ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಹೇಗೆ ಗುರುತಿಸಲಿ?
ಪ್ರತಿ ಧ್ವನಿಸುವ ಗುಮ್ಮಟದಲ್ಲಿ
ಸಾವಿರಾರು ದಿನಗಳಿಂದ
ಲಕ್ಷಾಂತರ ಧ್ವನಿಗಳು ಪ್ರತಿಧ್ವನಿಸುತ್ತಲೆ ಇವೆ
ನಿನ್ನ ಒಂಟಿ ಧ್ವನಿಗಾಗಿ ಅಲೆದು
ಹಾಸುಗಲ್ಲಿನ ಮೇಲೆ ಕಾಯುತ್ತಿರುವೆ
ಮತ್ತೆ ನನ್ನೆದೆಗೆ ನನ್ನೆಡೆಗೆ ನನ್ನ ಧ್ವನಿಯೇ ಬಂದು
ಎನ್ನ ಕಿವಿಗೆ ಇರಿಯುತ್ತಿದೆ,ನಿನ್ನ ಧ್ವನಿ ಹೇಗೆ ಹುಡುಕಲಿ?
ಮುತ್ತಿನಂತೆ ಸುರಿದ ಮಳೆ ಹನಿಯು
ಬಿಸಿಯಾದ ವಸುದೇವಿಗೆ ಮುತ್ತಿಟ್ಟು
ಕೊಳದಲ್ಲಿ ಇಳಿದು ಬೆಟ್ಟವನು ಹಾರಿ
ಭೋರ್ಗರೆವ ಹಾಲಿನಂತೆ ಧುಮುಕುತ್ತಾ
ತಂಗಿದ ತಿಳಿನೀರ ಈಜು ಗೊಳದಲ್ಲಿ
ಮುಳುಗುತ್ತಾ ಏಳುತ್ತಾ
ನಿನ್ನ ಹೆಜ್ಜೆಯನೆ ಹುಡುಕುತ್ತಾ ಅಲೆಯುತ್ತಿರುವೆ
ಹಿಡಿಯಲು ನನ್ನ ಹೆಜ್ಜೆಯೇ ಕಾಣುತ್ತಿಲ್ಲ
ನಿನ್ನ ಹೂವಿನ ಪಾದಗಳ ಮುದ್ರೆ ಹೇಗೆ ಗುರುತಿಸಲಿ
ಮುಸ್ಸಂಜೆಯ ಹೊತ್ತಿನಲಿ
ಗಿಳಿ ಕೋಗಿಲೆ ಗೀಜಗ ಪಾರಿವಾಳ
ಬೆಳ್ಳಕ್ಕಿ ಗುಬ್ಬಿ ಗೊರವಂಕಗಳು
ಗೂಡಿನ ಕಡೆ ಸಾಗುತ್ತಿರುವ ಸಂಭ್ರಮದಲ್ಲಿ
ಬಾನೆಲ್ಲವು ಕೆಂಪು ಕೆಂಪಾಗಿ ರತ್ನದ ಹರಳಂತೆ
ಗುಲಗಂಜಿಯ ಮೈಯಂತೆ ಕಾಣುತ್ತಿದೆ
ನಿನ್ನ ಮೈಬಣ್ಣವು ಕೆಂಪೆಂದರು
ಇರುಳ ಅಂಚಿನಲಿ ಕೆಂಪೇಗೆ ಗುರುತಿಸಲಿ
ಮನೆ ಮುಂದಿನ ಹೂದೋಟದ ಸಸಿಗಳಲಿ
ಪ್ರಸಿದ್ಧಿಗೆ ಹೆಸರಾದ ಮೊಗ್ಗುಗಳು
ನಿನ್ನ ಹೆಸರಿಗೆ ತಕ್ಕಂತೆ ಅರಳಿ ನಸುನಗುತ್ತಿವೆ
ನಿನ್ನ ಅಂದಕ್ಕೆ ತಕ್ಕ ಅಂಬಾರವೇ
ಅಂದದ ಹೂವು ಅರಳಿಸುತ್ತದೆ, ನಿನ್ನ ಅಂದಕ್ಕೊಪ್ಪುವ
ಅರಳಿದ ಹೂವನ್ನು ನಾ ಹೇಗೆ ಗುರುತಿಸಲಿ?
ಹನಮಂತ ಸೋಮನಕಟ್ಟಿ
ಹೇಗೆ ಗುರುತಿಸಲಿ ನಿನ್ನ ಕವನದ ಸಾಲುಗಳು?
ಕಟ್ಟಿ ರವರ ಮನದಾಳದ ಅತ್ಯ ಅದ್ಬುತ ಸಾಲುಗಳು ಸಾರಿ ಹೇಳುವ ಸ್ವಾರಸ್ಯ ದ ಮೇಲೆ ಗುರುತಿಸೋಣ. ಒಳ್ಳೆದಾಗಲಿ