ಕಾವ್ಯ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಲಾಲ್ ಬಹದ್ದೂರ್ ಶಾಸ್ತ್ರಿ
ಕೃಶ ಕಾಯದ, ಕುಳ್ಳನೆಯ ವ್ಯಕ್ತಿತ್ವದ ಆದರೆ ಅಷ್ಟೇ ಧೀಮಂತಿಕೆಯನ್ನು ಹೊಂದಿದ್ದ ಆ ವ್ಯಕ್ತಿ ನಮ್ಮ ದೇಶದ ಅತ್ಯಂತ ದೊಡ್ಡ ಹುದ್ದೆಗೆ ಏರಿದ್ದು ಕೇವಲ ಕಾಕತಾಳೀಯವಲ್ಲ, ಮಾತೃಭೂಮಿಯಾದ ಭಾರತ ದೇಶದೆಡೆಗಿನ ಪ್ರೀತಿ, ದೇಶದ ಬೆನ್ನೆಲುಬಾದ ರೈತರ ಕುರಿತ ಅಪರಿಮಿತ ಕಾಳಜಿ, ಆರ್ಥಿಕ ಸುಧಾರಣೆಗಳ ಮೂಲಕ, ಸಾಮಾಜಿಕ ಮತ್ತು ಸಂಸ್ಕೃತಿಯ ಮೂಲಸೆಲೆಯನ್ನು ಅರಿತ ಸಂಪೂರ್ಣ ಭಾರತೀಯತೆಯೇ ಮೈವೆತ್ತಂತಿದ್ದರೂ ರಾಜಕೀಯ ಚಾಣಾಕ್ಷತೆ ಮತ್ತು ನಿಷ್ಟುರತೆಗಳನ್ನು ಒಳಗೊಂಡ ಆ ವ್ಯಕ್ತಿಯೇ ನಮ್ಮ ದೇಶದ ಎರಡನೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ.
ಇಂದಿನ ಉತ್ತರ ಪ್ರದೇಶದ ಮೊಘಲ್ಸರಾಯಿ ಎಂಬ
ಊರಿನಲ್ಲಿ 1904 ಅಕ್ಟೋಬರ್ 2ರಂದು ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾಸ್ತವ.ತಂದೆ ಶಾರದಾ ಪ್ರಸಾದ್ ಮತ್ತು ತಾಯಿ ರಾಮದುಲಾರಿ ದೇವಿ.
ಈ ಮೊದಲು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ತಂದೆ ನಂತರ ಉಪತಹಶೀಲದಾರರಾಗಿ ಕಾರ್ಯ ನಿರ್ವಹಿಸುವಾಗ ಭಯಾನಕ ಪ್ಲೇಗ್ ಮಾರಿಗೆ ಬಲಿಯಾದರು. ಆಗ ಲಾಲ್ ಬಹದ್ದೂರ್ ಅವರ ವಯಸ್ಸು ಕೇವಲ 18 ತಿಂಗಳು. ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ತಾಯಿಯ ತಂದೆಯ ಬಳಿ ಮೊಘಲ್ಸರಾಯಿಯಲ್ಲಿಯೇ ವಾಸವಾಗಿದ್ದರು.
ಅತ್ಯಂತ ಸ್ವಾಭಿಮಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಹೈಸ್ಕೂಲಿನಲ್ಲಿ ಓದುತ್ತಿರುವಾಗ ಗಾಂಧೀಜಿಯವರು ನೀಡಿದ ಅಸಹಕಾರ ಚಳುವಳಿಗೆ ಕಾಲಿಡುವ ಸಲುವಾಗಿ ಶಿಕ್ಷಣವನ್ನೇ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು.
ಸ್ವಾತಂತ್ರ್ಯ ಹೋರಾಟದ ಪ್ರಮುಖರಲ್ಲಿ ಒಬ್ಬರಾದ ಜೆ ಬಿ ಕೃಪಲಾನಿಯವರ ಹಿಂಬಾಲಕರಾಗಿ ಅವರ ಸಂಪರ್ಕಕ್ಕೆ ಬಂದ ಲಾಲ್ ಬಹದ್ದೂರ್ ಸ್ವಾತಂತ್ರ್ಯ ಎಂಬ ಮಹಾಯಜ್ಞಕ್ಕೆ ಬಿಸಿ ರಕ್ತದ ತರುಣರ ಅವಶ್ಯಕತೆ ಬಹಳವಿದೆ ಎಂಬುದನ್ನು ಅರಿತು ಸಮಾನ ಮನಸ್ಕರ ಗುಂಪುಗಳನ್ನು ರಚಿಸಿಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದರು. ಪಿಕೆಟಿಂಗ್ ಮಾಡುವುದು, ಬ್ರಿಟಿಷ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಹೋರಾಡುತ್ತಿದ್ದ ಇವರಿಗೆ ಅನೇಕ ಬಾರಿ ಸೆರೆಮನೆ ವಾಸ ಲಭಿಸಿತ್ತು.
ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ಅನಿಬೆಸೆಂಟ್ ರಿಂದ ಪ್ರಭಾವಿತರಾಗಿದ್ದ ಲಾಲ್ ಬಹದ್ದೂರ್ ಅವರು ಮುಂದೆ ಮುಜಾಫರ್ ಪುರದಲ್ಲಿ ಹರಿಜನರ ಉದ್ದಾರಕ್ಕಾಗಿ ಶ್ರಮಿಸಿದರು. ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸುವ ನಿಟ್ಟಿನಲ್ಲಿ ತಮ್ಮ ಮನೆತನದ ಶ್ರೀವಾಸ್ತವ ಎಂಬ ಅಡ್ಡ ಹೆಸರನ್ನು ತೆಗೆದು ಹಾಕಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅವರು ಪಡೆದ ಶಾಸ್ತ್ರಿ ಎಂಬ ಪದವಿಯೇ ಅವರಿಗೆ ಕೊನೆಯವರೆಗೂ ಅಡ್ಡ ಹೆಸರಾಗಿ ಉಳಿಯಿತು. 1920 ರಲ್ಲಿ ಅವರು ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ಲೋಕಸೇವಕ ಮಂಡಲ (ಸರ್ವೆಂಟ್ ಆಫ್ ದ ಪೀಪಲ್ ಸೊಸೈಟಿ)ಯ ಅಧ್ಯಕ್ಷರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕಾರ್ಯಕರ್ತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು.
1926 ರಲ್ಲಿ ಮಿರ್ಜಾಪುರದ ಲಲಿತಾ ಎಂಬ ಕನ್ಯೆಯನ್ನು ಶಾಸ್ತ್ರಿಯವರು ವಿವಾಹವಾದರು. ಇವರ ಅನುರೂಪದ ದಾಂಪತ್ಯಕ್ಕೆ ಒಟ್ಟು ನಾಲ್ಕು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು.
ಸ್ವಾತಂತ್ರ್ಯ ನಂತರ ಉತ್ತರ ಪ್ರದೇಶದ ಪಾರ್ಲಿಮೆಂಟರಿ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ ಅವರು ಆರಕ್ಷಕ ಮತ್ತು ಸಾರಿಗೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಮಹಿಳೆಯರನ್ನು ವಾಹನಗಳಲ್ಲಿ ನಿರ್ವಾಹಕರನ್ನಾಗಿ ಮೊಟ್ಟಮೊದಲ ಬಾರಿಗೆ ನೇಮಿಸಿದರು.
ಗೃಹ ಖಾತೆಯನ್ನು ನಿರ್ವಹಿಸುವಾಗ ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡುವುದರ ಬದಲು ನೀರನ್ನು ಜೆಟ್ ಸ್ಪ್ರೇ ಮೂಲಕ ಸ್ಪ್ರೇ ಮಾಡಲು ಆದೇಶ ನೀಡಿದರು.
ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ 1947ರ ಸ್ವಾತಂತ್ರ್ಯದ ಸಮಯದಲ್ಲಿ ಉಂಟಾದ ಕೋಮು ಸಂಘರ್ಷ, ಭಾರತ ಮತ್ತು ಪಾಕಿಸ್ತಾನಗಳ ವಿಭಾಗದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಹೋಗುವಾಗ ಉಂಟಾದ ಘರ್ಷಣೆಗಳನ್ನು ತಡೆಯಲು ಸಮರ್ಪಕವಾಗಿ ಕಾರ್ಯನಿರ್ವಹಿಸಿದರು.
1951 ರಲ್ಲಿ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡುವ ಮೂಲಕ ದಿಟ್ಟತನವನ್ನು ತೋರಿದರು.
1947ರಲ್ಲಿ ಭಾರತ ದೇಶವು ಸ್ವಾತಂತ್ರ್ಯಗೊಂಡಾಗ ಮೊದಲ ಪ್ರಧಾನಿ ನೆಹರು ಅವರ ಕ್ಯಾಬಿನೆಟ್ ನೆಟ್ ನಲ್ಲಿ ಗೃಹಮಂತ್ರಿ ಮತ್ತು ರೈಲ್ವೆ ಮಂತ್ರಿಗಳ ಪದವಿಯನ್ನು ಅವರು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದರು.
ಭಾರತದಲ್ಲಿ ಬಡತನ ತಾಂಡವವಾಡುತ್ತಿದ್ದ ಆ ಸಮಯದಲ್ಲಿ ಶಾಸ್ತ್ರಿಜಿಯವರು ಹಾಲಿನ ಕ್ರಾಂತಿಯನ್ನು ಮಾಡಿ ಇಂದಿನ ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಅಮೂಲ್ ಹಾಲಿನ ಡೈರಿಯ ಸ್ಥಾಪನೆಗೆ ಕಾರಣರಾದರಲ್ಲದೆ ಅಖಿಲ ಭಾರತ ಹಾಲು ಒಕ್ಕೂಟವನ್ನು ಸ್ಥಾಪಿಸಿದರು.
1964ರಲ್ಲಿ ನೆಹರು ಅವರ ಮರಣದ ನಂತರ ಪ್ರಧಾನಿಯಾಗಿ ಆಯ್ಕೆಯಾದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಸಿರು ಕ್ರಾಂತಿಯನ್ನು ಪ್ರಾರಂಭಿಸಿದರು. ಪರಿಣಾಮವಾಗಿ ಗೋಧಿಯ ಕಣಜ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೆಚ್ಚಿನ ಉತ್ಪಾದನೆಗೆ ನಾಂದಿ ಹಾಡಿದರು.
ದೇಶದಲ್ಲಿ ಆಹಾರ ಧಾನ್ಯವು ಹೆಚ್ಚಳವಾಗುವವರೆಗೆ ವಾರದಲ್ಲಿ ಒಂದು ದಿನ ಉಪವಾಸ ವ್ರತವನ್ನು ಆರಂಭಿಸಿದ ಅವರು ದೇಶದ ಜನತೆಗೂ ಕೂಡ ಆಹಾರ ಧಾನ್ಯವನ್ನು ಪೋಲು ಮಾಡದಿರಲು ಮತ್ತು ಉಪವಾಸ ವ್ರತವನ್ನು ಕೈಗೊಳ್ಳಲು ಕರೆ ನೀಡಿದರು.
ಅತ್ಯಂತ ಸರಳ ಜೀವಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿ ತಮಗೆ ದೊರೆಯುವ ಸಂಬಳದಲ್ಲಿ ಹತ್ತು ರೂಪಾಯಿ ಹಣ ಮಿಕ್ಕುತ್ತದೆ ಎಂಬ ಕಾರಣಕ್ಕಾಗಿ ಸರ್ಕಾರಕ್ಕೆ ಪತ್ರವನ್ನು ಬರೆದು ಆ ಹಣವನ್ನು ಮರಳಿಸಿದರು.
ದೇಶದ ಪ್ರಧಾನಿಯಾಗಿದ್ದರೂ ಅತ್ಯಂತ ಸರಳವಾದ ಮಧ್ಯಮ ವರ್ಗದ ಜೀವನವನ್ನು ನಡೆಸಿದ ಶಾಸ್ತ್ರೀಯವರು ತಮ್ಮ ಪತ್ನಿ ಮತ್ತು ಮಕ್ಕಳಿಗೂ ಸರಳತೆಯೇ ಸುಂದರವಾದ ಬದುಕು ನಿರ್ವಹಿಸಲು ಇರುವ ಮಾರ್ಗ ಎಂದು ತೋರಿದರು.
1965ರ ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧದ ಸಮಯದಲ್ಲಿ ದೇಶಕ್ಕೆ ರೈತರು ಮತ್ತು ಯೋಧರು ನೀಡುವ ಕಾಣಿಕೆಯ ಮುಂದೆ ಬೇರೆ ಯಾವುದೂ ಇಲ್ಲ ಎಂಬ ವಿಷಯವನ್ನು ಮನಗಾಣಿಸುವ ನಿಟ್ಟಿನಲ್ಲಿ “ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯನ್ನು ಅವರು ಮಾಡಿದರು.
1965 ರಲ್ಲಿ ಕಾಲು ಕೆರೆದು ಜಗಳಕ್ಕೆ ಬಂದ ಪಾಕಿಸ್ತಾನದ ಸೈನ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೈನ್ಯಕ್ಕೆ ಶುಭಾಷ್ ಗಿರಿ ನೀಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ತಾಶ್ಕೆಂಟ್ ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಹೋಗಿದ್ದ ಶಾಸ್ತ್ರಿಜಿಯವರು 11 ಜನವರಿ 1966 ರಂದು ಹೃದಯಾಘಾತರಿಂದ ತೀರಿ ಹೋದರು. ಅವರ ಪಾರ್ಥಿವ ಶರೀರಕ್ಕೆ ದೆಹಲಿಯ ವಿಜಯಘಾಟ್ ನಲ್ಲಿ
ಎಲ್ಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಮರಣದ ಕುರಿತಾದ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿದ್ದು ಸ್ವತಃ ಶಾಸ್ತ್ರಿಯವರ ಪತ್ನಿ ಶ್ರೀಮತಿ ಲಲಿತಾ ಶಾಸ್ತ್ರಿಯವರು ಈ ಕುರಿತು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ಅದೇನೆ ಇದ್ದರೂ ಸ್ವತಂತ್ರ ಭಾರತದ ಅತ್ಯಂತ ನಿಸ್ಸೃಹ, ಧೀಮಂತ, ಸರಳ, ಸಜ್ಜನ, ದೇಶಭಕ್ತ ಮತ್ತು ಪ್ರಾಮಾಣಿಕ ರಾಜಕಾರಣಿ ಎಂದು ನೆನೆದಾಗ ನಮ್ಮ ಕಣ್ಣ ಮುಂದೆ ಥಟ್ ಎಂದು ಬರುವುದು ವಾಮನರೂಪಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಚಿತ್ರಣ.
ಗಾಂಧೀಜಿಯವರ ಪ್ರಭಾವಲಯದಲ್ಲಿ ಬೆಳೆದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬವು ಕೂಡ ಕಾಕತಾಳೀಯವಾಗಿ ಅವರ ಹುಟ್ಟುಹಬ್ಬದೊಂದಿಗೆ ಸೇರಿಕೊಂಡಿದ್ದು ಗಾಂಧಿ ಎಂಬ ಬೃಹತ್ ಆಲದ ಮರದ ಅಡಿಯಲ್ಲಿ ಶಾಸ್ತ್ರಿಯವರ ವ್ಯಕ್ತಿತ್ವದ ಚಿತ್ರಣ ಅಡಗಿ ಹೋಗುತ್ತದೆ ಎಂಬುದೇ ವಿಪರ್ಯಾಸ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಶುಭಾಶಯಗಳು.
ವೀಣಾ ಹೇಮಂತ್ ಗೌಡ ಪಾಟೀಲ್