“ಮಳೆಯಲ್ಲೊಂದು ಮೇಲೋಗರ..” ವಿಶೇಷ ಬರಹ ಪ್ರೇಮಾ ಟಿ ಎಂ ಆರ್. ಅವರಿಂದ.

ಮಳೆ ಕಣ್ಮುಚ್ಚಿಕೊಂಡು ಸೊರಗುತಿತ್ತು.. ಈ ಬರೀ ಗೃಹಿಣಿಯರೆಂಬ ಹೆಣ್ಣುಗಳು, ಬೇಗಬೇಗ ಕೆಲ್ಸ ಮುಗಿಸಿಕೊಂಡು ನಡು ಹಗಲು ಒಂಚೂರು ಮೈ ಚಾಚುವ ಸುಖ, ಓಫೀಸ್  ಕುರ್ಚಿಮೇಲೆ ಕೂತು ಕೂರುವ ಮೇಡಮ್ಮುಗಳಿಗೆ ಎಲ್ಲಿಂದ ಸಿಗಬೇಕು ಪಾಪ ಅಂದ್ಕೊಂಡೆ.(ದಯವಿಟ್ಟು ಒಫೀಸ್ ಗೆ ಹೋಗೋ ಫ್ರೆಂಡ್ಸ್ ಗಳು ಕ್ಷಮಿಸಿ.. ಸಿಟ್ಟಾಗಬೇಡಿ ಪ್ಲೀಸ್… ಈ ಮಂಗ್ಯನ ಮನಸ್ಸಿಗೆ ತಟ್ಟಂತ ಬಾರಕೋಲು ಬೀಸುತ್ತಲೇ ಇರುತ್ತೇನೆ ನಾನು) ಮನಸಿನ ಖಿಲಾಡಿ ಚಿಂತನೆಗೆ ಸಣ್ಣಗೆ ಮುಗುಳ್ನಗು ತೇಲಿತು ಮುಖದಲ್ಲಿ… ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ…. ಎಂದು ಗೊಣಗುತ್ತ ಗಡಬಡಿಸಿಕೊಂಡು ಪಾತ್ರೆ ತೊಳೆಯತೊಡಗಿದೆ. ಎಷ್ಟೇ ಒದ್ದಾಡಿದ್ರೂ ಈ ಬಳಿ ತಿಕ್ಕು ತೊಳೆ ಒರೆಸು ಚಕ್ರವ್ಯೂಹದಿಂದ ಬಿಡಿಸಿಕೊಂಡು ಈಚೆ ಬರುವಾಗ ಮೂರುವರೆ ಆಗೇಬಿಟ್ಟಿತ್ತು . ಇನ್ನೇನು ಹಿಂದೆ ಮುಂದಿನ ಬಾಗಿಲುಗಳ ಚಿಲಕ ಬಿಗಿದು ಹಾಯಾಗಿ ಹಾಸಿಗೆಯಲ್ಲಿ ಅಡ್ಡಾಗಬೇಕು ಅನ್ನುವಷ್ಟರಲ್ಲಿ ಗೇಟು ಕಿರ್ರೆಂತು…. ಥೂ ಇಷ್ಟೊತ್ತಿಗೆ ಯಾರಪ್ಪಾ ಎಂದು ಕಿಟಕಿಯಲ್ಲಿ ಇಣುಕಿದೆ…. ಅವಳು ತನ್ನ ದಪ್ಪ ದೇಹವನ್ನು ಹೊತ್ತು ಬರುತ್ತಿದ್ದಳು…. ಹೇ ಭಗವಾನ್ ಇದೆಲ್ಲಿಯ ಮುಸೀಬತ್ತು…. ಇವತ್ತು ಮಲಗಿದ್ದಾಯ್ತು ಬಿಡು ಎಂದು ಸ್ವಗತ ಹೇಳಿಕೊಂಡು ಬಾಗಿಲು ತೆರೆದು ಹೊರಬಂದೆ.. ಅವಳೆಂದೂ ಒಳಮನೆಗೆ ಪ್ರವೇಶಿಸಿದ್ದೇ ಇಲ್ಲ ಏನಿದ್ರೂ ಅವಳ ಮಾತುಕತೆಯೆಲ್ಲ ಹೊರಜಗುಲಿಯಲ್ಲಿಯೇ.  ಜಾರುವ ಅಂಗಳದಲ್ಲಿ ಅವಳು ಉರುಳಿಬಿದ್ದರೆ ಹೇಗಿದ್ದೀತು…? ದೊಪ್ಪನೆ ಮಣ್ಣಿನ ಮುದ್ದೆ ಬಿದ್ದಂತೆ….ಮತ್ತೆ ಕಲ್ಪನೆಯಲ್ಲಿ ಮಂಗನಂತೆ ಜಿಗಿದ ಮನದ ಮುಸುಡಿಯ ಮೇಲೊಂದು ಗುದ್ದಿದೆ.. “ಬನ್ನಿ ಬನ್ನಿ, ತುಂಬಾ ಅಪರೂಪ ಎಂದೆ.. ” ಒಂದು ಕ್ಷಣ ನನ್ನೊಳಗನ್ನೆಲ್ಲ ಬೆದಕಿ ನೋಡುವಂತೆ ನನ್ನ ದುರುಗುಟ್ಟಿದಳು … ಇಷ್ಟೊತ್ತಿಗೆ ಯಾಕಪ್ಪಾ ಇವ್ಳು ಬಂದ್ಲು ಅಂದ್ಕೊಂತಿದ್ದೀಯಾ ನೀನು.. ನಂಗೇನು ಗೊತ್ತಿಲ್ಲ ಅಂದ್ಜೊಂಡ್ಯಾ.? ಎಂಬತ್ತಿತ್ತು ಆ ಹರಿತವಾದ ನೋಟ.. ನನಗೋ ಫಜೀತಿ… ಸುಮ್ನೆ  ಪೆಚ್ಚು ನಗು ತೂರಿದೆ… ಆಚೆ ಈಚೆ ಹೊರಳಿ ಮೆಟ್ಟಿಲ ಮೇಲೆ ಗಟ್ಟಿಯಾದಳು. ಅಂದ್ರೆ ಇಂದಿಗೆ ಒಂದು ಬರಹಕ್ಕಾಗುವಷ್ಟು ಸರಕು ಇಟ್ಕೊಂಡೇ ಬಂದಿದ್ದಾಳೆ ಅಂದ್ಕೊಂಡೆ.. ಮಡಿಲಲ್ಲಿ ಮುಚ್ಚಿಟ್ಟುಕೊಂಡ ನಾಲ್ಕು  ಮಾವಿನ ದೋರಗಾಯಿಗಳನ್ನು ನನ್ನೆಡೆಗೆ ಚಾಚಿದಳು.  ನಾಲಿಗೆ ಹುಚ್ಚೆದ್ದು ಕುಣಿಯೋಕೆ ಶುರುವಿಟ್ಟಾಗ.. ಹಾಗೆ  ಒಂದು ಮೊಟಕಿ ಹಲ್ಲುಗಳೊಳಗೆ  ನೂಕಿದೆ….. ಕನಿಷ್ಟ ಎಂದರೂ ಒಂದೊಂದು ಮುಕ್ಕಾಲು ಕೆಜಿ ತೂಗುವಷ್ಟು ದೊಡ್ಡ ಬಲಿತ ಕಾಯಿಗಳು…..‌ನೀರು ಒಸರಿತು ಜಿವ್ಹಾಗ್ರದಲ್ಲಿ..   “ಹಣ್ಣು ಅಗುತ್ತೆ ಅನ್ನೋ ಭರವಸೆ ಇಲ್ಲ , ಉಪ್ಪಿನ ಕಾಯಿ ಮಾಡ್ಕೊ, ಇಲ್ಲಂದ್ರೆ ಅದೆಂತದೋ ಸುಡುಗಾಡು ನೀ ಬರೀತಿಯಲ್ಲ ಬೆರಕೆ ಸಾರು, ಅದ್ನ ಮಾಡ್ಕೊ” ಅಂದ್ಲು ಒಂಥರಾ ಮುಖಮಾಡಿ.. ಅವ್ಳು ಪಕ್ಕಾ ಶಾಖಾಹಾರಿ.. ನನ್ನ ಬೆರ್ಕೆ ಸಾರಿನ ಸುದ್ದಿ ಓದಿ ಅವಳು ವಾಕರಿಸುತ್ತಾಳೆಂದು ನನಗೆ ಗೊತ್ತು.. ಬೇಕೆಂತಲೆ ಈ ಮಾವಿನಕಾಯಿಗೂ ಒಣ ಶೆಟ್ಲಿಗೂ ಅಂತ ಸಣ್ಣಗೆ ಸೀಟಿಹೊಡೆದೆ… “ಅಮ್ಮಾ ತಾಯಿ, ಸಾಕಷ್ಟು ಬಾರಿ ಓದಿದ್ದಾಯ್ತು ನಿನ್ನ ಬೆರ್ಕೆ ಸಾರು…. ಮತ್ತೆ ಬೇಡ ಎಂಬಂತೆ ಮುಖ ಡೊಂಕು ಮಾಡಿದಳು . ನಾನು ಅರ್ಥ ಮಾಡಿಕೊಂಡು ಮುಚ್ಕೊಂಡು ಅವಳ ಮಾತಿಗೆ ಕಿವಿಯಾದೆ..


‌   ‌‌‌‌‌‌‌       “ಎಪ್ರಿಲ್ ತಿಂಗಳ ಕೊನೆಯಲ್ಲಿ ಹೂ ಬಿಟ್ಟಿದ್ದು.. ಹಣ್ಣಾಗುತ್ತೆ ಅಂತ ಬಿಟ್ರೆ ಈ ಮಳೆಗೆ ಎಲ್ಲ ಕೊಳ್ತು ಬಿಡ್ತಿತ್ತು.. ಏನಲ್ಲ ಅಂದ್ರು ಒಂದು ನೂರು ಬಾರಿ ಹೇಳಿದ್ರು ಈ ಮನುಷ್ಯ ಕಿವಿಮೇಲೆ ಹಾಕ್ಕೊಂಡಿಲ್ಲ.. ಇಡೀದಿನ ಆ ಬ್ಯುಸಿನೆಸ್ ಲೈನ್ ವೀಕ್ಲಿಯಲ್ಲಿ ,  ಶೇರ್ ಮಾರುಕಟ್ಟೆ ಸುದ್ದಿಯಲ್ಲಿ ಕಳೆದುಹೋಗುವವನ ಕಿವಿಗೆ ಬಿದ್ರೆತಾನೇ.. ಏನೇನೋ ಮಾಡಿ ಗೆಳತಿಯರ ಸಹಾಯದಿಂದ‌ ಒಬ್ಬ ಮರ ಹತ್ತುವವನನ್ನು ಹುಡುಕಿದೆ.. ಪಾಪ ತುಂಬಾ ಶ್ರಮಜೀವಿ.. .ಮರಹತ್ತಿ ಎಲ್ಲ ಕಾಯಿಗಳನ್ನು ತೆಗೆದುಕೊಟ್ಟ.‌ ಒಂದ್ಕಡೆ ಜಿನುಗೋ ಮಳೆ.. ಇನ್ನೊಂದಂದ್ರೆ ಮೇಲಿಂದ ಕಿತ್ತ ಕಾಯಿಗಳನ್ನು ಇಳಿಸಿಕೊಳ್ಳೋದಕ್ಕೆ ಬರುವ ಹೆಲ್ಪರ್ ಈಗ ಬಂದೆ ಎಂದು ಹೋದವ ಗಾಯಬ್. ಎಲ್ಲಿ ವಾಡೆಮೇಲೆ ಸಾರಾಯಿ ಕುಡಿದು ಮಕಾಡೆ ಮಲಗಿದ್ನೋ.. ಹಾಳಾದವ್ನು ಅಂತ ಮರಹತ್ತುವವ ಬಯ್ದುಕೊಂಡ.. . ಇನ್ನೇನು ಮಾಡೋದು.. ನಾನೇ ಹೆಲ್ಪರ್ ಜಾಗದಲ್ಲಿ ನಿಂತೆ…‌ ಆರೇಳು ಚೀಲ ಕಾಯಿ ಇಳಿಸ್ಕೊಂಡು, ಹಾಗೇ ಅದನ್ನು ಮಾಳಿಗೆಯ ಮೇಲಿನ ಸ್ಟೋರ್ ಗೆ ಶಿಪ್ಟ್ ಮಾಡಿ ಅಂತ ಹತ್ತಾರು ಬಾರಿ ಓಡಾಡಿ ಕೈಕಾಲು ಸೊಂಟ ಬಿದ್ದೇ ಹೋಯ್ತು ಅನ್ನುವಷ್ಟು ನುಲಿದು ಹೋಯ್ತು ದೇಹ.. ವಿಷಯ ಅದಲ್ಲ.. ಆ ಪುಣ್ಯಾತ್ಮ ಮರದಿಂದ ಇಳಿದ ಮೇಲೆ ಅವನನ್ನು ಉಪಚರಿಸಬೇಕಲ್ಲ… ಅದು ಮತ್ತೊಂದು ಮುಸೀಬತ್ತು .. ನನಗೋ ಒಂದ್ಕಡೆ ಬಿದ್ಕೊಂಡುಬಿಡೋಣ ಅನ್ನಸ್ತಿತ್ತು… ಹಾಗಂತ ದುಡಿದ ಜೀವವನ್ನು ಹಾಗೇ ಕಳಿಸಲಾದೀತೇ? ಸರಿ ಹದಮಾಡಿದ ಹಿಟ್ಟು ಇತ್ತು ಅಂತ ದೋಸೆ ಹೊಯ್ದು, ಒಂದಷ್ಟು ಕಾಯ್ ಚಟ್ನಿ ರುಬ್ಕೊಂಡೆ..  ಹಳ್ಳಿಜನ ಚಾಯ್ ಜಾಸ್ತಿ ಕುಡೀತಾರೆ ಅಂತ ಒಂದು ಗಿಂಡಿತುಂಬಾ ತುಂಬಿಸ್ಕೊಂಡು ಕರೆದರೆ ಮನುಷ್ಯ ಜಪ್ಪಯ್ಯ ಅಂದ್ರು ತಿಂಡಿ ತಿನ್ನಲು ನಿರಾಕರಿಸಿಬಿಟ್ಟ.. ಅಯ್ಯೋ ಏನ್ಮಾಡಿದ್ರೂ ಒಲ್ಲೆ ಅನ್ನೋದೊಂದೇ ಮಾತು..ನಾನು ಯಾರ್ಮನೇಲು ಏನೂ ತಿನ್ನೋದಿಲ್ಲ.. ಅಂದೇಬಿಟ್ಟ ಒಂಥರಾ ಫರ್ಮಾನು ಹೊರಡಿಸಿದಂತೆ ..ಸರಿ ನಾನೇನ್ಮಾಡ್ಲಿ ನನಗೋ ಒಳಗೆ ನೂರು ಕೆಲಸ ಬಿದ್ದಿವೆ..  ಅವನನನ್ನೇ ಪೋಚರಿಸುತ್ತ ಕೂರುವಂತಿಲ್ಲ…ಬನ್ನಿ ಸ್ವಲ್ಪ ಎಂದು ಒಂದು ಕೂಗು ಹಾಕಿ ಅವನನ್ನು ಇವರ ಪಾಡಿಗೆ ಬಿಟ್ಟು ನನ್ಕೆಲ್ಸಕ್ಕೆ ಬಂದೆ. ಮೆತ್ತಿನಮೇಲೆ ಕೂತು (ಐ ಮೀನ್ ಮಹಡಿಯಲ್ಲಿ) ಕೂತು ನಮ್ಮ ಸಂಭಾಷಣೆಯನ್ನು ಆಲೈಸಿದ ನನ್ನವ ಹಾಗೇ ಕೆಳಗಿಳಿದು ಬಂದು ಹೇಗೋ ಅವನನ್ನು ಆಲೈಸಿ ಓಲೈಸಿ ತಿಂಡಿ ತಿನ್ನಲು ಒಪ್ಪಿಸಿ ಕೂಗು ಹಾಕಿದರು. ಮಹಡಿಯ ಸ್ಟೋರ ರೂಮಿನಲ್ಲಿ ಮಾವಿನಕಾಯಿ ಒರೆಸಿ ಜೋಡಿಸುತ್ತಿದ್ದ ನಾನು ಕಸಕ್ಕೆನ್ನುವ ಸೊಂಟವನ್ನು ಅಮುಕಿಕೊಳ್ಳುತ್ತಲೇ ಇಳಿದು ಬಂದು ಮತ್ತೆ ಅವನಿಗೆ ತಿಂಡಿ ಸರಬರಾಜು ಮಾಡಿ ಒಳ ಸರಿದೆ… ಇನ್ನು ಅಲ್ಲಿ ನನಗೆ ಬೇರೆ ಕೆಲಸ ಇರಲಿಲ್ಲ. . ಇವರು ಬಂದು ನೀನು ಎಂಟ್ನೂರು ಕೊಡ್ತೇನೆ ಅಂದಿದ್ಯಾ..? ಇರ್ಲಿಬಿಡು, ಒಂದು ಸಾವಿರ ಕೊಟ್ಟೆ .. ಸರಿ ಆಯ್ತಲ್ವಾ ಎಂದರು.. ಈ ವಿಷಯದಲ್ಲಿ ತಕರಾರೇ ಇಲ್ಲ ಬಿಡು…ಅವ್ರು ಯಾವಾಗ್ಲೂ ಹಾಗೇನೆ ಶ್ರಮಜೀವಿಗಳನ್ನು ಕಂಡರೆ ಉಕ್ಕಿ ಹರಿವ ಎದೆಭಾವ.‌ ಅವನ ಪಕ್ಕದಲ್ಲೇ ಕೂತು ಎಷ್ಟೊಂದು ಸವಿಯಾಗಿ ಮಾತಾಡಿ ಕಷ್ಟ ಸುಖ ವಿಚಾರಿಸ್ಕೊಂಡು ಮಾತಾಡುತ್ತ  ಮನೆಗೆ ಬಂದ ನೆಂಟನಂತೆ ಗೇಟಿನವರೆಗೆ ಹೋಗಿ ಬೀಳ್ಕೊಂಡರು. 
       ಅಬ್ಬಾ ಅಂತಕ್ಕರಣದಲ್ಲಿ ಕರ್ಣನ ಜಾತಿ ಇವ್ರು .. ಆದ್ರೆ ನಾನೇನು ಪಾಪ ಮಾಡಿದ್ದೆ ಹೇಳು?  ‘ನಿನ್ಗೂ ಸುಸ್ತಾಯ್ತಲ್ಲ ಪಾಪ’ ಎಂಬ ಒಂದು ಸಾಂತ್ವನದ ಮಾತಿಗೆ ಕಾಯುವ ನಾನು,  ‘ಅವರ ಬಾಯಿಂದ ಬಂದಿಲ್ಲಲ್ಲ ನೋಡು’ ಎಂದು ಕೊರಗುವ ನಾನು…. ಬಿಡು… ಊಟಕ್ಕೆ ಬಂದಾಗ ಮತ್ತದೇ ದಡಬಡಿಕೆ ಇನ್ನೂ ಆಗಿಲ್ವಾ ? ಯಾಕಿಷ್ಟು  ಲೇಟು? ಇಷ್ಟೊತ್ತು ಏನ್ಮಾಡ್ತಿದ್ದೆ..? ಇವತ್ತು ಅಡಿಗೆ ಇಷ್ಟೇನಾ.. ನಿತ್ಯದ ಮಹಾಭಾರತವೇ  ಹೊಸತೇನಲ್ಲ .. ಆದ್ರೆ ನಾನು ಹನುಮನಂತೆ ಹತ್ತಾರು ಬಾರಿಗೆ ಮಹಡಿಯೇರಿದ ರಾಮಾಯಣವನ್ನು ಮರೆತೇಬಿಟ್ಟಿದ್ದು ನನಗೆ ಒಂಥರಾ  ಎದೆಯಲ್ಲಿ ಮುಳ್ಳು ಮುರಿದಂತ ಅನುಭವ. ಉಳಿದೆಲ್ಲರಿಗಾಗಿ ಜಂಟಲ್ ಮನ್ ಆಗಿರೋ ಗಂಡಂದಿರು ಹೆಂಡತಿಯರ ವಿಷಯದಲ್ಲಿ ಯಾಕೆ ಕಲ್ಲಾಗ್ತಾರೆ ಹೇಳು..? ಏನೋ ದೊಡ್ಡ ಗುಡ್ಡದಂತ ವಿಷಯವೇನಲ್ಲ… ಆದ್ರೂ ಒಂದು ಕಳಕ್ ಅನ್ನೋ ನೋವು ಎದೆಯಲ್ಲಿ ಉಳ್ಕೊಂಡುಬಿಡುತ್ತೆ ಅಲ್ವಾ? ಸರಿ ನಾನು ಬರ್ಲಾ..” ಎನ್ನುತ್ತ ಕುಂಡೆ ವಜಕಾಡಿಸಿ ಎದ್ದು ಹೊರಟಳು..ಹೇಳಬೇಕೆಂದು ಬಂದದ್ದನ್ನು ಹೊರ ಹಾಕಿದಮೇಲೆ  ಮತ್ತೆ ಒಂದು ಕ಼್ಷಣ ನಿಲ್ಲದ ಜಾಯಮಾನದವಳು.. ಗೇಟು ದಾಟುವಾಗ ಹಿಂತಿರುಗಿ ನೋಡಿ “ಈ ಪತಿದೇವರುಗಳು ಈ ಪತ್ನೀವೃತೆಯರನ್ನು ಊಳಿಗದ ಎತ್ತು, ನನ್ನ ಸೊತ್ತು , ತೊತ್ತು ನಮಗಷ್ಟೇ ಸ್ವಂತು, ಮತ್ತೆ ಇವರೆಂದರೆ ಯಂತ್ರ , ಕಾಯಕದ ಮಂತ್ರ ಅಂದ್ಕೊಂಡು ಬಿಡೋದು ಯಾವಾಗ ಬಿಡ್ತಾರೆ ಹೇಳು” ಅಂದ್ಲು.. ಯಾಕೋ ತುಂಬಾನೇ ಹರ್ಟ ಆಗಿದ್ದಾಳೆ ಅನಿಸ್ತು..
          ಛೇ… ಹೌದಾ… ಹೌದಾ..? ನಾನು ನನ್ನೊಳಗೆ ಪ್ರಶ್ನೆ ಎಸೆದುಕೊಂಡು ಗದ್ದಕ್ಕೆ ಕೈಯ್ಯೊತ್ತಿ ಕೂತು ನನ್ನವನ ತಪ್ಪುಗಳನ್ನು ಪಟ್ಟಿಮಾತೊಡಗಿದೆ..‌ ಅಡಿಗೆ ಆದ ತಕ್ಷಣ ನೀನು ಊಟ ಮಾಡ್ಬಿಡು, ನನ್ನ ಕಾಯೋದ್ಬೇಡ.. ನಿನಗೆ ಆಗದೇ ಇದ್ರೆ ಎಷ್ಟಾಗುತ್ತೋ ಅಷ್ಟೇ ಮಾಡು ಸಾಕು, ಅಜ್ಜೆಸ್ಟ್ ಮಾಡ್ಕೊಳ್ಳೋಣ..  ಅಡಿಗೆಗೆ ಯಾರ್ನಾದ್ರೂ ಇಟ್ಕೋ , ಸುಮ್ನೆ ಎಲ್ಲ ನಾನೇ ಮಾಡ್ತೇನೆ ಅನ್ನೋ ಹಠ ಯಾಕೆ.. ಎನ್ನುವ ಸಂಗಾತಿಯಲ್ಲಿ ತಪ್ಪು ಕಂಡು ಹಿಡಿಯಲೇ ಬೇಕೆಂಬ ಹಠದಲ್ಲಿದ್ದೆ..  ಹೌದಲ್ವಾ .. ಹೇಳುವ ಮಾತಿನಲ್ಲಿ ನಾಜೂಕೇ ಇಲ್ಲ..‌ ಒಂಥರಾ ಬಾರಿಸುವ ಹಾಗೇ ಹೇಳ್ತಾರೆ ಅಲ್ವಾ ? ಒಂದೇ ಒಂದು ದಿನಾನು ನಾನೇನಾದ್ರೂ ಹೆಲ್ಪ ಮಾಡ್ಲಾ ಎಂದು ಕೇಳೇ ಇಲ್ಲ ಇವ್ರು .. … ಹೂಂ ಎಂದು ಹೂಂಕರಿಸಿತು ಒಳ ಮನ..‌  ಇರ್ಲಿ ಬಿಡು ಅಂದ್ಕೊಂಡು ಕ್ಷಮಿಸಿಬಿಟ್ಟೆ‌… ಮತ್ತೆ ಯಾವಾಗಾದ್ರೂ ಅಪರೂಪಕ್ಕೆ ಸುಮ್ನೆ ಮುದ್ದಣ ಮನೋರಮೆಯರಂತೆ ಕೂತು ಸಂವಾದದಲ್ಲಿದ್ದರೆ,  ಕೊನೇಗೆ ಎದ್ದು ಹೋಗುವಾಗ “ನಿಂಗೇನು ಗೊತ್ತಿಲ್ಲ ಬಿಡು ” ಎಂದು ಸ್ಟೇಟ್ಮೆಂಟ್ ಬರೆದು ಶರಾ ಹಾಕಿಬಿಡುವದು.. ಒಂದಷ್ಟು ಹೊತ್ತು ಚಂದವಾಗಿ ಹರಟಿ, ಕೊನೆಯಲ್ಲಿ “ಎಷ್ಟು ಮಾತಾಡ್ತೀಯಾ ನೀನು? ತುಂಬಾ ಮಾತಾಡಿದ್ರೆ ಮೆದುಳಿಗೆ ಹಾರ್ಮ್ ಅಂತೆ ” ಎಂದು ಮುಲಾಜಿಲ್ಲದೇ ಹೇಳಿ ಎದ್ದುಹೋಗುವದು …ಮಹಾಪರಾಧ ಅನ್ನಿಸ್ತು…ಯಾಕೋ ಆದ್ರೂ….ಅಂತ ರಾಗ ಎಳೆಯಿತು ಮನ… ಒತ್ತಾಯ ಹೇರಿ ಕಾರ್  ಡ್ರೈವಿಂಗ ಕಲಿಸಿ, ಬೇಡ ಎಂದರೂ ಲೈಸೆನ್ಸ್ ಕೊಡಿಸಿ, ಆ ಕಾಲಕ್ಕೆ  ತವರಿನ ದಾರಿಯಂಚಿನ ನನ್ನ ಜನ ಅಬ್ಬೋ ಎಂದು ಕಣ್ಣರಳಿಸುವಂತೆ ಮಾಡಿದ ಪತಿ.. ಮನೆಗೆ ಉದ್ದ ಕಾರು ಬಂದಾಗ  ಇದಿನ್ನು ನನಗಾಗದು ಅನ್ನಿಸಿ ಆಕಡೆ ಕುಂಡೆ ತಿರುಗಿಸಿ   ಸುಮ್ಮನಿದ್ದವಳಿಗಾಗಿ ಸುದ್ದಿ ಮಾಡದೇ ಟೂ ವ್ಹೀಲರ್ ತಂದು ನಿಲ್ಲಿಸಿದವ.. ಛೇ…ಛೇ..   ಎದೆಯೊಳಗಿನ  ಈ ತಪ್ಪು ಒಪ್ಪಿನ ಲೆಕ್ಕಾಚಾರದ ರಶೀದಿ ಪುಸ್ತಕ ಹಾಗೇ ಮುಚ್ಚಿಟ್ಟು ಒಳಗೆ ಸರಿದೆ… ಮತ್ತೆ ಚಹಾ ಕಾಸಬೇಕು ನನ್ನವ ಬರುವ ಹೊತ್ತಾಯ್ತು…  ನಿಮಗಷ್ಟೇ ಒಂದು ಮಾತು ಹೇಳ್ತೇನೆ…‌ನೀವು ಯಾರ್ಗೂ ಹೇಳಲ್ಲ ಅಲ್ವಾ? ಮತ್ತೆ .. ನಾನೇನು ತೀರಾ ಪಾಪದವಳಲ್ಲ  ಬಿಡಿ…‌ಸೇರಿಗೆ ಸವ್ವಾ ಸೇರು.. ಹಾಗಾಗಿ ಈ ಬದುಕೂ… ಕೆನೆ ಹಾಲೂ ಜೇನೂ ಸೇರಿದಂತಲ್ಲ…‌ಹಾಜಮೋಲಾ ಚಟಪಟಾ ತಿಂದಂಗೆ…‌  ಒಂದು ತುಂಟ ನಗುವಿನೊಂದಿಗೆ ವಿದಾಯ…ಮತ್ತೆ ಹೀಗೇ ಪುರುಸೊತ್ತಾದಾಗ ಬರ್ತೇನೆ ಆಯ್ತಾ?

———————————————

Leave a Reply

Back To Top