ಲೇಖನ ಸಂಗಾತಿ
ಗೊರೂರುಅನಂತರಾಜು
‘ಹರಿಶ್ಚಂದ್ರ ಸತ್ಯಕ್ಕಾಗಿ
ಪಟ್ಟ ಕ್ಲೇಶವನ್ನೆಲ್ಲಾ
ನಾನೂ ಪಡಬೇಕು:
ಗಾಂಧೀಜಿ’
ಇಂದು ಗಾಂಧಿ ಜಯಂತಿ. ಗಾಂಧೀಜಿಯವರ ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ಎರಡು ವರ್ಷ ಕಳೆದಿದೆ. ನಮ್ಮ ಅಕ್ಕ ಬಾವನವರು ಗುಜರಾತ್ ಪ್ರವಾಸ ಪ್ರಸ್ತಾಪಿಸಿದಾಗ ಆ ಪ್ರವಾಸಿ ಪಟ್ಟಿಯಲ್ಲಿ ನನ್ನನ್ನು ಆಕರ್ಷಿಸಿದ್ದು ಒಂದು ದ್ವಾರಕ ಮತ್ತೊಂದು ಪೋರ್‌ಬಂದರ್. ಮಹಾಭಾರತ ಕಥೆ ಓದಿದ್ದು ಟಿವಿ ದಾರಾವಾಹಿ ನೋಡಿದ್ದು ದ್ವಾರಕಾ ನೋಡಲು ಆಸಕ್ತಿ ಮೂಡಿಸಿದ್ದರೆ ಗಾಂಧೀಜಿಯವರ ಜನ್ಮಸ್ಥಳ ವೀಕ್ಷಣೆಗೆ ಅವರ ಆತ್ಮಕಥೆ ಪ್ರೇರಣೆ ಆಗಿತ್ತು. ನನ್ನ ಪತ್ನಿಯದು ಧಾರ್ಮಿಕ ನೋಟ ನನ್ನದು ಐತಿಹಾಸಿಕ ಓದು ವೀಕ್ಷಣೆ. ನಾವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದು ಅಹಮದಬಾದ್‌ಗೆ. ಅಲ್ಲಿಂದ ಬೆಂಗಳೂರಿನ ನೇತಾಜಿ ಟೂರಿಸ್ಟ್ ಸಂಸ್ಥೆಯವರು ಬಸ್ ವ್ಯವಸ್ಥೆ ಮಾಡಿದ್ದರು. ಹತ್ತು ದಿನಗಳ ಟೂರ್‌ನಲ್ಲಿ ಬಸ್‌ನಲ್ಲಿ ಜರ್ನಿ ಮಾಡಿದ್ದೇ ಹೆಚ್ಚು. ಇರಲಿ ನಮ್ಮ ಹಾಗೆಯೇ ಪ್ರವಾಸ ಮಾಡಿ ಬಂದಿರುವ ಡಾ. ಪ್ರದೀಪ್ ಕುಮಾರ್ ಹೆಬ್ರಿಯವರು ಗುಜರಾತಿಗೊಂದು ಸುತ್ತು.. ಕೃತಿ ಪ್ರಕಟಿಸಿದ್ದಾರೆ. ಅದರಲ್ಲಿ ಕನ್ನಡ ವಿಶ್ವಕೋಶ ಹಾಗೂ ಸಾಮಾಜಿಕ ಜಾಲತಾಣಗಳಿಂದ ಪಡೆದ ಮಾಹಿತಿ ಒಳಗೊಂಡು ತಮ್ಮ ಪ್ರವಾಸ ದರ್ಶನ ಓದುಗರಿಗೆ ಮಾಡಿಸಿದ್ದಾರೆ. ಅದರ ಮತ್ತು ಗಾಂಧೀಜಿಯವರ ಆತ್ಮಕಥೆಯ ಓದುತ್ತಾ ನಮ್ಮ ಪ್ರವಾಸವನ್ನು ಮನದಲ್ಲೇ ಸ್ಮರಿಸಿದೆ.
ಪೋರ್‌ಬಂದರ್ ಜುನಾಗಡ ಜಿಲ್ಲೆಯ ಒಂದು ರೇವು ಪಟ್ಟಣ. ಇಲ್ಲೇ ಮಹಾತ್ಮಗಾಂಧಿಯವರು ಜನಿಸಿದ್ದು. ಇದು ಜೇತ್ವಾ ರಜಪೂತರ ನಿಯಂತ್ರಣದಲ್ಲಿತ್ತು. ಬ್ರಿಟಿಷರು ಸ್ಥಾಪಿಸಿದ ಕಾಠಿಯಾವಾಡ ಸಂಸ್ಥಾನಗಳಲ್ಲಿ ಒಂದಾದ ಪೋರ್‌ಬಂದರ್ ಸಂಸ್ಥಾನಕ್ಕೆ ಇದು ೧೯೭೫ರಿಂದ ೧೯೪೮ರವರೆಗೆ ರಾಜಧಾನಿಯಾಗಿತ್ತು. ಭಾರತ ಸ್ವಾತಂತ್ರ್ಯ ನಂತರ ಮುಂಬೈ ಪ್ರಾಂತಕ್ಕೆ ಸೇರಿದ ಇದು ಮುಂದೆ ೧೯೬೦ರಲ್ಲಿ ಗುಜರಾತ್ ಪ್ರತ್ಯೇಕ ರಾಜ್ಯವಾದಾಗ ಅದರ ಭಾಗವಾಯಿತು. ಇದನ್ನು ಸುಧಾಮನಗರ ಎಂದೂ ಕರೆಯಲಾಗುತ್ತದೆ.
ಕೀರ್ತಿಮಂದಿರವು ಮಹಾತ್ಮಗಾಂಧಿಯವರು ಜನಿಸಿರುವ ಪೋರಬಂದರ್ ನಗರದಲ್ಲಿರುವ ಒಂದು ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿಯವರು ಬಳಸಿದ ವಸ್ತುಗಳು ಗಾಂಧೀಜಿ ಹಾಗೂ ಕಸ್ತೂರ್‌ಬಾ ಅವರ ಆಳೆತ್ತರದ ಹಲವು ಹಳೆಯ ಛಾಯಾಚಿತ್ರಗಳಿವೆ. ಗಾಂಧೀಜಿಯವರು ಬರೆದಿರುವ ಹಾಗೂ ಅವರ ತತ್ವಗಳಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯವಿದೆ. ವಸ್ತು ಸಂಗ್ರಹಾಲಯದ ಮೂಲಕ ಗಾಂಧೀಜಿಯವರ ಪೂರ್ವಜರ ಮನೆಗೆ ಪ್ರವೇಶಿಸಬಹುದು. ಗಾಂಧೀಜಿಯವರನ್ನು ೧೯೪೪ರಲ್ಲಿ ಬ್ರಿಟಿಷರು ಆಗಾಖಾನ್ ಅರಮನೆಯಿಂದ ಕೊನೆಯ ಬಾರಿಗೆ ಬಿಡುಗಡೆ ಮಾಡಿದಾಗ ಪೋರಬಂದರ್‌ನ ಸ್ಥಳೀಯರು ಅವರ ಜನ್ಮಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲು ಯೋಚಿಸಿ ಗಾಂಧೀಯವರ ಲಿಖಿತ ಒಪ್ಪಿಗೆ ಪಡೆದರು. ಈ ಮನೆಯೂ ಈಗ ಕೀರ್ತಿಮಂದಿರ ಸಂಕೀರ್ಣದ ಒಂದು ಭಾಗವಾಗಿದೆ. ಮೂಲ ಮೂರು ಅಂತಸ್ತಿನ ಮನೆಯನ್ನು ಹವೇಲಿಯಂತೆ (ಉಪ್ಪರಿಗೆ ಮನೆ) ನಿರ್ಮಿಸಲಾಗಿದೆ. ಇದನ್ನು ೧೭ನೇ ಶತಮಾನದಲ್ಲಿ ಗಾಂಧೀಜಿಯವರ ಮುತ್ತಜ್ಜ ಹರಜೀವನ್ ರೈದಾಸ್ ಗಾಂಧಿ ಖರೀದಿಸಿದ್ದರು. ಗಾಂಧೀಯವರ ತಂದೆ ಕರಮ್‌ಚಂದ ಗಾಂಧಿ, ಚಿಕ್ಕಪ್ಪ ತುಳಸಿದಾಸ ಗಾಂಧಿ ಮತ್ತು ಅಜ್ಜ ಉತ್ತಮ್ ಚಂದ್ ಗಾಂಧಿ ಇಲ್ಲಿ ವಾಸಿಸುತ್ತಿದ್ದರು.
೧೯೯೭ರಲ್ಲಿ ಗಾಂಧೀಜಿಯವರು ಬದುಕಿರುವಾಗಲೇ ದರ್ಬಾರ್ ಗೋಪಾಲ್‌ದಾಸ್ ದೇಸಾಯಿ ಅವರು ಕೀರ್ತಿ ಮಂದಿರಕ್ಕೆ ಅಡಿಪಾಯ ಹಾಕಿದರು. ಮನೆಯನ್ನು ಖರೀದಿಸಲು ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ನಂಜಿಬಾಯಿ ಕಾಳಿದಾಸ ಮೆಹ್ತಾ ಅವರು ಧನ ದಾನ ಮಾಡಿದ್ದರು. ಈ ಸ್ಮಾರಕವು ೧೯೫೦ರಲ್ಲಿ ಪೂರ್ಣಗೊಂಡು ಅಂದಿನ ಗೃಹ ಸಚಿವರು ಸರ್ದಾರ್ ವಲ್ಲಭಬಾಯಿ ಪಟೇಲರು ತಾ. ೨೭-೫-೧೯೫೦ರಲ್ಲಿ ಇದನ್ನು ಉದ್ಘಾಟಿಸಿ ಇದನ್ನು ಬಾರತ ಸರ್ಕಾರಕ್ಕೆ ನೀಡಲಾಯಿತು.
ಕೀರ್ತಿಮಂದಿರ ೭೯ ಅಡಿ ಎತ್ತರವಾಗಿದೆ. ಇದು ಗಾಂಧೀಜಿಯವರ ಜೀವನದ ೭೯ ವರ್ಷ ಗಳನ್ನು ಪ್ರತಿನಿಧಿಸುತ್ತದೆ. ಹಿಂದೂ, ಬೌದ್ಧ, ಜೈನ ಮತ್ತು ಪಾರ್ಸಿ ದೇವಾಲಯಗಳ ವಾಸ್ತುಶಿಲ್ಪದ ಅಂಶಗಳನ್ನು ಚರ್ಚ್ ಮತ್ತು ಮಸೀದಿಯನ್ನು ಒಳಗೊಂಡಿದೆ. ಗಾಂಧೀಜಿ ಮತ್ತು ಕಸ್ತೂರಬಾ ಅವರ ಅಳೆತ್ತರದ ತೈಲವರ್ಣಚಿತ್ರಗಳು ಇಲ್ಲಿವೆ. ಮಗನ್ ಲಾಲ್ ಮತ್ತು ಮಹಾದೇವ ದೇಸಾಯಿ ಅವರ ಸ್ಮಾರಕಗಳ ಎರಡು ಕೊಠಡಿಗಳು, ಕೋಣೆ ವಸ್ತು ಸಂಗ್ರಹಾಲಯದ ಕೊಠಡಿಗಳಲ್ಲಿ ಖಾದಿ ಭಂಡಾರದ ವಸ್ತುಗಳು ಪುಸ್ತಕ ಮಾರಾಟ ಕೇಂದ್ರವಿದೆ. ಕೀರ್ತಿ ಮಂದಿರದಲ್ಲಿ ಗಾಂಧೀಜಿ ಹುಟ್ಟಿದ ಸ್ಥಳವನ್ನು ಗುರುತಿಸಲು ಸ್ವಸ್ತಿಕ್ ಚಿನ್ಹೆಯಿಂದ ದಾಖಲಿಸಲಾಗಿದೆ. ನಾನು ಅಲ್ಲಿ ನಿಂತು ನನ್ನ ಮಡದಿಗೆ ಒಂದು ಪೋಟೋ ತೆಗೆಯಲು ಹೇಳಿದೆ. ತುಂಬಾ ಉತ್ಸಾಹದಲ್ಲಿದ್ದ ಅವಳು ಕ್ಲಿಕ್ಕಿಸಿದಳು.
ಗಾಂಧೀಜಿ ತಮ್ಮ ಆತ್ಮಕಥೆ ನನ್ನ ಸತ್ಯಾನ್ವೇಷಣೆಯ ಮೊದಲ ಭಾಗದಲ್ಲಿ ಬರೆಯುತ್ತಾರೆ. ಗಾಂಧಿ ಮನೆತನದವರು ಬನಿಯಾ ಜಾತಿಯವರು. ಅವರು ಮೊದಲಿಗೆ ಕಿರಾಣಿ ಅಂಗಡಿ ವ್ಯಾಪಾರಿಗಳೆಂದು ಕಾಣುತ್ತದೆ. ಆದರೆ ನಮ್ಮ ತಾತನಿಂದ ಮೂರು ತಲೆಮಾರಿನವರು ಕಾಘೇವಾಡದ ಬೇರೆ ಬೇರೆ ಸಂಸ್ಥಾನಗಳಲ್ಲಿ ದಿವಾನರಾಗಿದ್ದರು. ನಮ್ಮ ತಾತ ಉತ್ತಮ್‌ಚಂದ್ ಅಥವಾ ಓತಾ ಗಾಂಧೀ ನಿಯಮ ನಿಷ್ಠೆಯುಳ್ಳ ವ್ಯಕ್ತಿಯಾಗಿದ್ದಿರಬೇಕು. ಪೋರ್‌ಬಂದರಿನ ದಿವಾನರಾಗಿದ್ದ ಆತ ಅಲ್ಲಿ ನಡೆದ ಆಸ್ಥಾನದ ಪಿತೂರಿಗಳಿಂದಾಗಿ ಆ ಸಂಸ್ಥಾನವನ್ನು ಬಿಟ್ಟು ಜುನಾಗಢದಲ್ಲಿ ಆಶ್ರಯವನ್ನು ಪಡೆಯಬೇಕಾಯಿತು. ಅಲ್ಲಿ ಆತ ನವಾಬನಿಗೆ ಎಡಗೈಯಿಂದ ಸಲಾಮು ಮಾಡಿದನು. ಇದನ್ನು ನೋಡಿದವರೊಬ್ಬರು ಈ ಅವಿನಯದ ಕಾರಣವನ್ನು ಕೇಳಿದರು. ಆತ ‘ಬಲಗೈ ಮೊದಲೇ ಪೋರ್‌ಬಂದರ್ ಸಂಸ್ಥಾನಕ್ಕೆ ಮೀಸಲಾಗಿದೆ’ ಎಂದು ಉತ್ತರ ಕೊಟ್ಟನು..
ನಮ್ಮ ತಂದೆ ಪೋರ್‌ಬಂದರನ್ನು ಬಿಟ್ಟು ರಾಜಕೋಟೆಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ ನನಗೆ ಕೇವಲ ಏಳು ವರ್ಷಗಳು. ಅಲ್ಲಿ ನನ್ನನ್ನು ಪ್ರಾಥಮಿಕ ಶಾಲೆಗೆ ಸೇರಿಸಿದರು. ಆ ದಿನಗಳಲ್ಲಿ ನನಗೆ ಬೋಧಿಸಿದ ಉಪಾಧ್ಯಾಯರ ಹೆಸರುಗಳು ಮೊದಲಾದ ವಿವರಗಳೆಲ್ಲಾ ನನಗೆ ಚೆನ್ನಾಗಿ ನೆನಪಿದೆ. ಪೋರ್‌ಬಂದರ್‌ನಲ್ಲಿ ಇದ್ದಂತೆಯೇ ಇಲ್ಲಿಯೂ ನನ್ನ ವಿದ್ಯಾಭ್ಯಾಸದ ವಿಷಯದಲ್ಲಿ ಹೇಳಬೇಕಾದ ಹೆಚ್ಚಿನದೆನೂ ಇಲ್ಲ.
ಪ್ರೌಢಶಾಲೆಯ ಮೊದಲನೇ ವರ್ಷದ ಪರೀಕ್ಷೆಯ ವೇಳೆಯಲ್ಲಿ ನಡೆದ ಘಟನೆಯೊಂದನ್ನು ಹೇಳಬೇಕು. ಇನ್‌ಸ್ಪೆಕ್ಟರ್ ಮಿ. ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದಿದ್ದರು. ಅವರ ಮೊದಲನೆಯ ತರಗತಿಯ ವಿದ್ಯಾರ್ಥಿಗಳಿಗೆ ಐದು ಪದಗಳನ್ನು ಬರೆಯಲು ಕೊಟ್ಟಿರು. ಇವುಗಳ ಪೈಕಿ ಕೆಟಲ್ ಎಂಬ ಪದವೂ ಒಂದು. ನಾನು ಅದನ್ನು ತಪ್ಪಾಗಿ ಬರೆದೆ. ನಮ್ಮ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ನನ್ನನ್ನು ಎಚ್ಚರಿಸಲು ಪ್ರಯತ್ನಿಸಿದರು. ನಾನು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ನನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂಬುದು ನಮ್ಮ ಉಪಾಧ್ಯಾಯರ ಉದ್ದೇಶ. ಅದು ನನಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ ನಾವು ಕಾಪಿ ಮಾಡದಂತೆ ನೋಡಿಕೊಳ್ಳುವುದೇ ಉಪಾಧ್ಯಾಯರ ಕೆಲಸವೆಂದು ನಾನು ತಿಳಿದಿದ್ದೆ. ಇದರ ಪರಿಣಾಮವಾಗಿ ನನ್ನನ್ನು ಹೊರತು ಉಳಿದ ಹುಡುಗರೆಲ್ಲಾ ಐದು ಪದಗಳನ್ನು ಸರಿಯಾಗಿ ಬರೆದಿದ್ದರು. ನಾನೊಬ್ಬನೇ ದಡ್ಡ. ಇದಾದ ಮೇಲೆ ಉಪಾಧ್ಯಾಯರು ನನ್ನ ಮೂರ್ಖತನವನ್ನು ನನಗೆ ತೋರಿಸುವುದಕ್ಕೆ ಪ್ರಯತ್ನಪಟ್ಟರು. ಅದರಿಂದ ಅವರಿಗೆ ವೃಥಾ ಶ್ರಮವಾಯಿತೇ ಹೊರತು ಕಾಪಿ ಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ.
ಇದೇ ಸಮಯದಲ್ಲಿ ನಡೆದ ಮತ್ತೆರಡು ಸಂಗತಿಗಳು ಯಾವಾಗಲೂ ನನ್ನ ನೆನಪಿನಲ್ಲಿ ಉಳಿದಿದೆ. ಪಠ್ಯ ಪುಸ್ತಕಗಳನ್ನು ಹೊರತು ಬೇರೆ ಏನನ್ನೂ ಓದುವುದು ಸಾಧಾರಣವಾಗಿ ನನಗೆ ಸೇರುತ್ತಿರಲಿಲ್ಲ. ನಿತ್ಯದ ಪಾಠಗಳನ್ನಂತೂ ಓದಲೇಬೇಕಾಗಿತ್ತು. ಉಪಾಧ್ಯಾಯರು ನನ್ನನ್ನು ಗುರುತಿಸುವುದು ನನಗೆ ಇಷ್ಟವಿರಲಿಲ್ಲ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿರಲಿಲ್ಲ. ಆದುದರಿಂದ ಪಾಠವನ್ನೇನೊ ಓದುತ್ತಿದ್ದೆ. ಆದರೆ ಪಾಠದಲ್ಲಿ ಮನಸ್ಸು ಇರುತ್ತಿರಲಿಲ್ಲ. ಹೀಗೆ ಪಾಠಗಳನ್ನೇ ಸರಿಯಾಗಿ ಓದುತ್ತಿರಲಿಲ್ಲವೆಂದ ಮೇಲೆ ಇನ್ನು ಹೆಚ್ಚಿನ ವ್ಯಾಸಂಗದ ಪ್ರಶ್ನೆ ಎಲ್ಲಿ ಬಂತು. ಆದರೆ ಹೇಗೋ ನಮ್ಮ ತಂದೆ ಕೊಂಡುಕೊಂಡು ಬಂದಿದ್ದ ಒಂದು ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದರ ಹೆಸರು ಶ್ರವಣ ಪಿತೃ ಭಕ್ತಿ ನಾಟಕ. ಅದನ್ನು ನಾನು ಅತ್ಯಂತ ಆಸಕ್ತಿಯಿಂದ ಓದಿದೆ. ಅದೇ ಸಮಯದಲ್ಲಿ ಸಂಚಾರಿ ಬೊಂಬೆ ಪ್ರದರ್ಶಕರು ನಮ್ಮ ಊರಿಗೆ ಬಂದರು. ಅವರು ನನಗೆ ತೋರಿಸಿದ ಒಂದು ಚಿತ್ರ ಶ್ರವಣ ತನ್ನ ಕುರುಡು ತಂದೆ ತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ. ಆ ಪುಸ್ತಕ ಆ ದೃಶ್ಯ ಎರಡೂ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಅಂಕಿತವಾದವು. ಇಗೋ ಇಲ್ಲಿ ನಿನಗೊಂದು ಆದರ್ಶವಿದೆ. ಅದನ್ನು ಅನುಸರಿಸು ಎಂದು ನನಗೆ ನಾನೇ ಹೇಳಿಕೊಂಡೆ. ಶ್ರವಣ ಮರಣ ಹೊಂದಲು ಅವನ ಮಾತಾಪಿತೃಗಳ ಆರ್ತ ವಿಲಾಪ ನನ್ನ ಕಿವಿಗೆ ಈಗಲೂ ಕೇಳುವಂತಿದೆ. ಆ ರಾಗ ನನ್ನ ಹೃದಯವನ್ನು ಕರಗಿಸಿತು. ನಮ್ಮ ತಂದೆ ಕೊಂಡುಕೊಟ್ಟಿದ್ದ ರಾಗಮಾಲಿಕೆಯಲ್ಲಿ ಅದನ್ನು ಬಾರಿಸಲು ಕಲಿತೆ.
ಮತ್ತೊಂದು ನಾಟಕಕ್ಕೆ ಸಂಬಂಧಿಸಿದಂತೆ ಇದೇ ಬಗೆಯ ಪ್ರಸಂಗ ನಡೆಯಿತು. ಆ ಕಾಲದಲ್ಲಿ ಒಂದು ನಾಟಕ ಮಂಡಳಿಯವರು ಪ್ರದರ್ಶಿಸುತ್ತಿದ್ದ ನಾಟಕವೊಂದನ್ನು ನೋಡಲು ನಮ್ಮ ತಂದೆಯವರು ನನಗೆ ಅನುಮತಿ ಕೊಟ್ಟಿದ್ದರು. ಅದು ಹರಿಶ್ಚಂದ್ರ ನಾಟಕ. ಅದು ನನ್ನ ಮನಸ್ಸನ್ನು ಸೂರೆಗೊಂಡಿತು. ಅದನ್ನು ಎಷ್ಟು ನೋಡಿದರೂ ನನಗೆ ತೃಪ್ತಿಯ ಆಗಲಿಲ್ಲ. ಆದರೆ ಎಷ್ಟು ಸಲ ನೋಡಲು ಅನುಮತಿ ಕೊಟ್ಟಾರು? ಅದರ ಹುಚ್ಚು ನನ್ನನ್ನು ಹಗಲು ರಾತ್ರಿ ಬಿಡಲೇ ಇಲ್ಲ. ಲೆಕ್ಕವಿಲ್ಲದಷ್ಟು ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೆ. ಎಲ್ಲರೂ ಏಕೆ ಹರಿಶ್ಚಂದ್ರರಂತೆ ಸತ್ಯಸಂಧನಾಗಿರಬಾರದು.? ಇದೇ ಹಗಲೂ ರಾತ್ರಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶ. ಹರಿಶ್ಚಂದ್ರನ ಕಥೆಯನ್ನು ನಾನು ಅಕ್ಷರಶ: ನಂಬಿದೆನು. ನೆನಪು ಮಾಡಿಕೊಂಡು ಪದೇ ಪದೇ ಅಳುತ್ತಿದ್ದೆ. ಹರಿಶ್ಚಂದ್ರ ಐತಿಹಾಸಿಕ ವ್ಯಕ್ತಿ ಆಗಿರಲಾರ ಎಂಬುದು ಇಂದು ನನ್ನ ಬುದ್ಧಿಗೆ ಗೋಚರಿಸುತ್ತಿದೆ. ಆದರೆ ನನ್ನ ಮಟ್ಟಿಗೆ ಹರಿಶ್ಚಂದ್ರ, ಶ್ರವಣ ಇಬ್ಬರೂ ಜೀವಂತ ವ್ಯಕ್ತಿಗಳು. ಆ ನಾಟಕಗಳನ್ನು ಓದಿದರೆ ಮತ್ತೆ ಮೊದಲಿನಂತೆ ನಾನು ಕಣ್ಣೀರು ಹಾಕದೆ ಇರಲಾರನೆಂಬುದು ನನ್ನ ನಂಬಿಕೆ.
ಗೊರೂರು ಅನಂತರಾಜು