ಗುರು ಪೂರ್ಣಿಮಾ-ಇಮಾಮ್ ಮದ್ಗಾರ

ಅರಿವೇನೇಂಬುದರಿಯದ
ಮನಸಲಿ
ಅರಿವಿನ ಅಕ್ಷರ ಮೂಡಿಸಿ
ಮಸ್ತಿಷ್ಕದ ಕಕ್ಷೆಯಲಿ
ಅಕ್ಷರದ ನಕ್ಷತ್ರ ತೋರಿಸಿ
ಮನದ ಕೊಳೆ ಕಳೆದು
ಜ್ಞಾನದ ಹೊಳೆ ಹರಿಸಿದ
ಗುರುವಿನ ಪಾದವೆನಗೆ
ಅರುವಿನ ತವರುಮನೆ

ಅಕ್ಕರೆಯಲಿ ರಕ್ಷಿಸುತ
ತಪ್ಪೆಸೆದಾಗ ತಿದ್ದಿ ತೀಡುತ್ತಾ
ಸರಿದಾರಿಯಲಿ ನಡೆಸಿ
ತಂದೆಯಂತಾದ ಗುರುವಿನ
ಪಾದವೆನಗೆ ಅರುವಿನ
ತವರುಮನೆ

ಗುರಿಯೇ ಕಾಣದ ಅಕ್ಷಿಗೆ
ಗುರಿಯಿಡಲು ಕಲಿಸಿ
ಹೆಜ್ಜೆಹೆಜ್ಜೆಗೂ ಜೊತೆಗಿದ್ದು
ಬದುಕೇನೆಂಬುದ ಕಲಿಸಿ
ಕಷ್ಟ ಕಾರ್ಪಣ್ಯಗಳ ಮರೆತು
ನಮ್ಮೆಲ್ಲರೊಡನೆ ಬೆರೆತು
ನೆಮ್ಮದಿಯ ನಿಟ್ಟುಸಿರಬಿಟ್ಟ
ಗುರುವಿನ ಪಾದವೆನಗೆ
ತವರುಮನೆ

ಹೂವೇ ಬಿಡದ ಬಳ್ಳಿ
ಹೂ ಬಿಡುವ ಬಳ್ಳಿ
ಹೂವೇ ಬಿಡದೆ ಕಾಯಾಗುವ ಮರ
ಹೂ ಬಿಟ್ಟೂ…
ಹಣ್ಣೇ ಕಾಣದ ಗಿಡ
ಮೋಡದ ಮೇಲೆರುವ ಹಕ್ಕಿ
ಮೋಡದ ಅರಿವೆ
ಇಲ್ಲದ ಪಕ್ಷಿ
ಅಬ್ಬಬ್ಬಾ ಅಗಣಿತ ಅಪರಿಮಿತ !!

ಕಣ್ಣು ಬೆದರುವ ಮುನ್ನವೇ
ಗದರಿಸುತ್ತಾ
ಬೆಳಕೇ ಇಲ್ಲದ ಚಂದ್ರನಲ್ಲಿಗೆ
ಚುಕ್ಕಿಗಳೇ ಕಾಣದಾಕಾಶಕ್ಕೆ
ರೆಕ್ಕೆಗಳಿಲ್ಲದ ಹಕ್ಕಿಗಳ ಕಳಿಸುವ ದಕಲಿಸಿ
ಮನದ ಮಂದಿರದಲ್ಲಿ
ಮಾಯವಾಗದೇ ಉಳಿದು
ಉಸಿರಿನಲಿ ಉಸಿರಾಗಿ
ಬೆರೆತಿರುವ ಗುರುವಿನ ಪಾದವೆನಗೆ ತವರುಮನೆ

ಎಲ್ಲಾ ಪ್ರಶ್ನೆಗಳಿ ಗುತ್ತರವಿಲ್ಲ
ಎಲ್ಲಾ ಸಮಸ್ಯೆಗಳಿಗೆ ಪರಿಹಾರವುಂಟು ಎಂಬುದನು
ಕಲಿಸಿದ
ಗುರುವವನು
ಪ್ರೀತಿಯ ಸಾಗರ
ಅನುಭವದ ಸರೋವರ !
ಗುರುವಿನ ಪಾದವೆನಗೆ
ತವರುಮನೆ


2 thoughts on “ಗುರು ಪೂರ್ಣಿಮಾ-ಇಮಾಮ್ ಮದ್ಗಾರ

Leave a Reply

Back To Top