ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
‘ಪುನರ್ವಸು
( ಮಳೆ ಕವಿತೆಗಳು)’
ಪುನರ್ವಸು ( ಮಳೆ ಕವಿತೆಗಳು)
ಸಾಕು , ನಿಲ್ಲಿ
ಮೋಡಗಳೆ
ಎಷ್ಟೊಂದು ಸುರಿಯುತ್ತಿರುವಿರಿ
ಮುಗಿಲಿಂದ ನೀರನ್ನ
ಸಹನೆಯ ಕಟ್ಟೆ ಹೊಡೆದು
ನಾನು ಬಿಕ್ಕಿ ಬಿಕ್ಕಿ ಅತ್ತರೆ ,
ಕಟ್ಟುವಿರೇನು ನನ್ನ ಕಣ್ಣೀರಿಗೆ
ಬೆಲೆಯನ್ನ
ಮಣ್ಣ ದಾರಿ ತುಂಬೆಲ್ಲ ರಾಡಿ
ಕಾಲಿಟ್ಟರೆ ನಿನ್ನ
ಹೃದಯದೊಳಗೆ ಜಾರಿದಂಗೆ
ಬಳ್ಳಿ ಎಲೆಗಳ ಮೇಲೆ ಬಿದ್ದ ಹನಿಗಳು , ಮಳೆಯಲಿ ಮಿಂದರೆ
ಸೆರಗಿನೊಳಗಿಂದ ನಿನ್ನೆದೆಗೆ ಜಾರಬಹುದು
ನಾನು ನೀನು ಕೂಡಿಯೇ
ಕೊಚ್ಚಿ ಹೋಗುವ
ಈ ಮಳೆಯಲ್ಲಿ ನೀನು ಇರಬೇಕಿತ್ತು
ಮಳೆ ಉಲ್ಲಾಸ, ಚೈತನ್ಯ ಅಷ್ಟೆ ಅಲ್ಲ
ಗಮ್ಯ,ರಮ್ಯ,ಮೋಹಕ ಚೇಷ್ಟೆ ಗಳ
ಮನದಲಿ ಹುಚ್ಚೆಬ್ಬಿಸುವ ತೀಡುತಂಗಾಳಿ
ಮಳೆಯಲಿ ನೀನು ಜೊತೆಗೆ ಇದ್ದಿದ್ದರೆ
ಮಳೆಗಾಲ ಎಷ್ಟು ಚೆಂದವೆನಿಸುತಿತ್ತು !
ಸೋನೆ
ತುಂತರು
ಆಗಾಗ ಮತ್ತೆ ರಭಸ
ಮಳೆ ನಿನಗೆ ಇದೆಂತಹ ವೈಯಾರ
ವಿರಹವೊ, ದಾಹವೊ ,
ಪ್ರೀತಿಯ ಆಲಾಪವೋ
ಆಷಾಢದಲ್ಲು ಲವಲವಿಸುವ
ನೀನು
ಚುಕ್ಕಿ, ಚಂದ್ರ ತಾರೆಗಳ
ಮುಚ್ಚಿಟ್ಟು
ರಮಣೀಯ ನೃತ್ಯಕ್ಕೆ ಇಳಿದಿರುವೆ
ಬಾನ ಸೆರಗು ಜಾರದಿರಲಿ
ಕಳೆದ ರಣ ಬಿಸಿಲಲ್ಲಿ ನೀನು
ಬೆವೆತ ಬೆವರು ಆವಿಯಾಗಿ
ಮೋಡ ಕಟ್ಟಿದ್ದರಿಂದ
ಅನ್ಸುತ್ತೆ
ಸುರಿವ ಮಳೆಯಲ್ಲು
ನೀನು ನನ್ನ ಜೊತೆ ಇರುವ
‘ಫೀಲ್’ ಆಗುತ್ತಿದೆ
ನೋಡು
ವಿಜ್ಞಾನದ ತಕ೯
ಈಗೇಷ್ಟು ಸತ್ಯ ಅನಿಸುತ್ತಿದೆ
ಬಾ ನೆನೆಯೋಣ
ಮಳೆಯ ಆದ್ರ೯ತೆಯಲ್ಲಿ
ಎಲ್ಲ ಬಿಚ್ಚಿ
ನಮ್ಮಿಬ್ಬರಿಗೂ
ಅಂಟಿದ ಶಂಕೆ,ಗುಮಾನಿ,
ಮೋಸದ ಗುತು೯ಗಳು
ಹೋಗಲಿ ಕೊಚ್ಚಿ
ಮಳೆ ಅತಿ ಅನಿಸಿದೆ
ಕಪ್ಪು ಮೋಡಗಳು
ಚಂದಿರನ ಬಚ್ಚಿಟ್ಟಿವೆ
ಸಹಿಸಿಕೊಳ್ಳುತ್ತಿದ್ದೆನೆ
ಕಾಮನ ಬಿಲ್ಲ ರೂಪದಲ್ಲದರು
ನಿನ್ನ ಕಾಣಬಹುದೆಂಬ ಆಸೆಯಿಂದ
ಮುಳುಗಿಸಿ ಆಗಿದೆ
ಬೆಟ್ಟ,ಗುಡ್ಡ , ಶಿಖರಗಳ
ಮುಗಿದು ಹೋಗಿದೆ
ಬದುಕು ನೀರಲ್ಲಿ ಕೊಚ್ಚಿ.
ಇನ್ಯಾವ ಆಸೆ ಇರಬೇಕು
ಮಹಾ ಮಳೆಯೇ ನಿನಗೆ
ತಡೆ ತಡೆದು, ಹೊಂಚಾಕಿ
ಅಬ್ಬರದಿ ಸುರಿಯುತಿಯಾ
ಅವಳೊಬ್ಬಳು ನೆನೆಯದೆ
ಉಳಿದಳೆ ನಿನ್ನ ಮುತ್ತರಾಶಿಯಲಿ
ಟಿ.ದಾದಾಪೀರ್ ತರೀಕೆರೆ