ಡಾ ಗೀತಾ ಡಿಗ್ಗೆ ಅವರ ಕವಿತೆ-‘ಚಿಗುರು ಬಾಡದಿರಲಿ’

ಬೆಟ್ಟದಷ್ಟು ಆಸೆ ಹೊತ್ತ
ಬಣ್ಣ ಬಣ್ಣದ ಕನಸಿನ
ಗೋಪುರ ಕಟ್ಟಿಕೊಂಡ
ಅಸಂಖ್ಯ ಭರವಸೆಹೊತ್ತ
ಚಿಗುರು ಬಾಡದಿರಲಿ
ಬೀಜ ಮೊಳಕೆಯೊಡೆದು
ಸಸಿಯಾಗಿ ಮರವಾಗಿ
ಜಗಕೆ ಆಸರೆಯಾಗುವ
ಅಸಂಖ್ಯ ಗುರಿಯ
ಚಿಗುರು ಬಾಡದಿರಲಿ
ಮೊಟ್ಟೆ ಮರಿಯಾಗಿ
ರೆಕ್ಕೆ ಬಿಚ್ಚಿ ಹಾರಾಡುವ
ಬಾನಾಡಿ ಬದುಕಭಾವ ಮಹದಾಸೆಯ ಹೊತ್ತ
ಚಿಗುರು ಬಾಡದಿರಲಿ
ಅಮ್ಮನ ಮಡಿಲಿಂದ
ಅಂಬೆಗಾಲಿಕ್ಕಿ ಹೊಸಿಲದಾಟಿ
ಆಕಾಶದ ಚಂದ್ರ ಚುಕ್ಕಿಯ
ಜೊತೆಯಾಟದ ಕನಸುಹೊತ್ತ
ಚಿಗುರು ಬಾಡದಿರಲಿ
ಅಗಣಿತ ಆಸೆಗಳ ಹೊತ್ತು
ಜಗಕೆ ಬಂದಿಹ ಜೀವ
ಅನಂತ ಚೈತನ್ಯದ
ಚಿಲುಮೆಯಾಗಿಹ
ಚಿಗುರು ಬಾಡದಿರಲಿ


Leave a Reply

Back To Top