ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆಯಾದ “Song of Flower”ನ ಭಾವಾನುವಾದ.
ಚೈತ್ರಾ ಶಿವಯೋಗಿಮಠ
ಸೃಷ್ಟಿ ಉಲಿದು ಪುನರುಚ್ಛರಿಸಿದ
ಮೆಲುದನಿಯು ನಾನು
ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ
ಬಿದ್ದ ನಕ್ಷತ್ರ ನಾನು
ಪಂಚಭೂತಗಳೊಂದಿಗಿನ ಸಮಾಗಮದಿಂದ
ಮಾಗಿಯು ಗರ್ಭಧರಿಸಿ,
ಚೈತ್ರ ಹಡೆದು,
ವೈಶಾಖದ ಮಡಿಲಲಿ ಆಡಿ ಬೆಳೆದು,
ಶರದ್ ಶಯ್ಯೆಯ ಮೇಲೆ
ಚಿರನಿದ್ರೆಗೆ ಜಾರುವ ಮಗಳು ನಾನು
ಅರುಣೋದಯದಿ ತಂಗಾಳಿಯೊಂದಿಗೆ
ಸಂಘಟಿಸಿ ಬೆಳಕಿನಾಗಮನವ ಸಾರುವೆನು .
ಸಂಧ್ಯಾಕಾಲದಿ ಹಕ್ಕಿಗಳೊಡಗೂಡಿ,
ನಿರ್ಗಮಿಸುವ ಬೆಳಕ ಬೀಳ್ಕೊಡುವೆನು .
ಬಯಲುಗಳು ನನ್ನ ಸುಂದರ ಬಣ್ಣಗಳಿಂದ
ವರ್ಣರಂಜಿತವಾಗಿ ಸಿಂಗರಿಸಿಕೊಂಡಿವೆ ,
ಗಾಳಿ ನನ್ನ ನಸುಗಂಪಿನಿಂದ ಸುವಾಸಿತ.
ನಿಶೆಯ ಕಂಗಳು ನಾನು ಸುಖನಿದ್ರೆಗೆ
ಜಾರುತ್ತಿದಂತೆ ನನ್ನ ಕಾವಲು ಕಾಯುವವು.
ಬೆಳಕ ಏಕೈಕ ಕಣ್ಣಾದ
ದಿನಮಣಿಯ ಏಳುತಲಿ ದಿಟ್ಟಿಸುವೆನು .
ಮದಿರೆಗೆ ಇಬ್ಬನಿಯ ಸೇವಿಸುವೆ,
ಹಕ್ಕಿಗಳ ಚಿಲಿಪಿಲಿಯ ಆಲಿಸಿ,
ಲಯಬದ್ಧವಾಗಿ ತೊನೆದಾಡುವ ಹುಲ್ಲಿನ
ತಾಳಕೆ ನಾ ಕುಣಿಯುವೆ.
ಪ್ರೇಮಿಯ ಪ್ರೇಮ ಕಾಣಿಕೆ ನಾ,
ಮದುವೆಗೆ ಹೂಮಾಲೆ ನಾ,
ಸಂತಸದ ಕ್ಷಣಗಳ ಸವಿನೆನಪು ನಾ,
ಮಡಿದ ಜೀವಕೆ ಕೊನೆಯ ಕಾಣಿಕೆ ನಾ,
ಸುಖ-ದುಃಖಗಳ ಅವಿಭಾಜ್ಯ ಅಂಗ ನಾ.
ಮನುಜ ಅರಿಯಬೇಕಾದ್ದು ಇದು ಕೇಳು
ಸದಾ ನಲಿವಿನ ಬೆಳಕ ತಲೆ ಎತ್ತಿ ನೋಡುವೆ.
ನೋವಿನ ನೆರಳ ಎಂದಿಗೂ ತಲೆಬಾಗಿ ನೋಡೆನು,
**********
ಇಂಗ್ಲಿಷ್ ನಲ್ಲಿ ಓದಿದ್ದೆ
ಕನ್ನಡದಲ್ಲಿ
ಮನಕ್ಮೆ ಮತ್ತಷ್ಟು ಹತ್ತಿರಕ್ಕೆ ತಂತು
ತಮ್ಮ ಅನುವಾದ
ಅಭಿನಂದನೆಗಳು
ತುಂಬಾ ಆಪ್ತ ಮತ್ತು ಚಂದದ ಭಾಷೆಯಲ್ಲಿ ಅದ್ದಿದಂತ ಅನುವಾದ…
ಓಹ್ !!! ಎಷ್ಟು ಚೆಂದನೇ ಸಾಲುಗಳು, ಅದ್ಭುತವಾಗಿದೆ !!!! ಅಭಿನಂದನೆಗಳು ಚೈತ್ರ ಮೇಡಂ
ಅದ್ಬುತ
ತುಂಬಾ ಚೆನ್ನಾಗಿದೆ ಕವಿತೆ ಮತ್ತು ಅನುವಾದ.
ಎಲ್ಲರಿಗೂ ಧನ್ಯವಾದಗಳು