ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ತರಹಿ ಗಜಲ್
ನೂರ ಅಹ್ಮದ್ ನಾಗನೂರ ಅವರ ಮಿಶ್ರಾ
(ಮನವು ಮುಸುಕಿನಲಿ…)
ಆ ಊರಿನ ಬೀದಿಗಳಲಿ ನಡೆಯುವಾಗ
ಹೆಜ್ಜೆಗಳು ಸಾವಧಾನವಾಗಲಿ
ಮನವು ಮುಸುಕಿನಲಿ ಮುಳುಗುವಾಗ
ಧ್ಯಾನವು ದೇವರಾಗಲಿ
ಸಪ್ಪಳಕೆ ಹೆದರಿ ಅದೆಷ್ಟು ಜೀವಗಳು
ಕಂಗಾಲಾಗಿ ಮಣ್ಣುಪಾಲಾದವು
ಅಲೆಗಳೆದ್ದು ಗದ್ದಲಾಗುವ ಮುನ್ನ
ಲಯರಾಗದಿ ಹಾಡಾಗಲಿ
ಕೊನೆಗೇನು ಪಡೆದೆ ನೆರಳ ಬೆಂಬತ್ತಿ
ಬಿಡದೆ ಓಡೋಡಿದ ಮನವೆ
ಆಡಬೇಕೆನಿಸಿದ ದ್ವೇಷದ ಮಾತುಗಳೆಲ್ಲ
ಇಂದಿಗಿಂದಿಗೆ ವಿರಾಮವಾಗಲಿ
ಬಹು ದಿನದಿಂದ ನಿರುಕಿಸಿದ ಭೇಟಿಯು
ಸಮರದಲಿ ಒದಗಿದರೆ ಏನು ಫಲವು
ಮಾತಿಗೆ ಮಾತೇಕೆ ಸುಮ್ಮನಿದ್ದುಬಿಡು
ಮೌನವೇ ಸಕಲ ಮಾತಾಗಲಿ
ಕಾಡಿನುದ್ದಕ್ಕೂನಡೆದ ಜಾನಕಿಯು ನಾನು
ಸತ್ವಪರೀಕ್ಷೆಗಳಲಿ ಪಳಗಿರುವೆ
ಅಂತಿಮ ಹಂತವು ಭುವಿಯು ಕರೆದಿದೆ
ಇಂತೂ ಎಲ್ಲ ಮುಕ್ತಾಯವಾಗಲಿ
ಹೊರಗಿನ ಯಾವ ದನಿ ಈಗ
ಕೇಳದು ಆಲಿಸುವ ಗೋಜೇತಕೆ ಅನು
ಲಕ್ಷ್ಯವಹಿಸಿರುವೆ ಅಂತರಂಗ ಪದಗಳೇ ತಾರಕ ಸಪ್ತಕದ ಧ್ವನಿಯಾಗಲಿ