ಜ್ಞಾನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಅಲೆಕ್ಸಾಂಡರ್ ಗ್ರಹಂಬೆಲ್
ಮತ್ತು ಹಲೋ ಎಂಬ ಪದ ಬಳಕೆ”
ದೂರವಾಣಿ ಕರೆಯನ್ನು ಸ್ವೀಕರಿಸಿದವರು ಸಾರ್ವತ್ರಿಕವಾಗಿ ಬಳಸಲ್ಪಡುವ ಹಲೋ ಎಂಬ ಪದದ ಕುರಿತ ಜಿಜ್ಞಾಸೆ ಇಂದು ನಿನ್ನೆಯದಲ್ಲ.
ಕೆಲ ಜನರು ಹೇಳುವ ಹಾಗೆ ಟೆಲಿಫೋನ್ ಕಂಡುಹಿಡಿದ ಅಲೆಕ್ಸಾಂಡರ್ ಗ್ರಹಂಬೆಲ್ ಪತ್ನಿಯ ಹೆಸರು ಹಲೋ ಎಂದಾಗಿದ್ದು ಅಲೆಕ್ಸಾಂಡರ್ ಗ್ರಹಂಬೆಲ್ ತನ್ನ ಪತ್ನಿಗೆ ಮೊದಲ ಕರೆ ಮಾಡಿ ಹಲೋ ಎಂದು ಆಕೆಯನ್ನು ಸಂಬೋಧಿಸಿದ ಎಂದು.
ಅಲೆಕ್ಸಾಂಡರ್ ಗ್ರಹಂಬೆಲ್ ಸ್ಟಾಟಿಶ್ ಮೂಲದ ವ್ಯಕ್ತಿಯಾಗಿದ್ದು ಚರ್ಚ್ ಒಂದರಲ್ಲಿ ತನ್ನ ಕುಟುಂಬದಲ್ಲಿ ತಾತ ಮತ್ತು ತಂದೆಯ ಬಳುವಳಿಯಾಗಿ ಬಂದ ಕಿವುಡ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತಿದ್ದ. ಆತನ ಪತ್ನಿಗೆ ಕೂಡ ಕಿವಿ ಕೇಳಿಸುತ್ತಿರಲಿಲ್ಲ. ತನ್ನ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಆತ ಆಕೆಗಾಗಿ ಶ್ರವಣ ಯಂತ್ರವೊಂದನ್ನು ತಯಾರಿಸಲು ಯೋಜಿಸಿದ್ದು ನಿಜ,
ಶ್ರವಣ ತಂತ್ರಜ್ಞಾನದ ಕುರಿತು ಹೆಚ್ಚಿನ ಅರಿವನ್ನು ಹೊಂದಿದ್ದ ಆತ ದೂರದಲ್ಲಿರುವ ವ್ಯಕ್ತಿಯೊಂದಿಗೆ ತಂತಿಯ ಮೂಲಕ ಧ್ವನಿ ತರಂಗಗಳನ್ನು ಹಾಯಿಸಿ ಮಾತನಾಡುವ ಯಂತ್ರ ಒಂದನ್ನು ಆವಿಷ್ಕರಿಸುತ್ತಲಿದ್ದ. 1876ರ ಮಾರ್ಚ್ 10ರ ಆ ದಿನ ತನ್ನ ಪ್ರಯೋಗಾಲಯದಲ್ಲಿ ಪ್ರಯೋಗ ನಿರತನಾಗಿದ್ದಾಗ ಮೇಲಿನ ಕೋಣೆಯಲ್ಲಿದ್ದ ಅಲೆಕ್ಸಾಂಡರ್ ಗ್ರಹಂಬೆಲ್ ” ಮಿಸ್ಟರ್ ವ್ಯಾಟ್ಸನ್, ಕಮ್ ಹಿಯರ್, ಐ ವಾಂಟ್ ಟು ಟಾಕ್ ಟು ಯು” ಎಂದು ತಾನು ಕಂಡುಹಿಡಿದ ಯಂತ್ರದ ಮೂಲಕ ತಂತಿಯ ಮತ್ತೊಂದು ತುದಿಯಲ್ಲಿದ್ದ ಕೆಳ ಅಂತಸ್ತಿನ ಇನ್ನೊಂದು ಕೋಣೆಯಲ್ಲಿ ಕಾರ್ಯನಿರತನಾಗಿದ್ದ ತನ್ನ ಸಹಾಯಕನಿಗೆ ಕರೆ ಮಾಡಿ ಮಾತನಾಡಿದ. ಇದುವೇ ಟೆಲಿಫೋನ್ ನ ಉಗಮವಾದ ನಂತರ ದಾಖಲಾದ ಮೊಟ್ಟಮೊದಲ ದೂರವಾಣಿ ಸಂಭಾಷಣೆ.
ಎಲಿಷಾ ಗ್ರೆ ಎಂಬ ಅಮೆರಿಕದ ಸಂಶೋಧಕಿಯೊಬ್ಬರು ದೂರವಾಣಿಯ ಪೇಟೆಂಟ್ ಗಾಗಿ 1876 ರ ಫೆಬ್ರುವರಿ 14ರಂದು ಅಮೆರಿಕದ ಪೇಟೆಂಟ್ ಆಫೀಸಿನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದರು. ಆದರೆ ಅದಕ್ಕೂ ಕೆಲ ಗಂಟೆಗಳ ಮುಂಚೆಯಷ್ಟೇ ಅದೇ ದಿನ ಗ್ರಹಂಬೆಲ್ ಕೂಡ ದೂರವಾಣಿಯ ಪೇಟೆಂಟ ಗಾಗಿ ಅರ್ಜಿ
jiಸಲ್ಲಿಸಿದ್ದರು. ಅಂತಿಮವಾಗಿ ಗ್ರಹಂಬೆಲ್ ರವರಿಗೆ ಮೊದಲ ವಾಣಿಜ್ಯ ಉದ್ದೇಶದ ಟೆಲಿಫೋನ್ ತಯಾರಿಯ ಕ್ರೆಡಿಟ್ ದೊರೆಯಿತು. ಅಲೆಕ್ಸಾಂಡರ್ ಗ್ರಹಂಬೆಲ್ ನ ಈ ಸಂಶೋಧನೆ ಸಂಪರ್ಕ ಸಾಧನದಲ್ಲಿ ಅತ್ಯಂತ ಕ್ರಾಂತಿಕಾರಕ ಮತ್ತು ಮಹತ್ವದ ಸಂಶೋಧನೆ ಎಂದು ಪರಿಗಣಿಸಲ್ಪಟ್ಟಿತು.
ಇನ್ನು ಶೇಕ್ಸ ಪಿಯರ್ ನ ಅತಿ ದೊಡ್ಡ ಅಭಿಮಾನಿಯಾಗಿದ್ದ ಗ್ರಹಂಬೆಲ್ ಆತನ ನಾಟಕಗಳಲ್ಲಿ ಎದುರಿಗಿರುವವರನ್ನು ಸಂಭೋಧಿಸಲು ಬಳಸುವ hallo ಎಂಬ ಹಳೆಯ ಇಂಗ್ಲಿಷ್ ಪದವನ್ನು ತುಸು ಮಾರ್ಪಡಿಸಿ ಹಲೋ(hello) ಎಂದು ಬಳಸಿದನು.
ಮೊದಲು ಬಳಸಿದ ಹಲೋ ಎಂಬ ಪದವೇ ನಂತರದಲ್ಲಿ ಸಾರ್ವತ್ರಿಕವಾಗಿ ಸಂಭೋಧನೆಯ ಪದವಾಗಿ ಬಳಸಲ್ಪಡಲಾಯಿತು. ಟೆಲಿಗ್ರಾಫ್ ಕಳುಹಿಸುವಾಗ ಹಲೋ ಎಂಬ ಪದವು ಸಂದೇಶವನ್ನು ಸ್ವೀಕರಿಸಲಾಗಿದೆ ಎಂಬುದನ್ನು ತಿಳಿಸಲು ಉಪಯೋಗಿಸುವ ಪದವಾಗಿ ಬಳಸಲ್ಪಟ್ಟಿತು. ಹೀಗೆ ಟೆಲಿಫೋನ್ ಆಪರೇಟರ್ ಗಳಿಗೆ ಕರೆ ಸ್ವೀಕರಿಸಿದ ನಂತರ ಹಲೋ ಎಂಬ ಪದವನ್ನು ಬಳಸಲು ಅವರಿಗೆ ಸೂಚಿಸಿದ್ದು ಗ್ರಹಾಂ ಬೆಲ್.
ಹಲೋ ಎಂಬ ಪದ ಅತ್ಯಂತ ಸರಳವಾಗಿದ್ದು ಉಚ್ಚರಿಸಲು ಕೂಡ ಸುಲಭವಾಗಿದೆ. ಎಂತಹದ್ದೇ ಗೌಜಿ ಗದ್ದಲನಿಂದ ಕೂಡಿದ ಪ್ರದೇಶದಲ್ಲಿಯೂ ಕೂಡ ಹಲವು ಎಂಬ ಪದ ಸ್ಪಷ್ಟವಾಗಿ ಕೇಳಲು ಸಾಧ್ಯ.ಅತ್ಯಂತ ಕಡಿಮೆ ಶಬ್ದ ಗ್ರಹಣ ವಾತಾವರಣದಲ್ಲಿಯೂ ಕೂಡ ಹಲೋ ಎಂಬ ಪದ ಸ್ಪಷ್ಟವಾಗಿ ಗ್ರಹಿಸಲು ಸಾಧ್ಯ.
ಆದ್ದರಿಂದಲೇ ಹಲೋ ಎಂಬ ಪದವು ಇಡೀ ಜಗತ್ತಿನಾದ್ಯಂತ ಸಂದೇಶವನ್ನು ಇಲ್ಲವೇ ಫೋನ್ ಕರೆಯನ್ನು ಸ್ವೀಕರಿಸಿರುವ ಸಂಕೇತವಾಗಿ ಈ ಪದವನ್ನು ಇಂದಿಗೂ ಸಾರ್ವತ್ರಿಕವಾಗಿ ಬಳಸುತ್ತಿದ್ದಾರೆ.
ವೀಣಾ ಹೇಮಂತ್ ಗೌಡ ಪಾಟೀಲ್