“ಸಿಕಲ್ ಸೆಲ್ ಅನೀಮಿಯ” ವೈದ್ಯಕೀಯಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

ಸಿಕಲ್ ಸೆಲ್ ಅನೀಮಿಯ (Sickle cell anaemia) ಅಥವ ಕುಡಗೋಲು ಕಣ ರಕ್ತಹೀನತೆ ಎಂಬುದು ಅನುವಂಶೀಯ ರೋಗಗಳ ಗುಂಪಿಗೆ ಸೇರಿದ ರೋಗ. ಇದು ಹೀಮಗ್ಲೋಬಿನ್ (ನೆತ್ತರುಬಣ್ಣಕ) ನ್ಯೂನತೆಯಿಂದ ಕಂಡುಬರುವ ರೋಗ. ಹೀಮಗ್ಲೋಬಿನ್ ಎಂಬುದು ಕೆಂಪುರಕ್ತ ಕಣಗಳ ಮೇಲೀನ ಪ್ರೋಟೀನ್ ಮತ್ತು ಅದು ದೇಹದ ವೀವಿಧ ಭಾಗಗಳಿಗೆ ಆಮ್ಲಜನಕ ಹೊತ್ತೊಯ್ಯುತ್ತದೆ. ಸಾಮಾನ್ಯ ಸ್ಥಿತಿಯ ಹೀಮಗ್ಲೋಬಿನ್ ಯುಕ್ತ ಕೆಂಪುರಕ್ತಕಣಗಳು ಗುಂಡಾಕಾರದ ಮೃದು ಕೋಶಗಳು. ಹಾಗಾಗಿ ರಕ್ತನಾಳಗಳ ಒಳಗೆ ಅವುಗಳು ಸುಲಭವಾಗಿ ಚಲಿಸುತ್ತವೆ. ಆದರೆ, ಸಿಕಲ್ ಕಣ ಹೀಮಗ್ಲೋಬಿನ್ ಯುಕ್ತ ಕೆಲವು ಕೆಂಪು ರಕ್ತಕಣಗಳು ಆಮ್ಲಜನಕ ಕಳೆದುಕೊಂಡು, ಕುಡುಗೋಲಿನ ಆಕಾರ ಅಥವ ಅರ್ಧಚಂದ್ರದ ಆಕಾರ ತಳೆದು, ತಮ್ಮ ಮೃದುತ್ವಕ್ಕೆ ಬದಲಾಗಿ ಗಟ್ಟಿ ಮತ್ತು ಜಿಗುಟಾಗಿ, ಚಲನೆಯಲ್ಲಿ ನಿಧಾನವಾಗಿ, ಆರೋಗ್ಯಕರ ಆಮ್ಲಜನಕ ಹೊತ್ತ ರಕ್ತದ ಹರಿವಿಗೆ ತಡೆಯಾಗುತ್ತವೆ. ಆ ತಡೆಹಿಡಿತದಿಂದ ನೋವನ್ನುಂಟುಮಾಡುತ್ತವೆ.

ಸಾಮಾನ್ಯ ಕೆಂಪುರಕ್ತ ಕಣಗಳು 120 ದಿನ ಬದುಕುತ್ತವೆ. ಆದರೆ, ಸಿಕಲ್ ಕಣಗಳು ಕೇವಲ 10 ರಿಂದ 20 ದಿನ ಅಷ್ಟೆ. ಅಲ್ಲದೆ ಅವುಗಳ ಆಕಾರ ಮತ್ತು ಕಠಿಣ ಸ್ಥಿತಿಯ ಕಾರಣ, ಗುಲ್ಮ (spleen) ಅವುಗಳನ್ನು ನಾಶಗೊಳಿಸುವ ಸಾಧ್ಯತೆ ಇರುವುದು. ಗುಲ್ಮವು ರಕ್ತದ ಸೋಂಕುಗಳನ್ನು ಸೋಸಲು ಸಹಕರಿಸುತ್ತದೆ. ಸಿಕಲ್ ಕಣಗಳು ಆ ಸೋಸುಕದೊಳಗೆ ಸಿಕ್ಕಿಕೊಂಡು ಸಾಯುತ್ತವೆ. ಹಾಗಾಗಿ, ಆರೋಗ್ಯಕರ ಕೆಂಪುರಕ್ತ ಕಣಗಳ ಕೊರತೆಯಿಂದ ರೋಗಿಯು ದೀರ್ಘಕಾಲದ ರಕ್ತಹೀನತೆಯಿಂದ ಬಳಲಬಹುದು. ಅಷ್ಟಲ್ಲದೆ, ಸಿಕಲ್ ಕಣಗಳು ಗುಲ್ಮವನ್ನೆ ಹಾನಿಗೊಳಿಸಿ, ವ್ಯಕ್ತಿಯು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಅಧಿಕಗೊಳಿಸಬಹುದು.

ರೋಗಕಾರಕಗಳು:

ವಂಶವಾಹಿಯ (gene) ದೋಷದಿಂದಾಗಿ ಸಿಕಲ್ ಕಣಗಳು ಆನುವಂಶಿಕ.

… ಎರಡು ವಂಶವಾಹಿಗಳು, ಒಂದು ತಾಯಿಯಿಂದ ಮತ್ತೊಂದು ತಂದೆಯಿಂದ ಆನುವಂಶಿಕ ಕೊಡುಗೆ ಆದಾಗ ಮಾತ್ರ, ಸಿಕಲ್ ಕಣ ಕಾಯಿಲೆ ಒಬ್ಬ ವ್ಯಕ್ತಿಗೆ ಬರುವ ಸಾಧ್ಯತೆ ಇದೆ.

… ಹಾಗೆಯೆ, ಒಬ್ಬ ವ್ಯಕ್ತಿಯು ಕೇವಲ ಒಂದೇ ಒಂದು ವಂಶವಾಹಿಯನ್ನು ಪಡೆದಿದ್ದರೆ, ಆತನನ್ನು ರೋಗವಾಹಕ (“carrier” of the disease) ಎನ್ನಲಾಗುತ್ತದೆ. ಇಂಥ ಒಬ್ಬ ರೋಗವಾಹಕನು ಇನ್ನೊಬ್ಬಳು ರೋಗ ವಾಹಕಿಯಿಂದ ಮಾತ್ರ, ಸಿಕಲ್ ಕಣ ಕಾಯಿಲೆಯ ಮಗುವನ್ನು ಪಡೆವ ಸಾಧ್ಯತೆ ಇದೆ.

ಹಾಗೆ ಸಿಕಲ್ ಕಣ ವಂಶವಾಹಿ ವಾಹಕಗಳ ಹೊತ್ತ ಪ್ರತಿ ತಂದೆ ತಾಯಿಗೆ, ಸಿಕಲ್ ಕಣ ರೋಗದ ಮಗು ಜನಿಸುವ ಶೇಕಡ 25 ರಷ್ಟು (ನಾಲ್ಕರಲ್ಲಿ ಒಂದು) ಸಾಧ್ಯತೆ ಇರುತ್ತದೆ.

ಸಿಕಲ್ ಕಣ ಕಾಯಿಲೆಯ ಅಪಾಯದ ಅಂಶಗಳು:

ಸಿಕಲ್ ಕಣ ರೋಗಿ ಇರುವ ಕುಟುಂಬದ ಇತರ ವ್ಯಕ್ತಿಗಳಿಗೂ ರೋಗ ಬರುವ ಸಾಧ್ಯತೆ ಅಧಿಕ. ಆಫ್ರಿಕನ್ ಅಮೆರಿಕನ್ ಪ್ರಜೆಗಳಲ್ಲಿ ಪ್ರಮುಖವಾಗಿ ಇದು ಕಂಡುಬರುವ ರೋಗ.

ರೋಗಲಕ್ಷಣಗಳು:

ಸಿಕಲ್ ಕಣ ರೋಗದ ಕೆಲವು ಕಾರಣ ಮತ್ತು ತೊಡಕುಗಳು ಕೆಳಗಿನ ಪಟ್ಟಿಯಲ್ಲಿ ಇದ್ದಂತಾದರೂ, ಪ್ರತಿ ರೋಗಿಯ ಲಕ್ಷಣಗಳೂ ಬೇರೆ ಬೇರೆ ಮತ್ತು ತೊಡಕುಗಳೂ ಸಹ —

… ರಕ್ತಹೀನತೆ – ಸಿಕಲ್ ಕಣಗಳು ಅಲ್ಪಾಯುಗಳು ಅಥವ ನಾಶಗೊಳ್ಳುವ ಸಾಧ್ಯತೆಯಿಂದ, ಶರೀರದಲ್ಲಿ ಕೆಂಪುರಕ್ತ ಕಣಗಳು ಕಡಿಮೆ ಇರುತ್ತವೆ. ಇದರಿಂದ ರಕ್ತಹೀನತೆ ಉಂಟಾಗುತ್ತದೆ. ತೀವ್ರ ರಕ್ತಹೀನತೆಯಿಂದ ವ್ಯಕ್ತಿಗೆ ತಲೆ ಸುತ್ತು, ಸುಸ್ತು ಮತ್ತು ಉಸಿರಾಟದ ತೊಂದರೆ ಬರುವುದು ಸಾಧ್ಯ.

… ನೋವಿನ ಸಂಧಿಗ್ಧತೆ ಅಥವ ಸಿಕಲ್ ಸಂಧಿಗ್ಧತೆ (pain or sickle crisis) – ಸಿಕಲ್ ಕಣಗಳು ರಕ್ತನಾಳದ ಒಳಗೆ ಅಂಟಿಕೊಂಡು, ಯಾವುದಾದರು ಭಾಗಕ್ಕೆ ರಕ್ತದ ಹರಿವನ್ನು ತಡೆಗಟ್ಟಿದಾಗ ಆಗುವುದನ್ನು ಸಿಕಲ್ ಕ್ರೈಸಿಸ್ ಅಥವ ಕುಡುಗೋಲು ಸಂಧಿಗ್ಧತೆ ಎನ್ನುವರು. ಇದರಿಂದ ಬರುವ ನೋವು ಯಾವ ದೇಹದ ಭಾಗದಲ್ಲಿ ಕೂಡ ಕಾಣಿಸಬಹುದಾದರೂ, ಎದೆ, ತೋಳುಗಳು ಮತ್ತು ಕಾಲುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಸುಳೆಗಳು ಮತ್ತು ಮಕ್ಕಳಲ್ಲಿ ಕೈ ಮತ್ತು ಕಾಲು ಬೆರಳುಗಳು ಊದಿಕೊಂಡು, ನೋವುಂಟಾಗುತ್ತದೆ. ಹೀಗೆ ರಕ್ತ ಚಲನೆಯ ತಡೆಯಿಂದಾಗಿ ಮರಣ ಕೂಡ ಸಾಧ್ಯ.

… ಎದೆಯ ತೀವ್ರತರ ಲಕ್ಷಣಾವಳಿ (Acute chest syndrome) – ಎದೆಯೊಳಗೆ ರಕ್ತನಾಳದಲ್ಲಿ ಸಿಕಲ್ ಕಣಗಳು ಅಂಟಿಕೊಂಡಾಗ ತೀವ್ರ ಲಕ್ಷಣಾವಳಿ ಕಂಡುಬರುತ್ತದೆ. ಇದು ಜೀವಕ್ಕೆ ಅಪಾಯವಾಗಬಹುದು. ಸಾಮಾನ್ಯವಾಗಿ ಇಂಥದ್ದು, ಶರೀರವು ಜ್ವರ, ಸೋಂಕು ಅಥವ ನಿರ್ಜಲೀಕರಣ ಕಾರಣಗಳಿಂದ ಒತ್ತಡಕ್ಕೆ ಒಳಗಾದಾಗ ಇದ್ದಕ್ಕಿದ್ದಂತೆ ಆಗಿಬಿಡಬಹುದು. ಶ್ವಾಸದ ಸಣ್ಣ ಸಣ್ಣ ರಕ್ತನಾಳಗಳಲ್ಲಿ ಸಿಕಲ್ ಕಣಗಳು ಅಂಟಿಕೊಂಡು, ಆಮ್ಲಜನಕದ ಹರಿವಿಗೆ ತಡೆಯೊಡ್ಡಿದಾಗ, ನ್ಯೂಮೋನಿಯಾ (ಶ್ವಾಸಕೋಶದ ಉರಿಯೂತ) ಹೋಲುವಂತಹ ಜ್ವರ, ನೋವು ಮತ್ತು ಘೋರ ಕೆಮ್ಮು ಉಂಟಾಗುವ ಸಾಧ್ಯತೆ ಇದೆ.

… ಗುಲ್ಮ ರಾಶಿ (Splenic sequestration/pooling) – ಎದೆಯೊಳಗೆ ಸಿಕಲ್ ಕಣಗಳು ಅಂಟಿಕೊಂಡು ಗುಡ್ಡೆಯಾದಾಗ, ಇದ್ದಕ್ಕಿದ್ದಂತೆ ಹೀಮಗ್ಲೋಬಿನ್ ಮಟ್ಟದಲ್ಲಿ ಕುಸಿತವಾಗಿ, ತ್ವರಿತವಾಗಿ ಚಿಕಿತ್ಸೆ ಮಾಡದಿದ್ದರೆ ಜೀವಕ್ಕೆ ಅಪಾಯ ಸಾಧ್ಯ. ಹೀಗೆ ರಕ್ತದ ಮೊತ್ತ ಹೆಚ್ಚಾದಾಗ ಗುಲ್ಮ ದೊಡ್ಡದಾಗಿ ನೋವಾಗಲೂಬಹುದು. ಇಂಥ ಪ್ರಕರಣಗಳು ಆಗಾಗ ಆದಾಗ, ಗುಲ್ಮ ಗಾಯಗೊಳ್ಳಬಹುದು, ಮತ್ತು ಶಾಶ್ವತ ಹಾನಿಗೆ ತುತ್ತಾಗಬಹುದು. ಅನೇಕ ಮಕ್ಕಳಲ್ಲಿ ಎಂಟು ವರ್ಷದೊಳಗೆ, ಅವರ ಗುಲ್ಮ ಕೆಲಸಕ್ಕೆ ಬಾರದಂತೆ, ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗಿರುತ್ತದೆ ಅಥವ ಆಗಾಗ ಆದಂತಹ ಇಂಥ (splenic pooling) ಪ್ರಕರಣಗಳ ಕಾರಣದಿಂದ ಆಗಿರಬಹುದು. ಕಾರ್ಯನಿರ್ವಾಹಕ ಗುಲ್ಮ ಇಲ್ಲದ ಕಾರಣ, ಅಂಥ ಮಕ್ಕಳಲ್ಲಿ ಸೋಂಕಿನ ಅಪಾಯ ಅಧಿಕ. ಈ ರೋಗದಿಂದ ಬಳಲುವ ಐದು ವರ್ಷಕ್ಕೆ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಾಗುವುದು ಸೋಂಕಿನ (infection) ಪ್ರಮುಖ ಕಾರಣದಿಂದ.

… ಪಾರ್ಶ್ವವಾಯು – ಸಿಕಲ್ ಕಣ ಕಾಯಿಲೆಯ ರೋಗಿಗಳಲ್ಲಿ ಇದ್ದಕ್ಕಿದ್ದಂತೆ ಕಂಡುಬರುವ ಮತ್ತು ತೀವ್ರತರವಾದ ತೊಡಕುಗಳಲ್ಲಿ ಪಾರ್ಶ್ವವಾಯು ಪ್ರಮುಖ. ಈ ದುರ್ಘಟನೆಯು, ಸಿಕಲ್ ಕಣಗಳು ಮೆದುಳಿಗೆ ಆಮ್ಲಜನಕ ಹರಿಸುವ ಪ್ರಮುಖ ರಕ್ತನಾಳದಲ್ಲಿ ತಡೆ ಒಡ್ಡಿದಾಗ ಉಂಟಾಗಬಹುದು. ಮೆದುಳಿನ ರಕ್ತ ಮತ್ತು ಆಮ್ಲಜನಕದ ಹರಿವಿಗೆ ಅಡೆತಡೆ ಆದಾಗ, ತೀವ್ರತರ ಹಾನಿ ಮೆದುಳಿಗೆ ಆಗುವುದು ಸಾಧ್ಯ. ಸಿಕಲ್ ಕಣ ರಕ್ತಹೀನತೆಯಿಂದ ಒಮ್ಮೆ ಪಾರ್ಶ್ವವಾಯು ಉಂಟಾದರೆ, ಅಂಥವರು ಮತ್ತೆಮತ್ತೆ ಅದಕ್ಕೆ ತುತ್ತಾಗುವ ಸಾಧ್ಯತೆ ಇದೆ.

… ಕಾಮಾಲೆ (Jaundice) – ಸಿಕಲ್ ಕಣ ರೋಗದಲ್ಲಿ ಕಾಮಾಲೆ ಲಕ್ಷಣ ಸಾಮಾನ್ಯ. ಸಿಕಲ್ ಕಣಗಳು ಬಹಳ ದಿನ ಬದುಕುವುದಿಲ್ಲವಾದ್ದರಿಂದ, ತ್ವರಿತವಾಗಿ ಅವು ಸಾವಿಗೀಡಾಗುವುದರಿಂದ, ಯಕೃತ್ತಿಗೆ ಅವುಗಳನ್ನು ಸೋಸಿ ಹೊರಹಾಕುವುದು ಕಷ್ಟ. ಹಾಗಾಗಿ, ಆ ಮುರಿದ ಸಿಕಲ್ ಕಣಗಳಲ್ಲಿನ ಬಿಲಿರೂಬಿನ್ (ಪಿತ್ತವರ್ಣದ್ರವ್ಯ) ಅಧಿಕಗೊಂಡು ಹಳದಿ ಬಣ್ಣವು ಕಾಮಾಲೆಗೆ ಕಾರಣವಾಗುತ್ತದೆ.

ಪ್ರಯಾಪಿಸಂ (Priapism):
ಪ್ರಯಾಪಿಸಂ ಎಂಬ ತೊಂದರೆಯು, ಸಿಕಲ್ ಕಣಗಳಿಂದ ಶಿಶ್ನದ ರಕ್ತನಾಳಗಳು ಅಡಚಣೆಗೆ ಒಳಗಾಗಿ ನೋವನ್ನು ಉಂಟುಮಾಡುವ ಕಾಯಿಲೆ. ವಿಳಂಬವಿಲ್ಲದೆ ಚಿಕಿತ್ಸೆ ನೀಡದಿದ್ದರೆ ನಪುಂಸಕತ್ವಕ್ಕೆ (Impotence) ತುತ್ತಾಗಬಹುದು.

ರೋಗನಿರ್ಣಯ:
ರೋಗಿಯ ಸಂಪೂರ್ಣ ವೈದ್ಯಕೀಯ ಇತಿಹಾಸ ತಿಳಿದುಕೊಂಡು, ದೈಹಿಕ ಪರೀಕ್ಷೆ ಮಾಡಿದ ನಂತರ, ರಕ್ತ ಮತ್ತಿತರ ಪರೀಕ್ಷೆಗಳು ಬೇಕಾಗಬಹುದು.
ಅನೇಕ ಕಡೆ ನವಜಾತ ಶಿಶುಗಳನ್ನು ಸಿಕಲ್ ಕಣ ಪರಿಶೀಲನೆಗೆ (sickle cell screening) ಒಳಪಡಿಸಿ, ಚಿಕಿತ್ಸೆಯನ್ನು ಕೂಡಲೆ ಆರಂಭಿಸುವ ರೂಢಿ ಇದೆ. ಶೀಘ್ರ ರೋಗನಿರ್ಣಯವು ಮುಂದಿನ ತೊಡಕುಗಳಿಗೆ ಕಡಿವಾಣ ಹಾಕುತ್ತದೆ.
ಹೀಮೊಗ್ಲಾಬಿನ್ ಎಲೆಕ್ಟ್ರೊಫೊರೆಸಿಸ್ (ನೆತ್ತರುಬಣ್ಣಕದ ವಿದ್ಯುದ್ವಿಭಜನೆ) ಪರೀಕ್ಷೆಯಿಂದ, ಒಬ್ಬ ವ್ಯಕ್ತಿಯು ಸಿಕಲ್ ಕಣ ಕಾಯಿಲೆಯ ‘ರೋಗವಾಹಕ’ ಆಗಿರುವನೋ ಅಥವ ಆತನಲ್ಲಿ ಸಿಕಲ್ ಕಣದ ಜೀನ್ ಸಂಬಂಧಿತ ಕಾಯಿಲೆ ಇರುವುದೋ ಎಂಬುದನ್ನು ಕಂಡುಹಿಡಿಯಲಾಗುತ್ತದೆ.

ಚಿಕಿತ್ಸೆ:
ಕ್ಷಿಪ್ರ ರೋಗನಿರ್ಣಯ ಹಾಗು ತೊಡಕುಗಳನ್ನು ತಡೆಗಟ್ಟುವುದು ಸಿಕಲ್ ಕಣ ಕಾಯಿಲೆಯ ಚಿಕಿತ್ಸೆಗೆ ನಿರ್ಣಾಯಕ. ರೋಗಿಯ ವಯಸ್ಸು, ಒಟ್ಟಾರೆ ಆತನ ಆರೋಗ್ಯ ಸ್ಥಿತಿ ಮುಂತಾದ ಅಂಶಗಳು ಅತ್ಯುತ್ತಮ ಚಿಕಿತ್ಸೆಯ ತೀರ್ಮಾನಕ್ಕೆ ಬಹುಮುಖ್ಯ. ಪಾರ್ಶ್ವವಾಯುವನ್ನೂ ಒಳಗೊಂಡ ಅಂಗಹಾನಿ ಹಾಗು ಸೋಂಕಿನ ತಡೆಗಟ್ಟುವಿಕೆ ಮತ್ತು ರೋಗಲಕ್ಷಣಗಳ ಔಷಧೋಪಚಾರ ಮುಂತಾದವು ಚಿಕಿತ್ಸೆಯ ಗುರಿ —

… ನೋವಿನ ಔಷಧೋಪಚಾರ – ಸಿಕಲ್ ಕಣ ಸಂದಿಗ್ಧತೆಯ ನೋವು ಶಮನಕಾರಕ ಔಷಧಗಳು.

… ಅಧಿಕ ನೀರು ಸೇವನೆ – ದಿನ ಒಂದಕ್ಕೆ ಎಂಟರಿಂದ ಹತ್ತು ಗ್ಲಾಸ್ ನೀರು ಕುಡಿಯುವುದರಿಂದ ನೋವಿನ ಬಿಕ್ಕಟ್ಟನ್ನು ತಡೆಯಬಹುದು. ಕೆಲವೊಮ್ಮೆ ಅಭಿಧಮನಿಯ ಮೂಲಕ ದ್ರವವನ್ನು ನೀಡಬೇಕಾಗುತ್ತದೆ (intravenous fluid).

… ರಕ್ತಪೂರೈಕೆ – ರಕ್ತಹೀನತೆ ನಿವಾರಣೆ ಚಿಕಿತ್ಸೆಗೆ ಮತ್ತು ಪಾರ್ಶ್ವವಾಯುವನ್ನು ತಡೆಗಟ್ಟಲು ರಕ್ತ ವರ್ಗಾವಣೆ (blood transfusion) ಸಹಾಯಕ. ಸಿಕಲ್ ಹೀಮೊಗ್ಲಾಬಿನ್ ಇರುವ ರಕ್ತವನ್ನು, ಆರೋಗ್ಯಕರ ಹೀಮೊಗ್ಲಾಬಿನ್ ಇರುವ ರಕ್ತದ ಪೂರೈಕೆ ಮೂಲಕ ನಿಸ್ಸಾರಗೊಳಿಸಲಾಗುವುದರಿಂದ,
ದೀರ್ಘಕಾಲದ ನೋವು ನಿವಾರಣೆ, ಎದೆಯ ತೀವ್ರತರ ಲಕ್ಷಣಾವಳಿ ಮತ್ತು ಗುಲ್ಮ ರಾಶಿ (Splenic sequestration) ಮತ್ತಿತರ ತುರ್ತಿನ ಸ್ಥಿತಿಗಳಿಗೆ ಚಿಕಿತ್ಸೆಯಾಗುತ್ತದೆ.

… ಸೋಂಕು ತಡೆ – ಸೋಂಕು ತಡೆಗಾಗಿ ವಿವಿಧ ಲಸಿಕೆ ಮತ್ತು ಪ್ರತಿಜೀವಕಗಳನ್ನು (vaccines and antibiotics) ಉಪಯೋಗಿಸಲಾಗುವುದು.

… ಫೋಲಿಕ್ ಆಸಿಡ್ – ತೀವ್ರ ರಕ್ತಹೀನತೆಯನ್ನು ತಡೆಗಟ್ಟಲು ಫೋಲಿಕ್ ಆಮ್ಲ ಸಹಾಯಕ.

… ಕಣ್ಣು ಪರೀಕ್ಷೆ – ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡುವುದರಿಂದ ರೆಟೀನಾ (ಅಕ್ಷಿಪಟ) ತೊಂದರೆಯನ್ನು ತಡೆಯಬಹುದು.

… ಅಸ್ತಿಮಜ್ಜೆ – ಅಸ್ತಿಮಜ್ಜೆಯ ವರ್ಗಾವಣೆಯಿಂದ (Bone marrow transplant) ಸಿಕಲ್ ಕಣ ಕಾಯಿಲೆಯನ್ನು ಕೆಲವರಲ್ಲಿ ಗುಣ ಮಾಡುವುದು ಸಾಧ್ಯ. ರೋಗದ ತೀವ್ರತೆಯ ಮೇಲೆ ಮತ್ತು ಸೂಕ್ತ ಅಸ್ತಿಮಜ್ಜೆ ದಾನಿಯು ಮುಂದೆ ಬರುವುದರ ಮೇಲೆ ಈ ಕಾರ್ಯ ವಿಧಾನದ ಬಗ್ಗೆ ತೀರ್ಮಾನಿಸಲಾಗುವುದು. ಇದು ವಿಶೇಷ ವೈದ್ಯಕೀಯ ಕೇಂದ್ರಗಳಲ್ಲಿ ಮಾತ್ರ ಸಾಧ್ಯ.

ಸಿಕಲ್ ಕಣ ರೋಗದ ತೊಡಕುಗಳು:
ಸಿಕಲ್ ಕಣ ರೋಗ ಎಲ್ಲ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ಸಿಕಲ್ ಕಣಗಳ ಅಸಹಜ ಕಾರ್ಯದಿಂದ ಮತ್ತು ಅವುಗಳ ಸಣ್ಣ ರಕ್ತನಾಳಗಳೊಳಗಿನ ಅಸಮರ್ಪಕ ಹರಿವಿನಿಂದ ಯಕೃತ್ತು, ಹೃದಯ, ಮೂತ್ರಪಿಂಡಗಳು, ಪಿತ್ತಕೋಶ, ಕಣ್ಣುಗಳು, ಮೂಳೆ ಮತ್ತು ಕೀಲುಗಳು ಹಾನಿಗೆ ಒಳಗಾಗಬಹುದು. ಅಂತಹ ಸಮಸ್ಯೆಗಳೆಂದರೆ —

… ಅತಿಯಾದ ಸೋಂಕು
… ಮೂಳೆ ಹಾನಿ
… ಕಾಲಿನ ಹುಣ್ಣುಗಳು
… ಆರಂಭಿಕ ಪಿತ್ತಕಲ್ಲುಗಳು (early gallstones)
… ಮೂತ್ರಪಿಂಡ ಹಾನಿ ಮತ್ತು ಮೂತ್ರದ ಮೂಲಕ ಶರೀರದ ನೀರಿನ ನಷ್ಟ
… ಕಣ್ಣು ಹಾನಿ
… ಬಹು ಅಂಗಗಳ ವೈಫಲ್ಯ

ಸಿಕಲ್ ಕಣ ರೋಗದೊಡನೆ ಬದುಕು: ಸಿಕಲ್ ಕಣ ಕಾಯಿಲೆ ಒಂದು ಆಜೀವ ಪರ್ಯಂತ ರೋಗ. ಈ ರೋಗದಿಂದ ಆಗಬಹುದಾದ ತೊಡಕುಗಳನ್ನು ಸಂಪೂರ್ಣವಾಗಿ ತಡೆಯುವ ಸಾಧ್ಯತೆ ಇಲ್ಲದಿದ್ದರೂ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡು ಬದುಕಿದರೆ ಅಂಥ ಕೆಲ ತೊಡಕುಗಳನ್ನು ಕಮ್ಮಿ ಮಾಡಲು ಸಾಧ್ಯ. ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ – ಹೆಚ್ಚು ಹಣ್ಣುಗಳು, ತರಕಾರಿ, ಧಾನ್ಯಗಳು ಮತ್ತು ಪ್ರೋಟೀನ್ ಯುಕ್ತ ಆಹಾರ ಮತ್ತು ಅಧಿಕ ನೀರು ಸೇವನೆ.
ಕೆಲವು ಡಿಕಂಜಂಸ್ಟೆಂಟ್ ಔಷಧಗಳ (ಉದಾಹರಣೆಗೆ ಮುಚ್ಚಿದ ಮೂಗು ಮತ್ತು ನೆಗಡಿ ಔಷಧಗಳು) ಉಪಯೋಗದಿಂದ ರಕ್ತನಾಳಗಳು ಸಂಕುಚಿತಗೊಂಡು, ಸಿಕಲ್ ಕಣ ಸಂದಿಗ್ಧತೆಯನ್ನು ಪ್ರಚೋದಿಸಬಹುದು.

ಅತಿ ಎತ್ತರದ ಪ್ರದೇಶಗಳು, ಶೀತದ ಹವಾಮಾನ, ತಣ್ಣೀರಿನಲ್ಲಿ ಈಜು ಮತ್ತು ಅಧಿಕ ದೈಹಿಕ ಶ್ರಮ ಮುಂತಾದುವು ಕೂಡ ಪ್ರಚೋದನಕಾರಿ ಅಂಶಗಳು.

ಪ್ರತಿ ವರ್ಷ ಫ್ಲೂ ಲಸಿಕೆ ಹಾಕಿಸಿಕೊಂಡು ಸೋಂಕು ತಗುಲದ ಹಾಗೆ ಇರುವುದು, ಕೈಗಳನ್ನು ಆಗಾಗ ತೊಳೆಯುವುದು, ರೋಗಿಗಳಿಂದ ದೂರ ಇರುವುದು ಮತ್ತು ನಿಯಮಿತವಾದ ಹಲ್ಲಿನ ತಪಾಸಣೆಗೆ ಒಳಗಾಗುವುದು ಬಹಳ ಮುಖ್ಯ.


2 thoughts on ““ಸಿಕಲ್ ಸೆಲ್ ಅನೀಮಿಯ” ವೈದ್ಯಕೀಯಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

  1. Informative ಈ ನಿಮ್ಮ sickle cell anemia! ಆಸಕ್ತರಿಗೆ quite interesting.
    Congrats Murthy!

  2. ಧನ್ಯವಾದ, ಪ್ರಿಯ ವೆಂಕಟೇಶ್

Leave a Reply

Back To Top