ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
‘ನಸುಗಳ ನನಸಾಗಿಸಲು ಬೇಕು…
ಸತತ ಪ್ರಯತ್ನ’
ನಿಜ! ಕನಸುಗಳನ್ನು ನನಗಾಗಿಸಲು ಸತತವಾದ ಪ್ರಯತ್ನ ಬೇಕು… ಹಾಗೆ ಪ್ರಯತ್ನಪಟ್ಟು ತನ್ನ ಕನಸುಗಳನ್ನು ನನಸಾಗಿಸಿಕೊಂಡ ವ್ಯಕ್ತಿಯೇ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ ಕಿನ್ಸನ್ ಸನ್.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರೋವನ್ ತನ್ನ ಉಗ್ಗಿಸುವ ತೊಂದರೆಯಿಂದ ವಿಪರೀತ ಅವಹೇಳನಕ್ಕೀಡಾದವನು. ಆತನ ಬಾಹ್ಯ ವ್ಯಕ್ತಿತ್ವವನ್ನು ಕೂಡ ಹಂಗಿಸುತ್ತಿದ್ದ ಆತನ ಸ್ನೇಹಿತರು ಆತನನ್ನು ಏಲಿಯನ್ ಎಂದು ಕರೆಯುತ್ತಿದ್ದರು. ಆತನನ್ನು ಕೂತಲ್ಲಿ,ನಿಂತಲ್ಲಿ,ನಡೆಯುವಾಗ ತಮಾಷೆ ಮಾಡಿ ಆತನ ಆತ್ಮವಿಶ್ವಾಸವನ್ನೇ ಕಳೆದುಬಿಟ್ಟರು. ಇದರಿಂದಾಗಿ ಅತಿ ಶೀಘ್ರದಲ್ಲಿಯೇ ಆತ ವಿಚಿತ್ರ, ನಾಚಿಕೆ ಸ್ವಭಾವದ, ಹಿಂಜರಿಯುವ ಮಗುವಾಗಿ ಗುರುತಿಸಲ್ಪಟ್ಟ. ಆತನಿಗೆ ಯಾರು ಸ್ನೇಹಿತರಿರಲಿಲ್ಲ..
ಏಕಾಂಗಿಯಾಗುಳಿದ ರೋವನ್ ವಿಜ್ಞಾನದತ್ತ ಆಸಕ್ತಿಯನ್ನು ಬೆಳೆಸಿಕೊಂಡ. ವಿಜ್ಞಾನದಲ್ಲಿ ನೂರಕ್ಕೆ ನೂರರಷ್ಟು ಅಂಕ ತೆಗೆದುಕೊಳ್ಳುವಷ್ಟು ಜಾಣ್ಮೆಯನ್ನು ಹೊಂದಿದ್ದ ಆತನ ಪ್ರಗತಿಯನ್ನು ಕಂಡ ಆತನ ಶಿಕ್ಷಕಿ ವಿಜ್ಞಾನಿಯಾಗಬಹುದು ಎಂದು ಆಶಿಸಿದ್ದರು. ಆದರೆ ಎಲ್ಲರ ನಂಬಿಕೆಗಳನ್ನು ಹುಸಿಯಾಗಿಸಿದ ರೋವನ್ ನಟನಾಗಿ ಗುರುತಿಸಿಕೊಂಡ.
ಮುಂದಿನ ವಿದ್ಯಾಭ್ಯಾಸಕ್ಕೆ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ದಾಖಲಾದ ಆತ ನಟನೆಯ ವ್ಯಾಮೋಹಕ್ಕೆ ಬಿದ್ದನಾದರೂ ತನ್ನ ಉಗ್ಗುವಿಕೆಯ ಸಮಸ್ಯೆಯಿಂದ ವಿಫಲನಾದ.
ಮುಂದೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ರೋವನ್ ನಟನಾಗುವ ತನ್ನ ಕನಸನ್ನು ಹಾಗೆಯೇ ಪೋಷಿಸಿದ.
ನಂತರ ಕಾಮಿಡಿ ಶೋ ನಡೆಸುವ ಒಂದು ತಂಡವನ್ನು ಸೇರಿಕೊಂಡ ರೋವನ್ ಮತ್ತೆ ತನ್ನ ಉಗ್ಗುವಿಕೆಯ ಸಮಸ್ಯೆಯಿಂದ ವಿಫಲನಾದ.
ಮುಂದೆ ಹಲವಾರು ಟಿವಿ ಶೋಗಳಲ್ಲಿ ಆತ ಭಾಗವಹಿಸಲು ಪ್ರಯತ್ನಿಸಿದನಾದರೂ ಆ ಎಲ್ಲಾ ಶೋಗಳ ನಿರ್ವಾಹಕರು ಆತನನ್ನು ತಿರಸ್ಕರಿಸಿದರು. ಆದರೂ ಆತ ತನ್ನ ಒಳ್ಳೆಯ ನಟನಾಗುವ ನಂಬಿಕೆಯನ್ನು ಬಿಡಲಿಲ್ಲ. ಜನರನ್ನು ನಗಿಸಬೇಕು ಎಂಬ ಏಕೈಕ ಉನ್ನತ ಉದ್ದೇಶವನ್ನು ಹೊಂದಿದ ಆತನಿಗೆ ತನ್ನ ನಟನೆಯ ಬಗ್ಗೆ ಅತ್ಯಂತ ಭರವಸೆ ಇತ್ತು. ಆದ್ದರಿಂದ ಆತ ನಿಜವಾದ ತಮಾಷೆ ಹಾಸ್ಯ ಪ್ರಸಂಗಗಳನ್ನು ಹೆಚ್ಚು ಹೆಚ್ಚು ಅಭ್ಯಸಿಸಲು ಆರಂಭಿಸಿ ನಿರಂತರ ಪ್ರಯತ್ನದಿಂದ ಶೀಘ್ರವೇ ತನ್ನ ಉಗ್ಗುವಿಕೆಯ ಸಮಸ್ಯೆಯಿಂದ ಹೊರಬಂದನಲ್ಲದೇ ನಿರರ್ಗಳವಾಗಿ ಮಾತನಾಡಲಾರಂಭಿಸಿದನು. ಪ್ರತಿದಿನ ಒಂದೇ ಸಮನೆ ಅಭಿನಯದ ತಾಲೀಮನ್ನು ಆರಂಭಿಸಿದ ಆತ ನಟನೆಯನ್ನು ಅತ್ಯದ್ಭುತವಾಗಿ ಕರಗತ ಮಾಡಿಕೊಂಡ.
ಸ್ನಾತಕೋತ್ತರ ಪದವಿ ಓದುತ್ತಿರುವಾಗಲೇ ಆತ ತನ್ನ ವಿಚಿತ್ರ ಮ್ಯಾನರಿಸಂಗಳ, ನೈಜವಾದ ಮಿಸ್ಟರ್ ಬೀನ್ ಪಾತ್ರವನ್ನು ಸೃಷ್ಟಿಸಲು ತನ್ನ ಸ್ನೇಹಿತನಿಗೆ ಸಹಾಯ ಮಾಡಿದ. ಮುಂದೆ ಇದುವೇ ಆತನ ನಿಜ ನಾಮಧೇಯವನ್ನು ಮರೆಯುವಂತಹ ಪಾತ್ರಧಾರಿಯಾಗಿ ಜಗತ್ತಿಗೆ ಪರಿಚಿತನಾದ. ಆತನೇ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟಕಿನ್ ಸನ್.
ನೂರಾರು ಅಡೆತಡೆಗಳನ್ನು ಹೊಂದಿದ್ದಾಗಲೂ, ತನ್ನ ವಿಚಿತ್ರ ಶೈಲಿಯ ಮುಖಭಾವಗಳಿಂದ, ಅಭಿನಯ ಪ್ರತಿಭೆಯಿಂದ ಜಾಗತಿಕವಾಗಿ ಖ್ಯಾತಿ ಪಡೆದ ರೋವನ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಮುಂದೆ ಹಲವಾರು ಶೋಗಳನ್ನು ಮಾಡಿದ ಆತ ನಾಯಕ ನಟನಿಗೆ ಇರಬೇಕಾದ ಸದೃಢ ಮೈಕಟ್ಟು, ಆಕರ್ಷಕ ವ್ಯಕ್ತಿತ್ವ, ಸುಂದರ ಮುಖಚರ್ಯೆ ಇಲ್ಲದೆ ಹೋದಾಗ್ಯೂ ಕೂಡ ಜನರು ಅತ್ಯಂತ ಪ್ರೀತಿಸುವ ಮತ್ತು ಗೌರವಿಸುವ ನಟನಾಗಿ ವಿಶ್ವ ಪ್ರಸಿದ್ಧಿಯನ್ನು ಹೊಂದಿದ.
ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಅಚಲವಾದ ಶ್ರದ್ಧೆ, ಸಾಧಿಸಬೇಕೆಂದಿರುವ ವಿಷಯದ ಕುರಿತಾದ ಆಸಕ್ತಿ, ನಿರಂತರ ಪ್ರಯತ್ನ ಮತ್ತು ಎಂದೂ ಪ್ರಯತ್ನವನ್ನು ಕೈ ಬಿಡದಿರುವುದು.
ನೋಡಿದಿರಾ ಸ್ನೇಹಿತರೆ, ಯಾರೂ ಕೂಡ ಜೀವನದಲ್ಲಿ ಪರಿಪೂರ್ಣರಾಗಿ ಇರುವುದಿಲ್ಲ. ಪ್ರತಿ ಯಶಸ್ಸಿನೆ ಹಿಂದೆಯೂ ಸಾಕಷ್ಟು ನೋವು, ಅಪಮಾನ, ಬೇಗುದಿಗಳು ಇದ್ದೇ ಇರುತ್ತವೆ. ತಮ್ಮ ಬಲಹೀನತೆಗಳು, ಆಸಫಲತೆಗಳು ಮತ್ತು ಸೋಲುಗಳ ಹೊರತಾಗಿಯೂ ಕೂಡ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ರೋವನ್ ಆಟಕಿನ್ಸನ್ ಸಾಕ್ಷಿ.
“ನಿರಂತರ ಪ್ರಯತ್ನವೇ ಯಶಸ್ಸಿಗೆ ದಾರಿದೀಪ”
ವೀಣಾ ಹೇಮಂತ್ ಗೌಡ ಪಾಟೀಲ್