ಕಲ್ಯಾಣಿಯ ಅನಿರೀಕ್ಷಿತ ಮರಣದ ವಾರ್ತೆಯು ಟೆಲಿಗ್ರಾಂ ಮೂಲಕ ತವರಿನವರಿಗೆ ತಲುಪುವಾಗ ಶವ ಸಂಸ್ಕಾರದ ಕ್ರಿಯಾ ಕರ್ಮಗಳಲ್ಲವೂ ಮುಗಿದಿತ್ತು. ಹಾಗಾಗಿ ಅವರ ತವರಿನವರು ಕಲ್ಯಾಣಿಯ ಹದಿನಾರನೇ ದಿನದ ಕ್ರಿಯಾಕರ್ಮ ಪುಣ್ಯಸ್ಮರಣೆಯಂದು ಸುಮತಿಯ ಮನೆಯನ್ನು ತಲುಪಿದರು. ಕಲ್ಯಾಣಿಯ ಮಕ್ಕಳ ಸ್ಥಿತಿಯನ್ನು ಕಂಡು ಎಲ್ಲರೂ ಮರುಗಿದರು. ಸಕಲೇಶಪುರವನ್ನು ಬಿಟ್ಟು ಕಲ್ಯಾಣಿಯ ತವರೂರಿಗೆ ಬರಲು ಹೇಳಿದರು. ಅಲ್ಲಿ ಮೊದಲಿನಂತೆಯೇ ಜಮೀನನ್ನು ಖರೀದಿ ಮಾಡಿ ವ್ಯವಸಾಯ ಮಾಡಬಹುದಲ್ಲವೇ? ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ನಾಣುವಿಗೆ ಹೇಳಿದರು. ಆದರೆ ಮಹಾ ಸ್ವಾಭಿಮಾನಿಯಾದ ನಾಣುವು ಇದಕ್ಕೆ ಒಪ್ಪಲಿಲ್ಲ. ಗಂಡುಮಕ್ಕಳನ್ನಾದರೂ ಜೊತೆಗೆ ಕಳುಹಿಸಿ ಎಂದರೂ ಒಪ್ಪಲಿಲ್ಲ. ಕಲ್ಯಾಣಿಯ ಕೊನೆಯ ಮಗಳನ್ನು ಸಾಕುವುದು ಇವರಿಗೆಲ್ಲಾ ಕಷ್ಟವಾಗಬಹುದೆಂದು ತಿಳಿದು ಅವಳನ್ನು ಜೊತೆಗೆ ಬರುವಂತೆ ಹೇಳಿದರು. ಕಲ್ಯಾಣಿ ಬದುಕಿಲ್ಲದಿದ್ದರೂ ಅವಳ ಮಗಳಾದರೂ ಜೊತೆಗೆ ಇರುವಳಲ್ಲ ಎಂದು ನಾವು ಸಮಾಧಾನ ಮಾಡಿಕೊಳ್ಳಬೇಕಷ್ಟೇ ಎಂದು ಭಾವಿಸುತ್ತಾ ಆ ಪುಟ್ಟ ಹುಡುಗಿಯನ್ನು ತಮ್ಮೊಂದಿಗೆ ತಮ್ಮ ಕುಟುಂಬದ ಮನೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಇಲ್ಲಿ ಅಕ್ಕಂದಿರು ಮತ್ತು ಅಣ್ಣಂದಿರ ಜೊತೆ ಇರಬೇಕು ಎನ್ನುವ ಆಸೆ ಆ ಹುಡುಗಿಗೆ ಇದ್ದರೂ ಅಮ್ಮನ ತವರಿಗೆ ಹೋಗುವುದೇ ಸರಿ ಎಂದುಕೊಂಡು ಮಾವಂದಿರು ಕರೆದಾಗ ಅವರ ಜೊತೆ ಹೊರಟು ನಿಂತಳು. ಭಾರವಾದ ಮನಸ್ಸಿನಿಂದ ಅವರನ್ನೆಲ್ಲ ಕಲ್ಯಾಣಿಯವರ ಇನ್ನುಳಿದ ಮಕ್ಕಳು ಬೀಳ್ಕೊಟ್ಟರು. ಅಮ್ಮನ ಅನಿರೀಕ್ಷಿತ ಮರಣ ಮಕ್ಕಳ ಮನದಲ್ಲಿ ಬಹಳ ಆಳದ ನೋವನ್ನು ಉಂಟುಮಾಡಿತು. 

ನಿಧಾನವಾಗಿ ಎಲ್ಲರೂ ಆ ನೋವಿನೊಂದಿಗೆ ತಮ್ಮ ಈಗಿನ ಜೀವನಕ್ಕೆ ಒಗ್ಗಿಕೊಳ್ಳತೊಡಗಿದರು. ಸುಮತಿಯ ಮಗನಂತೂ ಬಹಳ ಚುರುಕು. ಮಾವಂದಿರು ಎಂದರೆ ಅವನಿಗೆ ಬಹಳ ಪ್ರೀತಿ. ಅದರಲ್ಲೂ ದೊಡ್ಡ ಮಾವ ಬಂದರೆ ಸಾಕು ತೊಡೆಯೇರಿ ಕುಳಿತುಕೊಂಡು ಬಿಡುತ್ತಿದ್ದ. ಅಪ್ಪನಿಗಿಂತಾ ಅವನಿಗೆ ಮಾವನನ್ನು ಕಂಡರೆ ಬಹಳ ಪ್ರೀತಿ ಮತ್ತು ಸಲುಗೆ. ಅಪ್ಪ ಎಂದರೆ ಅವನಿಗೆ ಬಹಳ ಹೆದರಿಕೆಯಾಗುತ್ತಿತ್ತು. ಹಾಗಾಗಿ ಅಪ್ಪನ ಬಳಿ ಹೆಚ್ಚು ಹೋಗುತ್ತಿರಲಿಲ್ಲ ಆ ಕಂದ. ಅಮ್ಮನ ಜೊತೆಗೆ ಸದಾ ಅಂಟಿಕೊಂಡೇ ಇರುತ್ತಿದ್ದ. ಸುಮತಿಗೆ ಈಗ ಮಗನೇ ಸರ್ವಸ್ವ. ಮನೆಕೆಲಸಗಳ ಜೊತೆಗೆ ಅವನ ತುಂಟಾಟಗಳನ್ನು ನೋಡಿ ಖುಷಿ ಪಡುತ್ತಾ ಅಮ್ಮನ ಅಗಲಿಕೆಯ ನೋವನ್ನು ಮರೆಯುತ್ತಿದ್ದಳು. ಆಗಾಗ ಬರುತ್ತಿದ್ದ ತಮ್ಮಂದಿರು ತನ್ನ ಮಗನನ್ನು ಪ್ರೀತಿಯಿಂದ ಮುದ್ದಾಡುವುದನ್ನು ಕಂಡು ಹಿರಿಹಿರಿ ಹಿಗ್ಗುವಳು. ಕಂದನ ಪ್ರತೀ ದಿನದ ಬೆಳವಣಿಗೆಯನ್ನು ಕಂಡು ಬಹಳ ಸಂತೋಷಗೊಳ್ಳುತ್ತಿದ್ದಳು. ಮೃದು ಸ್ವಭಾವದ ಎಲ್ಲರನ್ನೂ ಪ್ರೀತಿಸುವ ಗುಣ ಅವನದಾಗಿತ್ತು. ಅಮ್ಮನ ಅಚ್ಚುಮೆಚ್ಚಿನ ಮಗ ಈಗ ಶಾಲೆಗೆ ಹೋಗುವಷ್ಟು ದೊಡ್ಡವನಾದ. ಮನೆಯಿಂದ ದೂರದ ಶಾಲೆಗೆ ಅಮ್ಮನ ಕೈ ಹಿಡಿದು ಹೋಗುತ್ತಿದ್ದ. ಕೆಲವೊಮ್ಮೆ ವೇಲಾಯುಧನ್ ಕೆಲಸಕ್ಕೆ ಹೋಗುವಾಗ ಅವನನ್ನು ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಆದರೂ ಅವನಿಗೆ ಅಮ್ಮನ ಜೊತೆ ಶಾಲೆಗೆ ಹೋಗುವುದು ಬಹಳ ಇಷ್ಟ. ದಾರಿಯ ಉದ್ದಕ್ಕೂ ಸುತ್ತ ಮುತ್ತಲಿನ ಸುಂದರ ದೃಶ್ಯಗಳನ್ನು ನೋಡುತ್ತಾ ಅಮ್ಮನ ಜೊತೆ ವರ್ಣನೆ ಮಾಡುತ್ತಾ, ಅಮ್ಮ ಹೇಳುವ ಕಥೆಗಳನ್ನು ಕೇಳುತ್ತಾ ರಸ್ತೆಯಲ್ಲಿ ನಡೆಯುವುದೆಂದರೆ ಅವನಿಗೆ ಎಲ್ಲಿಲ್ಲದ ಹಿಗ್ಗು.

ಮಗನನ್ನು ಶಾಲೆಯವರೆಗೂ ಬಿಟ್ಟು ಬರುವುದೆಂದರೆ ಸುಮತಿಗೆ ಎಲ್ಲಿಲ್ಲದ ಆನಂದ.

ಸುಮತಿಯು ತನ್ನ ಕೈ ಹಿಡಿದು ಕುತೂಹಲ ತುಂಬಿದ ಮುಗ್ದ ಪ್ರಶ್ನೆಗಳನ್ನು ಕೇಳುತ್ತಾ ಜೊತೆ ಸಾಗುವ ಮಗನನ್ನು ಕಂಡು ಖುಷಿ ಪಡುವಳು. ಉತ್ತಮ ಸಂಸ್ಕಾರವನ್ನು ಮಗನಿಗೆ ಕಲಿಸಿದ್ದಳು. ಸಣ್ಣ ವಯಸ್ಸಿಗೇ ಗುರು ಹಿರಿಯರನ್ನು ಬಹಳ ಆದರ ಗೌರವಗಳಿಂದ ಕಾಣುತ್ತಿದ್ದ ಮಗನೆಂದರೆ ಸುಮತಿಗೆ ಪಂಚಪ್ರಾಣ. ರಾಮಾಯಣ, ಮಹಾಭಾರತ, ಭಾಗವತದ  ಕಥೆಗಳನ್ನು ಅಮ್ಮನಿಂದ ಕೇಳುತ್ತಾ ಬೆಳೆದ ಅವನಿಗೆ ಅದರಲ್ಲಿ ಬರುವ ಒಂದೊಂದು ಪಾತ್ರಗಳೂ ಅಚ್ಚುಮೆಚ್ಚು. ಶ್ರೀ ರಾಮನೆಂದರೆ ಬಹಳ ಭಕ್ತಿ. ಚಿಕ್ಕ ವಯಸ್ಸಿನಲ್ಲೇ ಶ್ರೀ ರಾಮನ ಸೌಮ್ಯತೆ,ಸರಳತೆ,ಸಹನಾ ಗುಣಗಳನ್ನು ತನ್ನಲ್ಲಿ ಬೆಳೆಸಿಕೊಂಡಿದ್ದ. ಅಮ್ಮ ಹೇಳುತ್ತಿದ್ದ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ಬಹಳ ಆಸಕ್ತಿಯಿಂದ ಕೇಳುತ್ತಿದ್ದ ಆದರೆ ತುಂಟತನ ಮಾಡುತ್ತಿರಲಿಲ್ಲ. ಸೌಮ್ಯ ಸ್ವಭಾವದ ಅವನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಅಂದ ಹಾಗೆ ಆ ಮುದ್ದು ಹುಡುಗನ ಹೆಸರನ್ನು ನಾನು ಇಲ್ಲಿ ಹೇಳಲಿಲ್ಲ ಅಲ್ಲವೇ? ಅವನೇ ವಿಶ್ವನಾಥ! ನನ್ನ ಪ್ರೀತಿಯ ಅಣ್ಣ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಣ್ಣ ವಯಸ್ಸಿನಿಂದಲೇ ವಿಶ್ವನ ಉತ್ತಮ ಗುಣಗಳನ್ನು ಕಂಡವರು …” ಸುಮತಿ ನಿನ್ನ ಸುಪುತ್ರ ಸಕಲ ಗುಣ ಸಂಪನ್ನ…ದೊಡ್ಡವನಾದ ಮೇಲೆ ನಿನ್ನನ್ನು ತುಂಬಾ ಚೆನ್ನಾಗಿ ಮುತುವರ್ಜಿಯಿಂದ ನೋಡಿಕೊಳ್ಳುವನು”… ಎನ್ನುತ್ತಿದ್ದರು. ಹೀಗೆ ಎಲ್ಲರ ಬಾಯಿಂದ ಮಗನ ಗುಣಗಾನ ಕೇಳುವಾಗ ಸುಮತಿಯ ಹೆಮ್ಮೆಯಿಂದ ಮಗನನ್ನು ನೋಡುವಳು. ಅಮ್ಮನನ್ನು ಹೆಚ್ಚು ಪ್ರೀತಿಸುವ ವಿಶ್ವ ಅಪ್ಪನನ್ನು ಕಂಡರೆ ಬಹಳವಾಗಿ ಹೆದರುತ್ತಿದ್ದ. ಸದಾ ದರ್ಪದಿಂದ ಹುಬ್ಬು ಗಂಟಿಕ್ಕಿ ಇರುವ ಅಪ್ಪನನ್ನು ಕಂಡರೆ ವಿಶ್ವನಿಗೆ ಒಳಗೊಳಗೇ ಅಳುಕು ಹಾಗಾಗಿ ಅಪ್ಪನ ಬಳಿ ಅವನು ಹೋಗುತ್ತಿದ್ದುದೇ ಕಡಿಮೆ. ಮಗನ ಸಣ್ಣಪುಟ್ಟ ತುಂಟಾಟಗಳು ಕಂಡರೆ ವೇಲಾಯುಧನ್ ಸದಾ  ಗದರುತ್ತಿದ್ದರು.


Leave a Reply

Back To Top