್ನು ಎಸೆಯುವ, ಹೊಡೆಯುವ ಬಡಿಯುವ, ಬೀಳುವೆನೆಂಬ ಭಯವು ಇಲ್ಲದೆ ಹಾರಾಡುವ, ಜಿಗಿದಾಡುವ, ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತರುವ  ರೀತಿಯಲ್ಲಿ ಈ ಮಕ್ಕಳು ವರ್ತಿಸುತ್ತವೆ.
* ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಕಿತ್ತುವುದು, ಹರಿಯುವುದು ಸದಾ ಒಂದಿಲ್ಲೊಂದು ಕೀಟಲೆಯಲ್ಲಿ ತೊಡಗಿಕೊಂಡಿರುತ್ತಾರೆ.
* ಯಾರೊಂದಿಗೂ ಸ್ನೇಹಿತರಾಗಲು ಇಷ್ಟಪಡದ ಇವರು ಯಾರ ಜೊತೆಗೂ ನೇರವಾಗಿ ಕಣ್ಣು ಸೇರಿಸಿ  ಮಾತನಾಡಲು ಇಚ್ಚಿಸುವುದಿಲ್ಲ.
* ಮತ್ತೆ ಕೆಲವರು ಸದಾ ಹಗಲುಗನಸು ಕಾಣುವುದರಲ್ಲಿಯೇ ಇರುತ್ತಾರೆ.
* ವಿಷಯವನ್ನು ಅರಿತುಕೊಳ್ಳುವಲ್ಲಿ ತೊಂದರೆಯನ್ನು ಅನುಭವಿಸುವ ಮಕ್ಕಳು, ಕೈ ಬಾಯ್ಗಳ ಚಲನೆ ಮತ್ತು ಮಾತುಗಳಲ್ಲಿ ಸಮತೋಲನ ಇರುವುದಿಲ್ಲ.

 ಮೇಲ್ಕಂಡ ತೊಂದರೆಗಳಿಗೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮತ್ತು ಔಷಧೀಯ ಚಿಕಿತ್ಸೆ ಇರುವುದು ನಿಜವಾದರೂ ಈ ತೊಂದರೆ ಸಂಪೂರ್ಣವಾಗಿ ಗುಣಮುಖವಾಗುವುದಿಲ್ಲ.

 ಹಾಗೆಂದು ವೈದ್ಯರಿಗೆ ತೋರಿಸದೆ, ಚಿಕಿತ್ಸೆ ಪಡೆಯದೆ ಹೋದರೆ ಈ ತೊಂದರೆ ಹೆಚ್ಚಾಗುವ ಸಾಧ್ಯತೆ ಬಹಳ. ಇಂತಹ ತೊಂದರೆಗೆ ವೈದ್ಯಕೀಯ ಸಮಾಲೋಚನೆ, ಆಪ್ತ ಸಲಹೆ ಮತ್ತು ಪಾಲಕರ ಅತೀವ ಸಹನ ಶಕ್ತಿ  ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಕೊಂಚ ಸುಧಾರಣೆಯನ್ನು ತರಬಹುದು.

 ಪಾಲಕರು ಮಕ್ಕಳು ಅನುಭವಿಸುವ ಈ ತೊಂದರೆಯನ್ನು ನಿರ್ಲಕ್ಷಿಸಿದಾಗ  
 *ಮಕ್ಕಳು ಶಾಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತಷ್ಟು ಹಿಂದುಳಿಯುತ್ತಾರೆ.
 *ಸಾಮಾಜಿಕವಾಗಿ ಸಾರ್ವಜನಿಕವಾಗಿ ಜನರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ.
 *ಮಗುವಿನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ ಮತ್ತು ಮಗು ಆತ್ಮವಿಶ್ವಾಸವನ್ನು ಕಳೆದುಕೊಂಡು ಕೀಳರಿಮೆಯಿಂದ ಬಳಲುತ್ತದೆ.
* ಮಗುವಿನ ವರ್ತನೆಯಲ್ಲಿ ದೋಷಗಳು ಕಂಡುಬರುತ್ತವೆ.
* ಭಾವನಾತ್ಮಕವಾಗಿ ಕಂಗೆಡುವ ಮಕ್ಕಳ ಆತ್ಮಸ್ಥೈರ್ಯ ಕುಸಿಯುತ್ತದೆ. ಪರಿಣಾಮವಾಗಿ ಮಕ್ಕಳು ಅಕೃತ್ಯಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.
 ತಮ್ಮೆಲ್ಲ ತೊಂದರೆಗಳಿಗೂ ಪಾಲಕರು ಶಿಕ್ಷಕರು ಮತ್ತು ಸಮಾಜವನ್ನು ಹೊಣೆಯಾಗಿಸುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ದೊರೆಯದೆ ಹೋದಲ್ಲಿ ತೊಂದರೆಯಾಗುವುದು ಖಂಡಿತ.

 ಎ ಡಿ ಎಚ್ ಡಿ ಇರುವ ಎಲ್ಲ ಮಕ್ಕಳ ತೊಂದರೆಗಳು ಒಂದೇ ರೀತಿ ಇರುವುದಿಲ್ಲ. ಯಾವುದೇ ಕೆಲಸ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವುದು ಇವರಿಂದ ಸಾಧ್ಯವಿಲ್ಲ. ಇಂತಹ ಮಕ್ಕಳು ವ್ಯವಹಾರಿಕ ಜಗತ್ತಿನಿಂದ ದೂರವಾಗಿರುತ್ತಾರೆ. ಸಾಮಾಜಿಕ ನೀತಿ ನಿಯಮಗಳು, ಶಿಸ್ತು, ಪ್ರಜ್ಞೆ ಇವರಲ್ಲಿ ಬಹಳಷ್ಟು ಕಡಿಮೆ. ಆದರೆ ಭಾವನಾತ್ಮಕವಾಗಿ ತುಂಬಾ ಸೂಕ್ಷ್ಮ ಮನಸ್ಥಿತಿ ಇವರದಾಗಿದ್ದು ನಿರ್ಲಕ್ಷಿಸಿದಾಗ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆಗಳು ಬಹಳ. ಅವರವರ ತೊಂದರೆಗೆ ಅನುಸಾರವಾಗಿ ಅವರಿಗೆ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನೀಡಲಾಗುತ್ತದೆ. ಅಂತಹ ಮಕ್ಕಳಿಗೆ ವಿಶೇಷ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.

 ಇದೆಲ್ಲಕ್ಕೂ ಮಿಗಿಲಾಗಿ ಅಂತಹ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಪಾಲಿಸಲು ಅವಶ್ಯಕವಾದ ತಿಳುವಳಿಕೆ ಮತ್ತು ತರಬೇತಿಗಳನ್ನು ತಾವೇ ಹೊಂದಿರಬೇಕಾದದ್ದು ಅತ್ಯಂತ ಸೂಕ್ತ ಮತ್ತು ಅನಿವಾರ್ಯ. ಬಾಯಿಂದ ಹೇಳಿದಷ್ಟು ಸುಲಭವಲ್ಲ ಅಂತಹ ಮಕ್ಕಳನ್ನು ಪರಿಪಾಲಿಸುವುದು.ಪಾಲಕರ ಸಹನೆಯಿಂದ ಕೂಡಿದ ಒಡನಾಟ ಮತ್ತು ಅವರು ಕೊಡ ಮಾಡುವ ಭದ್ರತೆಗಳು ಮಕ್ಕಳಲ್ಲಿ ಅಪಾರ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ತುಸು ಕಷ್ಟವಾದರೂ ಸೂಕ್ತ ಚಿಕಿತ್ಸೆ ಮತ್ತು ತರಬೇತಿ ದೊರೆತಲ್ಲಿ ಎ ಡಿ ಎಚ್ ಡಿ ತೊಂದರೆಯಿಂದ ಬಳಲುವ ಮಕ್ಕಳು  ಸಾಮಾನ್ಯವಾದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂಬುದು ಸಮಾಧಾನದ ಸಂಗತಿ.
 ಮತ್ತೊಂದು ವಿಶೇಷವೆಂದರೆ  ಈ ತೊಂದರೆಯಿಂದ ಬಳಲುವ ಮಕ್ಕಳು ದೈಹಿಕವಾಗಿ ಅಪಾರ ಶಕ್ತಿಯನ್ನು ಹೊಂದಿದ್ದು ಉತ್ತಮವಾದ ತರಬೇತಿ ನೀಡಿದಲ್ಲಿ ಒಳ್ಳೆಯ ಕ್ರೀಡಾಪಟುವಾಗುವ ಅರ್ಹತೆಯನ್ನು ಹೊಂದಿರುತ್ತಾರೆ. 2024ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪದಕ ವಿಜೇತರಲ್ಲಿ ಸಾಕಷ್ಟು ಜನ ಎ ಡಿ ಹೆಚ್‍ ಡಿ ತೊಂದರೆ ಉಳ್ಳವರಾಗಿದ್ದರು.

 ಸ್ನೇಹಿತರೆ, ಎ ಡಿ ಎಚ್ ಡಿ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರು ಎರಡು ರೀತಿಯಲ್ಲಿ ಹೋರಾಟಗಳನ್ನು ಮಾಡಬೇಕಾಗುತ್ತದೆ. ಮೊದಲು ಅವರ ಮಕ್ಕಳ ತೊಂದರೆಯ ಜೊತೆಗೆ ಜೀವನಪರ್ಯಂತದ ಸಹನಶೀಲ ಸ್ವಭಾವವನ್ನು ರೂಡಿಸಿಕೊಂಡು ಅವರನ್ನು ಬೆಳೆಸುವುದು. ಎರಡನೆಯದು ಸೋ ಕಾಲ್ಡ್ ಆರೋಗ್ಯವಂತ ಸಮಾಜದ ಜನರ ಅವಿವೇಕದ ವರ್ತನೆಯಿಂದ. ಈ ತೊಂದರೆಯಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ಪಾಲಕರಿಗೆ ನಿಮ್ಮ ಸಹಾನುಭೂತಿಯ ಅವಶ್ಯಕತೆ ಇದೆಯೇ ಹೊರತು, ಹಿಂದಿನ ಜನ್ಮದ ಕರ್ಮಗಳನ್ನು ನೆನಪಿಸುವ ಹೀಯಾಳಿಕೆಯ ಮಾತುಗಳಲ್ಲ. ಈಗಾಗಲೇ ನೊಂದಿರುವ ಅವರ ಮನಸ್ಸಿಗೆ ಪ್ರಜ್ಞಾಪೂರ್ವಕವಾದ ನಮ್ಮ ಮಾತುಗಳು ತಂಪನ್ನೆರೆಯಲಿ, ಧೈರ್ಯ ಮತ್ತು ಭರವಸೆ ಮೂಡಿಸಲಿ ಎಂಬ ಆಶಯದೊಂದಿಗೆ


Leave a Reply

Back To Top