ಕಥಾ ಸಂಗಾತಿ
ನಾಗರಾಜ ಬಿ.ನಾಯ್ಕ
‘ಬೇರು ಚಿಗುರು’
ಚಿಗುರು ಬೈಯುತ್ತಿತ್ತು ಬೇರನ್ನು. ನಾನೆಷ್ಟು ಎತ್ತರಕ್ಕೆ ಬೆಳೆದಿರುವೆ ನೋಡು. ನೀನಿನ್ನೂ ಹಾಗೆಯೇ ಉಳಿದಿರುವೆ. ನನ್ನ ಹಸಿರನ್ನು ನೋಡು. ಅದಕ್ಕೆ ಎಷ್ಟೊಂದು ಶಕ್ತಿ. ಚಿಗುರಿನ ಸಂಭಾಷಣೆ ಬೇರಿನ ನಗುವಾಗಿ ಬೇರು ಮಣ್ಣಿನ ಆಳಕ್ಕೆ ಇಳಿಯುತ್ತಾ ಹೋಯಿತು….ಆಳ ಆಳ ತುಂಬಾ ಆಳಕ್ಕೆ ಹೋದಂತೆ ಅನ್ನಿಸಿತು. ಇದೊಂದು ಸಂಭಾಷಣೆ ಎನಿಸುತ್ತಿತ್ತು. ಕನಸಿನಲ್ಲಿ ಬಂದ ಈ ಸಂಭಾಷಣೆ ಇಂದಿನ ಅವಧಿಗೆ ವಿಷಯವಾಗುತ್ತದೆ ಎಂದುಕೊಂಡಿರಲಿಲ್ಲ. ಸೂರ್ಯ ಕಾಲೇಜಿನಲ್ಲಿ ಬೋಧಿಸುವ ಉಪನ್ಯಾಸಕ. ಬೇರು ಚಿಗುರುಗಳ ಕಲ್ಪನೆ ಅವರಿಗೆ ಹೊಸತಲ್ಲ. ಆದರೂ ಇದೀಗ ತರಗತಿಯಲ್ಲಿ ಆರಂಭವಾಗಿರುವುದು ಒಂದು ಮರದ ಬೇರು ಮತ್ತು ಚಿಗುರಿನ ನಡುವೆ ಎನ್ನುವ ಚರ್ಚೆಯ ನಡುವೆ. ಎರಡು ತಂಡಗಳಲ್ಲಿ ಆರಂಭವಾದ ವಾದಗಳು ಪ್ರತಿವಾದಗಳು ಬಹು ಕುತೂಹಲದಿಂದ ಕೂಡಿದ್ದವು. ಸಾಹಿತ್ಯವೆಂದರೆ ಹಾಗೆ ಅದು ಅಂತರ್ಗತವಾದಷ್ಟು ಅದರ ಹರಿವು, ಆಳ ಜಾಸ್ತಿ. ಮಾತು ಹಾಗೇ. ಮಾತಿನಲ್ಲಿ ಸಾಹಿತ್ಯವಿದ್ದಷ್ಟು ಗಂಭೀರತೆ ಪ್ರಭಾವ ಜಾಸ್ತಿ.
ನಕ್ಷತ್ರ ಬಂದಳು. ಸುತ್ತಮುತ್ತ ಮೈಕನ್ನು ತಿರುಗಿಸುತ್ತಾ ತನ್ನ ಮಾತನ್ನು ಆರಂಭಿಸಿದಳು. ಚಿಗುರು ಒಂದು ಉಳಿವು. ಚಿಗುರು ಒಂದು ಬೆಳವಣಿಗೆಯ ಆರಂಭ. ಅದು ಎತ್ತರಕ್ಕೆ ಏರಿದಷ್ಟು ಮರಕ್ಕೆ ಶೋಭೆ. ಅದು ಹಸಿರಾದಷ್ಟು ಮರಕ್ಕೆ ತಂಪು. ಒಂದು ಗಟ್ಟಿತನದ ಬದುಕುವ ಛಲ ಚಿಗುರಿನದ್ದು. ಚಿಗುರು ಒಂದು ಭವಿಷ್ಯದ ಮುನ್ನುಡಿ. ಅನೇಕ ಸಂದರ್ಭಗಳನ್ನು ಎದುರಿಸಲೇಬೇಕಾದ ಸಂದಿಗ್ಧತೆ ಅದರದ್ದು. ಉಸಿರಿಗೆ ಜೀವ. ಹಸಿರಿಗೆ ಭಾವ. ನೆಲೆಯಾಗುವ ನೆರಳು ಅದರ ಆಧಾರ. ಪಕ್ಷಿಗಳಿಗೆ ಪ್ರಾಣಿಗಳಿಗೆ ಆಸರೆಯ ಭಾವ. ಕೆಲ ಪ್ರಾಣಿಗಳಿಗೆ ಆಪ್ತ ಆಹಾರವು ಹೌದು. ಹಾಗಾಗಿ ಬೇರಿಗಿಂತ ಚಿಗುರು ಶ್ರೇಷ್ಠ ಎಂದು ತನ್ನ ಮಾತನ್ನು ಮುಗಿಸಿದಳು. ಪರವಾಗಿರುವ ತಂಡದಿಂದ ಒಂದು ಬಲವಾದ ಚಪ್ಪಾಳೆ ಎದುರಾಳಿ ತಂಡದವರ ಮುಖದ ಮೇಲೆ ಎನ್ನುವಂತೆ ಕೇಳಿಸಿತು. ಸೂರ್ಯ ಸುಮ್ಮನೇ ಮುಗುಳು ನಗುತ್ತಾ ಕುಳಿತಿದ್ದ. ಇಂತಹ ಅದೆಷ್ಟೋ ಮಕ್ಕಳನ್ನು ತನ್ನ ವೃತ್ತಿ ಬದುಕಿನಲ್ಲಿ ನೋಡಿದ್ದ. ಮತ್ತೊಂದು ಗುಂಪಿನಿಂದ ಅಕ್ಷರ ಬಂದ. ತನ್ನ ಮಾತುಗಳನ್ನು ಆರಂಭಿಸಿದ. ಬೇರು ಒಂದು ಅಸ್ತಿತ್ವ. ಯಾರಿಗೂ ಕಾಣದ ಬೇರು ಇಡೀ ಮರದ ಜೀವ. ತಾನು ಮಣ್ಣೊಳಗೆ ಮರೆಯಾಗಿ ನಿಂತು ಸಾರ, ಸತ್ವ ,ನೀರು, ಲವಣ ಹೀರಿ ತನ್ನಂತರಂಗದ ಎಳೆಗಳಿಗೆ ಜೀವಿತವನ್ನು ಕಲ್ಪಿಸುವ ಅದ್ಭುತ ಸಂಯೋಜನೆ ಬೇರು. ಮರದ ಹಿರಿಮೆ ಗರಿಮೆಗಳಿಗೆಲ್ಲ ಬೇರು ಹಿರಿಯಣ್ಣ. ಬೇರಿನ ಅಂತಃಸತ್ವದ ಮೇಲೆ ಮರದ ಅಳಿವು ಉಳಿವು ಎಂದ. ಮರದ ಗಟ್ಟಿತನ ಮರದ ಗಟ್ಟಿ ನಿಲುವು ಎಲ್ಲವೂ ಬೇರಿನೊಳಗೆ ಜೀವಿತದ ಆಧಾರದಿಂದ. ಹಾಗಾಗಿ ಮರಕ್ಕೆ ಬೇರಿಗಿಂತ ಬೇರೆ ಬೇಕಿಲ್ಲ ಚಿಗುರಿಲ್ಲದೇ ಮರ ಬದುಕು ಬದುಕಬಹುದು. ಮರಕ್ಕೆ ಬೇರೇ ಮೂಲ. ಬೇರೇ ಆಧಾರ. ಹಾಗಾಗಿ ಬೇರೇ ಹೆಚ್ಚು ಎಂದ. ಬೇರಿನ ಪರವಾದ ಗುಂಪಿನಿಂದ ಚಪ್ಪಾಳೆಯ ಕೂಗು ಕೇಳಿಸಿತು.ಅವನು ಮಾತು ಮುಗಿಸಿದ.
ಮತ್ತೆ ಎದುರಾಳಿ ತಂಡದ ವಿಜಿ ಬಂದು ನಿಂತಳು.ಚಿಗುರು ಒಂದು ಹೊಸತನ. ಅದು ಹೊಸತನದೊಟ್ಟಿಗೆ ಆರಂಭವಾಗುವ ಗೆಲುವು. ಹಲವು ಕನಸುಗಳ ಮುನ್ನಡೆ ಇದರ ಅಂತಿಮ ನಿಲುವು. ಚಿಗುರು ಒಂದು ಹಗುರ ಭಾವ. ತಂಗಾಳಿಗೆ ತೂಗಬಲ್ಲ ಒಂದು ನೆಮ್ಮದಿ. ಚಿಗುರು ಹಸಿರು ಸಾಮ್ರಾಜ್ಯದ ಅವಶ್ಯಕತೆ. ಪ್ರಕೃತಿ ಉಳಿವಿನ ತಳಹದಿ ಚಿಗುರು ಒಂದು ಉಳಿವಿನ ಸಂಕೇತ. ಈ ಪ್ರಕೃತಿಯಲ್ಲಿ ಚಿಗುರಿಲ್ಲವೆಂಬ ಒಂದು ಊಹೆ ಸಾಧ್ಯವೇ ಎಂದು ಹೇಳುತ್ತಾ ತನ್ನ ಮಾತು ಮುಗಿಸಿದಳು. ನಂತರ ಚಪ್ಪಾಳೆ ಮಾತಿಗಷ್ಟೇ ಅಲ್ಲದೆ ಅವಳ ಮಾತಿನ ದಾಟಿಗೂ ಮುಖದ ಅನುಕರಣೆಗೆ ಸೇರಿ ಬಂದಂತೆ ಅನಿಸಿತು. ನಂತರ ಜನನಿ ಬಂದಳು. ಬೇರಿನ ಪರವಾಗಿ ಮಾತನಾಡಲು ಆರಂಭಿಸಿದಳು. ಬೇರೆಂದರೆ ಒಂದು ಜೀವಿತದ ಮೂಲ. ಅದರ ನೆಲೆಗಳನ್ನು, ಅರಿವುಗಳನ್ನ ಅರಿಯುವುದು ತುಂಬಾ ಕಷ್ಟ. ಹಾಗೆ ಅದರ ಕಾರ್ಯಗಳನ್ನು ಕೂಡ. ಅದೆಷ್ಟು ಆಳದಲ್ಲಿ ಅಡಗಿರುವ ಜೀವ ದ್ರವವನ್ನು ಹುಡುಕಿ ತಂತು ತಂತುಗಳಿಗೆ ಸಾಕಾಗುವಷ್ಟು ಸಂಗ್ರಹಿಸಿ ನಿರಂತರವಾಗಿ ಕಳುಹಿಸುವ ಕಾರ್ಯ ವಿಶಿಷ್ಟ. ಅದೆಷ್ಟು ಚಿಗುರುಗಳು ಇದ್ದರೂ ಏನು ಮಾಡಿಯಾವು? ಬೇರಿಲ್ಲದಿದ್ದರೆ. ಬೇರಿಂದ ತಾನೇ ಅವುಗಳ ಅಳಿವು ಉಳಿವು. ಚಿಗುರು ಅಳಿಯಬಹುದು. ಆದರೆ ಬೇರು ಅಳಿದರೆ ಭವಿಷ್ಯವುಂಟೇ? ಬೇರೆಂದರೆ ಮರದ ಸರ್ವಸ್ವ. ಬೇರಿನ ಆರಂಭ ಒಂದು ಭವಿಷ್ಯದ ಆರಂಭದ ಅಡಿಗಲ್ಲು. ಒಂದು ಚೈತನ್ಯವಾಗಿ ನಿಂತು ಕಾಯುವುದು ಇಳೆಯ. ಅದರ ಹಲವು ಮಜಲುಗಳಿಗೆ ಒಂದು ಜೀವಿತದ ಹರಿವು ಬಿಟ್ಟು ಬೇರೆ ಅರಿವು ಕಾರ್ಯ ಇರದು. ಹಾಗಾಗಿ ಬೇರು ಚಿಗುರಿಗಿಂತ ಶ್ರೇಷ್ಠ ಎಂದೆನಿಸುತ್ತದೆ. ಮತ್ತು ಬೇರೇ ಶ್ರೇಷ್ಠ ಎಂದು ಮಾತು ಮುಗಿಸಿದಳು.
ಹೀಗೆ ಮಕ್ಕಳ ಪ್ರಬುದ್ಧ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾ ಸೂರ್ಯ ಕುಳಿತಿದ್ದ. ಎಲ್ಲರ ವಿಚಾರಗಳು ಇಷ್ಟು ಆಳಕ್ಕಿಳಿದು ವಿಷಯವನ್ನು ವಿಮರ್ಶಿಸುತ್ತವೆ ಎಂದುಕೊಂಡಿರಲಿಲ್ಲ. ಕೊನೆಗೆ ಮಕ್ಕಳ ಮಾತುಗಳೆಲ್ಲವೂ ಮುಕ್ತಾಯವಾದವು. ಈಗ ವಾದ ಮಾಡಿದ ಎರಡು ಗುಂಪುಗಳಿಗೂ ಸಮಾಧಾನದ ಉತ್ತರ ನೀಡಬೇಕಿತ್ತು. ತಮ್ಮದೇ ಹೆಚ್ಚು ಎಂದು ಸಾಧಿಸುತ್ತಿದ್ದ ಅವರವರ ವಿಚಾರಧಾರೆಗಳಿಗೆ ಹೊಸ ಅಭಿವ್ಯಕ್ತಿ ಆಗಬೇಕಿತ್ತು. ಸುಮ್ಮನೆ ಎದ್ದು ನಿಂತ ಸೂರ್ಯ ಎರಡು ತಂಡಗಳತ್ತ ಮುಗುಳು ನಗುತ್ತಾ ಎರಡು ತಂಡಗಳು ವಾಸ್ತವವನ್ನು ಹೆಚ್ಚು ಪ್ರಸ್ತಾಪಿಸಿ ಬೇರು ಮತ್ತು ಚಿಗುರಿನ ಪ್ರಸ್ತುತತೆಯನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ. ಒಳ್ಳೆಯ ಆಲೋಚನೆ ಚಿಂತನೆಯಾಗುವ ವಿಚಾರಧಾರೆಗಳು ನಿಮ್ಮವು. ಒಂದು ಚಂದದ ಅವಲೋಕನ ಕಾರ್ಯಕ್ರಮವಾಯಿತು ಈ ಬೇರು ಚಿಗುರು ಎಂದ. ಈಗ ನನ್ನ ಸರದಿ. ಅವೆರಡರ ಶ್ರೇಷ್ಠತೆಯನ್ನು ನಿಮ್ಮಲ್ಲಿ ಪ್ರತಿಷ್ಠಾಪಿಸಿ ಮಾದರಿಯಾಗಿಸುವುದು.
ಆರಂಭದಲ್ಲಿ ಬೇರಿನಿಂದಲೇ ನನ್ನ ಮಾತುಗಳನ್ನ ಆರಂಭಿಸುತ್ತೇನೆ. ಬೇರು ಒಂದು ಸಸ್ಯದ ಮೂಲ. ಅಲ್ಲಿಂದಲೇ ಅದರ ಬೆಳವಣಿಗೆ ಆರಂಭ. ಸಸ್ಯದ ಆಧಾರವಾಗಿ ಅದಕ್ಕೆ ಪೋಷಕಾಂಶಗಳನ್ನು ಮತ್ತು ನೀರನ್ನು ಬೇರು ಒದಗಿಸುತ್ತದೆ ವೇಗವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟು ತಾನೂ ಬೆಳೆಯುತ್ತದೆ. ಬೇರು ಮಣ್ಣಿನ ಕಣಗಳೊಡನೆ ಮಾತನಾಡುವ ರೀತಿ ವಿಶಿಷ್ಟ. ಅದರ ಜೊತೆಗೆ ನೈಸರ್ಗಿಕ ವ್ಯವಸ್ಥೆಯಲ್ಲಿ ಮಣ್ಣಿನೊಳಗೆ ಉಳಿದು ವ್ಯಕ್ತವಾಗುವುದು ಅದರ ಸಾರ್ಥಕತೆ. ಆದರೆ ಬೇರುಗಳು ಮಣ್ಣಿನ ಹೊಸ ಪ್ರದೇಶಗಳಿಗೆ ವಿಸ್ತರಿಸಬೇಕು. ಆಗ ಎಲೆಗಳಲ್ಲಿರುವ ದ್ಯುತಿಸಂಶ್ಲೇಷಕ ಕಾರ್ಯವಿಧಾನ ಸಸ್ಯದ ಬೇರಿನ ವ್ಯವಸ್ಥೆಗೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಪ್ಲೋಯಂ ದ್ಯುತಿಸಂಶ್ಲೇಷಣೆಯನ್ನ ಎಲೆಗಳಿಂದ ಬೇರಿನ ವ್ಯವಸ್ಥೆಗೆ ಸಾಗಿಸುತ್ತದೆ. ಇನ್ನು ಬೇರುಗಳು ಮಣ್ಣಿನೊಳಕ್ಕೆ ಇಳಿಯುವಾಗ ಅದರ ಎಳೆಯ ಬೇರುಗಳು ಮಣ್ಣಿನೊಳಗೆ ಸಂವಹನ ನಡೆಸಿ ಇಳಿಯುತ್ತದೆ. ಬೇರು ಕೂಡಾ ಭೂಮಿಯ ಆಳಕ್ಕೆ ಬೆಳೆಯುತ್ತದೆ. ಅದರ ಬೆಳವಣಿಗೆಗೆ ಕಾರಣ ಎಲೆಗಳು ಮತ್ತು ಅದರ ನೈಸರ್ಗಿಕ ಕ್ರಿಯೆ. ಮಣ್ಣಿನೊಳಗೆ ಬೇರಿನ ವಿಭಿನ್ನ ರೂಪಗಳಿವೆ. ಅವೆಲ್ಲವೂ ಮಣ್ಣಿನೊಳಗೆ ಬೇರನ್ನು ವ್ಯವಸ್ಥಿತವಾಗಿರುವಂತೆ ಮಾಡಿ ಬೆಳೆಯಲು ಬೇಕಾದ ಹಲವು ಸಾರಗಳನ್ನು ಒದಗಿಸುತ್ತಲೇ ಹೋಗುತ್ತದೆ. ವಿವಿಧ ರೂಪಗಳಲ್ಲಿ ಬೇರಿನ ಸ್ವರೂಪಗಳು ಬದಲಾಗಿ ನಿಂತರೂ ಅದರ ಕಾರ್ಯ ಸಸ್ಯಗಳ ಬೆಳವಣಿಗೆಯೇ. ಎಲೆಯೂ ಮರ ಗಿಡವನ್ನ ಬದುಕಿಸುವ ಉಳಿಸುವ ಕಾರ್ಯವನ್ನು ಮಾಡುತ್ತದೆ. ಬೇರಿನಷ್ಟೇ ಪ್ರಮುಖ ಕಾರ್ಯವನ್ನು ಎಲೆಯು ಮೇಲಿಂದಲೇ ನಿರ್ವಹಿಸುತ್ತದೆ. ಚಿಗುರು ಬೆಳೆದು ಎಲೆಯಾಗುತ್ತದೆ. ನಿಸರ್ಗ ವ್ಯವಸ್ಥೆಯ ಅಪರೂಪದ ಭಾಗವಾಗಿ ಎಲೆ, ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಮರದ ಜೀವಿತಕ್ಕೆ ಮರದ ಬೇರು, ಎಲೆ ಎರಡು ಮುಖ್ಯವೇ. ಎರಡರ ಬಿಡುವಿರದ ಕಾಯಕ ಮರದ ಜೀವಿತ. ಎರಡರಲ್ಲಿ ಒಂದರ ಕಾರ್ಯನಿಂತರೂ ಮರದ ಬದುಕು ಮುಗಿದಂತೆ. ಇದನ್ನು ನಮ್ಮ ಬದುಕಿಗೆ ಅನ್ವಯಿಸಿಕೊಂಡರೆ ಸಂಬಂಧಗಳು ಆಪ್ತವಾಗುತ್ತದೆ. ಹೆಚ್ಚು ಕಡಿಮೆ ಎನ್ನುವ ಅಂತರ ಕಡಿಮೆಯಾಗಿ ಬಂಧುತ್ವ ನೆಲೆಯಾಗುತ್ತದೆ. ಹಿರಿಯರನ್ನು, ಮೂಲವನ್ನು ಆರಾಧಿಸುವ ಜೊತೆಗೆ ಋಣಿಯಾಗಿರುವ ಔದಾರ್ಯ ಮೂಡುತ್ತದೆ. ಬದುಕಿನ ಪೂರ್ಣತೆಗಾಗಿ ಸಮಭಾವದ ಅಂತಃ ಪ್ರೇರಣೆ ಬೇಕು. ಆತ್ಮೀಯ ಭಾವಗಳಿಗೆ ನಿಷ್ಠೆ ತೋರುವ ದೊಡ್ಡತನ ಬೇಕು. ಅದರ ಅರಿವಿನ ಅಂತರಾಳ ಬೇಕು ಎಂದು ಸೂರ್ಯ ತನ್ನ ಕೊನೆಯ ಮಾತು ಮುಗಿಸಿದ. ಚಪ್ಪಾಳೆಯ ಸದ್ದು ಎರಡೂ ಕಡೆಗಳಿಂದ ಕೇಳಿಸಿತು. ಮಕ್ಕಳ ಮುಖದಲ್ಲಿ ಈಗ ಬೇರು ಚಿಗುರಿನ ಸಂದೇಶ ಇತ್ತು. ಇದೊಂದು ಸ್ಪರ್ಧೆ ಬದುಕಿಗೆ ಅನ್ವಯವಾದ ಗುರುತು ಅವರ ಮುಖದಲ್ಲಿ ಇತ್ತು. ಎರಡರ ಅನ್ಯೋನ್ಯ ಕಾರ್ಯದ ಗೆಲುವಿತ್ತು. ಅವಧಿಯ ನಂತರ ಸೂರ್ಯ ತನ್ನ ಕಾರನ್ನು ಚಲಾಯಿಸುತ್ತಿದ್ದ. ಇಂದೇಕೋ ದಿನವೂ ಕಾಣುವ ಆ ಎತ್ತರದ ಗುಡ್ಡದ ಮೇಲೆ ನಿಂತು ಸುತ್ತ ನೋಡಬೇಕು ಒಮ್ಮೆ ಎನ್ನಿಸಿತು. ವಿಶಾಲ ಪರಿಸರ ವ್ಯವಸ್ಥೆಯ ಸೂಕ್ಷ್ಮಗಳನ್ನು ಕಣ್ತುಂಬಿಕೊಳ್ಳಬೇಕು ಎನ್ನಿಸಿತು. ತನ್ನ ಮನೆಯ ಕುಟುಂಬ ನೆನಪಿಗೆ ಬಂತು. ಛಿದ್ರ ಛಿದ್ರವಾಗಿ ಹೋಗಿದ್ದ ಅದೆಷ್ಟೋ ಇತರರ ಬದುಕಿನ ನೆನಪಾಯಿತು. ಮನಸ್ಸಿನೊಳಗೆ ಉಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತೆ ಎನಿಸಿತು. ದೂರವಾಗಿದ್ದ ತನ್ನ ಸಹೋದರರನ್ನ ಮಾತನಾಡಿಸಬೇಕು ಎನಿಸಿತು. ತಂದೆ ತಾಯಿಗಳ ಜೊತೆ ಕುಳಿತು ಊಟ ಮಾಡಬೇಕೆನಿಸಿತು. ಮೂರ್ನಾಲ್ಕು ವರ್ಷಗಳಾಗಿತ್ತು ಊರು ಕಾಣದೇ. ಉದ್ಯೋಗ, ಸಣ್ಣ ಪುಟ್ಟ ವಿಚಾರಗಳ ಭಿನ್ನತೆ ಮನೆಯನ್ನು ಕಾರಣವಿಲ್ಲದೇ ದೂರ ಮಾಡಿತ್ತು . ಎಲ್ಲವೂ ಇದ್ದು ನೆಮ್ಮದಿ ಇಲ್ಲವಾಗಿತ್ತು. ಇಂದೇಕೋ ಮನಸ್ಸು ಹಗುರವಾದಂತೆ ಎನಿಸಿತು. ತನ್ನ ಮನೆಯ ಕಡೆಗೆ ಕಾರು ತಿರುಗಿಸಿದ. ಊರಿನ ಕಡೆಗೆ ಹೊರಟ. ಬದುಕಿನಲ್ಲಿ ಸಂಬಂಧಗಳ ಅರಿವು ಮುಖ್ಯ. ಬದುಕನ್ನು ಆರಾಧಿಸುವ ದಿನಗಳು ಒಂದು ನೆಮ್ಮದಿಯ ಆಸರೆಯಾಯಿತು. ಅವುಗಳಲ್ಲಿನ ಆರಾಧ್ಯಭಾವ ಹೆಚ್ಚುಗಾರಿಕೆಯಲ್ಲ ಎನಿಸಿತವನಿಗೆ. ಉಸಿರನ್ನು ಉಳಿವಾಗಿಸುವ ಬೇರು ಮತ್ತು ಎಲೆಯ ಕಾರ್ಯ ಜೀವನಕ್ಕೆ ಮಾದರಿಯಾಯಿತು. ನಾನು ಎಂಬುದು ಕರಗಿ ನಾವು ಎಂಬುದು ಉಳಿಯುವ ಸಾರ್ಥಕತೆ ಹೆಚ್ಚಿನದ್ದು ಎನಿಸುವಾಗ ಕಾರು ಮನೆಯ ಸಮೀಪ ಬಂದು ನಿಂತಿತ್ತು. ಮನೆಯ ತುಂಬಾ ಮಾತಿನ ನಗು ಹರಡಿತ್ತು. ಬೇರಿನೊಳಗೆ ಬದುಕಿರುವ ಚಿಗುರು ಸೂರ್ಯನನ್ನು ನೋಡಿ ನಗುತ್ತಿತ್ತು.
-----------------------------------
ನಾಗರಾಜ ಬಿ.ನಾಯ್ಕ
ಕಥೆ ತುಂಬಾ ಚೆನ್ನಾಗಿದೆ…
ಧನ್ಯವಾದಗಳು ತಮ್ಮ ಓದಿಗೆ
ಅದ್ಭುತ ಜೀವನ ಪಾಠ… ಪರಿಸರ ಪ್ರಜ್ಞೆಯೊಂದು ಹೇಗೆ ನಮ್ಮ ಬದುಕನ್ನೂ ಸರಿದೂಗಿಸಬಲ್ಲುದು ಎಂಬುದನ್ನು ಸರಳವಾಗಿ ತಿಳಿಸಿದ್ದೀರ ಸರ್ ಈ ಕತೆಯಲ್ಲಿ… ಅದ್ಭುತವಾದ ನಿರೂಪಣೆ…
ನಿಜ ಹೇಳ್ತೇನೆ ಎಲೆಗೆ ಬೇರು ಮುಖ್ಯ ಅಂತ ಗೊತ್ತಿತ್ತು… ಬೇರಿಗೂ ಎಲೆ ಎಷ್ಟು ಮುಖ್ಯ ಅಂತ ಈ ಕಥೆ ಓದಿ ಗೊತ್ತಾಯ್ತು…
ಥ್ಯಾಂಕ್ಯು ಸರ್…
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಸಂಬಂಧಗಳ ಸಂಕೀರ್ಣತೆಯಿಂದ ನಲುಗುತ್ತಿರುವ ಸಮಾಜದಲ್ಲಿ, ಸಂಬಂಧಗಳ ಬೆಸುಗೆ ಹೇಗಿರಬೇಕೆಂದು ಸುಂದರವಾಗಿ ಹಾಗೂ ಮಾರ್ಮಿಕವಾಗಿ ತಿಳಿಸುವಲ್ಲಿ ಕಥೆ ಸಫಲವಾಗಿದೆ. ಬೇರಿಲ್ಲದೆ ಚಿಗುರಿಲ್ಲ… ಬೇರು ಮತ್ತು ಚಿಗುರುಗಳು ಒಂದಕ್ಕೆ ಒಂದು ಪೂರಕವಾಗಿದೆ, ಎಂಬ ವಾಸ್ತವವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಕತೆ ಚೆನ್ನಾಗಿದೆ
ನಾನಾ ಬಾಡ
ಧನ್ಯವಾದಗಳು
ಕಥೆ ತುಂಬಾ ಉತ್ತಮವಾಗಿತ್ತು. ಬಹಳ ಇಷ್ಟವಾಯಿತು.
ಧನ್ಯವಾದಗಳು
ಸುಂದರ ಪ್ರತಿಕ್ರಿಯೆಗಳು.
ಜೀವ ಜೀವಗಳ ಸಂಬಂಧದ ಬಗ್ಗೆ ಅದ್ಭುತ ಪರಿಕಲ್ಪನೆ ವಸ್ತು ವಾಸ್ತವವೂ ಹೌದು. ಅಭಿನಂದನೆಗಳು ನಾಗರಾಜ.
ರಾಮಮೂರ್ತಿ ಅಂಕೋಲಾ.
ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು
ಕಥೆ ಸ್ವಲ್ಪ ಡಿಫರಂಟಾಗಿದೆ..
ಧನ್ಯವಾದಗಳು..
@ ಫಾಲ್ಗುಣ ಗೌಡ ಅಚವೆ
ಧನ್ಯವಾದಗಳು ಸರ್