ಕಾವ್ಯ ಸಂಗಾತಿ
ಅಶ್ಫಾಕ ಪೀರಜಾದೆ
ನವಿಲಗರಿ ಈಗ ಮರಿ ಹಾಕುತ್ತಿಲ್ಲ !
ಈ ನಿಶ್ಶಬ್ಧ ನಿಗೂಢತೆಯೊಳಗೆ
ಏನಾದರೂ ಇರಬಹುದೆ ಸದ್ದು
ಕಿವಿಗೆ ಕೇಳಿಸದ ಸಣ್ಣದೊಂದು ಉಸಿರು
ಕಣ್ಣಿಗೆ ಕಾಣದ ಯಾವುದಾದರೂ ರಹಸ್ಯ
ನಾಲಿಗೆ ಸೀಳಿದರೂ ಒಂದು ಮಾತು ಹುಟ್ಟುತ್ತಿಲ್ಲ
ಮಿದುಳು ತಡಕಾಡಿದರೂ ಒಂದು ಅಕ್ಷರ ಸಿಗುತ್ತಿಲ್ಲ
ಆತ್ಮದು ಅಕಾರಣ ಅರಣ್ಯ ರೋಧನ
ಹೃದಯ ಬಗೆದರೂ ಒಂದಹನಿ ರಕ್ತ ಒಸರುತ್ತಿಲ್ಲ
ಇದು ಮೌನದ ಮರಭೂಮಿಯಲ್ಲಿ
ಮಳೆ ಸುರಿಯುವ ಮುನ್ಸೂಚನೆಯೇ?
ಒಳಗೊಳಗೆ ಅಗೋಚರ ಸುನಾಮಿ ಅಲೆಗಳಬ್ಬರ
ಪೆನ್ನು ಪೇಪರ ಮಾತ್ರ ಪಾರ್ಶ್ವವಾಯು ಪೀಡಿತ
ಮಿದುಳು ಖಾಲಿ ಹಾಳೆ
ಭಾವ ಸ್ಖಲನವಾಗುತ್ತಿಲ್ಲ
ಕನಸು ಕೌದಿಯೊಳಗೆ ಬೆಚ್ಚುಗಿನ ಬಯಕೆ ಮೊಟ್ಟೆಯೊಡೆಯುತ್ತಿಲ್ಲ
ನವಿಲಗರಿ ಈಗ ಮರಿ ಹಾಕುತ್ತಿಲ್ಲ
ಇದು ಒಲವಿನ ಕ್ಷಾಮ
ಮನದ ಯಾವುದೇ ಮೂಲೆಯಲ್ಲಿ
ಬಯಕೆ ಬಸಿರಾಗುತ್ತಿಲ್ಲ
ಒರಟು ಚರ್ಮ ಯಾವುದೇ ಸ್ಪರ್ಶಕೆ ಸ್ಪಂದಿಸುತ್ತಿಲ್ಲ ಅರಳುತ್ತಿಲ್ಲ
ಮೋಡ ಮೊಲೆಗಳಿಂದ ಹಾಲು ಸುರಿಯುತ್ತಿಲ್ಲ
ಯಾಕೋ ಗೊತ್ತಿಲ್ಲ
ಸೂರ್ಯನ ಕಿರಣಗಳಿಂದೀಗ ಕತ್ತಲೆ ಕರಗುತ್ತಿಲ್ಲ
ಬೆಳಕು ಮೂಡುತ್ತಿಲ್ಲ
ಹೃದಯ ಹಾಡು ಹಾಡುತ್ತಿಲ್ಲ
ವೆಂದರೆ ಕವಿತೆ ಮನ್ವಂತರಕೆ ತುಡಿಯುತಿದೆ ಎಂದರ್ಥವೇ?
ಅಶ್ಫಾಕ ಪೀರಜಾದೆ.
ಕವಿತೆಯ ಭಾವ ಅದು ತುಡಿದ ರೀತಿ ಬಳಸಿದ ಪ್ರತೀಕಗಳು ಬಹಳ ಸುಂದರವಾಗಿದೆ…. ಮಸ್ತ ಸರ್ ಜೀ
ಧನ್ಯವಾದಗಳು
Super sir
Thank you