ಧಾರಾವಾಹಿ-52
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ತಿರು ಓಣಂ ಆಚರಣೆ: ನೋವು ನಲಿವಿನ ಮಿಶ್ರಣದಲ್ಲಿ
ಸುಮತಿಗೆ ಏಳು ತಿಂಗಳು ತುಂಬಿ ಎಂಟು ಪ್ರಾರಂಭವಾಯಿತು. ಮಲೆನಾಡಿನ ಮಳೆ ಸ್ವಲ್ಪ ಇಳಿಮುಖವಾಗುತ್ತಿರುವ ಸಮಯ, ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಗೌರಿ ಗಣೇಶನ ಹಬ್ಬದ ಸಂಭ್ರಮವಾದರೆ ಸುಮತಿಯ ಮನೆಯಲ್ಲಿ ವಿಶೇಷವಾಗಿ ಓಣಂ ಹಬ್ಬದ ಆಚರಣೆಯ ಸಂಭ್ರಮ. ಅಂದು ಓಣಂ ಹಬ್ಬದ ಮೊದಲ ದಿನವಾದ ಅತ್ತಮ್.
ಮೂಡಣ ದಿಕ್ಕಿನಲ್ಲಿ ಸೂರ್ಯನ ಆಗಮನಕ್ಕೆ ಮೊದಲೇ ಸುಮತಿ ಎದ್ದಳು. ಅವಳ ಜೊತೆಗೆ ಮಗಳೂ ಎದ್ದು ಬಂದಳು. ಹಿಂದಿನ ದಿನ ಸಂಜೆಯೇ ಅಂಗಳವನ್ನು ಸಗಣಿಯಿಂದ ಸಾರಿಸಿ, ಪೂಕ್ಕಳಂ (ಓಣಂ ಹಬ್ಬದ ಸಮಯದಲ್ಲಿ ಹತ್ತು ದಿನವೂ ವಿವಿಧ ರೀತಿಯಲ್ಲಿ ಹೂವಿನಿಂದ ಬಿಡಿಸುವ ರಂಗೋಲಿ) ಹಾಕಲೆಂದು ಅಂಗಳದ ನಡುವೆ ಒಂದು ಬಾಣಲೆಯಷ್ಟು ಮಣ್ಣನ್ನು ಸುರಿದು ಸಣ್ಣ ದಿಬ್ಬದ ಹಾಗೆ ಮಾಡಿ, ಹಿಂದಿನ ಸಂಜೆ ಅಂಗಳದಲ್ಲಿ ತಾನು ಬೆಳೆದಿದ್ದ ವಿವಿಧ ಬಣ್ಣಗಳ ಹೂಗಳನ್ನೂ, ಮನೆಯ ಹಿಂಬದಿಯ ದಿಣ್ಣೆಯಲ್ಲಿ ಇದ್ದ ಕುರುಚಲು ಕಾಡಿನಿಂದ ಬಣ್ಣ ಬಣ್ಣದ ಕಾಡು ಹೂಗಳನ್ನೂ ಬಿಡಿಸಿ ತಂದು ಅವುಗಳು ಒಣಗದಂತೆ ನೀರನ್ನು ಚಿಮುಕಿಸಿ, ಬಾಳೆಯ ಎಳಲೆಯಲ್ಲಿ ಇಟ್ಟಿದ್ದಳು. ಅಮ್ಮನಿಗೆ ಸಹಾಯಕ್ಕೆಂದು ಸದಾ ಮಗಳು ಜೊತೆಗೆ ಇದ್ದಳು. ಅಮ್ಮ ಬಿಡಿಸಿ ಕೊಟ್ಟ ಹೂಗಳನ್ನೆಲ್ಲಾ ತನ್ನ ಪುಟ್ಟ ಕೈಗಳನ್ನು ಚಾಚಿ ಪಡೆದು ಬುಟ್ಟಿಯಲ್ಲಿ ಹಾಕುವುದೇ ಅವಳಿಗೆ ಸಂಭ್ರಮ. ಹಾಗೆಯೇ ಅಮ್ಮ ರಂಗೋಲಿಯನ್ನು ಹೂವುಗಳಿಂದ ಅಲಂಕರಿಸುವಾಗ ಬೆರಗುಗಣ್ಣಿನಿಂದ ನೋಡುತ್ತಿದ್ದಳು ಆ ಪುಟ್ಟ ಹುಡುಗಿ. ಹೀಗೆಯೇ ದಿನವೂ ಅಮ್ಮ ಮಗಳು ಉತ್ಸಾಹದಿಂದ ಅಂಗಳವನ್ನು ಹೂವಿನ ರಂಗೋಲಿಯಿಂದ ಅಲಂಕರಿಸಿದರು. ಒಂದನೇ ದಿನದಿಂದ ಮನೆಯ ಶುದ್ಧೀಕರಣವನ್ನು ಶುರುಮಾಡಿದಳು ಸುಮತಿ. ಸಣ್ಣ ಪುಟ್ಟ ಸಹಾಯಕ್ಕಾಗಿ ಅವಳ ಪುಟ್ಟ ಮಗಳು ಕೂಡಾ ಜೊತೆ ಗೂಡಿದಳು.
ಒಂಭತ್ತು ದಿನಗಳ ಮನೆಯ ಒಂದೊಂದೇ ಹಂತದ ಕೆಲಸ ಕಾರ್ಯಗಳ ನಂತರ ಹತ್ತನೇ ದಿನವಾದ ತಿರುಓಣಂ ದಿನ ಬಂದೇ ಬಿಟ್ಟಿತು. ಪತ್ನಿ ಹಾಗೂ ಮಗಳಿಗೆ ವೇಲಾಯುಧನ್ ಹೊಸ ಓಣಕ್ಕೋಡಿ( ಓಣಂ ಹಬ್ಬಕ್ಕೆ ಹೊಸ ಬಟ್ಟೆ)ಯನ್ನು ಕೊಡಿಸಿದ್ದರು. ಅಂದು ಕೂಡಾ ಬೆಳಗ್ಗೆ ಬೇಗನೇ ಎದ್ದು ಮಿಂದು, ಅಂಗಳವನ್ನು ಮತ್ತೊಮ್ಮೆ ಗೋಮೆಯಿಂದ ಸಾರಿಸಿ, ದೊಡ್ಡದಾದ, ಸುಂದರವಾದ, ರಂಗೋಲಿಯನ್ನು ಬಿಡಿಸಿ, ಹತ್ತು ಥರದ ಬಣ್ಣಗಳ ಪುಷ್ಪಗಳಿಂದ ರಂಗೋಲಿಯನ್ನು ಅಲಂಕರಿಸಿದಳು. ವೇಲಾಯುಧನ್ ಮನೆಯ ಮುಂಬಾಗಿಲನ್ನು ತಳಿರು ತೋರಣಗಳಿಂದ ಸಿಂಗರಿಸಿದರು. ಅತ್ತಮ್ ದಿನದಿಂದ ತಿರುಓಣಂವರೆಗೂ ರಂಗೋಲಿಗೆ ಒಂದೊಂದೇ ಬಣ್ಣದ ಹೂವುಗಳನ್ನು ಸೇರಿಸುತ್ತಾ, ಹತ್ತನೇ ದಿನದಂದು ಹತ್ತು ಬಣ್ಣಗಳ ಹೂವುಗಳಿಂದ ಸೊಗಸಾಗಿ ಅಲಂಕರಿಸುವುದು ವಾಡಿಕೆ. ಅಂಗಳದ ಕೆಲಸ ಮುಗಿಸಿದ ನಂತರ ತನ್ನ ಇಷ್ಟದೈವ ಶ್ರೀ ಕೃಷ್ಣನನ್ನು ಹೂವುಗಳಿಂದ ಅಲಂಕರಿಸಿ, ದೊಡ್ಡದಾದ ನಿಲವಿಳಕ್ಕನ್ನು ಬೆಳಗಿಸಿ, ಪರಿಮಳ ಭರಿತ ಗಂಧದ ಕಡ್ಡಿಗಳನ್ನು ಹೊತ್ತಿಸಿ, ಮಗಳನ್ನೂ ಜೊತೆಗೆ ಕರೆದು, ಪತಿಯ ಜೊತೆಗೂಡಿ ಶ್ರೀ ಕೃಷ್ಣನ ಸ್ತೋತ್ರಗಳನ್ನು ಪಠಿಸುತ್ತಾ ವಂದಿಸಿ ಪೂಜೆ ಮಾಡಿದಳು. ಬೆಳಗ್ಗಿನ ಉಪಹಾರಕ್ಕೆ ಪುಟ್ಟು ಕಡಲೆ ಸಾರು ಮಾಡಿದ್ದಳು. ಅಪ್ಪ ಹಾಗೂ ತಮ್ಮಂದಿರನ್ನು ತಿರುಓಣಂ ಹಬ್ಬಕ್ಕೆ ಆಹ್ವಾನಿಸಿದ್ದರು ದಂಪತಿಗಳು. ಅಂದಿನ ಅಡುಗೆ ಬಹಳ ವಿಶೇಷವಾದದ್ದು. ಹಲವು ತರಕಾರಿಗಳನ್ನು ಉಪಯೋಗಿಸಿ ಅವಿಯಲ್, ಶುಂಠಿಯಿಂದ ಮಾಡಿದ ಇಂಜಿಕ್ಕರಿ, ಕಾಳನ್, ಓಲನ್, ತೀಯಲ್, ಎರಿಶ್ಶೇರಿ, ಪುಳಿಶ್ಶೇರಿ, ಹಲವು ಥರದ ಪಲ್ಯಗಳು, ಅಡ ಪಾಯಸಂ, ಹಪ್ಪಳ, ನೇಂದ್ರ ಬಾಳೆಕಾಯಿಯಿಂದ ಶರ್ಕರಪುರಟ್ಟಿ, ಚಿಪ್ಸ್, ಮುಂತಾದ ರುಚಿಕರ ಭಕ್ಷ್ಯಗಳನ್ನು ಪತಿ ಹಾಗೂ ತಮ್ಮಂದಿರ ಮತ್ತು ಮಗಳ ಸಣ್ಣ ಪುಟ್ಟ ಸಹಾಯದಿಂದ ಮಧ್ಯಾಹ್ನದ ಊಟಕ್ಕೆ ಅಣಿ ಮಾಡಿದಳು.
ಅಪ್ಪ ಹಾಗೂ ತಮ್ಮಂದಿರು ದಂಪತಿಗಳಿಗೆ ಹಾಗೂ ಪುಟ್ಟ ಮಗಳಿಗೆ ಓಣಕ್ಕೋಡಿಯನ್ನು ತಂದಿದ್ದರು. ಎಲ್ಲರೂ ಸಂಭ್ರಮದಿಂದ ತಿರುಓಣಂಗೆ ತಯಾರಿಸಿದ್ದ ಸಕಲ ಭಕ್ಷ್ಯಗಳನ್ನು ಓಣಪ್ರಭು ಮಾವೇಲಿ ಹಾಗೂ ಶ್ರೀ ಕೃಷ್ಣನ ವಿಗ್ರಹದ ಮುಂದೆ ನೈವೇದ್ಯಕ್ಕೆ ಇಟ್ಟು, ಭಕ್ತಿಯಿಂದ ಎಲ್ಲರನ್ನೂ ಕಾಪಾಡಿ ಹರಸಿ ಎಂದು ಬೇಡಿಕೊಂಡರು.
ಎರಡು ಬೇರೆ ಬೇರೆ ಎಲೆಗಳಲ್ಲಿ ಎಲ್ಲಾ ಭಕ್ಷ್ಯಗಳನ್ನು ಬಡಿಸಿ, ಮನೆಯ ಹಿಂಭಾಗದಲ್ಲಿ ಇದ್ದ ಕಲ್ಯಾಣಿ ಹಾಗೂ ವಿಶ್ವನ ಸಮಾಧಿಯ ಮುಂದೆ ಇಟ್ಟು, ಮನತುಂಬಿ ಅವರಿಬ್ಬರನ್ನೂ ಎಲ್ಲರೂ ನೆನೆದರು. ಎಲ್ಲರ ಕಣ್ಣುಗಳಿಂದ ಅಶ್ರುಧಾರೆ ಹರಿಯಿತು. ಮನಸ್ಸು ಆ ಒಂದು ಕ್ಷಣಕ್ಕೆ ಮೂಕವಾಯಿತು. ಹಳೆಯ ನೆನಪುಗಳು ಮರುಕಳಿಸಿ ನಾರಾಯಣನ್ ಗದ್ಗದಿತರಾದರು. ಸುಮತಿ ಹಾಗೂ ತಮ್ಮಂದಿರು ಕಣ್ಣುಮುಚ್ಚಿ ಇಬ್ಬರ ಬಿಂಬವನ್ನು ಸ್ಮರಿಸಿಕೊಂಡರು. ಸುಮತಿಯ ಪುಟ್ಟ ಮಗಳು ಅಪ್ಪನ ಪಕ್ಕದಲ್ಲಿ ನಿಂತು..” ಅಪ್ಪಾ…ಏಕೆ ಎಲ್ಲರೂ ದುಃಖಿತರಾಗಿದ್ದಾರೆ? ಯಾರು ಇವರೆಲ್ಲಾ”…. ಎಂದು ಮುಗ್ಧತೆಯಿಂದ ಕೇಳಿದಾಗ ವೇಲಾಯುಧನ್… “ಇದು ನಿನ್ನ ಅಮ್ಮನ ತಾಯಿ ಕಲ್ಯಾಣಿ ಹಾಗೂ ನಿನ್ನ ಅಣ್ಣ ವಿಶ್ವನ ಸಮಾಧಿ”…. ಎಂದು ಮೆಲ್ಲಗೆ ಮಗಳಿಗೆ ಮಾತ್ರ ಕೇಳುವಂತೆ ಹೇಳಿದರು. ವಿಶ್ವನ ಅಗಲಿಕೆ ವೇಲಾಯುಧನ್ ಮನಸ್ಸಿಗೂ ನೋವು ತಂದಿತ್ತು. ಮಗನನ್ನು ನೆನೆದು ಒಂದು ಕ್ಷಣ ಗಂಭೀರದಿಂದ ಮೌನವಾದರು. ಸುಮತಿಯ ಉದರದಲ್ಲಿ ಬೆಳೆಯುತ್ತಿದ್ದ ಶಿಶು ಕೂಡಾ ಮಿಸುಕಾಡಿ ತನ್ನ ನಮವನ್ನು ಸಲ್ಲಿಸಿತು. ಆಗ ತನಗೆ ಅರಿವಿಲ್ಲದೇ ಸುಮತಿಯು ತನ್ನ ಉದರದ ಮೇಲೆ ಕೈ ಇಟ್ಟು ಅಳು ತಡೆಯಲಾರದೇ ಬಿಕ್ಕಳಿಸಿದಳು. ಅಮ್ಮನಿಗೆ ಸಾಂತ್ವನ ನೀಡುವಂತೆ ಆ ಪುಟ್ಟ ಶಿಶುವು ಮೆಲ್ಲಗೆ ತನ್ನ ತಲೆಯಿಂದ ಅಮ್ಮನ ಕೈಯನ್ನು ಒಮ್ಮೆ ಗುದ್ದಿತು. ಅಳುವಿನಲ್ಲೂ ಸುಮತಿ ಮುಗುಳ್ನಕ್ಕು ತನ್ನ ಉಬ್ಬಿದ ಉದರದ ಮೇಲೆ ಕೈ ಆಡಿಸಿದಳು.
ನಂತರ ಎಲ್ಲರೂ ದುಃಖ ಹಾಗೂ ಸಂತೋಷ ಮಿಶ್ರಿತ ಭಾವದೊಂದಿಗೆ ಓಣಸದ್ಯೆಯನ್ನು ಒಟ್ಟಾಗಿ ಕುಳಿತು ಸಂತೋಷದಿಂದ ಮನಸ್ಫೂರ್ತಿಯಾಗಿ ಸವಿದರು. ಸುಮತಿ ಮಾಡಿದ ಅಡುಗೆಯು ಬಹಳ ರುಚಿಕರವಾಗಿತ್ತು. ಕಲ್ಯಾಣಿಯ ಕೈ ರುಚಿಯ ಅಡುಗೆಯೂ ನೆನಪಿಗೆ ಬಂದು ಎಲ್ಲರೂ ಸುಮತಿ ಮಾಡಿದ ಅಡುಗೆಯನ್ನು ಮನಸಾ ಹೊಗಳಿದರು. ಸುಮತಿಗೆ ಬಹಳ ಸಂತೋಷವಾಯಿತು. ಸಂತೋಷ ದುಃಖ ಒಮ್ಮೆಲೇ ಒತ್ತರಿಸಿ ಬಂದು ಸೀರೆಯ ಸೆರಗಿನಿಂದ ಕಣ್ಣು ಒರೆಸಿಕೊಂಡಳು. ಊಟದ ನಂತರ ಎಲ್ಲರೂ ಮಾತಿಗೆ ಕುಳಿತರು. ತಮ್ಮ ಗತ ಕಾಲದ ನೆನಪುಗಳನ್ನು ಮೆಲುಕು ಹಾಕಿದರು. ಅಷ್ಟು ಹೊತ್ತಿಗೆಲ್ಲ ಸುಮತಿಯ ಅಕ್ಕ ಬಾವ, ಮಕ್ಕಳು ಕೂಡಾ ಬಂದರು. ಬರುವಾಗ ಮನೆಯಲ್ಲಿ ಹಬ್ಬಕ್ಕೆ ಮಾಡಿದ್ದ ಪಲಹಾರಗಳನ್ನು ತಂದಿದ್ದರು. ಖುಷಿಯಿಂದ ಎಲ್ಲರೂ ಹರಟೆ ಹೊಡೆದರು. ಸುಮತಿಯ ಮಗಳು ದೊಡ್ಡಮ್ಮನ ಮಕ್ಕಳ ಜೊತೆ ಅಂಗಳದಲ್ಲಿ ಆಟ ಆಡಿದಳು. ಮಕ್ಕಳ ಆಟಗಳನ್ನು ನೋಡಿ ಹಿರಿಯರು ಕೂಡಾ ಹಿರಿಹಿರಿ ಹಿಗ್ಗಿದರು. ಸ್ವಲ್ಪ ಹೊತ್ತಿನ ಬಳಿಕ ಎಲ್ಲರೂ ತಾತನ ಬಳಿ ಹೋಗಿ ಕುಳಿತು ಕೊಂಡರು.
ಸಂಜೆಯಾಗುತ್ತಾ ಬಂತು. ಸುಮತಿ ಹಾಗೂ ಅವಳ ಅಕ್ಕ ಸೇರಿ ಎಲ್ಲರಿಗೂ ಕುಡಿಯಲು ಚಾಯ್ ಮಾಡಿಕೊಂಡು ಬಂದು ಅಕ್ಕ ತಂದ ಪಲಹಾರಗಳಾದ ನೆಯ್ಯಪ್ಪಂ, ಕುಳಲಪ್ಪಂ, ನೇಂದ್ರಬಾಳೆಕಾಯಿಯ ಚಿಪ್ಸ್ ಎಲ್ಲರಿಗೂ ಕೊಟ್ಟರು. ನಂತರ ಇವರೆಲ್ಲರ ಜೊತೆ ಸುಮತಿ ಹಾಗೂ ಅಕ್ಕ ಬಂದು ಮಾತಿಗೆ ಕುಳಿತರು. ಸಮಯ ಸರಿದದ್ದೇ ತಿಳಿಯಲಿಲ್ಲ. ರಾತ್ರಿಯಾಯ್ತು ಎಲ್ಲರೂ ಊಟ ಮಾಡಿ ಮನೆಗೆ ಹೊರಟು ನಿಂತರು. ಅವರನ್ನೆಲ್ಲಾ ಬೀಳ್ಕೊಟ್ಟು ಸುಮತಿ ಹಾಗೂ ವೇಲಾಯುಧನ್ ಮಗಳ ಜೊತೆ ಮನೆಯ ಒಳಗೆ ಬಂದರು. ಸುಮತಿ ಅಡುಗೆ ಮನೆಯ ಉಳಿದ ಕೆಲಸಗಳನ್ನು ಮುಗಿಸಿ ಬಹಳ ಆಯಾಸಗೊಂಡಿದ್ದಳು. ಮಗಳನ್ನು ಅಪ್ಪಿಕೊಂಡು ಮಲಗಿದಳು. ಆಯಾಸದಿಂದ ಅವಳು ಕಣ್ಣು ಮುಚ್ಚಿ ಮಲಗಿದ್ದೇ ತಡ ಗಾಢನಿದ್ರೆ ಆವರಿಸಿತು.