‘ಹಬ್ಬಿನಗುವ ಪ್ರೀತಿ’ ಕಿರು ಪ್ರಬಂಧ-ನಿತ್ಯ ಜಗನ್ನಾಥ್ ನಾಯ್ಕ್

ಅವಳೆಂದರೆ ಹಾಗೆ ನಗುವ ಮನಸ್ಸಿನ ಪುಟ್ಟ ಗೆಳತಿ. ಮನೆಯ ನಂದಾದೀಪ, ಪ್ರತಿದಿನವೂ ಹೊಸ ಲೋಕ ತೋರಿಸಿ ತಾನು ನಕ್ಕೂ ನಮ್ಮನ್ನು ನಗಿಸುವ ಒಲವಿನ ಸ್ನೇಹಿತೆ ಪ್ರೀತಿಯ ಮಗಳು.
ತುಂಟ ಮಾತು, ಸ್ವಲ್ಪ ತರಲೆ, ಹೆಚ್ಚು ಸಿಟ್ಟು ಮತ್ತು ಅಗಾಧ ಪ್ರೀತಿ ನೀಡಿ ರಮಿಸುವ ಹೃದಯಾಂತರಾಳದಿ ಚಿಮ್ಮುವ ಪ್ರೀತಿ ಭುವಿಜ್ಞಾ.
ಅವಳೂ ಕಲಿಸುತ್ತಾಳೆ ನನಗೆ ಆಗಾಗ ನಗು ಎಂದರೆ ಏನೆಂದು. ಪುಟ್ಟ ಹಕ್ಕಿ ರೆಕ್ಕೆ ಕುಣಿಸಿ ಕುಣಿಯುವುದ ನೋಡಿ ತಾನೂ ಕುಣಿದು ನನಗೂ ಕುಣಿಯಲು ಕಲಿಸುತ್ತಾಳೆ.
ನಂದನವನದ ಕೃಷ್ಣ ರಾಧೆಯನ್ನು ಹುಡುಕಿದಂತೆ ನನ್ನನ್ನು ಹುಡುಕುತ್ತಾಳೆ ಕಣ್ಣಾ ಮುಚ್ಚಾಲೆ ಎಂಬ ಆಟದ ನೆಪ ಮಾಡಿ.
ಕೆಲವೊಮ್ಮೆ ತಿಳಿಸುತ್ತಾಳೆ, ಅಪ್ಪ ಎಂದರೆ ಪ್ರೀತಿಯ ಕಡಲೆಂದು ಅಮ್ಮ ಎಂದರೆ ಕಡಲಾಳದಿ ಹೊಳೆವಾ ಮುತ್ತೆಂದು.
ಕೆಲವೊಮ್ಮೆ ಗದರಿಸುತ್ತಾಳೆ ಹೇಳಿದ್ದ ಕೊಡಿಸೆಂದು, ಕೆಲವೊಮ್ಮೆ ಪುಟ್ಟ ಕೈಯಲ್ಲಿ ತಿವಿಯುತ್ತಾಳೆ ನಾನೂ ಇದ್ದೇನೆ ನನ್ನನ್ನೇ ಮುದ್ದಿಸು, ನನಗೇ ನಿನ್ನ ಪ್ರೀತಿ ನೀಡೆಂದು ರಚ್ಚೆ ಹಿಡಿಯುತ್ತಾಳೆ.
ಮತ್ತೊಮ್ಮೆ ಮುತ್ತಜ್ಜಿಯ ಕಾಡಿಸಿ ಪೀಡಿಸಿ ಹಿರಿಜೀವವ ತಬ್ಬಿ ಮುದ್ದಿಸಿ ಮನಕೆ ಆನಂದ ನೀಡುವ ನನ್ನ ಅಪ್ಯಾಯಮಾನವಾದ ಪ್ರೀತಿಯ ಖನಿ ಮಗಳೆಂಬ ದೇವತೆ.


ಪ್ರೀತಿಯ ಅಜ್ಜನ ಹೆಗಲೇರಿ ತೋಟ ,ಗದ್ದೆಗಳ ಸುತ್ತಾಡಿ ತನ್ನ ನಗು ತುಂಬಿದ ಕುತೂಹಲಕಾರಿ ಪ್ರಶ್ನೆಯ ಮೂಲಕ ಅಜ್ಜನ ತುಟಿಯಂಚಲಿ ನಗು ಮೂಡಿಸಿ ದಣಿವ ಮರೆಸುವ ನನ್ನ ಭರವಸೆಯ ಕೋಲ್ಮಿಂಚು.
ಅದೆಷ್ಟೇ ಜನರಿದ್ದರು ಅವರ ನಡುವೆ ತನ್ನ ಮಾವನ ಗುರುತಿಸಿ “ಮಾವ” ಎಂದು ಕೂಗಿ ತನ್ನ  ಕಾಸಗಲದ ಕೈಯಲ್ಲಿ ಮುಖ ಮುಚ್ಚಿ ನಾಚುತ್ತಾ ಕಣ್ಣಲ್ಲೇ ಪ್ರೀತಿ ತೋರುತ್ತಾ ತೊದಲು ಮಾತಿನಲ್ಲಿ ಮಾವನ ಜೊತೆ ಮಾತನಾಡುವ ಮಗಳ ದನಿಯೇ ನಿಲ್ಲದ ಸಂಗೀತದಂತೆ.
ಮುದ್ದಿನ ಮಗಳು ಪ್ರತಿದಿನವೂ ಬೆಳೆಯುವಳು ಸುಂದರ ಕವಿತೆಯಂತೆ. ಸೆರೆಗಿನಲ್ಲಿ ಅಡಗಿ  ನಿಂತು ಅಮ್ಮ ಎಂಬ ಮಗಳ ದನಿ ನೂರು ಭಾರ ಕಳೆದು ಹರ್ಷ ನೀಡುವ ಬದುಕಿನ ನೆಮ್ಮದಿ.
ಅದೆಷ್ಟೇ ಗದರಿದರು ಮತ್ತದೇ ಅಮ್ಮ ಎಂಬ ಸ್ವರ ಭಾವುಕತೆಯ ಅಂತರಂಗ. ಪ್ರತಿದಿನ ದೇವರ ಮುಂದೆ ದೀಪ ಹಚ್ಚಿ ಅಮ್ಮನ ತೊಡೆಯ ಮೇಲೆ ಕುಳಿತು ಕೈಮುಗಿದು ಭಜನೆ ಹೇಳುವ ಮಗಳೇ ನನ್ನ ಜೀವನದ ಆತ್ಮಸಾಕ್ಷಿಯ ಸಂಸ್ಕಾರ. ಅಪ್ಪನ ಹಾದಿಯ ಕಾಯುತ್ತಾ ಅಪ್ಪನ ಕಂಡೊಡನೆ ಬಿಗಿದಪ್ಪಿ ಸ್ವಾಗತಿಸುವ ಮಗಳೆಂದರೆ ಸಂಸಾರದ ಜೀವನದಿ. ಹೇಳಿದ್ದನ್ನೆಲ್ಲ ಕೇಳಿ ನುಡಿದಂತೆ ನಡೆಯುವ ಮಗಳ ಕಂಡೊಡನೆ ಧನ್ಯತಾಭಾವದ ಅನುಭವ ,ಕಿಸ್ಮತಿನ ಹೆಮ್ಮೆ,. ಹೀಗೆ ನನ್ನ ಭಾವನೆಗಳ ಮೊತ್ತವೇ ನನ್ನೊಡಲಿನ ಕುಡಿ ಸಾವಿರ ನಕ್ಷತ್ರಗಳಿಗೆ ಸಮನಾದವಳು ಎಂದೆಂದಿಗೂ ಹಬ್ಬಿನಗುವ ಪ್ರೀತಿ ಅವಳು.


Leave a Reply

Back To Top