ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’

ಅವಳ ಹೃದಯದ
ಮಾತು ಕೇಳಿ , ಇಲ್ಲವೆ
ನನಗಾದರೂ ಹೇಳಲು ಬಿಡಿ..
ನೋವುಗಳ ಅವಿತಿಟ್ಟು
ನಗುವ ನಗುವಿಗೆ
ಸಂತೋಷ ಎನ್ನಲೇ..
ಹೂಂ ಅನ್ನುವವರು
ಅಂದುಕೊಳ್ಳಲಿ ಬಿಡಿ
ಈ ಜಗದ ರೀತಿಯದು..!

ಖುಷಿಯಾಗಿಹ ಒಂದು
ಕನಸೆಂದೂ ಕಂಡಿಲ್ಲ ;
ಕಂಡರೂ ಮರುಗಳಿಗೆ
ಮರೆತು ಬಿಟ್ಟಳವಳು
ಸಂಪ್ರದಾಯವನು
ನೆನೆದುಕೊಂಡು…

ಮೃದುಮನದ ಹೂಭಾವಗಳ
ಪಕಳೆಗಳುದುರಿಸಿ
ನಿರ್ವಿಕಾರದಲಿ
ಕಿಟಕಿಯ ಹೊರಗೆ
ನೋಡುತ ಇಂದ್ರಚಾಪವ
ದಿನಗಳೆಯುತಿಹಳು…

ಎಂಥ ತಣ್ಣಗಿನ ಶಿಕ್ಷೆ
ಮುಗುದ ಜೀವಕೆ
ಪರದೆಯೊಳಗೆ…
ಮೂಕ ರೋದನದಿ
ಜಾರುತಲಿವೆ ಬಿಡದೆ
ಕಾಡಿಗೆ ಕಂಗಳುದುರಿಸಿದ
ಮುತ್ತು ಹನಿಗಳು ಕೆನ್ನೆಗೆ…

ಸೀಳಿ ಬಂದು ಬಿಡು
ಹೊರಗೆ ಅಳುಕದೆ ;
ರೀತಿ ರಿವಾಜುಗಳ
ಕಟ್ಟು ನಿಟ್ಟುಗಳ
ಕರಿ ಪರದೆಯನು;
ಕಣ್ತುಂಬ ನೋಡು
ಹೊಸ ಗಾಳಿಯೊಡನೆ
ವಿಶಾಲ ಆಗಸದೆಡೆಗೆ
ಮನಸಾರೆ ನಗುತ..!

Leave a Reply

Back To Top